ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿದ್ದ

ವಿಕಿಸೋರ್ಸ್ದಿಂದ

ಜಿದ್ದ - ಸೌದೀ ಅರೇಬಿಯದ ಮುಖ್ಯ ರೇವುಪಟ್ಟಣ. ಕೆಂಪುಸಮುದ್ರ ತೀರದಲ್ಲಿದೆ. ಹೆಜಾeóï ಪ್ರಾಂತ್ಯಕ್ಕೆ ಸೇರಿದೆ. ಜನಸಂಖ್ಯೆ 1,94,000(1965). ಇದು ಈವಳ ರುದ್ರಭೂಮಿ ಎಂಬ ನಂಬಿಕೆ ಹಿಂದೆ ಇದ್ದದ್ದರಿಂದ ಇದಕ್ಕೆ ಜಿದ್ದ ಎಂಬ ಹೆಸರು ಬಂತು. ಜುದ್ದ ಎಂದರೆ ಪೂರ್ವಜೆ. ಈವಳೆದೆಂದು ಪ್ರಸಿದ್ಧವಾಗಿದ್ದ ಗೋರಿಯನ್ನು ಸೌದೀ ಅರೇಬಿಯ ಸರ್ಕಾರ 1928ರಲ್ಲಿ ನಾಶಮಾಡಿತು. ಇದು ಮೂಢನಂಬಿಕೆಯನ್ನು ಪ್ರೋತ್ಸಾಹಿಸುವುದೆಂಬುದು ಕಾರಣ.

ಮುಸ್ಲಿಂ ಯಾತ್ರಾಸ್ಥಳವಾದ ಮೆಕ್ಕ ಇರುವುದು ಇದರಿಂದ ಸು. 50 ಮೈ. ದೂರದಲ್ಲಿ. ಮೆಕ್ಕಕ್ಕೆ ಬರುವ ಯಾತ್ರಿಕರಲ್ಲಿ ಬಹಳ ಮಂದಿ ಈ ರೇವಿನಲ್ಲಿ ಇಳಿದು ಪ್ರಯಾಣ ಮುಂದುವರಿಸುತ್ತಾರೆ. ಆದ್ದರಿಂದ ಈ ನಗರ ಐತಿಹಾಸಿಕ ಪ್ರಾಮುಖ್ಯ ಗಳಿಸಿದೆ. ಬಂದರು 17ನೆಯ ಶತಮಾನದಿಂದ ಈಗಿನ ಸ್ಥಳದಲ್ಲಿದೆ. ಹಿಂದೆ ಅದು ಇಲ್ಲಿಂದ 12 ಮೈ. ದಕ್ಷಿಣಕ್ಕೆ ಇರುವ ಅಲ್ ಆಸ್ವಾದ್‍ನಲ್ಲಿತ್ತು.

1916ರಲ್ಲಿ ಬ್ರಿಟಿಷರು ತುರ್ಕಿ ಸೈನ್ಯವನ್ನು ಸೋಲಿಸಿ ಈ ನಗರವನ್ನು ವಶಪಡಿಸಿಕೊಂಡರು. ಆಗಿನಿಂದ 1925ರ ವರೆಗೆ ಇದು ಹೆಜಾeóï ಪ್ರಾಂತ್ಯದ ಷೆರೀಫನ ರಾಜ್ಯದ ಭಾಗವಾಗಿತ್ತು. ಆ ವರ್ಷ ಇಬನ್‍ಸವೂದ್ ಇದನ್ನು ವಶಪಡಿಸಿಕೊಂಡು ಸೌದೀ ಅರೇಬಿಯಕ್ಕೆ ಸೇರಿಸಿಕೊಂಡ.

ಎರಡನೆಯ ಮಹಾಯುದ್ಧದ ತರುವಾಯ ಈ ನಗರ ಹೆಚ್ಚು ಅಭಿವೃದ್ಧಿ ಹೊಂದಿತು. ಸೌದೀ ಅರೇಬಿಯ ತನ್ನ ಎಣ್ಣೆ ಬಾವಿಗಳಿಂದ ಬರುವ ಆದಾಯವನ್ನು ಈ ನಗರದ ಸೌಂದರ್ಯ ಹಾಗೂ ಸೌಲಭ್ಯಗಳನ್ನು ಹೆಚ್ಚಿಸಲು ಗಣನೀಯವಾಗಿ ವೆಚ್ಚ ಮಾಡುತ್ತಿದೆ. ಮೆಕ್ಕ ಮತ್ತು ಮದೀನಗಳೊಂದಿಗೆ ರೈಲ್ವೆ ಸಂಪರ್ಕ ಏರ್ಪಡಿಸಲೂ ಯೋಜನೆಗಳು ರೂಪುಗೊಂಡವು. ಇಲ್ಲಿಯ ಹಳೆಯ ಬಜಾರುಗಳೂ ಗೋಡೆಗಳೂ ಈಗ ಅದೃಶ್ಯವಾಗಿವೆ. ಉದ್ಯಾನಗಳು, ಕಾನ್‍ಕ್ರೀಟಿನ ಆಧುನಿಕ ಕಟ್ಟಡಗಳು, ಆಧುನಿಕ ಹೋಟೆಲುಗಳು, ಅಂಗಡಿಗಳು ಅಲ್ಲಲ್ಲಿ ನಿರ್ಮಾಣವಾಗಿವೆ. ಹಡಗುಗಳು ತೀರದ ಬಳಿ ಬರಲು ಅನುಕೂಲವಾಗುವಂತೆ ಹಡಗುಕಟ್ಟೆ ಇದೆ. ಯಾತ್ರಾರ್ಥಿಗಳಿಗೆ ವೈದ್ಯಕೀಯ ಸೌಲಭ್ಯದ ವ್ಯವಸ್ಥೆಯುಂಟು. ಕುಡಿಯುವ ನೀರಿನ ಸರಬರಾಜಿನ ಸೌಲಭ್ಯವೂ ಇದೆ. ಮುಸ್ಲಿಮೇತರರಿಗೆ ಮೆಕ್ಕಕ್ಕೆ ಭೇಟಿ ನೀಡಲು ಅವಕಾಶವಿಲ್ಲ. ಆದ್ದರಿಂದ ಸೌದೀ ಅರೇಬಿಯದ ರಾಜತಾಂತ್ರಿಕ ರಾಜಧಾನಿ ಜಿದ್ದ. ಸೌದೀ ವಿದೇಶಾಂಗ ಸಚಿವಾಲಯವೂ ಎಲ್ಲ ವಿದೇಶೀ ದೂತಾವಾಸಗಳೂ ಇಲ್ಲಿವೆ. ನಗರಾಡಳಿತಕ್ಕಾಗಿ ಪೌರಸಭೆಯೊಂದಿದೆ. 1967ರಲ್ಲಿ ಇಲ್ಲಿ ಕಿಂಗ್ ಅಬ್ದುಲ್ ಅಜಿóೀಸ್ ಖಾಸಗಿ ವಿಶ್ವವಿದ್ಯಾಲಯ ಸ್ಥಾಪಿತವಾಯಿತು.

 	ಹವಳ, ಹತ್ತಿವಸ್ತುಗಳು, ಕಬ್ಬಿಣದ ಸಾಮಾನುಗಳು, ಕನ್ನಡಿಗಳು, ಚರ್ಮದ ವಸ್ತುಗಳು, ಖರ್ಜೂರ, ಕಾಫಿ, ಜಮಖಾನ-ಇವು ಜಿದ್ದ ಬಂದರಿನ ಮೂಲಕ ಸಾಗುವ ಸರಕುಗಳು. ಮೆಕ್ಕಕ್ಕೆ ಬರುವ ಯಾತ್ರಾರ್ಥಿಗಳಲ್ಲಿ ಮೂರನೆಯ ಎರಡು ಭಾಗದವರು ಸಮುದ್ರ ಮಾರ್ಗವಾಗಿ ಬರುತ್ತಾರೆ. ಉಳಿದವರು ಬರುವುದು ವಿಮಾನದ ಮೂಲಕ. ಜಿದ್ದ ನಗರದ ಬಳಿ ಇರುವ ವಿಮಾನನಿಲ್ದಾಣ ಇತರ ಎಲ್ಲ ಅಂತರರಾಷ್ಟ್ರೀಯ ವಿಮಾನನಿಲ್ದಾಣಗಳಂತೆ ಸಜ್ಜಿತವಾಗಿದೆ.					(ಡಿ.ಎಸ್.ಜಿ.)