ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋರಖ್‍ಪುರ

ವಿಕಿಸೋರ್ಸ್ದಿಂದ

ಉತ್ತರ ಪ್ರದೇಶದ ಒಂದು ಆಡಳಿತ ವಿಭಾಗ, ಜಿಲ್ಲೆ ಮತ್ತು ಅದರ ಮುಖ್ಯ ಪಟ್ಟಣ. ಗೋರಖ್ಪುರ ವಿಭಾಗದಲ್ಲಿ ಗೋರಖ್‍ಪುರ, ದೇವರಿಯ, ಬಸ್ತಿ ಮತ್ತು ಅಜಮ್ಗಡ್ ಜಿಲ್ಲೆಗಳಿವೆ. ವಿಭಾಗದ ವಿಸ್ತೀರ್ಣ 24,895 ಚ.ಕಿಮೀ. ಜನಸಂಖ್ಯೆ 1,15,49,180 (2001).


ಜಿಲ್ಲೆ[ಸಂಪಾದಿಸಿ]

ಗೋರಖ್‍ಪುರ ಜಿಲ್ಲೆಯ ವಿಸ್ತೀರ್ಣ 3,321 ಚ.ಕಿಮೀ. ಜನಸಂಖ್ಯೆ 44,36,275 (2011). ಉತ್ತರ ಪ್ರದೇಶದ ಈಶಾನ್ಯ ದಿಕ್ಕಿನಲ್ಲಿ ಹಿಮಾಲಯದ ದಕ್ಷಿಣದ ತಪ್ಪಲಿನಲ್ಲಿರುವ ಈ ಜಿಲ್ಲೆ ಬಹುತೇಕ ಸಮಭೂಮಿ. ಅಲ್ಲಲ್ಲಿ ಕೆಲವು ಮರಳುಗುಡ್ಡೆಗಳಿವೆ. ರಾಪ್ತಿ, ಆಮೀ ಮತ್ತು ಘಾಘ್ರ ನದಿಗಳು ಇಲ್ಲಿ ಹರಿಯುತ್ತವೆ. ಉತ್ತರದಲ್ಲಿ ಅಲ್ಲಲ್ಲಿ ಕಾಡುಗಳುಂಟು. ಬೇಸಿಗೆಯಲ್ಲಿ ಹೆಚ್ಚು ಸೆಕೆಯಾಗುವುದಿಲ್ಲ. ವಾರ್ಷಿಕ ಮಳೆ 50". ನೆಲ ಫಲವತ್ತಾಗಿದೆ. ಆದರೆ ಪದೇ ಪದೇ ಸಂಭವಿಸುವ ಪ್ರವಾಹಗಳಿಂದಾಗಿ ಬೇಸಾಯಕ್ಕೆ ಅಡಚಣೆ ಒದಗುವುದುಂಟು. ಬತ್ತ, ಬಾರ್ಲಿ, ಗೋದಿ, ಕಬ್ಬು ಮುಖ್ಯ ಬೆಳೆಗಳು. ಜಿಲ್ಲೆಯಲ್ಲಿ ಹಲವು ಸಕ್ಕರೆ ಕಾರ್ಖಾನೆಗಳಿವೆ. ಬುದ್ಧ ಪರಿನಿರ್ವಾಣ ಹೊಂದಿದ ಸ್ಥಳವಾದ ಕಾಸಿಯಾ ಎಂಬುದು ಗೋರಖ್‍ಪುರ ನಗರದ ಪೂರ್ವಕ್ಕೆ 55 ಕಿಮೀ ದೂರದಲ್ಲಿದೆ.


ಗೋರಖ್‍ಪುರ ನಗರ ವಾರಾಣಸಿಗೆ ಉತ್ತರದಲ್ಲಿ 240 ಕಿಮೀ ದೂರದಲ್ಲಿದೆ. ಘಾಘ್ರಾದ ಉಪನದಿಗಳಲ್ಲಿ ಒಂದಾದ ರಾಪ್ತಿ ನದಿಯ ದಂಡೆಯ ಮೇಲಿದೆ. ಜನಸಂಖ್ಯೆ 6,92,519 (2011). ರಾಪ್ತಿ ನದಿಯ ಪಾತ್ರ ಬದಲಾದಂತೆ ನಗರ ಕೂಡ ಉತ್ತರದಿಂದ ದಕ್ಷಿಣಕ್ಕೆ ಸರಿಯುತ್ತ ಬಂತು. ನದಿಗಳ ದಂಡೆಗಳ ಮೇಲೆ ಪ್ರವಾಹವನ್ನು ತಡೆಯಲು ಕಟ್ಟೆಗಳನ್ನು ಕಟ್ಟಲಾಗಿದೆ. ಈ ನಗರವನ್ನು 1400ರಲ್ಲಿ ನಿರ್ಮಿಸಲಾಯಿತೆಂದು ಹೇಳಲಾಗಿದೆ. ಈ ನಗರಕ್ಕೆ ಗೊರಖ್ಪುರ ಎಂಬ ಹೆಸರು ಬರಲೂ ಇದು ಬೆಳೆಯಲೂ ಇಲ್ಲಿಯ ಗೋರಖ್ನಾಥ ದೇವಸ್ಥಾನ ಕಾರಣ. ಇದು ರಜಪುತ ದೊರೆಗಳ ಒಂದು ಭದ್ರಸ್ಥಾನವಾಗಿತ್ತು. ಅನಂತರ ಇದು ಮೊಗಲರ ವಶಕ್ಕೆ ಬಂತು. ಇದು ಅವಧ್ ಸರ್ಕಾರದ ವಿಭಾಗ ಆಡಳಿತಕೇಂದ್ರವಾಯಿತು. ಉರ್ದು ಬಜಾರಿನ ಹತ್ತಿರ ಇರುವ ಜಾಮಿ ಮಸೀದಿಯನ್ನು ಕಟ್ಟಿಸಿದವನು ಔರಂಗಜ಼ೇಬ್. ಈ ನಡುವೆ ಸುಮಾರು ಏಳು ದಶಕಗಳ ಕಾಲ ಇದು ರಜಪುತರ ವಶದಲ್ಲಿತ್ತು. ರಾಜ ವಸಂತಸಿಂಹನಿಂದ ನಿರ್ಮಿತವಾದ್ದು ವಸಂತ ಕಿಲ್ಲೆ. 1680ರಲ್ಲಿ ಈ ನಗರ ಔರಂಗಜ಼ೇಬನ ಅಧಿಕಾರಕ್ಕೆ ಒಳಪಟ್ಟಿತು. 1801ರಲ್ಲಿ ಇದು ಬ್ರಿಟಿಷರ ಅಧೀನಕ್ಕೆ ಬಂತು. ಅವರ ಆಡಳಿತಕಾಲದಲ್ಲಿ ಇಲ್ಲಿ ಸಿವಿಲ್ ಲೈನ್, ಪೋಲಿಸ್ ಲೈನ್, ರೈಲ್ವೆ ಕಾಲೊನಿಗಳು ನಿರ್ಮಿತವಾದುವು. ಬಗೆಬಗೆಯ ಜನ ಬಂದು ನೆಲೆಸಲು ಪ್ರಾರಂಭಿಸಿದರು. ಅಂದಿನಿಂದ ವ್ಯಾಪಾರೋದ್ಯೋಗಗಳಲ್ಲೂ ಈ ನಗರ ಉನ್ನತಿ ಸಾಧಿಸಿದೆ. ಇದಕ್ಕೆ 1885ರಲ್ಲಿ ರೈಲ್ವೆ ಸಂಪರ್ಕ ಏರ್ಪಟ್ಟಿತು. ಈಗ ಈ ನಗರ ಈಶಾನ್ಯ ರೈಲ್ವೆಯ ಮುಖ್ಯ ಕೇಂದ್ರ, ಜಂಕ್ಷನ್. ಇಲ್ಲಿ ಅಧಿಕಾರಿಗಳ ವಾಸಗೃಹಗಳು, ಕಾರ್ಯಾಲಯಗಳು, ಶಿಕ್ಷಣ ಕೇಂದ್ರಗಳು, ಆಸ್ಪತ್ರೆಗಳು, ಸೈನಿಕ ಕೇಂದ್ರ ಇವೆಲ್ಲ ಇವೆ. ಈಶಾನ್ಯ ರೈಲ್ವೆಯ ದೊಡ್ಡ ಕಾರ್ಯಾಗಾರವೂ ಇದೆ. ಗೋರಖ್‍ಪುರ ಕೈಮಗ್ಗದ ಬಟ್ಟೆ ತಯಾರಿಕೆಗೆ ತುಂಬ ಹೆಸರಾಗಿದೆ. ಕಬ್ಬಿಣ ಪದಾರ್ಥಗಳು, ಕಾಗದ, ಮುದ್ರಣ ಸಾಮಗ್ರಿ, ಖಾದ್ಯ ಪೇಯಗಳು, ತಂಬಾಕು ಮುಂತಾದ ಕೈಗಾರಿಕೆಗಳಿವೆ. ಗೋರಖ್‍ಪುರ ವಿಶ್ವವಿದ್ಯಾಲಯ (ದೀನ್ ದಯಾಳ್ ಉಪಾಧ್ಯಾಯ ವಿಶ್ವವಿದ್ಯಾಲಯ) ಕೇಂದ್ರ. ಗೋರಖ್‍ಪುರ ವಿಶ್ವವಿದ್ಯಾಲಯಕ್ಕೆ ಆಂಗಿಕ ಕಾಲೇಜುಗಳಿಲ್ಲ.