ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿಪ್ಸಮ್

ವಿಕಿಸೋರ್ಸ್ದಿಂದ

ಜಿಪ್ಸಮ್ ಒಂದು ಖನಿಜ. ರಾಸಾಯನಿಕವಾಗಿ ಅಚಿSಔ4 . 2ಊ2ಔ (ಕ್ಯಾಲ್ಸಿಯಮ್ ಸಲ್ಫೇಟ್). ಗ್ರೀಕ್ ಭಾಷೆಯ ಜಿಪ್ಸೋಸ್ ಅಂದರೆ ಸೀಮೆ ಸುಣ್ಣ ಎಂಬ ಪದದಿಂದ ನಿಷ್ಪನ್ನವಾಗಿದೆ. ಇದನ್ನು 120º-165º ಅ ಉಷ್ಣತೆಯಲ್ಲಿ ಕಾಸಿದಾಗ 2ಅಚಿSಔ4 .ಊ2ಔ ಅಂಶದ ಹೆಮಿಹೈಡ್ರೇಟ್ ಆಗುವುದು. ಇದನ್ನೇ ಪ್ಲಾಸ್ಟರ್ ಆಫ್ ಪ್ಯಾರಿಸ್ (ನೋಡಿ- ಪ್ಲಾಸ್ಟರ್-ಆಫ್-ಪ್ಯಾರಿಸ್) ಎಂದು ಕರೆಯುವುದು. ನೀರಿನಲ್ಲಿ ಕಲಸಿದಾಗ ಇದು ನೀರನ್ನು ಹೀರಿಕೊಂಡು ಗಟ್ಟಿ ಮುದ್ದೆಯಾಗುವುದು. ಇದರಲ್ಲಿನ ಸೂಕ್ಷ್ಮ ಜಿಪ್ಸಮ್ ಹರಳುಗಳು ಒಂದಕ್ಕೊಂದು ಹೆಣೆದುಕೊಂಡಿರುತ್ತವೆ. ಜಿಪ್ಸಮ್‍ನ್ನು 240º ಅ ಉಷ್ಣತೆಯಲ್ಲಿ 3 ಗಂಟೆಗೂ ಹೆಚ್ಚುಕಾಲ ಕಾಸಿದಾಗ ಅದು ತನ್ನಲ್ಲಿರುವ ನೀರಿನ ಅಂಶವನ್ನೆಲ್ಲ ಕಳೆದುಕೊಂಡು ಆನ್‍ಹೈಡ್ರೈಟ್ ಖನಿಜವಾಗುವುದು. ಈ ಆನ್‍ಹೈಡ್ರೈಟ್ ನೈಸರ್ಗಿಕ ಆನ್‍ಹೈಡ್ರೈಟನ್ನು ಹೋಲುವುದು.

ಜಿಪ್ಸಮ್ ಐದು ಬಗೆಗಳಾಗಿ ಸಿಗುತ್ತದೆ : 1. ರಾಕ್ ಜಿಪ್ಸಮ್ , 2. ಜಿಪ್ಸೈಟ್-ಹುಡಿಮಣ್ಣಿನಂತಿರುವುದು, 3. ಅಲಬಾಸ್ಟರ್-ಮುದ್ದೆಯಂತೆ ನಯವಾದ ಕಣಗಳ, ಪಾರಕದಿಂದ ಅಥವಾ ಒರಟಾದ ಕಣಸಮೂಹದಿಂದಾಗಿರುವುದು, 4. ಸಾಟಿನ್-ಸ್ಟಾರ್-ರೇಷ್ಮೆಯ ಹೊಳಪಿನ ಎಳೆಯಾಕಾರದ್ದು , 5 ಸೆಲೆನೈಟ್-ಪಾರಕತ್ವ ಪಡೆದಿದ್ದು , ಗಾಜಿನಂತೆ ಹೊಳಪಿನಿಂದ ಹರಳಿನಾಕಾರದಲ್ಲಿರುವುದು.

ಜಿಪ್ಸಮಿನ ಹರಳುಗಳು ಏಕನತಾಕ್ಷ (ಮಾನೋಕ್ಲಿನಿಕ್) ಸ್ಫಟಿಕಗಳು. ಅವಳಿ ಹರಳುಗಳೂ ಸಾಮಾನ್ಯ. ಹರಳಿನ ಮುಖದ ಮೇಲೆ ಗೆರೆಗಳಿವೆ. ಸಾಧಾರಣವಾಗಿ ಬಣ್ಣವಿಲ್ಲದೆಯೋ ಬೆಳ್ಳಗೋ ಬಿಳುಪಾಗಿಯೋ ಇರುವುವು. ಆದರೆ ಕಲ್ಮಷಗಳಿಂದ ಕೂಡಿದಾಗ ಬೂದಿ, ಹಳದಿ, ಊದಾ ಅಥವಾ ಕಂದುಬಣ್ಣ ಕಾಣುವುದುಂಟು. ಹರಳಿನಲ್ಲಿ ಸೀಳುಗಳಿವೆ. ಮಂದಗಾಜಿನ ಅಥವಾ ಮುತ್ತಿನ ಹೊಳಪಿರುವುದು. ಕಾಠಿನ್ಯಾಂಕ 2, ಸಾಂದ್ರತೆ 2.317. ಒರೆಹಚ್ಚಿದಾಗ ಬಿಳಿ ಪುಡಿಯನ್ನು ಕೊಡುತ್ತದೆ. ನೀರಿನಲ್ಲಿ ಸ್ವಲ್ಪ ಕರಗುತ್ತದೆ, ಆದರೆ ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಹೆಚ್ಚಾಗಿ ಕರಗುತ್ತದೆ.

ಉಪಯೋಗಗಳು : ಕಚ್ಚಾರೂಪದಲ್ಲಿ ದ್ರವೀಕರಿಸುವ ವಸ್ತುವಾಗಿಯೂ ಪ್ಲಾಸ್ಟರ್ ರೂಪದಲ್ಲಿ ವಿವಿಧ ನಿರ್ಮಾಣಕಾರ್ಯದಲ್ಲಿ ಆಧಾರ ವಸ್ತುವಾಗಿಯೂ ಜಿಪ್ಸಮಿನ ಉಪಯೋಗ ಉಂಟು. ಆನ್‍ಹೈಡ್ರೇಟ್ ರೂಪದ ಜಿಪ್ಸಮಿನಿಂದ ಅಮೊನಿಯಮ್ ಸಲ್ಫೇಟ್ ಗೊಬ್ಬರ ತಯಾರಿಸುತ್ತಾರೆ. ಕೃತಕ ದಂತಪಂಕ್ತಿಗಳ ತಯಾರಿಕೆಯಲ್ಲಿ, ಅಲಂಕಾರ ಸಾಮಗ್ರಿಗಳ ನಿರ್ಮಾಣದಲ್ಲಿ, ಕೈಗಾರಿಕೆಗಳಲ್ಲಿ ಮುಂತಾದ ಕ್ಷೇತ್ರಗಳಲ್ಲಿ ಜಿಪ್ಸಮಿನ ಬಳಕೆ ಉಂಟು.

ಪೂರ್ಣ ಅಥವಾ ಅಲ್ಪ ಆವರಿಸಿದ ಸಮುದ್ರನೀರಿನ ಪ್ರದೇಶ ಅಥವಾ ಹೆಚ್ಚು ಉಪ್ಪು ವಿಲೀನವಾದ ಸರೋವರದ ನೀರು, 42º ಅ ಗಿಂತ ಕಡಿಮೆ ಉಷ್ಣತೆ ಮತ್ತು ಸಮುದ್ರನೀರಿಗಿಂತ 3.35ರಷ್ಟು ಹೆಚ್ಚು ಲವಣತ್ವವಿದ್ದು , ಇಂಗುವುದರಿಂದ ಜಿಪ್ಸಮ್ ಸ್ತರಗಳಂತೆ ನಿಕ್ಷೇಪಗೊಳ್ಳುವುದು. ಅಲ್ಲದೇ ಪಿರೈಟ್ಸ್ ಶಿಥಿಲವಾಗುವುದರಿಂದಲೂ ಜೇಡುಶಿಲೆಗಳಲ್ಲಿರುವ ಸುಣ್ಣದಂಶದ ಮೇಲೆ ಅಥವಾ ಸುಣ್ಣಶಿಲೆಗಳ ಮೇಲೆ ಸಲ್ಫ್ಯೂರಿಕ್ ಆಮ್ಲದ ರಾಸಾಯನಿಕ ಕ್ರಿಯೆಯಿಂದಲೂ ಸುಣ್ಣಶಿಲೆ ಗುಹೆಗಳಲ್ಲಿಯ ಜಲಮಯ ದ್ರಾವಣಗಳು ಹೆಪ್ಪುಗಟ್ಟುವುದರಿಂದಲೂ ಜಿಪ್ಸಮ್ ಸ್ತರಗಳು ನಿಕ್ಷೇಪಿಸುತ್ತವೆ. ಅತಿದೊಡ್ಡ ಜಿಪ್ಸಮ್ ನಿಕ್ಷೇಪಗಳೆಲ್ಲವೂ ಸುಣ್ಣಶಿಲೆ, ಜೇಡುಶಿಲೆ ಮತ್ತು ಮರಳು ಶಿಲೆಗಳಲ್ಲಿ ಅಂತರ ಪದರಗಳಾಗಿ ಕಲ್ಲುಪ್ಪಿನ ಸಾಹಚರ್ಯದಲ್ಲಿಯೇ ಉಂಟಾದವು. ಜಿಪ್ಸಮ್ ಹಲವು ಬಾರಿ ಮೃದುವಾಗಿ ಮತ್ತು ಮಣ್ಣಿನಂತೆ ಜೇಡು ಮತ್ತು ಸಣ್ಣಜೇಡುಗಳೊಡನೆ ಮೇಲ್ಮೈಯಲ್ಲಿ ರಾಶಿಗೂಡಿರುತ್ತದೆ. ಇದಕ್ಕೆ ಜಿಪ್ಸೈಟ್ ಎಂದು ಹೆಸರು. ಇದನ್ನು ತಗ್ಗು ಮರುಭೂಮಿಯ ಶುಷ್ಕವಾತಾವರಣ ಪ್ರದೇಶಗಳಲ್ಲಿ ಕಾಣಬಹುದು. ಜಿಪ್ಸಮ್ ಪ್ರಪಂಚದಾದ್ಯಂತ ಹರಡಿದೆ. ಹೇರಳವಾದ ಮತ್ತು ಲಾಭದಾಯಕ ನಿಕ್ಷೇಪಗಳು ಅಮೆರಿಕ ಸಂಯುಕ್ತಸಂಸ್ಥಾನಗಳ ಪಶ್ಚಿಮ ಭಾಗದಲ್ಲೂ ಜರ್ಮನಿಯ ಸ್ಟಾಸ್‍ಫರ್ಢಿನಲ್ಲಿಯೂ ಇವೆ. ಭಾರತದಲ್ಲಿ ಜಿಪ್ಸಮ್ ಮಹಾರಾಷ್ಟ್ರದ ನಾಗಪುರ ಜಿಲ್ಲೆ, ಹಿಮಾಚಲಪ್ರದೇಶ, ಕಾಶ್ಮೀರ, ಕಚ್, ತಮಿಳುನಾಡಿನ ತಿರುಚಿರಾಪಲ್ಲಿ ಮತ್ತು ಕೊಯಮತ್ತೂರು ಜಿಲ್ಲೆಗಳಲ್ಲಿ, ಆಂಧ್ರಪ್ರದೇಶ ನಿಲ್ಲೂರು ಮತ್ತು ಗುಂಟೂರು ಜಿಲ್ಲೆಗಳಲ್ಲಿ ಪಂಜಾಬ್, ರಾಜಸ್ತಾನ, ಸೌರಾಷ್ಟ್ರ , ಉತ್ತರ ಪ್ರದೇಶ ಮತ್ತು ವಿಂಧ್ಯಪ್ರದೇಶದಲ್ಲಿಯೂ ದೊರೆಯುತ್ತಿದೆ. (ಎಂ.ಎನ್.ಎಂ.) ಪರಿಷ್ಕರಣೆ: ಟಿ. ಆರ್. ಅನಂತರಾಮು