ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೇ-ಲ್ಯೂಸ್ಯಾಕ್, ಜೋಸೆಫ್ ಲೂಯಿ

ವಿಕಿಸೋರ್ಸ್ದಿಂದ
ಗೇ-ಲ್ಯೂಸ್ಯಾಕ್, ಜೋಸೆಫ್ ಲೂಯಿ

1778-1850. ಫ್ರಾನ್ಸ್‌ ದೇಶದ ರಸಾಯನ ವಿಜ್ಞಾನಿ. ಅನಿಲಗಳ ಗುಣಗಳನ್ನು ಅನ್ವೇಷಿಸುವುದರಲ್ಲಿ ಇವನು ಮಹತ್ತ್ವದ ಪಾತ್ರವನ್ನು ವಹಿಸಿ ಗೇ-ಲ್ಯೂಸ್ಯಾಕ್ ನಿಯಮವನ್ನು ಆವಿಷ್ಕರಿಸಿದ (1809). ನಿರ್ದಿಷ್ಟ ಒತ್ತಡ ಮತ್ತು ಉಷ್ಣತೆಗಳಲ್ಲಿ ಅನಿಲಗಳು ಒಂದರೊಡನೊಂದು ಸಂಯೋಗಿಸುವಾಗ ನಿರ್ದಿಷ್ಟ ಸರಳಾನುಪಾತಗಳಲ್ಲಿ ಸಂಯೋಗಿಸುವುವು; ಮತ್ತು ಫಲಿಸುವ ಹೊಸ ಅನಿಲದ/ ಅನಿಲಗಳ ಗಾತ್ರ ಈ ಕ್ರಿಯೆಯಲ್ಲಿ ಭಾಗವಹಿಸಿದ ಅನಿಲಗಳ ಗಾತ್ರಗಳಿಗೆ ಸರಳಾನುಪಾತದಲ್ಲಿರುತ್ತದೆ ಎಂಬುದೇ ಈ ನಿಯಮದ ನಿರೂಪಣೆ. ಉದಾಹರಣೆಗೆ ಹೈಡ್ರೊಜನಿನ ಎರಡು ಅಂಶಗಳು ಆಕ್ಸಿಜನಿನ ಒಂದು ಅಂಶದೊಡನೆ ಸೇರಿ ನೀರು (H2O) ದೊರೆಯುತ್ತದೆ. ಹೈಡ್ರೊಜನಿನ ಒಂದು ಅಂಶ ಕ್ಲೋರಿನಿನ ಒಂದು ಅಂಶದೊಡನೆ ಸೇರಿ ಹೈಡ್ರೊಜನ್ ಕ್ಲೋರೈಡ್ (HCl) ಆಗುತ್ತದೆ; ಹೈಡ್ರೊಜನಿನ ಮೂರು ಅಂಶಗಳು ನೈಟ್ರೊಜನಿನ ಒಂದು ಅಂಶದೊಡನೆ ಸೇರಿ ಅಮೋನಿಯ (NH3) ಲಭಿಸುತ್ತದೆ; ಇತ್ಯಾದಿ. ಸಂಯೋಗಿಸುವ ಘನಗಾತ್ರ ಗಳನ್ನು ಕುರಿತ ಈ ನಿಯಮವನ್ನು ಆವಿಷ್ಕರಿಸುವಲ್ಲಿ ಸುವಿಖ್ಯಾತ ನೈಸರ್ಗಿಕ ವಿಜ್ಞಾನಿ ಹಂಬೋಲ್ಟ್‌ನಿಂದ ಹಂಬೋಲ್ಟ್‌,ಫ್ರೀಡರಿಶ್ ವಿಲ್ಹೆಲ್ಮ್‌ ಹೈನ್ರಿಕ್ ಅಲೆಕ್ಸಾಂಡರ್ ಗೇ-ಲ್ಯೂಸ್ಯಾಕನಿಗೆ ದೊರೆತ ಸಹಕಾರ ಅಮೂಲ್ಯ. ಅದೇ ವರ್ಷ (1809) ಹಂಬೋಲ್ಟನೊಡಗೂಡಿ ನೀರನ್ನು ವಿದ್ಯುದ್ವಿಶ್ಲೇಷಿಸಿ ಅದು ಹೈಡ್ರೊಜನ್ ಮತ್ತು ಆಕ್ಸಿಜನುಗಳ ಸಂಯೋಗದಿಂದ ಆದುದೆಂದು ಗೇ-ಲ್ಯೂಸ್ಯಾಕ್ ಖಚಿತಪಡಿಸಿದ. ಈತ ಪೊಟ್ಯಾಸಿಯಮ್ ಕಾರ್ಬೊನೇಟ್ ಲವಣದಿಂದ ಪೊಟ್ಯಾಸಿಯಮ್ ಧಾತುವನ್ನು ತಯಾರಿಸಿದ್ದು 1808ರಲ್ಲಿ. ಬಳಿಕ ಹೈಡ್ರೊಸಯನಿಕ್ ಆಮ್ಲದಲ್ಲಿ ಆಕ್ಸಿಜನ್ ಇಲ್ಲವೆಂದು ಸಿದ್ಧಪಡಿಸಿ ಆಮ್ಲಗಳಲ್ಲಿ ಆವಶ್ಯಕ ಧಾತು ಆಕ್ಸಿಜನ್ ಅಲ್ಲ, ಹೈಡ್ರೊಜನ್ ಎಂಬ ಸಿದ್ಧಾಂತಕ್ಕೆ ಪುಷ್ಟಿ ನೀಡಿದ. ಹುದುಗುವಿಕೆಯ ವಿಧಾನಗಳಲ್ಲೂ ಆಗಾರ್ಯ್‌ನಿಕ್ ಸಂಯುಕ್ತಗಳ ಪರೀಕ್ಷೆ, ವಿಶ್ಲೇಷಣ ವಿಧಾನಗಳ ಬಗ್ಗೆಯೂ ಸಂಶೋಧನೆಯನ್ನು 1810-15ರ ಅವದಿಯಲ್ಲಿ ನಡೆಸಿದ. ಮೊದಲ ಬಾರಿಗೆ ಸಯನೋಜನ್ ಮತ್ತು ಬೋರಾನುಗಳನ್ನು ತಯಾರಿಸಿದ ಕೀರ್ತಿ ಸಹ ಈತನದು. ಔದ್ಯಮಿಕ ರಂಗದಲ್ಲಿಯೂ ಈತನ ಸಂಶೋಧನೆಗಳು ಗಣನೀಯವಾದುವು. ಅನೇಕ ಉದ್ಯಮಗಳಿಗೆ ಇವನು ಸಲಹೆಗಾರ ನಾಗಿದ್ದ. ಸಲ್ಫ್ಯೂರಿಕ್ ಮತ್ತು ಆಕ್ಸ್ಯಾಲಿಕ್ ಆಮ್ಲಗಳ ತಯಾರಿಕಾ ವಿಧಾನಗಳನ್ನು ಉತ್ತಮಗೊಳಿಸಿದ. ಚಲುವೆ (ಬ್ಲೀಚಿಂಗ್) ಪುಡಿಯಲ್ಲಿ ಕ್ಲೋರಿನ್ ಅಂಶವನ್ನೂ ಪೊಟಾಷಿನಲ್ಲಿ ಪೊಟ್ಯಾಸಿಯಮ್ ಅಂಶವನ್ನೂ ತಿಳಿಯುವ ವಿಧಾನಗಳನ್ನು ಕಂಡುಹಿಡಿದ. ಖನಿಜಗಳಲ್ಲಿ ಬೆಳ್ಳಿಯ ಅಂಶವನ್ನು ತಿಳಿಯುವುದಕ್ಕೆ ವಿಧಾನವೊಂದನ್ನು ಯೋಜಿಸಿದ. ಸಂಶೋಧಕನಾಗಿ ಈತ ಸೇವೆ ಸಲ್ಲಿಸಿದ ಸುಮಾರು 50 ವರ್ಷಗಳಲ್ಲಿ ಹಂಬೋಲ್ಟ್‌, ಥೆನಾರ್ಡ್, ಲೀಬಿಗ್ ಮತ್ತು ವಾಲ್ಟರ್ ಅವರೊಡನೆ ಕೂಡಿ ಪ್ರಕಟಿಸಿದ ಬರೆಹಗಳಲ್ಲದೆ ಸ್ವತಂತ್ರವಾಗಿ 148 ಸಂಶೋಧನ ಪ್ರಬಂಧಗಳನ್ನು ಕೂಡ ಪ್ರಕಟಿಸಿದ್ದಾನೆ.


ಫ್ರಾನ್ಸಿನ ಸೇಂಟ್ ಲಿಯೊನಾರ್ಡ್ ಎಂಬಲ್ಲಿ 1778ರ ಡಿಸೆಂಬರ್ 6ರಂದು ಗೇ-ಲ್ಯೂಸ್ಯಾಕ್ ಜನಿಸಿದ. ಮೂಲ ವಿದ್ಯಾಭ್ಯಾಸದ ಬಳಿಕ ಹಲವು ಕಾಲ ರಸಾಯನ ಶಾಸ್ತ್ರಜ್ಞ ಕ್ಲಾಡ್ ಬರ್ತೋಲೆಟನ ಸಹಾಯಕನಾಗಿ ಕೆಲಸ ಮಾಡಿದ. 1802ರಲ್ಲಿ ತನ್ನ ಊರಿನ ಪಾಲಿಟೆಕ್ನಿಕ್ ಶಾಲೆಯಲ್ಲಿ ನಿದರ್ಶಕೋಪಾಧ್ಯಾಯನಾಗಿ ನೇಮಕಗೊಂಡು 1809ರಲ್ಲಿ ಅಲ್ಲಿಯೇ ರಸಾಯನ ವಿಜ್ಞಾನ ಪ್ರಾಧ್ಯಾಪಕನಾದ. 1808ರಿಂದ 1832ರ ವರೆಗೆ ಸಾರ್ಬೋನಿನಲ್ಲಿ ಭೌತವಿಜ್ಞಾನ ಪ್ರಾಧ್ಯಾಪಕನಾಗಿಯೂ ಸೇವೆ ಸಲ್ಲಿಸಿದ. 1832ರಲ್ಲಿ ಸಾರ್ಬೋನ್ ಬಿಟ್ಟು ಯಾರ್ಡಿನ್ ಡೆಪ್ಲಾಂಟೆಸಿನಲ್ಲಿ ರಸಾಯನವಿಜ್ಞಾನ ಪ್ರಾಧ್ಯಾಪಕನಾದ. 1806ರಲ್ಲಿ ಇವನಿಗೆ ಅಕಡೆಮಿಷಿಯನ್ ಗೌರವವೂ ಹಾಯ್ಟೆವಿಯನ್ನೆಯಲ್ಲಿನ ಛೇಂಬರ್ ಆಫ್ ಡೆಪ್ಯುಟೀಸಿನಲ್ಲಿ ಸದಸ್ಯತ್ವವೂ ದೊರೆತವು. 1839ರಲ್ಲಿ ಛೇಂಬರ್ ಆಫ್ ಪೀರ್ಸಿನಲ್ಲಿ ಸದಸ್ಯತ್ವ ದೊರೆಯಿತು. ಈತನ ಮೊದಲ ಸಂಶೋಧನೆಗಳು ಅನಿಲಗಳ ಗುಣಗಳು ಮತ್ತು ವಾತಾವರಣವನ್ನು ಕುರಿತವು. ವಾಯುಮಂಡಲದಲ್ಲಿನ ಕಾಂತತ್ವದ ಬಗ್ಗೆ ಅಭ್ಯಾಸಕ್ಕೆ 1804ರಲ್ಲಿ ತೊಡಗಿದ. ಬೆಲೂನುಗಳ ನೆರವಿನಿಂದ ಸುಮಾರು 6096ಮೀ ಎತ್ತರದ ವರೆಗೂ ಏರಿ ಅಲ್ಲಿನ ಉಷ್ಣತೆ, ಆದರ್ರ್‌ತೆ ಮತ್ತು ಅಲ್ಲಿರುವ ಅನಿಲಗಳು ಹಾಗೂ ಅವುಗಳ ಪ್ರಮಾಣಗಳ ಬಗ್ಗೆ ಸಂಶೋಧನೆ ನಡೆಸಿದ. ಈತ 1850 ಮೇ 9ರಂದು ಪ್ಯಾರಿಸಿನಲ್ಲಿ ನಿಧನನಾದ.