ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೆಟ್ರೂಡ್ ಬೆಲ್

ವಿಕಿಸೋರ್ಸ್ದಿಂದ
ಗೆಟ್ರೂಡ್ ಬೆಲ್

1868-1926. ಬ್ರಿಟಿಷ್ ಪುರಾತತ್ತ್ವಜ್ಞೆ, ಅನ್ವೇಷಕಿ, ಲೇಖಕಿ ಮತ್ತು ಅಧಿಕಾರಿ. ಇವಳ ಪುರ್ಣ ಹೆಸರು ಗೆಟ್ರೂಡ್ ಮಾರ್ಗರೇಟ್ ಲೊಥಿಯನ್ ಬೆಲ್. ಇಂಗ್ಲೆಂಡಿನ ಪಟ್ಟಣ ಡೂರ್ಹ್ಯಾಂನ ವಾಷಿಂಗ್ಟನ್ ಹಾಲ್ನಲ್ಲಿ 1868ರ ಜುಲೈ 14ರಂದು ಜನಿಸಿದಳು. ಸರ್ ಹ್ಯೂಗ್ಬೆಲ್ ಮತ್ತು ಮೇರಿಷೀಲ್ಡ್‌ಬೆಲ್ ದಂಪತಿಗಳ ಮಗಳು. ಇವಳು 3 ವರ್ಷದವಳಾಗಿದ್ದಾಗ ತಾಯಿ ನಿಧನವಾದಳು.


ಇವಳು ಲಂಡನ್ನಿನ ಕ್ವೀನ್ಸ್‌ ಕಾಲೇಜಿನಲ್ಲಿ ಪ್ರಥಮ ವಿದ್ಯಾಭ್ಯಾಸವನ್ನು, ನಂತರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಲೇಡಿ ಮಾರ್ಗರೇಟ್ ಹಾಲ್ನಲ್ಲಿ ಮಾಡಿದಳು. ಇವಳಿಗೆ ಆಗ 17 ವರ್ಷ. ಆಧುನಿಕ ಇತಿಹಾಸದಲ್ಲಿ ಪರಿಣಿತಳಾಗಿ 2 ವರ್ಷದಲ್ಲಿಯೇ ಆನರ್ಸ್‌ ಪದವಿ ಪಡೆದಳು. ಇವಳು ವಿದ್ಯಾಭ್ಯಾಸ ಮಾಡುವಾಗ ಪ್ರವಾಸ ಮತ್ತು ಪರ್ವತಾರೋಹಣ ದಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡಳು. ಮರುಭೂಮಿಯಲ್ಲಿ ಪ್ರವಾಸ ಮಾಡುವುದರಲ್ಲಿಯೂ ಮತ್ತು ಪುರಾತತ್ತ್ವದಲ್ಲಿಯೂ ಆಸಕ್ತಿ ಮತ್ತು ಉತ್ಸಾಹವನ್ನು ಹೊಂದಿದ್ದಳು. 1905ರಲ್ಲಿ ಈಗ ಟರ್ಕಿಯಲ್ಲಿರುವ ಪ್ರಾಚೀನ ನೆಲೆ ಇಫೇಸಸ್ ಡೇವಿಡ್ ಜಾರ್ಜ್ಹೂಗರ್ಥ್ ಎಂಬ ಬ್ರಿಟಿಷ್ ಪುರಾತತ್ತ್ವಜ್ಞ ನಡೆಸುತ್ತಿದ್ದ ಉತ್ಖನನದಲ್ಲಿ ಭಾಗವಹಿಸಿದ್ದಳು. ಇವಳು ಅರೇಬಿಕ್, ಪರ್ಷಿಯನ್, ಟರ್ಕಿಷ್, ಫ್ರೆಂಚ್, ಜರ್ಮನಿ ಮತ್ತು ಇಟಲಿ ಭಾಷೆಗಳನ್ನು ತಿಳಿದು ನಿರರ್ಗಳವಾಗಿ ಮಾತನಾಡುತ್ತಿದ್ದಳು. ಇದರಿಂದ ಪ್ರವಾಸ ಮಾಡುವಾಗ ಕಷ್ಟವಾಗಲಿಲ್ಲ. ಅಲ್ಲಿ ಸ್ಥಳೀಯರೊಡನೆ ಬೆರೆಯಲು ಸಹಾಯವಾಯಿತು.


1907ರಲ್ಲಿ ಮಾರ್ಚ್ ತಿಂಗಳಿನಲ್ಲಿ ಆಟೋಮನ್ ಸಾಮ್ರಾಜ್ಯಕ್ಕೆ ಪ್ರಯಾಣ ಮಾಡಿ ಅಲ್ಲಿ ಅನಟೋಲಿಯದ ಬಿರ್ಬಿಂಕಿಲಿಸೆನಲ್ಲಿರುವ ಸ್ಮಾರಕ ನೆಲೆಗಳನ್ನು ಉತ್ಖನನ ಮಾಡುತ್ತಿದ್ದ ಬೈಬಲ್ನ ಹೊಸ ಒಡಂಬಡಿಕೆಯ ವಿದ್ವಾಂಸ ಮತ್ತು ಪುರಾತತ್ತ್ವಜ್ಞ ಸರ್ ವಿಲಿಯಂ, ಎಂ. ರಾಮ್ಸ್ಯೆ ಜೊತೆಯಲ್ಲಿ ಉತ್ಖನನ ನಡೆಸಿದಳು. ಉತ್ಖನನದ ಕಾಲಾನುಕ್ರಮಣಿಕೆಯನ್ನು ‘ದಿ ತೌಸಂಡ್ ಅಂಡ್ ದಿ ಒನ್ ಚರ್ಚಸ್’ ಎಂದು ಪ್ರಕಟಿಸಿದಳು. ಈ ಸ್ಮಾರಕಗಳಲ್ಲಿ ಅನೇಕವು ಈಗ ಉಳಿದಿಲ್ಲ. 1909ರ ಜನವರಿಯಲ್ಲಿ ಮೆಸಪೊಟೇಮಿಯ ಕ್ಕೆ ಪ್ರಯಾಣ ಬೆಳೆಸಿ ಅಲ್ಲಿ ಹಿಟೈಟರ ನಗರ ಕರ್ಕೆಮಿಷ್ನಲ್ಲಿ ಉಖೈದ್ ಅವಶೇಷಗಳ ನಕ್ಷೆಯನ್ನು ರಚಿಸಿ ವಿವರಣೆಯನ್ನು ದಾಖಲಿಸಿದಳು. ಕರ್ಕೆಮಿಷ್ನಲ್ಲಿ ಇಬ್ಬರು ಪುರಾತತ್ತ್ವಜ್ಞರಾದ ಟಿ.ಇ. ಲಾರೆನ್ಸ್‌ ಮತ್ತು ಡೇವಿಡ್ ಜಾರ್ಜ್ ಹ್ಯೂಗರ್ಥ್ ನಡೆಸುತ್ತಿದ್ದ ಉತ್ಖನನದಲ್ಲಿ ಭಾಗವಹಿಸಿದ್ದಳು.


1914ರಲ್ಲಿ ಮೊದಲ ಮಹಾಯುದ್ಧ ಪ್ರಾರಂಭವಾದಾಗ ರೆಡ್ಕ್ರಾಸ್ನಲ್ಲಿ ಸ್ವಯಂಸೇವಕಿಯಾಗಿ ಫ್ರಾನ್ಸ್‌ನಲ್ಲಿ ಸೇವೆ ಸಲ್ಲಿಸಿದಳು. ಇವಳು ಅವಿವಾಹಿತಳು. ಆದರೆ ಬ್ರಿಟಿಷ್ ಸೈನ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವಿವಾಹಿತ ಮೇಜರ್ ಚಾಲ್ರ್ಸ್‌ ಡೌಗಟಿಯೊಡನೆ ಸಂಬಂಧವಿತ್ತು. ಅವನು 1915ರಲ್ಲಿ ಗ್ಯಾಲಿಪೋಲಿಯ ಕದನದಲ್ಲಿ ನಿಧನವಾದ. ಅನಂತರ ಇವಳು ಸಂಪುರ್ಣವಾಗಿ ತನ್ನ ಕೆಲಸದಲ್ಲಿ ಮಗ್ನಳಾದಳು. ಇವಳನ್ನು 1915ರ ನವೆಂಬರ್ನಲ್ಲಿ ಆಗ ತಾನೆ ಕೈರೊನಲ್ಲಿ ಪ್ರಾರಂಭವಾಗುತ್ತಿದ್ದ ಅರಬ್ ಬ್ಯೂರೋನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜನರಲ್ ಗಿಲ್ಬೆರ್ಟ್ ಕ್ಲೈಟನ್ಗೆ ಸಹಾಯ ಮಾಡಲು ಕಳುಹಿಸಿದರು. ಅವನು ಇವಳನ್ನು 1916ರ ಮಾರ್ಚ್ 3ರಂದು ಬಾಸ್ರ ನಗರಕ್ಕೆ ಕಳುಹಿಸಿದ. ಆ ಸಮಯದಲ್ಲಿ ಇವಳ ಭಾಷಾಜ್ಞಾನ ಬೇಹುಗಾರಿಕೆ ಕೆಲಸಕ್ಕೆ ಸಹಕಾರಿಯಾಯಿತು. ಅಲ್ಲಿ ಬಾಗ್ದಾದ್ ಕಡೆಗೆ ಸಾಗುವ ಸೈನ್ಯ ಸುರಕ್ಷಿತವಾಗಿ ತಲುಪಲು ಸಹಾಯ ಮಾಡಬೇಕಾಗಿತ್ತು. ಇವಳು ಆ ಪ್ರದೇಶದ ನಕ್ಷೆಯನ್ನು ರಚಿಸಿ ಸೈನ್ಯ ಸುರಕ್ಷತೆಯಿಂದ ತಲುಪಲು ಸಹಾಯ ಮಾಡಿದಳು. ಬ್ರಿಟಿಷ್ ಸೈನ್ಯದಲ್ಲಿ ಇವಳೊಬ್ಬಳೇ ಮಹಿಳಾಧಿಕಾರಿ.


ಒಂದನೆಯ ಮಹಾಯುದ್ಧಾನಂತರ ಇರಾಕ್ನಲ್ಲಿ ಹಸ್ಮೇಟ್ ರಾಜ್ಯ ಸ್ಥಾಪನೆಯಲ್ಲಿ ಮುಖ್ಯ ಪಾತ್ರ ವಹಿಸಿದಳು. 1918ರಲ್ಲಿ ಬಾಗ್ದಾದ್ನಲ್ಲಿ ಇರಾಕ್ ಆರ್ಕಿಯಲಾಜಿಕಲ್ ಮ್ಯೂಸಿಯಂ ಸ್ಥಾಪಿಸಲು ಇರಾಕ್ ದೊರೆ ಫೈಸಲ್ ಸಹಾಯ ಮಾಡಿದ. ಆ ಮ್ಯೂಸಿಯಂಗೆ ತಾನು ಸಂಗ್ರಹಿಸಿದ್ದ ಮತ್ತು ಲಿಯೊನಾರ್ಡ್ ವೂಲಿ, ಉರ್ ಮತ್ತು ಇತರ ಮುಖ್ಯ ನೆಲೆಗಳಲ್ಲಿ ಸಂಗ್ರಹಿಸಿದ್ದ ವಸ್ತುಗಳನ್ನು ನೀಡಿದಳು. ಬಾಗ್ದಾದ್ನಲ್ಲಿ ಬ್ರಿಟಿಷ್ ಸ್ಕೂಲ್ ಆಫ್ ಆರ್ಕಿಯಾಲಜಿಯನ್ನು ಸ್ಥಾಪಿಸಿದಳು. ಇರಾಕ್ ನೂತನ ಸರ್ಕಾರ ಇವಳನ್ನು ಡೈರೆಕ್ಟರ್ ಆಫ್ ಆಂಟಿಕ್ವಿಟಿಸ್ ಆಗಿ ನೇಮಿಸಿತು.

ಒಂದನೆಯ ಮಹಾಯುದ್ಧದ ಅನಂತರ ರಾಜಕೀಯದಿಂದ ದೂರ ಸರಿದು ಪುರಾತತ್ತ್ವದ ಕಾರ್ಯದಲ್ಲಿ ಮಗ್ನಳಾದಳು. ಬ್ರಿಟಿಷ್ ಮತ್ತು ಅರಬ್ ಸೈನ್ಯದವರ ಸಹವಾಸದಿಂದ ಅತಿಯಾದ ಧೂಮಪಾನ ಮತ್ತು ಮದ್ಯಪಾನದಿಂದ ಶ್ವಾಸಕೋಶದ ನಾಳದ ಊತದಿಂದ ನರಳುತ್ತಿದ್ದಳು. ಇವಳು ತನ್ನ ಭವಿಷ್ಯದ ಮತ್ತು ಕ್ಷೀಣಿಸುತ್ತಿರುವ ದೇಹಸ್ಥಿತಿಯಿಂದ ಆತಂಕಕ್ಕೆ ಒಳಗಾದಳು. ಇವಳ ತಮ್ಮ ಟೈಫಾಯಿಡ್ ರೋಗದಿಂದ ನಿಧನವಾದ ಸುದ್ದಿ ತಿಳಿದು ಮನಸ್ಸಿನ ಖಿನ್ನತೆಯಿಂದ 1926 ಜುಲೈ 12ರಂದು ಅಧಿಕವಾಗಿ ನಿದ್ರೆ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು. ಇವಳು ನಡೆಸಿದ ಪುರಾತತ್ತ್ವ ಸರ್ವೇಕ್ಷಣೆ ಸಾಕಷ್ಟು ವೈಜ್ಞಾನಿಕ ಮಹತ್ತ್ವ ಉಳ್ಳವಾಗಿವೆ. ಇವಳ ಮೆಸಪೊಟೇಮಿಯದ ಸರ್ವೇಕ್ಷಣೆ ವರದಿಗಳು ಆಧುನಿಕ ಪುರಾತತ್ತ್ವ ಸಂಶೋಧನೆಗೆ ರಕ್ಷಣೆಯ ಭದ್ರ ಬುನಾದಿ ಹಾಕಿದೆ.