ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜೂನ್

ವಿಕಿಸೋರ್ಸ್ದಿಂದ

ಜೂನ್ - ಕ್ರಿಸ್ತವರ್ಷದ ಆರನೆಯ ತಿಂಗಳು. ಇದರಲ್ಲಿ 30 ದಿವಸಗಳಿವೆ. ರೋಮನ್ ಮತ್ತು ಲ್ಯಾಟಿನ್ ಪುರಾಣಸಾಹಿತ್ಯಗಳಲ್ಲಿ ಕಂಡುಬರುವ ಪ್ರಧಾನ ದೇವತೆಯಾದ ಜೂನೋಳ ಗೌರವಾರ್ಥವಾಗಿ ಈ ತಿಂಗಳಿಗೆ ಜೂನ್ ಎಂಬ ಹೆಸರು ಬಂತೆಂದು ರೋಮ್ ದೇಶದ ಸಾಹಿತ್ಯಯುಗದ ಕೊನೆಯ ಕವಿಯಾದ ಓವಿಡ್ (ಕ್ರಿ.ಪೂ. 43-ಕ್ರಿ.ಶ. 18) ತಿಳಿಸಿದ್ದಾನೆ. ಮಯೊರೀಸ್ ಪದದಿಂದ ಮೇ (ನೋಡಿ- ಮೇ) ಪದ ನಿಷ್ಪನ್ನವಾದಂತೆ ಯೂನಿಯೊರೀಸ್ ಪದದಿಂದ ಜೂನ್ ಪದ ನಿಷ್ಪನ್ನವಾಗಿರಬಹುದೆಂದು ಓವಿಡ್‍ನ ಅಭಿಪ್ರಾಯ. ಮಯೊರೀಸ್ ಮತ್ತು ಯೂನಿಯೊರೀಸ್ ಎಂಬುವು ಅನುಕ್ರಮವಾಗಿ ಯೌವನ ಮತ್ತು ಪ್ರೌಢಾವಸ್ಥೆಯನ್ನು ಸೂಚಿಸುತ್ತವೆ. ಜೂನ್ ಎಂಬ ಹೆಸರು ಯೆಹೂದ್ಯೇತರ ವ್ಯಕ್ತಿಯಾದ ಜೂನಿಯಸನನ್ನು ಅಥವಾ ಜೂನಿಯಸ್ ಬ್ರೂಟಸನ ರಾಯಭಾರಿಯನ್ನು ಕುರಿತದ್ದು ಎಂದು ಕೆಲವರ ಅಭಿಮತ. ಲ್ಯಾಟಿನಿನ ಹಳೆಯ ತಾರೀಖು ಪಟ್ಟಿಗಳಲ್ಲಿ ಈ ತಿಂಗಳನ್ನು ನಾಲ್ಕನೆಯ ತಿಂಗಳಾಗಿ ಪರಿಗಣಿಸಿದ್ದುಂಟು. ಆಗ 30 ದಿವಸಗಳನ್ನು ಈ ತಿಂಗಳಲ್ಲಿ ಕಾಣಿಸಿತ್ತೆಂದು ಹೇಳಲಾಗಿದೆ. ತಾರೀಖು ಪಟ್ಟಿಯ ಪರಿಷ್ಕರಣ ಸಮಯದಲ್ಲಿ ಜೂಲಿಯನ್ 29 ದಿವಸಗಳನ್ನು ಈ ತಿಂಗಳಿಗೆ ವಿಧಾಯಕ ಮಾಡಿದ್ದು ಅನಂತರ 30ನೆಯ ದಿವಸವನ್ನು ಜೂಲಿಯಸ್ ಸೀಸರ್ ಸೇರಿಸಿದ. ಜೂನ್ ತಿಂಗಳನ್ನು ಆಂಗ್ಲ್ಯೋಸ್ಯಾಕ್ಸನರು ಶುಷ್ಕ ತಿಂಗಳೆಂದೂ ನಡುಬೇಸಗೆಯ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ರೀತ್ಯ ವೈಶಾಖ ಜ್ಯೇಷ್ಠಮಾಸಗಳು ಸಾಧಾರಣವಾಗಿ ಈ ತಿಂಗಳಲ್ಲಿ ಸೇರಿಕೊಂಡಿರುತ್ತವೆ. ಕರ್ಕಾಟಕ ಸಂಕ್ರಮಣ (ಸಮ್ಮರ್ ಸಾಲ್ಸ್‍ಟೀಸ್) ಸಂಭವಿಸುವುದು ಈ ತಿಂಗಳಲ್ಲಿಯೇ.