ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಗೃತಿ

ವಿಕಿಸೋರ್ಸ್ದಿಂದ

ಜಾಗೃತಿ- ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಂದ ಮುಂಬಯಿಯಲ್ಲಿ 1947ರಲ್ಲಿ ಸ್ಥಾಪಿತವಾದ ಒಂದು ವಾರಪತ್ರಿಕೆ. ದಿ ಕರ್ನಾಟಕ ನ್ಯೂಸ್ ಪೇಪರ್ಸ್ ಅಂಡ್ ಪಬ್ಲಿಕೇಷನ್ಸ್ ಲಿ. ಸಂಸ್ಥೆಯ ಒಡೆತನದಲ್ಲಿ ಆರಂಭವಾದ ಈ ಪತ್ರಿಕೆ ಕೆಲವು ತಿಂಗಳುಗಳಲ್ಲಿ ಧಾರವಾಡಕ್ಕೆ ಸ್ಥಳಾಂತರಗೊಂಡು ಸಮಾಜವಾದೀ ಪಕ್ಷದ ಕರ್ನಾಟಕ ಶಾಖೆಯ ಮುಖಪತ್ರಿಕೆಯಾಗಿ ಪ್ರಕಟವಾಗತೊಡಗಿತು (1947ರ ಜುಲೈ). ಅನಂತರ 1948ರ ಜುಲೈ ತಿಂಗಳಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡಿತು.

ಆರಂಭದ ಎರಡು ತಿಂಗಳುಗಳ ಕಾಲ ಸಸಿಹಿತ್ಲು ವೆಂಕಟರಾಯರು ಜಾಗೃತಿಯ ಸಂಪಾದಕರಾಗಿದ್ದರು. ಆಗ ಸಹ ಸಂಪಾದಕರಾಗಿದ್ದ ಖಾದ್ರಿ ಶಾಮಣ್ಣ ಅವರು ಅನಂತರ ಅದರ ಸಂಪಾದಕರಾದರು. ದೇಶೀಯ ಸಂಸ್ಥಾನಗಳಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಗಬೇಕೆಂಬ ಚಳವಳಿ ಆರಂಭವಾದಾಗ ಅದನ್ನು ಬೆಂಬಲಿಸಿದ್ದಕ್ಕಾಗಿ ಮೈಸೂರು ಸರ್ಕಾರ ಜಾಗೃತಿಯನ್ನು ಮೊಟ್ಟಮೊದಲು ಬಹಿಷ್ಕರಿಸಿತು. (1947ರ ಸೆಪ್ಟೆಂಬರ್-ಅಕ್ಟೋಬರ್). ಆಗ ಆರ್ಕಾಟ್ ರಾಮಸ್ವಾಮಿ ಮೊದಲಿಯಾರ್ ಮೈಸೂರು ಸಂಸ್ಥಾನದ ದಿವಾನರಾಗಿದ್ದರು. ಬೆಂಗಳೂರಿನಿಂದ ಪ್ರಕಟವಾಗತೊಡಗಿದ ಅನಂತರ, ಅರಸೊತ್ತಿಗೆ ಇಲ್ಲದ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕೆಂದು ಒತ್ತಾಯಿಸುವ ಪ್ರಧಾನಲೇಖನ ಪತ್ರಿಕೆಯಲ್ಲಿ ಅಚ್ಚಾದಾಗ ಪತ್ರಿಕೆಯ ಪ್ರಕಾಶಕರು ಎರಡು ಸಾವಿರ ರೂ. ಠೇವಣಿ ಇಡಬೇಕೆಂದು ಮೈಸೂರು ಸರ್ಕಾರ ಕೇಳಿತು. ಆಗ ಕೆ.ಸಿ.ರೆಡ್ಡಿ ಮುಖ್ಯಮಂತ್ರಿಯಾಗಿದ್ದರು. ಪತ್ರಿಕೆ ಅನಿವಾರ್ಯವಾಗಿ ನಿಂತುಹೋಯಿತು.

ರಾಜಕೀಯ ವಿಚಾರಗಳೇ ಪ್ರಧಾನವಾಗಿದ್ದ ಬರಹಗಳಿಗೆ ಸೀಮಿತವಾಗಿದ್ದ ಈ ಸಾಪ್ತಾಹಿಕಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ, ಜಯಪ್ರಕಾಶ ನಾರಾಯಣ್, ಅಶೋಕ ಮೆಹ್ತಾ ರಾಮಮನೋಹರ ಲೋಹಿಯಾ, ಮಧುಲಿ ಮಯೆ, ರಾಮನಂದನ ಮಿಶ್ರಾ ಮುಂತಾದವರು ಲೇಖನಗಳನ್ನು ಬರೆಯುತ್ತಿದ್ದರು. (ಎಸ್.ಸಿ.ಜಿ.)