ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಜ್ಯಾಕ್ಸನ್

ವಿಕಿಸೋರ್ಸ್ದಿಂದ

ಜ್ಯಾಕ್ಸನ್ ಅಮೆರಿಕ ಸಂಯುಕ್ತ ಸಂಸ್ಥಾನಗಳ ಮಿಸಿಸಿಪಿ ರಾಜ್ಯದ ರಾಜಧಾನಿ. ಹೈಂಡ್ಸ್ ಕೌಂಟಿಯ ಆಡಳಿತ ಕೇಂದ್ರ. ಪರ್ಲ್ ನದಿಯ ಪಶ್ಚಿಮದಂಡೆಯ ಮೇಲಿದೆ. ಜನಸಂಖ್ಯೆ 1,53,968 (1970 ಅಂದಾಜು). ಮಿಸಿಸಿಪಿ ರಾಜ್ಯದಲ್ಲಿ ಇದೇ ಅತ್ಯಂತ ದೊಡ್ಡ ನಗರ.

ಇದು ಪ್ರಮುಖ ಔದ್ಯೋಗಿಕ ನಗರ. ವ್ಯಾಪಾರಕೇಂದ್ರ. ಸುತ್ತಣ ಪ್ರದೇಶದಲ್ಲಿ ಬೆಳೆಯುವ ಹತ್ತಿ ಮಾರಾಟವಾಗುವುದು ಇಲ್ಲಿಯೇ. ನೆಯ್ಗೆ, ಕುಶಲವಸ್ತುಗಳ ತಯಾರಿಕೆ, ಹತ್ತಿಬೀಜದ ಎಣ್ಣೆ, ಗಾಜಿನ ಉಪಕರಣ ಮತ್ತು ದೃಕ್ ಉಪಕರಣಗಳನ್ನು ತಯಾರಿಸುವ ಕೈಗಾರಿಕೆಗಳು ಇಲ್ಲಿ ಬೆಳೆದು ಬಂದಿವೆ. 1920ರ ಸುಮಾರಿಗೆ ಸುತ್ತಣ ಪ್ರದೇಶದಲ್ಲಿ ನೈಸರ್ಗಿಕ ಅನಿಲದ ಶೋಧವಾದ ಮೇಲೆ ನಗರ ಅಪಾರವಾಗಿ ಬೆಳೆಯಲಾರಂಭಿಸಿತು.

ಮೊದಲು ಸಣ್ಣ ವ್ಯಾಪಾರಕೇಂದ್ರವಾಗಿದ್ದ ಇದನ್ನು ಲಫ್ಲೂರ್ಸ್ ಬ್ಲಫ್ ಎಂದು ಕರೆಯುತ್ತಿದ್ದರು. ಅಧ್ಯಕ್ಷ ಆಂಡ್ರ್ಯೂ ಜ್ಯಾಕ್ಸನನ ಗೌರವಾರ್ಥವಾಗಿ ಇದರ ಹೆಸರನ್ನು ಬದಲಾಯಿಸಲಾಯಿತು. 1821ರಲ್ಲಿ ಇದನ್ನು ರಾಜಧಾನಿಯಾಗಿ ಆಯ್ಕೆ ಮಾಡಲಾಯಿತು. ಅಮೆರಿಕನ್ ಆಂತರ್ಯುದ್ಧದಲ್ಲಿ ಇಲ್ಲಿ ಅನೇಕ ಕದನಗಳು ನಡೆದು ನಗರದ ಬಹುಭಾಗ ಹಾಳಾಯಿತು.

ಈಗಿನ ನಗರದಲ್ಲಿ ಅನೇಕ ಸುಂದರ ಉದ್ಯಾನಗಳಿವೆ. ಇಲ್ಲಿ ಸು. 7,000 ಜಾತಿಗಳ ಗಿಡಗಳನ್ನು ಬೆಳೆಸಿದ್ದಾರೆ. ಜ್ಯಾಕ್ಸನ್ ನಗರ ಶೈಕ್ಷಣಿಕ ಕೇಂದ್ರವೂ ಹೌದು. ಜಾಕ್ಸನ್ ಸ್ಟೇಟ್ ಕಾಲೇಜು (1877), ಮಿಲ್‍ಸ್ಯಾಪ್ ಕಾಲೇಜು (1890), ಬೆಲ್ ಹೇವನ್ ಕಾಲೇಜು (1894), ಜ್ಯಾಕ್ಸನ್ ಸ್ಕೂಲ್ ಆಫ ಲಾ (1930) - ಇವು ಇಲ್ಲಿಯ ಕೆಲವು ಮುಖ್ಯ ಶಿಕ್ಷಣ ಸಂಸ್ಥೆಗಳು.

ಸಂಯುಕ್ತ ಸಂಸ್ಥಾನಗಳ 23 ರಾಜ್ಯಗಳಲ್ಲಿ ಇದೇ ಹೆಸರಿನ ಕೌಂಟಿಗಳೂ ಪಟ್ಟಣಗಳೂ ಇವೆ. (ಎಂ.ಎಫ್.ಕೆ.)