ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಪಾಲಕೃಷ್ಣ ಭಾರತಿ

ವಿಕಿಸೋರ್ಸ್ದಿಂದ

ಗೋಪಾಲಕೃಷ್ಣ ಭಾರತಿ - ಪ್ರಸಿದ್ಧ ತಮಿಳು ಕವಿ, ವಾಗ್ಗೇಯಕಾರ. ಮುಡಿಗೊಂಡಾನ್ ಮತ್ತು ಆನತಾಂಡವಪುರಂ ಎಂಬ ಊರುಗಳಲ್ಲಿ ಬಾಲ್ಯದ ಬಹುದಿನಗಳನ್ನು ಕಳೆದುದರಿಂದ ಈತನಿಗೆ ಮುಡಿ ಗೊಂಡಾನ್ ಭಾರತಿ, ಆನತಾಂಡವಪುರಂ ಭಾರತಿ ಎಂಬ ಹೆಸರುಗಳೂ ಬಳಕೆಗೆ ಬಂದಿವೆ. ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ನರಿಮಣಂ ಎಂ ಊರನಲ್ಲೀತ ಜನಿಸಿದ. ತಂದೆ ಬ್ರಾಹ್ಮಣಕುಲದ ರಾಮಸ್ವಾಮಿ ಭಾರತಿ. ಈ ಕುಟುಂಬ ಸಂಗೀತ ಪರಂಪರೆಯಲ್ಲಿ ಹೆಸರಾದುದು. ಆದ್ದರಿಂದ ಗೋಪಾಲಕೃಷ್ಣನಿಗೆ ಸಂಗೀತ ಜ್ಞಾನ ಬಾಲ್ಯದಿಂದಲೆ ದೊರೆಯಿತು. ಕರ್ನಾಟಕ ಸಂಗೀತದಲ್ಲಿ ಅಂದಿಗೆ ಪ್ರಸಿದ್ಧನಾಗಿದ್ದ ಕಣಂ ಕೃಷ್ಣಯ್ಯರ್ ಎಂಬಾತ ಈತನನ್ನು ಮೆಚ್ಚಿಕೊಂಡು ಈತನಿಗೆ ಕೀರ್ತನೆಯ ಸೂಕ್ಷ್ಮಾಂಶಗಳನ್ನು ಕಲಿಸಿಕೊಟ್ಟು ಹುರಿದುಂಬಿಸಿದ. ಅಲ್ಲದೆ ತಿರುವಡೈಮರುದೂರಿನ ಸಂಗೀತ ವಿದ್ವಾಂಸ ರಾಮದಾಸ್ ಎಂಬಾತ ಹಿಂದೂಸ್ಥಾನಿ ಗಾನಪದ್ಧತಿಯನ್ನು ಬೋಧಿಸಿದ. ಜೊತೆಗೆ ಭಾರತಿ ಬಾಲ್ಯದಿಂದಲೇ ತಮಿಳಿನಲ್ಲಿರುವ ಭಕ್ತಿ ಪ್ರಧಾನ ಗ್ರಂಥಗಳನ್ನೂ ಸಂಸ್ಕøತ ಕಾವ್ಯ, ನಾಟಕ ಹಾಗೂ ಅದ್ವೈತಶಾಸ್ತ್ರ್ರಗಳನ್ನೂ ಅಭ್ಯಸಿಸಿದ. ಮಯೂರಂ ಗೋವಿಂದ ಶಿವನ್ ಎಂಬ ಅನುಭವಜ್ಞಾನಿಯನ್ನು ತನ್ನ ಗುರುವಾಗಿ ಸ್ವೀಕರಿಸಿ, ಅವನಿಂದ ತತ್ತ್ವ ಜ್ಞಾನವನ್ನೂ ಯೋಗಾಭ್ಯಾಸವನ್ನೂ ಪಡೆದ. ಆಧ್ಯಾತ್ಮಿಕ ಜೀವನ ನಡೆಸುವ ಉದ್ದೇಶದಿಂದ ನಿಷ್ಠಾವಂತ ಬ್ರಹ್ಮಚಾರಿಯಾಗಿಯೇ ಬಾಳಿದ.

ಶಿವಭಕ್ತಿಯೇ ಮೈಗೊಂಡಂತಿದ್ದ ಭಾರತಿ ಶಿವಕ್ಷೇತ್ರಗಳಲ್ಲಿ ಮಿಗಿಲಾದ ಚಿದಂಬರಂ ಕ್ಷೇತ್ರಕ್ಕೆ ಆಗಾಗ ಬಂದು ಭಕ್ತಿಗೀತಗಳನ್ನು ಹಾಡುತ್ತಿದ್ದ. ಶಿವನ ಮೇಲಿನ ಭಕ್ತಿ ಹಾಗೂ ಧ್ಯಾನಗಳಿಂದ, ತನ್ನ ಶೌಚನಿಷ್ಠೆಗಳಿಂದ ಇವನ ಸಂಗೀತ ಜ್ಞಾನ ದೈವಿಕ ಕಳೆಯಿಂದ ಕೂಡಿ ಶೋಭಿಸಿತು. ಕ್ರಮೇಣ ಭಾರತಿ ಸಂಗೀತಸಾಧನೆಯನ್ನು ನಾದೋಪಾಸನೆಯಾಗಿ ಕೈಕೊಂಡು ಶಿವಕೈಂಕರ್ಯಕ್ಕಾಗಿ ತನ್ನನ್ನೆ ತಾನು ಅರ್ಪಿಸಿಕೊಳ್ಳುವುದನ್ನೇ ತನ್ನ ಜೀವನದ ಗುರಿಯನ್ನಾಗಿ ಮಾಡಿಕೊಂಡ. ಶಿವನ ಪರವಾದ ಹಲವಾರು ಗೀತೆಗಳನ್ನು ಹಾಡಿದ. ಸಂಗೀತ ಕಥಾಕಾಲಕ್ಷೇಪ ರೂಪದಲ್ಲಿ ಹಲವು ಶಿವಕಥೆಗಳನ್ನು ಊರೂರುಗಳಲ್ಲಿ ನಡೆಸಿದ. ಆ ಕಾಲದ ಹಲವು ಸಂಗೀತ ವಿದ್ವಾಂಸರು ಇವನ ಕೀರ್ತನೆಗಳನ್ನು ಕೇಳಿ ಹೊಗಳಿದರು. ಜನಸಾಮಾನ್ಯರಿಗೂ ಇವನ ಶಿವಕಥೆಗಳು ಮೆಚ್ಚುಗೆಯಾದುವು.

ತಿರುವೈಯಾರಿನಲ್ಲಿದ್ದು, ರಾಮಕಥೆಯನ್ನು ಕೀರ್ತನೆಗಳಲ್ಲಿ ಹಾಡಿದ ಪ್ರಸಿದ್ಧ ಸಂಗೀತಜ್ಞಾನಿ ತ್ಯಾಗರಾಜರಿಗೆ ಈತ ಸಮಾಕಾಲೀನ. ಅವರಂತೆ ಇವನೂ ಶಿವನನ್ನು ಕುರಿತು ಅನೇಕ ಕೀರ್ತನೆಗಳನ್ನು ತಮಿಳಿನಲ್ಲಿ ರಚಿಸಿದ. ಪಲ್ಲವಿ, ಅನುಪಲ್ಲವಿ, ಚರಣ-ಹೀಗೆ ಪಾಂಕ್ತವಾಗಿ ಕಟ್ಟಿದ ಗೀತೆಗಳನ್ನು ಹಾಡಿ ಅನೇಕರಿಗೆ ಗಾನಸುಧೆಯನ್ನುಣಿಸಿ ತಣಿಸಿದ. ಸಭಾಪತಿಕ್ಕು ವೇರೆ ದೈವಂ ಸಮಾನಮಾಗುಮಾ (ಸಭಾಪತಿ ಚಿದಂಬರಂ ಕ್ಷೇತ್ರದ ದೇವರು, ನಟರಾಜ) ಎಂಬ ಈತನ ಸಾಹಿತ್ಯವನ್ನು ಕೇಳಿದ ತ್ಯಾಗರಾಜರು ಈತನನ್ನು ತುಂಬ ಹೊಗಳಿದರು. ತ್ಯಾಗರಾಜರ ಪಂಚರತ್ನಕೀರ್ತನೆಗಳಂತೆಯೇ ಭಾರತಿಯೂ ಹರಿಹರ ಶಿವಶಂಕರ ಕರುಣಾಕರ ಪರಮೇಶ್ವರ ಎಂಬುದನ್ನು ನಾಟಿ ರಾಗದಲ್ಲಿಯೂ ಆಡಿಯ ಪಾದಮೇ ಗತಿ ಎಂಬುದನ್ನು ವರಾಳಿ ರಾಗದಲ್ಲಿಯೂ ಶರಣಾಗತಿ ಎನ್ರು ನಂಬಿವಂದೇನ್ ಎಂಬುದನ್ನು ಗೌಳರಾಗದಲ್ಲಿಯೂ ಮರವಾಮಲ್ ಎಪ್ಪಡಿಯಂ ನಿನೈ ಮನಮೇ ಎಂಬುದನ್ನು ಶ್ರೀರಾಗದಲ್ಲಿಯೂ ಹಾಡಿ ಹಲವರ ಮೆಚ್ಚಿಕೆಗೆ ಪಾತ್ರನಾದ. ಮತ್ತೂ ಹಲವು ಕೀರ್ತನೆಗಳನ್ನು ನಟನ ಸಭಾಪತಿಯ ಹೆಸರಿನಲ್ಲಿ ಹಾಡಿ ತಾನು ಭಕ್ತಿಪರವಶನಾದುದಲ್ಲದೆ ಅನೇಕರನ್ನು ಆ ಸ್ತರಕ್ಕೇರುವಂತೆ ಮಾಡಿದ. ಯೋಗದಲ್ಲಿ ಈತನಿಗಿದ್ದ ಆಳವಾದ ಅನುಭವವನ್ನು ಇವನ ಕೀರ್ತನೆಗಳಲ್ಲಿ ಅಲ್ಲಲ್ಲಿ ಕಾಣಬಹುದು ಎಂದು ಯು. ವಿ. ಸ್ವಾಮಿನಾಥ ಅಯ್ಯರರ ಅಭಿಪ್ರಾಯ. ನಾಗಪಟ್ಟಣದ ಶ್ರೇಷ್ಠ ವರ್ತಕನೂ ವಿದ್ವತ್ ಪಕ್ಷ ಪಾತಿಯೂ ಆದ ಕಂದಪ್ಪ ಚೆಟ್ಟಿಯಾರ್ ಎಂಬಾತ ಈತನ ಹಿರಿಮೆಯನ್ನು ಮನಗಂಡು ಹೆಚ್ಚಾದ ಪ್ರೋತ್ಸಾಹ ಕೊಟ್ಟನೆನ್ನಲಾಗಿದೆ. ಇಂಥ ಅಭಿಮಾನಶಾಲಿಯ ಅಭಿಲಾಷೆಯಂತೆ ಭಾರತಿ ನಂದನ್ ಚರಿತ್ತಿರಂ ಎಂಬ ಕೀರ್ತನೆಯನ್ನು ರಚಿಸಿ ಬಹಳ ವಿಜೃಂಭಣೆಯಿಂದ ಅದನ್ನು ನೃತ್ಯಗಾಯನಾದಿಗಳೊಡನೆ ರಂಗದಲ್ಲಿ ಪ್ರದರ್ಶಿಸಿದ. ಪಂಡಿತರಿಗೆ ಮಾತ್ರ ತಿಳಿಯುವಂತಿದ್ದ ಪೆರಿಯಪುರಾಣದಲ್ಲಿರುವ ತಿರುನಾಳೈಪ್ಪೋವಾರ್ ಪುರಾಣವನ್ನು ಅಲ್ಪಸ್ವಲ್ಪ ವ್ಯತ್ಯಾಸದೊಡನೆ ಲಲಿತವಾದ ತಮಿಳಿನಲ್ಲಿ ಪಾಮರರಿಗೂ ತಿಳಿಯುವಂತೆ ನಂದನ್ ಚರಿತ್ತಿರಂ ಎಂಬುದಾಗಿ ರಚಿಸಿದ ಕೀರ್ತಿ ಭಾರತಿಯದು. ಇದರ ಜನಪ್ರಿಯತೆ ಹಲವು ಪಂಡಿರಿಗೆ ಅಸೂಯೆಯನ್ನುಂಟುಮಾಡುತ್ತದೆ. ತಪ್ಪುಗಳು ತುಂಬಿರುವ ನಂದನ್ ಚರಿತ್ರೆಯನ್ನು ಯಾರೂ ಕೇಳಬಾರದೆಂದು ಅಂಥವರು ಪ್ರಚಾರ ಮಾಡಿದರಂತೆ. ಕವಿರಾಯರ್ ಎಂಬುವನೊಬ್ಬ ವ್ಯಾಕರಣ ನಿಯಮಬದ್ಧವಾಗಿ ತಿರುನಾವುಕ್ಕರಸರ್ ಚರಿತ್ತಿರಂ ಎಂಬ ಒಂದು ಗ್ರಂಥವನ್ನು ರಚಿಸಿ ಭಾರತಿಯ ಗ್ರಂಥಕ್ಕೆ ಸವಾಲೆಂಬಂತೆ ಪ್ರಕಟಪಡಿಸಿದನಾದರೂ ಪಂಡಿತರಾರೂ ಅದನ್ನು ಗಮನಿಸಲಿಲ್ಲವೆಂದೂ ಸಂಗೀತಗಾರರು ಯಾರೂ ಅದನ್ನು ಮೆಚ್ಚಲಿಲ್ಲವೆಂದೂ ಕಥೆ. ಭಾರತಿಯ ಸಮಕಾಲೀನ ಮೀನಾಕ್ಷಿಸುಂದರಂ ಪಿಳ್ಳೆ ಎಂಬ ಖ್ಯಾತಿವೆತ್ತ ಮಹಾವಿದ್ವಾಂಸ ನಂದನ್ ಚರಿತ್ತಿರಮ್‍ಗೆ ಮುನ್ನುಡಿ ಬರೆದಿದ್ದಾನೆ. ಭಾರತೀಯ ಹಾಡುಗಳಲ್ಲಿ ಒಂದಾದ ಚಿದಂಬರಂ ಕುಮ್ಮಿ ಎಂಬುದು ಹೆಂಗಸರು ಕುಮ್ಮಿ (ಕೋಲಾಟವಾಡುವಂತೆ ಕೈ ಚಪ್ಪಾಳೆ ಹೊಡೆದುಕೊಂಡು) ಆಡುವಾಗ ಹಾಡಲು ಅನುಕೂಲವಾಗುವಂತಿದೆಯಲ್ಲದೆ ಸರಳವಾಗಿ ದೊಡ್ಡ ತತ್ತ್ವವನ್ನು ಬೋಧಿಸುತ್ತದೆ.

ಭಾರತಿ ರಚಿಸಿದ ಇಯರ್‍ಪ್ಪಗೈ ನಾಯನಾರ್ ಚರಿತ್ತಿರಂ, ತಿರುನೀಲಕಂಟ ನಾಯನಾರ್ ಚರಿತ್ತಿರಂ. ಕಾರೈಕ್ಕಾಲಮ್ಮೈಯಾರ್ ಚರಿತ್ತಿರಂ ಮೊದಲಾದವು ನಂದನ್ ಚರಿತ್ತಿರಂನಷ್ಟು ಜನಪ್ರಿಯವಾಗಲಿಲ್ಲ.

ಭಾರತಿ ತನ್ನ ಜೀವನದಲ್ಲಿ ಶಿವಕೈಂಕರ್ಯದಿಂದ ಸಂಪಾದನೆಯಾದ ಮೂರು ಸಾವಿರ ರೂಪಾಯಿಗಳನ್ನು ಮಾಯೂರಂ ಶಿವದೇವಾಲಯಕ್ಕೆ ಬರುವ ಯಾತ್ರಿಕರಿಗೆ ಅನ್ನದಾನಮಾಡಲು ಅರ್ಪಿಸಿದನಂತೆ.

ಆಗಿನ ಕಾಲದಲ್ಲಿ ಮಹಾಸಂಗೀತವಿದ್ವಾಂಸನಾಗಿದ್ದ ಮಹಾವೈದ್ಯನಾಥ ಅಯ್ಯರ್ ಎಂಬಾತ ಭಾರತಿಯ ಬಳಿ ಬಂದು ಭಾರತಿಯ ಕೃತಿಗಳನ್ನು ಕಂಠಪಾಠ ಮಾಡಿ ಕೊಳ್ಳುತ್ತಿದ್ದನಂತೆ.

ಭಾರತಿಯ ಗೀತೆಗಳು ತಮಿಳುಸಂಗೀತದ ಬೆಳೆವಣಿಗೆಗೆ ಜೀವವಿತ್ತುವು ; ಜನಮನವನ್ನು ರಂಜಿಸಿದುವು. ಧಾತುಸಂವತ್ಸದಲ್ಲಿ ಒಮ್ಮೆ ಬಂದಿದ್ದ ಕ್ಷಾಮದಲ್ಲಿ ಜನರಿಗೆ ಬಹಳ ಉಪಕಾರಮಾಡಿದ ಮಯೂರಂ ವೇದನಾಯಕ ಪಿಳ್ಳೆಯನ್ನು ಕುರಿತು ನೀಯೇಪುರುಷಮೇರು ಎಂದಾರಂಭವಾಗುವ ಗೀತೆಯೊಂದನ್ನು ಭಾರತಿ ಹಾಡಿದ್ದಾನೆ. ಇದು ಹೊರತು, ಈತನ ಬೇರಾವ ಗೀತೆಗಳಲ್ಲಿಯೂ ನರಸ್ತುತಿಯಿಲ್ಲ. ಎಲ್ಲವೂ ಆಧ್ಯಾತ್ಮಿಕ ಗೀತೆಗಳೇ ಆಗಿವೆ. (ಎಸ್.ವಿ.ಎಲ್.)