ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋರಂಟಿ

ವಿಕಿಸೋರ್ಸ್ದಿಂದ
ಗೋರಂಟಿ

ಲಿತ್ರೇಸೀ ಕುಟುಂಬಕ್ಕೆ ಸೇರಿದ ಒಂದು ಸಸ್ಯ. ಮದರಂಗಿ ಪರ್ಯಾಯನಾಮ. ಇದರ ಶಾಸ್ತ್ರೀಯ ಹೆಸರು ಲಾಸೋನಿಯ ಇನರ್ಮಿಸ್. ಇಂಗ್ಲಿಷಿನಲ್ಲಿ ಇದನ್ನು ಹೆನ ಎಂದು ಕರೆಯಲಾಗುತ್ತದೆ. ಇದು ಉತ್ತರ ಆಫ್ರಿಕ ಹಾಗೂ ನೈರುತ್ಯ ಏಷ್ಯದ ಮೂಲವಾಸಿ. ಇದನ್ನು ಅಲಂಕಾರಕ್ಕಾಗಿಯೂ ಇದರಿಂದ ಪಡೆಯಲಾಗುವ ಬಣ್ಣಕ್ಕಾಗಿಯೂ ಬೆಳೆಸಲಾಗುತ್ತದೆ.


ಗೋರಂಟಿ ವಿಪುಲವಾಗಿ ಕವಲೊಡೆದು ಬೆಳೆಯುವ ಒಂದು ಪೊದೆಸಸ್ಯ. ಬೂದು ಕಂದು ಮಿಶ್ರಿತ ಬಣ್ಣದ ತೊಗಟೆ, ಅಭಿಮುಖ ಮಾದರಿಯಲ್ಲಿ ಜೋಡಣೆಗೊಂಡಿರುವ ಸರಳ, ಅಖಂಡ ಹಾಗೂ ಅಂಡಾಕಾರದ ಎಲೆಗಳು ಇದರ ಮುಖ್ಯ ಲಕ್ಷಣಗಳಲ್ಲಿ ಕೆಲವು. ಹೂಗಳು ಚಿಕ್ಕ ಗಾತ್ರದವು ಮತ್ತು ಬಿಳಿ ಇಲ್ಲವೆ ಗುಲಾಬಿ ಬಣ್ಣದವು; ಸಂಕೀರ್ಣ ಮಾದರಿಯ ಮಧ್ಯಾರಂಭಿ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಇವಕ್ಕೆ ಸುವಾಸನೆಯಿದೆ. ಫಲ ಸಂಪುಟ ಮಾದರಿಯದು. ಹಣ್ಣಿನೊಳಗೆ ನಯವಾದ ಅಸಂಖ್ಯಾತ ಬೀಜಗಳಿವೆ.


ಗೋರಂಟಿ ಗಿಡವನ್ನು ಉಷ್ಣ ಹಾಗೂ ಸಮಶೀತೋಷ್ಣ ವಲಯಗಳ ಅನೇಕ ಪ್ರದೇಶಗಳಲ್ಲಿ ಬೆಳೆಸುತ್ತಾರೆ. ಭಾರತ, ಈಜಿಪ್ಟ್‌, ಪರ್ಷಿಯ, ಪಾಕಿಸ್ತಾನ, ಸೂಡಾನ್, ಮಡಗಾಸ್ಕರ್ಗಳಲ್ಲಿ ಇದರ ಎಲೆಗಳಿಂದ ದೊರೆಯುವ ಬಣ್ಣಕ್ಕಾಗಿ ಗೋರಂಟಿ ಗಿಡವನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸಲಾಗುತ್ತಿದೆ. ಭಾರತದಲ್ಲಿ ಬಣ್ಣಕ್ಕಾಗಿ ಬೆಳೆಸುವ ಪ್ರದೇಶಗಳಲ್ಲಿ ಮುಖ್ಯವಾದವು ಪಂಜಾಬ್, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ತಾನಗಳು. ಅದರಲ್ಲೂ ಪಂಜಾಬಿನ ಫರೀದಾಬಾದ್ ಮತ್ತು ಗುಜರಾತಿನ ಬಾರ್ದೋಲಿ ಹಾಗೂ ಮಾಧಿಗಳು ಗೋರಂಟಿ ಉತ್ಪಾದನೆಯ ಮುಖ್ಯ ಕೇಂದ್ರಗಳಾಗಿವೆ.


ಗೋರಂಟಿ ಗಿಡ ಯಾವ ರೀತಿಯ ಮಣ್ಣಿನಲ್ಲಾದರೂ ಬೆಳೆಯಬಲ್ಲದು. ಆದರೆ ನೆಲ ಜವುಗಾಗಿರಬಾರದು. ಗೋರಂಟಿಯನ್ನು ಬೀಜಗಳಿಂದ ಅಥವಾ ಕಾಂಡತುಂಡು ಗಳಿಂದ ವೃದ್ಧಿಸಬಹುದು. ಗೋರಂಟಿಯ ಎಲೆಗಳನ್ನು ವರ್ಷಕ್ಕೆ ಎರಡು ಸಲ (ಏಪ್ರಿಲ್-ಮೇ ಮತ್ತು ಅಕ್ಟೋಬರ್-ನವೆಂಬರ್) ಕಟಾಯಿಸುತ್ತಾರೆ. ಒಂದು ಎಕರೆಗೆ ಸುಮಾರು 350-750 ಕಿಗ್ರಾಂ ಒಣ ಎಲೆಗಳನ್ನು ಪಡೆಯಬಹುದು. ನೀರಾವರಿ ಭೂಮಿಯಲ್ಲಿ ಇಳುವರಿ 920 ಕಿಗ್ರಾಂನಷ್ಟು ಹೆಚ್ಚಾಗಿರಬಹುದು. ಗೋರಂಟಿಯ ಎಲೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಭಾರತ ಮತ್ತು ಮಧ್ಯಪ್ರಾಚ್ಯಗಳಲ್ಲಿ ಅಂಗೈ, ಅಂಗಾಲು ಹಾಗೂ ಕೈ ಬೆರಳಿನ ಉಗುರುಗಳಿಗೆ ಬಣ್ಣ ಹಾಕಲು ಉಪಯೋಗಿಸುತ್ತಾರೆ. ತಲೆಗೂದಲು, ಗಡ್ಡ, ಹುಬ್ಬು, ಕುದುರೆಗಳ ಬಾಲ, ಅಯಾಲು, ಚರ್ಮ ಮುಂತಾದವುಗಳಿಗೆ ಬಣ್ಣ ಕೊಡುವುದಕ್ಕೆ ಸಹ ಇದನ್ನು ಬಳಸುವುದುಂಟು. ಹಿಂದಿನ ಕಾಲದಲ್ಲಿ ರೇಷ್ಮೆ ಹಾಗೂ ಉಣ್ಣೆ ಬಟ್ಟೆಗಳಿಗೆ ಬಣ್ಣ ಕೊಡಲು ಗೋರಂಟಿಯನ್ನು ಬಳಸುತ್ತಿದ್ದರು. ಗೋರಂಟಿ ಎಲೆಗಳಿಗೆ ಔಷಧೀಯ ಗುಣಗಳಿವೆ. ಕಷಾಯದ ರೂಪದಲ್ಲಿ ಇಲ್ಲವೆ ಸರಿಯ ರೂಪದಲ್ಲಿ ಇವನ್ನು ಹುಣ್ಣು, ತರಚು ಹಾಗೂ ಸುಟ್ಟಗಾಯಗಳು ಮತ್ತು ಕೆಲವು ಚರ್ಮರೋಗಗಳಿಗೆ ಬಳಸುತ್ತಾರೆ. ಕಷಾಯ ಗಂಟಲುನೋವಿಗೆ ಒಳ್ಳೆಯ ಮದ್ದು. ಗೋರಂಟಿಯ ಹೂವನ್ನು ಆವಿ ಅಸವೀಕರಣಕ್ಕೊಳಪಡಿಸಿ ಒಂದು ಬಗೆಯ ಪರಿಮಳಯುಕ್ತ ಚಂಚಲ ತೈಲವನ್ನು ಪಡೆಯಬಹುದು. ಇದಕ್ಕೆ ಮೆಹಂದಿ ಎಣ್ಣೆ ಎಂದು ಹೆಸರು. ಇದನ್ನು ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಗೋರಂಟಿಯ ಚೌಬೀನೆಯನ್ನು ಉಪಕರಣಗಳ ಹಿಡಿ, ಗೂಟ ಮುಂತಾದವುಗಳ ತಯಾರಿಕೆಗೆ ಉಪಯೋಗಿಸುತ್ತಾರೆ. ಎಳೆಯ ಕಡ್ಡಿಗಳನ್ನು ಹಲ್ಲುಜ್ಜಲು ಇಂಡೋನೇಷ್ಯದಲ್ಲಿ ಬಳಸುತ್ತಾರೆ.


ಗೋರಂಟಿಯನ್ನು ವಾಣಿಜ್ಯ ದೃಷ್ಟಿಯಿಂದ ದೆಹಲಿ, ಗುಜರಾತ್ ಮತ್ತು ಮಾಲ್ವ ಎಂಬ ಮೂರು ಬಗೆಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ದೆಹಲಿ ಗೋರಂಟಿ ಅತ್ಯುತ್ತಮವಾದ್ದು.