ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋಯೆಂಕಾ, ರಾಮನಾಥ

ವಿಕಿಸೋರ್ಸ್ದಿಂದ
ಗೋಯೆಂಕಾ, ರಾಮನಾಥ

1902-91. ಭಾರತದ ಒಬ್ಬ ಪ್ರಮುಖ ಪತ್ರಿಕೋದ್ಯಮಿ, ಉದ್ಯಮಪತಿ. 1902ರ ಮೇ 11ರಂದು ಬಿಹಾರದ ದರ್ಬಂಗದಲ್ಲಿ ಜನನ. 1926 ರಲ್ಲಿ ಮದ್ರಾಸಿನಲ್ಲಿ ಇವರು ಸ್ವಂತ ಜವಳಿ ಗಿರಣಿ ಪ್ರಾರಂಭಿಸಿದರು. 1926-30ರಲ್ಲಿ ಮದ್ರಾಸ್ ವಿಧಾನಮಂಡಲದ ಸದಸ್ಯರಾಗಿದ್ದರು. 1927ರಲ್ಲಿ ವಿಧಾನಮಂಡಲದಲ್ಲಿ ಇಂಡಿಪೆಂಡೆಂಟ್ ಪಾರ್ಟಿಯ ಕಾರ್ಯದರ್ಶಿಯಾದರು. 1971ರಲ್ಲಿ ಲೋಕಸಭೆಯ ಸದಸ್ಯರಾದರು. ಪತ್ರಿಕೋದ್ಯಮವನ್ನು ಒಂದು ಯಶಸ್ವಿ ಉದ್ದಿಮೆಯಾಗಿ ಪರಿವರ್ತಿಸಿದ ಭಾರತೀಯರಲ್ಲಿ ಗೋಯೆಂಕಾ ಪ್ರಮುಖರು. ಸ್ವಾತಂತ್ರ್ಯೋತ್ತರದಲ್ಲಿ ಇವರ ಮತ್ತು ಇವರ ಕುಟುಂಬದವರ ಒಡೆತನಕ್ಕೆ ಸೇರಿದ ಪತ್ರಿಕೆಗಳು ಸಂಖ್ಯೆ ಹಾಗೂ ಪ್ರಸರಣದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿವೆ. ಆರು ಭಾಷೆಗಳಲ್ಲಿ ಎಂಟು ದಿನಪತ್ರಿಕೆಗಳೂ ಮೂರು ವಾರಪತ್ರಿಕೆಗಳೂ ಇವರ ನಿಯಂತ್ರಣಕ್ಕೆ ಒಳಪಟ್ಟಿವೆ. ಅಹಮದಾಬಾದ್, ದೆಹಲಿ, ಬೆಂಗಳೂರು, ಮದ್ರಾಸ್, ಮಧುರೈ, ಮುಂಬಯಿ ಮತ್ತು ವಿಜಯವಾಡಗಳಿಂದ ಏಕಕಾಲಕ್ಕೆ ಪ್ರಕಟವಾಗುವ ಇಂಡಿಯನ್ ಎಕ್ಸ್‌ಪ್ರೆಸ್ ಭಾರತದಲ್ಲಿ ಅತ್ಯಧಿಕ ಪ್ರಸಾರವುಳ್ಳ ಇಂಗ್ಲಿಷ್ ಪತ್ರಿಕೆ. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ವಾಣಿಜ್ಯೋದ್ಯಮಗಳಿಗೆ ಸಂಬಂಧಿಸಿದ ದಿನಪತ್ರಿಕೆ. ಇದು ಮುಂಬಯಿಯಿಂದ ಪ್ರಕಟವಾಗುತ್ತದೆ. ಸ್ಕ್ರೀನ್ ಚಲನ ಚಿತ್ರೋದ್ಯಮಕ್ಕೆ ಮೀಸಲಾದ ವಾರಪತ್ರಿಕೆ. ಸಂಡೇ ಸ್ಟ್ಯಾಂಡರ್ಡ್ ಒಂದು ವಾರಪತ್ರಿಕೆ. ಭಾನುವಾರದ ಇಂಡಿಯನ್ ಎಕ್ಸ್‌ಪ್ರೆಸ್ ಅನ್ನೂ ಇದು ಒಳಗೊಂಡಿರುತ್ತದೆ. ಕನ್ನಡ ಪ್ರಭ (ಕನ್ನಡ), ಆಂಧ್ರ ಪ್ರಭ (ತೆಲುಗು), ದಿನಮಣಿ (ತಮಿಳು), ಲೋಕಸತ್ತಾ (ಮರಾಠಿ), ಜನಸತ್ತಾ ಮತ್ತು ಲೋಕಸತ್ತಾ (ಗುಜರಾತಿ)-ಇವು ಭಾರತೀಯ ಭಾಷಾ ಪತ್ರಿಕೆಗಳು. ಆಂಧ್ರಪ್ರಭ ಎಂಬ ಹೆಸರಿನ ವಾರಪತ್ರಿಕೆಯೂ (ತೆಲುಗು) ಇದೆ.


ಭಾರತೀಯ ಪತ್ರಿಕಾ ಮಾಲೀಕರ ಸಂಘವಾದ ಇಂಡಿಯನ್ ಅಂಡ್ ಈಸ್ಟರ್ನ್ ನ್ಯೂಸ್ಪೇಪರ್ಸ್ ಸೊಸೈಟಿ ಆರಂಭವಾದಂದಿನಿಂದಲೂ ರಾಮನಾಥ ಗೋಯೆಂಕಾ ಅದರ ಪ್ರಮುಖ ಸದಸ್ಯರಲ್ಲೊಬ್ಬರಾಗಿದ್ದರು. 1957ರಲ್ಲಿ ಈ ಸಂಘದ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ವೃತ್ತಪತ್ರಿಕಾ ಕಾಗದ ಪುರೈಕೆಯ ಸಂಬಂಧದಲ್ಲಿ 1946ರಲ್ಲಿ ಈ ಸಂಘ ಇಂಗ್ಲೆಂಡ್, ಯುರೋಪ್, ಕೆನಡ ಮತ್ತು ಅಮೆರಿಕ ಸಂಯುಕ್ತಸಂಸ್ಥಾನಗಳಿಗೆ ಕಳಿಸಿದ್ದ ನಿಯೋಗದಲ್ಲಿ ಗೋಯೆಂಕಾ ಅವರೂ ಒಬ್ಬ ಸದಸ್ಯರಾಗಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬಂದ ಮೇಲೆ ದೇಶದ ಪ್ರಮುಖ ವಾರ್ತಾ ಸಂಸ್ಥೆಯಾಗಿ ಸ್ಥಾಪನೆಯಾದ ಪ್ರೆಸ್ ಟ್ರಸ್ಟ್‌ ಆಫ್ ಇಂಡಿಯಕ್ಕೆ ಸುದ್ದಿಯ ಪುರೈಕೆಗಾಗಿ ರಾಯಿಟರ್ಸ್ ಸಂಸ್ಥೆಯೊಂದಿಗೆ ಮಾತುಕತೆ ನಡೆಸಿದ ಇಂಡಿಯನ್ ಅಂಡ್ ಈಸ್ಟರ್ನ್ ನ್ಯೂಸ್ಪೇಪರ್ಸ್‌ ಸೊಸೈಟಿಯ ನಿಯೋಗದಲ್ಲೂ ಇವರು ಸದಸ್ಯರಾಗಿದ್ದರು. ಸ್ವಲ್ಪ ಕಾಲ ಇವರು ಪ್ರೆಸ್ ಟ್ರಸ್ಟ್‌ ಆಫ್ ಇಂಡಿಯದ ನಿರ್ದೇಶಕರೂ ನಿರ್ದೇಶಕ ಮಂಡಲಿಯ ಅಧ್ಯಕ್ಷರೂ ಆಗಿದ್ದರು. ಭಾರತದ ಪತ್ರಿಕೋದ್ಯಮದಲ್ಲಿ ತಮ್ಮ ಛಾಪು ಮೂಡಿಸಿರುವ ಇವರು 1991ರ ಅಕ್ಟೋಬರ್ 5ರಂದು ನಿಧನ ಹೊಂದಿದರು.


ವಾರಿಯರ್ ಆಫ್ ದಿ ಫೋರ್ತ್ ಎಸ್ಟೇಟ್ (2005) ಎಂಬ ಶೀರ್ಷಿಕೆಯಡಿಯಲ್ಲಿ ಗೋಯೆಂಕಾರ ಜೀವನ ಚರಿತ್ರೆಯನ್ನು ಬಿ.ಜಿ.ವರ್ಗಿಸ್ ಪ್ರಕಟಿಸಿದ್ದಾರೆ. ಇವರ ಸೊಸೆ ಅನನ್ಯಾ ಗೋಯೆಂಕಾ ತಮ್ಮ ಮಾವನ ವೈಯಕ್ತಿಕ ಜೀವನದ ಚಿತ್ರಣವನ್ನು ರಾಮನಾಥ ಗೋಯೆಂಕಾ : ಎ ಲೈಫ್ ಇನ್ ಬ್ಲ್ಯಾಕ್ ಅಂಡ್ ವೈಟ್ (2005) ಎಂಬ ಪುಸ್ತಕ ರೂಪದಲ್ಲಿ ಸಾದರಪಡಿಸಿದ್ದಾರೆ.


ಗೋಯೆಂಕಾ ಅವರ ಜನ್ಮಶತಾಬ್ದಿಯ ಸ್ಮರಣೆಯಾಗಿ 2004ರಿಂದ ಪತ್ರಿಕೋದ್ಯಮ ಕ್ಷೇತ್ರಕ್ಕೆ ಉತ್ಕೃಷ್ಟ ಕೊಡುಗೆಯನ್ನು ನೀಡಿದ ಪತ್ರಿಕಾ ವರದಿಗಾರರಿಗೆ ರಾಮನಾಥ ಗೋಯೆಂಕಾ ಎಕ್ಸಲೆನ್ಸ್‌ ಇನ್ ಜರ್ನಲಿಸಂ ಅವಾರ್ಡ್ ಎಂಬ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುತ್ತಿದೆ.