ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಂಬೀ

ವಿಕಿಸೋರ್ಸ್ದಿಂದ

ಜಾಂಬೀ - ಇಂಡೋನೇಷ್ಯ ಗಣರಾಜ್ಯದ ಸುಮಾತ್ರ ದ್ವೀಪಕ್ಕೆ ಸೇರಿದ ಒಂದು ಪ್ರಾಂತ್ಯ ; ಆ ಪ್ರಾಂತ್ಯದ ಆಡಳಿತ ಕೇಂದ್ರ. ದ್ವೀಪದ ಪೂರ್ವ ಅಂಚಿನಿಂದ ಹಿಡಿದು ಪಶ್ಚಿಮ ತೀರದ ಪರ್ವತ ಪ್ರದೇಶಗಳವರೆಗೆ ಈ ಪ್ರಾಂತ್ಯ ವ್ಯಾಪಿಸಿದೆ. ವಿಸ್ತೀರ್ಣ 17,345 ಚ.ಮೈ. ಜನಸಂಖ್ಯೆ 9,39,000 (1970), ಇಲ್ಲಿಯ ಎತ್ತರವಾದ ಶಿಖರಗಳು ಕರಿಂಚೀ (12,483`) ಮತ್ತು ಮಸುರೀಯ (9,629`). ಪ್ರಾಂತ್ಯದ ಮಧ್ಯಭಾಗದ ಪರ್ವತಪ್ರದೇಶದ ವಿನಾ ಉಳಿದ ಭೂಪ್ರದೇಶ ಸಮುದ್ರದತ್ತ ಕ್ರಮಕ್ರಮವಾಗಿ ತಗ್ಗಿ ಸಾಗುವ ಇಳುಕಲು ಭೂಮಿ. ಈ ಭೂಪ್ರದೇಶದಲ್ಲಿ ಜೌಗು ಭಾಗವೇ ಹೆಚ್ಚು. ಪೂರ್ವ ತೀರದಲ್ಲಿ ಅನೇಕ ಕಿರುನದಿಗಳು ಪರಸ್ಪರ ಹೆಣೆದುಕೊಂಡು ಹರಿಯುತ್ತವೆ. ಪರ್ವತಗಳಿಂದ ಇಳಿದು ಬರುವ ಹಿರಿಯ ನದಿಗಳು ಒಟ್ಟುಗೂಡಿ ಬಾಟಿಂಗ್ ಹಾರೀ ಎಂಬ ನದಿಯಾಗಿ ಪರಿಣಮಿಸುತ್ತದೆ. ಈ ನದಿಯ ಮೇಲೆ eóÁಂಬೀ ನಗರದಿಂದ ಸಮುದ್ರತೀರಕ್ಕೆ 50 ಮೈಲಿಗಳಷ್ಟು ದೂರ ಕಡಲ ನೌಕೆಗಳ ಸಂಚಾರವುಂಟು. ಕಿರುನೌಕೆಗಳ ಯಾನ ಹೆಚ್ಚು.

ಈ ಪ್ರಾಂತ್ಯದ ಜನರ ಮುಖ್ಯ ಕಸುಬು ವ್ಯವಸಾಯ ಮತ್ತು ಮೀನುಗಾರಿಕೆ. ಬತ್ತ, ರಬ್ಬರ್, ತೆಂಗು, ಹತ್ತಿಗಳನ್ನು ಹೇರಳವಾಗಿ ಬೆಳೆಯುತ್ತಾರೆ. eóÁಂಬೀನಗರದ ನೈಋತ್ಯ ಪ್ರದೇಶದಲ್ಲಿ ಪೆಟ್ರೋಲ್ ಸಿಗುತ್ತದೆ.

eóÁಂಬೀ ನಗರ ಈ ಪ್ರಾಂತ್ಯದ ಆಡಳಿತ ಕೇಂದ್ರ; ಬಾಟಿಂಗ್ ಹಾರೀ ನದಿಯ ಎರಡೂ ದಂಡೆಗಳ ಮೇಲೆ ಹಬ್ಬಿದೆ. ಜನಸಂಖ್ಯೆ 1,13,080 (1961). ಸು.1100ದಿಂದ ಇದು ಮಲಯ ರಾಜ್ಯದ ರಾಜಧಾನಿಯಾಗಿತ್ತು. 1916ರಲ್ಲಿ ಡಚ್ಚರ ವಶವಾಯಿತು; 2ನೆಯ ಮಹಾಯುದ್ಧ ಕಾಲದಲ್ಲಿ (1939-45) ಜಪಾನೀಯರು ಇದನ್ನು ಆಕ್ರಮಿಸಿಕೊಂಡಿದ್ದರು. 1946ರಲ್ಲಿ ಇದು ಇಂಡೋನೇಷ್ಯ ಗಣರಾಜ್ಯದ ಭಾಗವಾಯಿತು.

ಈ ಒಳನಾಡ ರೇವುಪಟ್ಟಣದಿಂದ ಜಾವ, ಸುಮಾತ್ರ ಮತ್ತು ಸಿಂಗಪುರಗಳಿಗೆ ಸಂಪರ್ಕವಿದೆ. ಇಲ್ಲಿಂದ ರಬ್ಬರ್, ಬೆತ್ತ, ನೀಲಿ, ಚೌಬೀನೆ ರಫ್ತಾಗುತ್ತವೆ. ನಗರದ ದಕ್ಷಿಣದಲ್ಲಿ ಪಾಲಂಬಾಂಗ್‍ವರೆಗೆ, ಪಶ್ಚಿಮದಲ್ಲಿ ಪಶ್ಚಿಮತೀರದವರೆಗೆ ಉತ್ತಮ ರಸ್ತೆಗಳುಂಟು. ಜಕಾರ್ತ ಮೊದಲಾದ ಸ್ಥಳಗಳಿಗೆ ಒಳನಾಡ ವಿಮಾನ ಸಂಪರ್ಕವಿದೆ. (ವಿ.ಜಿ.ಕೆ.)