ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇವಿಯಾಲಿಸ್

ವಿಕಿಸೋರ್ಸ್ದಿಂದ

ಕ್ರಾಕೊಡಿಲಿಯ ಗಣದ ಗೇವಿಯಾಲಿಡೀ ಕುಟುಂಬಕ್ಕೆ ಸೇರಿದ ಒಂದು ಬಗೆಯ ಮೊಸಳೆ. ಗೇವಿಯಾಲಿಸ್ ಗ್ಯಾಂಜೆಟಿಕಸ್ ಇದರ ವೈಜ್ಞಾನಿಕ ನಾಮ. ಭಾರತ, ಬರ್ಮ ಮತ್ತು ಮಲೇಷ್ಯಯಗಳ ನದಿಗಳಲ್ಲಿ ವಾಸಿಸುತ್ತದೆ. ಭಾರತದ ಗಂಗಾನದಿಯಲ್ಲಿ ಇದನ್ನು ಕಾಣಬಹುದು. ತೆಳುವಾದ ಮತ್ತು ಉದ್ದವಾದ ದೇಹವುಳ್ಳ ಪ್ರಾಣಿಯಿದು. ದೇಹದ ಉದ್ದ 5-6 ಮೀ (15-20'). ಮೂತಿಯೂ ಕಿರಿದಾಗಿ ಉದ್ದವಾಗಿದೆ. ಗಂಡು ಗೇವಿಯಲಿನ ಮೂತಿಯ ತುದಿಯಲ್ಲಿ ಒಂದು ರೀತಿಯ ಸಣ್ಣ ಕುಡಿಕೆಯಂಥ ಗುಬುಟು ಇದೆ. ಆದ್ದರಿಂದ ಇದನ್ನು ಹಿಂದಿ ಭಾಷೆಯಲ್ಲಿ ಗಡಿಯಲ್ (ಗಡಿ-ಗಡಿಗೆ) ಎಂದು ಕರೆಯಲಾಗುತ್ತದೆ. ಎರಡು ದವಡೆಗಳಲ್ಲೂ ಹೆಚ್ಚುಕಡಿಮೆ ಸಮಗಾತ್ರದ ಹಲ್ಲುಗಳಿವೆ. ಕಾಲುಗಳಲ್ಲಿನ ಬೆರಳುಗಳೆಲ್ಲವೂ ಪೊರೆ ಯೊಂದರಿಂದ ಕೂಡಿಕೊಂಡಿದ್ದು ಈಜಲು ಸಹಾಯಕವಾಗಿರುವ ಜಾಲಪಾದಗಳಾಗಿವೆ. ಮೂಗಿನ ಹೊಳ್ಳೆಗಳು ಮೃದುವಾಗಿದ್ದು ಬೇಕೆಂದಾಗ ಊದಿಕೊಳ್ಳಬಲ್ಲವು. ಮೀನುಗಳೇ ಗೇವಿಯಲಿನ ಪ್ರಧಾನ ಆಹಾರ.