ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಗೋವಿಂದ ಕವಿ

ವಿಕಿಸೋರ್ಸ್ದಿಂದ

"'ಗೋಪಕವಿ"' : -16ನೆಯ ಶತಮಾನದ ಉತ್ತರಾರ್ಧದಲ್ಲಿ ಜೀವಿಸಿದ್ದ ಭಾಗವತ ಸಂಪ್ರದಾಯದ ಒಬ್ಬ ಕನ್ನಡ ಕವಿ. ಈತನನ್ನು ಗೋಪ ಕವಿ ಎಂದೂ ಕರೆಯುವುದಿದೆ. ತಾನು ಭೀಮರಥೀ ತೀರದ ಬುಯ್ಯರ ಗ್ರಾಮದ ಜ್ಯೋತಿ ಎಂಬ ಕರಣಿಕನ ಮಗನೆಂದೂ ಶ್ರೀಕೃಷ್ಣ ಮದನಗೋಪಾಲ ತನ್ನ ಆರಾಧ್ಯ ದೈವವೆಂದೂ ಹೇಳಿಕೊಂಡಿದ್ದಾನೆ. ಈತ ರಚಿಸಿದ ಕಾವ್ಯಗಳು ಚಿತ್ರಭಾರತ ಮತ್ತು ನಂದಿಮಹಾತ್ಮೆ. ಕಾವ್ಯಾರಂಭದಲ್ಲಿ ಕುಮಾರವ್ಯಾಸ, ಲಕ್ಷ್ಮೀಶರನ್ನು ಸ್ತುತಿಸಿದ್ದಾನೆ.


ಚಿತ್ರಭಾರತದ ಕಾವ್ಯವಸ್ತು ಮಹಾಭಾರತದ್ದೇ ಆಗಿದೆ. ಮೂವತ್ತು ಸಂಧಿಗಳಿಂದ ಕೂಡಿದ ಈ ಕೃತಿ ಭಕ್ತಿಪ್ರಧಾನವಾದುದು. ಕಾವ್ಯದ ಮೊದಲರ್ಧದಲ್ಲಿ ರಾಜಸೂಯಯಾಗ, ದ್ಯೂತಪ್ರಸಂಗ, ವನವಾಸಗಳ ಕಥಾನಿರೂಪಣೆಯಿದೆ. ಉಳಿದರ್ಧ ವತ್ಸಲಾಹರಣಕ್ಕೆ ಮೀಸಲಾಗಿದೆ. ಮರಾಠಿಭಾಷೆಯಲ್ಲಿ ಈ ಕಥೆ ಜನಪ್ರಿಯವಾಗಿರುವುದನ್ನು ಗಮನಿಸಿ ಕನ್ನಡದಲ್ಲಿ ತಾನು ರಚಿಸಿರುವುದಾಗಿ ಕವಿ ಹೇಳುತ್ತಾನೆ. ಸಾರಮಿದು ಹರಿಕಥಾಮೃತಂ ಎಂಬ ಮಾತು ಈತನ ಕುಮಾರವ್ಯಾಸ ಪರಂಪರೆಯನ್ನು ಎತ್ತಿ ತೋರಿಸುತ್ತದೆ. ಚಿತ್ರಕವಿತ್ವದ ಚಮತ್ಕಾರ ಇದರಲ್ಲಿ ವಿಶೇಷವಾಗಿ ಕಂಡುಬರುವುದರಿಂದ ಈ ಕೃತಿಗೆ ಚಿತ್ರಭಾರತವೆಂಬ ಹೆಸರು ಸೂಕ್ತವಾಗಿದೆ.


ನಂದಿಮಹಾತ್ಮೆ ಈತನ ಪರಿಪಕ್ವ ಕೃತಿ. ವಾರ್ಧಕ ಷಟ್ಪದಿಯಲ್ಲಿ ರಚಿತವಾಗಿರುವ ಈ ಕೃತಿ 50 ಸಂಧಿಗಳಷ್ಟು ದೀರ್ಘವಾಗಿದೆ. ಇದರ ಕಥಾವಸ್ತುವನ್ನು ಸೂತಪುರಾಣದಿಂದ ಆಯ್ದುಕೊಳ್ಳಲಾಗಿದೆ. ಪಾರ್ವತಿಯನ್ನು ಒಡ್ಡೋಲಗಕ್ಕೆ ಕರೆತರುವಂತೆ ಶಿವನಿಂದ ನಂದಿಗೆ ಅಪ್ಪಣೆಯಾಗುತ್ತದೆ. ನಂದಿ ಇಂದುಧರನ ರೂಪದಿಂದ ಪಾರ್ವತಿಯನ್ನು ಕರೆತರಲು ಹೋಗುತ್ತಾನೆ. ನಂದಿಯನ್ನು ಪಾರ್ವತಿ ಪರಶಿವನೆಂದೇ ಬಗೆದು ಸನ್ಮಾನಿಸುತ್ತಾಳೆ. ಈ ಅಚಾತುರ್ಯಕ್ಕಾಗಿ ಪಶ್ಚಾತ್ತಾಪಗೊಂಡ ನಂದಿ ಪ್ರಾಯಶ್ಚಿತ್ತಕ್ಕಾಗಿ ತಪಸ್ಸು ಮಾಡಲು ತೀರ್ಮಾನಿಸುತ್ತಾನೆ. ತನ್ನ ತಪಸ್ಸಿಗೆ ತಕ್ಕ ಸ್ಥಳವಾವುದೆಂದು ಗಣನಾಥ ಕೂಷ್ಮಾಂಡನನ್ನು ಕೇಳಲು ಆತ ಶ್ರೀಶೈಲ, ಕೇದಾರ, ವಾರಾಣಸಿ, ಕಂಚಿ ಮೊದಲಾದ ಶೈವಕ್ಷೇತ್ರಗಳ ಮಹಿಮೆಯನ್ನು ನಿರೂಪಿಸುತ್ತಾನೆ.


ಈ ಕವಿ ತನ್ನ ಕಾವ್ಯದ ಬಗ್ಗೆ ‘ಎಳೆ ನೀರೊಳೆಯ್ದೆ ತವರಾಜ ಬೆರೆದಂದದಿಂ’, ‘ಸುಳಿದ ರಸಗಂಧಿವಾಳೆಯೊಳು ಜೇನ್ದಳೆದಂತೆ’, ‘ಆನೆ ಹೋದುದೇ ಬೀದಿಯಲ್ಲವೆ ಜಗದೊಳು’- ಎಂದು ಹೇಳಿಕೊಂಡಿದ್ದರೂ ಆ ಮಾತುಗಳು ಕೇವಲ ಆತ್ಮಪ್ರಶಂಸೆಯಾಗಿ ಮಾತ್ರ ಉಳಿಯುತ್ತವೆ. ಕುಮಾರವ್ಯಾಸ ಲಕ್ಷ್ಮೀಶರ ಆದರ್ಶ ಈತನ ಕಾವ್ಯದಲ್ಲಿ ಕಂಡುಬಂದರೂ ಅವರ ಪ್ರತಿಭೆಯ ವೈಶಾಲ್ಯವಾಗಲೀ ಔನ್ನತ್ಯವಾಗಲೀ ಇಲ್ಲಿಲ್ಲ.