ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಲಾಲಾಬಾದ್

ವಿಕಿಸೋರ್ಸ್ದಿಂದ

ಜಲಾಲಾಬಾದ್ ಆಫ್ಘಾನಿಸ್ತಾನದ ನಾಂಗರ್‍ಹಾರ್ (ಪೂರ್ವ) ಪ್ರಾಂತ್ಯದ ಮುಖ್ಯಪಟ್ಟಣ. ಇದು ಕಾಬೂಲಿನಿಂದ 134 ಕಿ.ಮೀ. ಮತ್ತು ಪೆಷಾವರದಿಂದ 122 ಕಿ.ಮೀ. ದೂರದಲ್ಲಿ ಕಾಬೂಲ್ ನದಿಯ ದಕ್ಷಿಣ ದಂಡೆಯ ಮೇಲೆ 1950' ಎತ್ತರದಲ್ಲಿದೆ. ಜಲಾಲಾಬಾದ್ ಮತ್ತು ಪೆಷಾವರಗಳ ನಡುವೆ ಖೈಬರ ಕಣಿವೆಯೂ ಜಲಾಲಾಬಾದ್ ಮತ್ತು ಕಾಬೂಲ್‍ಗಳ ನಡುವೆ ಜಗದಾಲಕ್, ಖುರ್ದ್ ಕಾಬೂಲ್ ಕಣಿವೆಗಳುಂಟು. ಇದು ಆಯಕಟ್ಟಿನ ಸ್ಥಳದಲ್ಲಿದೆ. ಜನಸಂಖ್ಯೆ ನ. 48,919 (1969) ಇಲ್ಲೊಂದು ವಿಮಾನ ನಿಲ್ದಾಣವುಂಟು. ಇದು ಸೇನಾಕೇಂದ್ರ ಕೂಡ.

ಹಳೆಯ ನಗರದ ಪೇಟೆ ಬೀದಿಗಳೂ ಗೋಡೆಗಳೂ ಈಗ ಇಲ್ಲ. ಆಧುನಿಕ ಪಟ್ಟಣ ಪಶ್ಚಿಮಕ್ಕಿದೆ. ಹಿಂದಿನ ಆಫ್ಘನ್ ದೊರೆಗಳು ತಮ್ಮ ಆಸ್ಥಾನವನ್ನು ಚಳಿಗಾಲದಲ್ಲಿ ಇಲ್ಲಿಗೆ ವರ್ಗಾಯಿಸುತ್ತಿದ್ದರು. ಇಂದೂ ಆಫ್ಘನ್ ಶ್ರೀಮಂತರು ಚಳಿಗಾಲದಲ್ಲಿ ಇಲ್ಲಿ ವಾಸಿಸುತ್ತಾರೆ. ಇಲ್ಲಿಯ ವಾಯುಗುಣ ಹಿತಕರ. ಸುತ್ತಣ ಪ್ರದೇಶ ಫಲವತ್ತಾದ್ದು, ಕಿತ್ತಳೆ, ಭತ್ತ, ಕಬ್ಬು ಬೆಳೆಯುತ್ತವೆ. ಜಲಾಲಾಬಾದಿನಲ್ಲಿ ಸಕ್ಕರೆ ಕಾರ್ಖಾನೆಯಿದೆ. ಕುರಿಸಾಕಣೆ ಮತ್ತು ಉಣ್ಣೆಬಟ್ಟೆ ತಯಾರಿಕೆಯೂ ಮುಖ್ಯ ಕಸುಬುಗಳು. ಭಾರತ ಪಾಕಿಸ್ತಾನಗಳೊಡನೆ ಜಲಾಲಾಬಾದಿನ ವ್ಯಾಪಾರ ಸಂಬಂಧವುಂಟು. 1963ರಲ್ಲಿ ಇಲ್ಲೊಂದು ವಿಶ್ವವಿದ್ಯಾನಿಲಯ ಸ್ಥಾಪಿತವಾಯಿತು.

ಕ್ರಿ.ಪೂ. 2ನೆಯ ಶತಮಾನದಿಂದಲೂ ಈ ಸ್ಥಳದಲ್ಲಿ ಜನವಸತಿಯಿತ್ತು. ಈ ಪಟ್ಟಣದ 5 ಮೈ. ದಕ್ಷಿಣಕ್ಕೆ ಇರುವ ಹಡ್ಡ ಎಂಬುದು ಗಾಂಧಾರ ಕಲೆಯ ಕೇಂದ್ರವಾಗಿತ್ತು. ಫ್ರೆಂಚ್ ವಿದ್ವಾಂಸರು ಇಲ್ಲಿ ಉತ್ಖನನ ಮಾಡಿದಾಗ ಕೆಲವು ಸುಂದರ ಬುದ್ಧಶಿಲ್ಪಗಳು ದೊರೆತವು. ಸುತ್ತಣ ಪ್ರದೇಶದಲ್ಲಿ ಬೌದ್ಧ ಸ್ತೂಪಗಳಿವೆ.

ಆಧುನಿಕ ಪಟ್ಟಣಕ್ಕೆ ನಿವೇಶನವನ್ನು ಆಯ್ಕೆ ಮಾಡಿದವನು ಮೊಘಲ್ ದೊರೆ ಬಾಬರ್. ಅವನ ಮೊಮ್ಮಗ ಅಕ್ಬರ್ 1560ರಲ್ಲಿ ಪಟ್ಟಣವನ್ನು ನಿರ್ಮಿಸಿದ. ಇದು ಸಂಕ್ಷಿಪ್ತ ಕಾಬೂಲ್ ನಗರದಂತೆಯೇ ಕಾಣುತ್ತದೆ. ಜನರಿಗೆ ಅನುಕೂಲವಾದ ಕೇಂದ್ರ. ಮಾರುಕಟ್ಟೆ ಈ ಪಟ್ಟಣದ ಮುಖ್ಯ ಆಕರ್ಷಣೆ. ಪಟ್ಟಣದ ಬೀದಿಗಳು ಬಲು ಇಕ್ಕಟ್ಟು.

ಆಫ್ಘಾನಿಸ್ತಾನದ ಇತಿಹಾಸದಲ್ಲಿ ಈ ಪಟ್ಟಣವೂ ಪ್ರಮುಖ ಪಾತ್ರವಹಿಸಿದ್ದುಂಟು. 1841-42ರಲ್ಲಿ ನಡೆದ ಮೊದಲ ಆಫ್ಘನ್ ಯುದ್ಧದ ಕಾಲಕ್ಕೆ ರಾಬರ್ಟ್ ಸೇಲ್ ಈ ಪಟ್ಟಣದ ಸಂರಕ್ಷಣೆ ಮಾಡಿದ್ದು ಇತಿಹಾಸ ಪ್ರಸಿದ್ಧವಾದ ಘಟನೆ. ಈ ಪಟ್ಟಣದ ಸುತ್ತಲೂ ಕೋಟೆಯ ಗೋಡೆಯುಂಟು.

ಜಾಲಾಲಾಬಾದಿನವರು ಶುಷ್ಕ ವಾಯುಗುಣ. ಇಲ್ಲಿಯ ಜನ ಇಸ್ಲಾಂ ಧರ್ಮಾನುಯಾಯಿಗಳು. ಅವರು ಆಡುವ ಭಾಷೆ ಪುಷ್ಟು ಮತ್ತು ಪರ್ಷಿಯನ್. ಸೋವಿಯೆತ್ ಮತ್ತು ಅಮೇರಿಕನ್ ನೆರವಿನಿಂದ ಇಲ್ಲಿ ರಸ್ತೆಗಳೂ ಹತ್ತಿರದಲ್ಲೇ ಜಲಾಶಯ ಮತ್ತು ನೀರಾವರಿ ಯೋಜನೆಯೂ ನಿರ್ಮಾಣವಾಗಿವೆ. ಪಟ್ಟಣ ಶೀಘ್ರವಾಗಿ ಬೆಳೆಯುತ್ತಿದೆ. (ಬಿ.ಎ.ಎಸ್.)