ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜಿ಼ಗ್ಮಾಂಡಿ, ರಿಚರ್ಡ್ ಅಡಾಲ್ಫ್‌

ವಿಕಿಸೋರ್ಸ್ದಿಂದ

ಜಿóಗ್‍ಮಾಂಡಿ, ರಿಚರ್ಡ್ ಅಡಾಲ್ಫ್ 1865-1929. ಆಸ್ಟ್ರೋ ಜರ್ಮನ್ ರಸಾಯನವಿಜ್ಞಾನಿ. ಜನನ, ವಿಯನ್ನ (ಆಸ್ಟ್ರಿಯ), 1 ಏಪ್ರಿಲ್ 1865 ; ಮರಣ, ಗಟಿಂಗೆನ್ (ಜರ್ಮನಿ), 24 ಸೆಪ್ಟೆಂಬರ್ 1929. ಕಲಿಲ ರಸಾಯನದಲ್ಲಿ ಮೂಲ ಸಂಶೋಧನೆ ನಡೆಸಿದ್ದಕ್ಕಾಗಿ 1925ನೆಯ ಇಸವಿಯಲ್ಲಿ ರಸಾಯನ ವಿಭಾಗದ ನೊಬೆಲ್ ಪಾರಿತೋಷಿಕ ಲಭಿಸಿತು. ಜಿಗ್‍ಮಾಂಡಿ 1889ರಲ್ಲಿ ಮ್ಯೂನಿಕ್ ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪದವಿಯನ್ನು ಗಳಿಸಿ, ಬರ್ಲಿನ್ ಮತ್ತು ಗ್ರಾಜ್ ನಗರಗಳಲ್ಲಿ ಸಂಶೋಧನಾ ಸಹಾಯಕನಾಗಿ ಕೆಲಸ ಮಾಡಿದ. ಜೇನಾ ನಗರದಲ್ಲಿರುವ ಷಾಟ್ ಮತ್ತು ಜೆನೋಸ್ಸನ್ ಗಾಜಿನ ಕಂಪನಿಯಲ್ಲಿ ನೌಕರಿಗೆ ಸೇರಿದ (1898). ಇಲ್ಲಿದ್ದಾಗಲೇ ಜಿಗ್‍ಮಾಂಡಿಗೆ ಕಲಿಲ ಚಿನ್ನದಿಂದ ಪದ್ಮರಾಗ ಗಾಜಿನ ಉತ್ಪತ್ತಿಯಲ್ಲಿ ಆಸಕ್ತಿ ಹುಟ್ಟಿತು. ಆಗಲೇ ಅವನು ಸೂಕ್ಷ್ಮದರ್ಶಕದಲ್ಲೂ ಕಾಣಲಸಾಧ್ಯವಾದ ಚಿನ್ನದ ನಿಲಂಬಕ (ಸಸ್ಪೆಂಡೆಡ್) ಮತ್ತು ಸಾಲ್‍ಗಳನ್ನು ಕಂಡು ಹಿಡಿದದ್ದು. ಚಿನ್ನದ ನಿಲಂಬಕ ಕಣಗಳು ಬೇರ್ಪಡಿಸಲ್ಪಟ್ಟಿರುವುದು ಅವುಗಳಲ್ಲಿರುವ ವಿದ್ಯುದಾವೇಶದಿಂದ ಎಂದು ಈತ ಆಗ ಪ್ರತಿಪಾದಿಸಿದ ತತ್ತ್ವ ಸರ್ವಸಾಮಾನ್ಯವಾಗಿ ಒಪ್ಪಿಗೆ ಪಡೆದಿದೆ. ಜೇನಾದಲ್ಲಿನ ಜೈಸ್ ಕಂಪನಿಯನ್ನು ಜಿಗ್‍ಮಾಂಡಿ ಸೇರಿದ ಬಳಿಕ ಸಿಡನ್‍ಟಾಫ್ ಎಂಬಾತನ ಜೊತೆಯಲ್ಲಿ ಸಂಶೋಧನೆ ನಡೆಸಿ ಅತಿಸೂಕ್ಷ್ಮದರ್ಶಕವನ್ನು (ಅಲ್‍ಟ್ರಾಮೈಕ್ರೊಸ್ಕೋಪ್) ಉಪಜ್ಞಿಸಿದ. ಇದನ್ನು ಬಳಸಿ 3 x 10-7 ಛಿmನಷ್ಟು ವ್ಯಾಸವಿರುವ ಕಣಗಳನ್ನು ಕೂಡ ಪತ್ತೆ ಮಾಡಬಹುದು. ಅತಿಸೂಕ್ಷ್ಮದರ್ಶಕವನ್ನು ಬಳಸಿ ದ್ರಾವಣವೊಂದರ ದತ್ತಗಾತ್ರದಲ್ಲಿರುವ ಕಲಿಲ ಕಣಗಳನ್ನು ಎಣಿಕೆ ಮಾಡಿ ಪರೋಕ್ಷವಾಗಿ ಅವುಗಳ ಪ್ರಮಾಣವನ್ನು ಅಂದಾಜು ಮಾಡಬಹುದೆಂದು ಜಿಗ್‍ಮಾಂಡಿ ತೋರಿಸಿಕೊಟ್ಟ. ಇದರಿಂದ ಭೌತದ್ರವ್ಯದ ಅಂಗವೊಂದಾದ ಕಲಿಲಗಳ ಕ್ರಮಬದ್ಧ ಅನ್ವೇಷಣೆ ಮತ್ತು ಕಲಿಲ ದ್ರಾವಣಗಳು, ಹೊಗೆ, ಮಂಜು, ನೊರೆ, ಪೊರೆ ಮುಂತಾದವುಗಳ ತಾತ್ವಿಕ ಹಾಗೂ ಪ್ರಾಯೋಗಿಕ ಪ್ರಯೋಜನೆಗಳ ಅನ್ವೇಷಣೆ ಪ್ರಾರಂಭವಾಯಿತು. ದ್ರಾವಣವೊಂದರ-ಬಣ್ಣ ಅದರಲ್ಲಿರುವ ವಿಲೇಯಕದ ಕಲಿಲ ಕಣದ ಅಳತೆಯ ಮೇಲೆ ಅವಲಂಬಿಸಿರುವುದು, ರಕ್ಷಕ ಕಲಿಲಗಳು, ವಿದ್ಯುದ್ವಿಚ್ಛೇದ್ಯಗಳಿಂದ (ಎಲೆಕ್ಟ್ರೊಲೈಟ್ಸ್ ) ಕಲಿಲಗಳು ಗರಣಿ ಕಟ್ಟುವಿಕೆ (ಕೊಎಗ್ಯುಲೇಷನ್), ದ್ರಾವಣಗಳಲ್ಲಿನ ಬ್ರೌನಿಯನ್ ಚಲನೆ ಮುಂತಾದ ವಿಷಯಗಳನ್ನು ಜಿಗ್‍ಮಾಂಡಿ ಕೂಲಂಕಷವಾಗಿ ಅಧ್ಯಯನ ಮಾಡಿದ. ಹೀಗೆ ಈತ ಸುಮಾರು 30 ವರ್ಷಗಳ ಕಾಲ ಕಲಿಲ ಕ್ಷೇತ್ರದ ಅನ್ವೇಷಣೆಯಲ್ಲಿ ಅವಿಶ್ರಾಂತವಾಗಿ ತೊಡಗಿ ಈ ಕ್ಷೇತ್ರದ ಒಬ್ಬ ಮಾನ್ಯನಾಯಕನೆನ್ನಿಸಿಕೊಂಡ. ಈತನ ಸಂಶೋಧನೆಗಳ ನಿರ್ಧಾರಗಳು ಜೀವರಸಾಯನ ವಿಜ್ಞಾನ, ಏಕಾಣು ವಿಜ್ಞಾನ ಮತ್ತು ಭೂಭೌತವಿಜ್ಞಾನಗಳ ಹಲವಾರು ಸಮಸ್ಯೆಗಳನ್ನು ಬಿಡಿಸಿವೆ. (ಡಿ.ಎಸ್.ಎಂ.)