ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಾಪ

ವಿಕಿಸೋರ್ಸ್ದಿಂದ

ಜಾಪ ಇಸ್ರೇಲಿನ ಪುರಾತನ ರೇವು ಪಟ್ಟಣ. ಜೆರೂಸಲೇಮ್‍ನ ವಾಯುವ್ಯಕ್ಕೆ 54 ಮೈ. ದೂರದಲ್ಲಿದೆ. ಇದನ್ನು ಯಾಫ, ಜ್ಯಾಫ ಎಂದೂ ಕರೆಯುತ್ತಾರೆ. ಕಾನ್ರ್ಯಾಕ್‍ನಲ್ಲಿರುವ (ಈಜಿಪ್ಟ್) ಕ್ರಿ.ಪೂ.16ನೆಯ ಶತಮಾನದ ಒಂದು ಮಹಾದ್ವಾರದ ಮೇಲೆ ಈ ಪಟ್ಟಣದ ಹೆಸರಿದೆ. ಇಲ್ಲಿಯ ಅನೇಕ ಪಾಳುದಿಬ್ಬಗಳನ್ನು ಉತ್ಖನನ ಮಾಡಲಾಗಿದೆ. ಕಂಚಿನ ಯುಗದ ಅನೇಕ ಅವಶೇಷಗಳೂ ಪ್ರಾಚೀನ ಇಟ್ಟಿಗೆಯ ಗೋಡೆ, ಮಹಾದ್ವಾರಗಳಲ್ಲದೆ ಎರಡನೆಯ ರ್ಯಾಮಸೆಸ್‍ನ (ಕ್ರಿ.ಪೂ.1290-1223) ಶಾಸನಗಳೂ ದೊರೆತಿವೆ.

ಬೈಬಲಿನ ಹಳೆಯ ಮತ್ತು ಹೊಸ ಒಡಂಬಡಿಕೆಗಳಲ್ಲಿ ಜಾಪದ ವರ್ಣನೆ ಬರುತ್ತದೆ. ಅಂದಿನ ದಿನಗಳಲ್ಲಿ ದೇವಾಲಯಗಳನ್ನು ಕಟ್ಟಲು ಉಪಯೋಗಿಸುತ್ತಿದ್ದ ಮರದ ದಿಮ್ಮಿಗಳನ್ನು ಜಾಪದ ಮುಖಾಂತರ ರವಾನಿಸುತ್ತಿದ್ದರೆಂದು ಹೇಳಲಾಗಿದೆ. ದಾರ್ಶನಿಕ ಜೋ ಮತ್ತು ಸಂತ ಪೀಟರ್ ಇಲ್ಲಿ ಕೆಲಕಾಲ ತಂಗಿದ್ದರೆಂದು ಪ್ರತೀತಿ. ಕಿಶ್ಚನ್ ಯುಗದಲ್ಲಿ ಮೆಡಿಟರೇನಿಯನ್ ಸಮುದ್ರವನ್ನು ಜ್ಯಾಫ ಸಮುದ್ರವೆಂದೇ ಕರೆಯಲಾಗುತ್ತಿತ್ತು. ಮೊದಲಿನಿಂದಲೂ ಕ್ರೈಸ್ತ ಪುಣ್ಯಭೂಮಿ ಪ್ಯಾಲೆಸ್ಟ್ಯೆನಿಗೆ ಇದು ಮುಖ್ಯಬಂದರಾಗಿತ್ತು. ಕ್ರಿ.ಪೂ. 701ರಲ್ಲಿ ಅಸ್ಸೀರಿಯದ ಸೆನ್ನಾಚೆರಿಬ್ ರಾಜ ಈ ನಗರವನ್ನು ಗೆದ್ದ. ಅನಂತರ ಇದು ಪರ್ಷಿಯನ್ನರ ಮತ್ತು ಫಿನೀಷಿಯನರ ವಶವಾಯಿತು. 322ರಲ್ಲಿ ಅಲೆಗ್ಸಾಂಡರ್ ಇದನ್ನು ಗೆದ್ದು ಇಲ್ಲೊಂದು ಟಂಕಸಾಲೆ ಸ್ಥಾಪಿಸಿದ. 318ರಲ್ಲಿ ಒಂದನೆಯ ಟಾಲೆಮಿ ಇಲ್ಲೊಂದು ಸೈನ್ಯ ಠಾಣೆಯನ್ನಿಟ್ಟಿದ್ದ. 315ರಲ್ಲಿ ಆಂಟಿಗೋನಸನ ವಶವಾಗಿತ್ತು. ರೋಮನರಿಗೂ ಯಹೂದ್ಯರಿಗೂ ಕದನವಾದಾಗ ಇಲ್ಲಿಯ ಯಹೂದ್ಯರು ನಗರ ಬಿಟ್ಟು ಓಡಿಹೋಗಬೇಕಾಯಿತು. ರೋಮನರ ನಿರ್ಗಮನಾಂತರ ಅವರು ಪುನ: ಜಾಪಕ್ಕೆ ಹಿಂದಿರುಗಿದರು. ಬಿeóÁಂಟೀನ್ ಆಳ್ವಿಕೆಯಲ್ಲೂ ಇಲ್ಲಿಯ ಯಹೂದ್ಯರಿಗೆ ಸ್ಥಳೀಯ ಕ್ರ್ಯೆಸ್ತರಿಂದ ಕಿರುಕುಳ ತಪ್ಪಲಿಲ್ಲ. ಅಲ್ಲಿಂದೀಚೆಗೆ ಧರ್ಮಯೋಧರು ಇದನ್ನು ಮಹಮದೀಯರಿಂದ ವಶಪಡಿಸಿಕೊಳ್ಳುವವರೆಗೂ (1099) ಇಲ್ಲಿ ಶಾಂತಿ ನೆಲೆಸಿತ್ತು. 1268ರ ಆಕ್ರಮಣದಲ್ಲಿ ಮುಸ್ಲಿಮರು ಜಾಪವನ್ನು ನಾಶಮಾಡಿದರು.

1799ರಲ್ಲಿ ನೆಪೋಲಿಯನ್ ಇದನ್ನು ವಶಪಡಿಸಿಕೊಂಡ. ಅನಂತರದ ಅವಧಿಯಲ್ಲಿ ವಿವಿಧ ಮಹಮದೀಯ ರಾಜನ ಅಧೀನಕ್ಕೆ ಬಂದ ಇದು 19ನೆಯ ಶತಮಾನದ ಅಂತ್ಯದ ವೇಳೆಗೆ ತಕ್ಕಮಟ್ಟಿಗೆ ಚೇತರಿಸಿಕೊಂಡಿತು. 1909ರ ವೇಳೆಗೆ ಇದರ ಸಮೀಪದಲ್ಲಿ ಟೆಲ್ ಅವೀವ್ ಎಂಬ ನಗರ ಬೆಳೆಯಿತು. ಒಂದನೆಯ ಮಹಾಯುದ್ಧ ಪ್ರಾರಂಭವಾದಾಗ ಇದರ ಪ್ರಗತಿ ಕುಂಠಿತಗೊಂಡಿತು. ಪದೇಪದೇ ಅರಬರ ದಾಳಿಗೆ ತುತ್ತಾದ (1921, 1929, 1936, 1939) ಈ ನಗರದಿಂದ ಸುಮಾರು 7000 ಯಹೂದ್ಯರು ಓಡಿಹೋಗಬೇಕಾಯಿತು.

1949ರಲ್ಲಿ ಜಾಪಟೆಲ್ ಅವೀವ್‍ನಲ್ಲಿ ವಿಲೀನವಾಗಿ ಟೆಲ್ ಅವೀವ್-ಜ್ಯಾಫ ಎಂಬ ಹೊಸನಗರದ ಭಾಗವಾಯಿತು. ಹೈಫ ಮತ್ತು ಟೆಲ್ ಅವೀವ್‍ಗಳಲ್ಲಿ ಹೊಸಬಂದರುಗಳನ್ನು ಕಟ್ಟಿದ್ದರಿಂದ ಜಾಪ ತನ್ನ ಮಹತ್ತ್ವ ಕಳೆದುಕೊಂಡಿತು. ಇಷ್ಟಾದರೂ ಇದು ಯಾತ್ರಾರ್ಥಿಗಳ ಬಂದರಾಗಿದ್ದು ಪ್ರತಿವರ್ಷ ಇಲ್ಲಿಗೆ ಸುಮಾರು 400 ಹಡಗುಗಳು ಬಂದು ಹೋಗುತ್ತವೆ. (ಎಚ್.ಆರ್.ಆರ್.ಬಿ.)