ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಝುಂಝುನುನ್

ವಿಕಿಸೋರ್ಸ್ದಿಂದ

ಝುಂಝುನುನ್ ರಾಜಸ್ಥಾನ ರಾಜ್ಯದ ಒಂದು ಪಟ್ಟಣ. ಜಿಲ್ಲೆ. ಝಂಝುನುನ್ ಪಟ್ಟಣ ಜಯಪುರ ನಗರಕ್ಕೆ ಉತ್ತರ-ವಾಯುವ್ಯದಲ್ಲಿ 90 ಮೈ. ದೂರದಲ್ಲಿದೆ. ಜನಸಂಖ್ಯೆ 32,024 (1971). ಪಟ್ಟಣದ ಪಶ್ಚಿಮಕ್ಕಿರುವ ಬೆಟ್ಟದ ಎತ್ತರ ಸಮುದ್ರಮಟ್ಟದಿಂದ 1,684'. ಝಂಝುನುನ್ ಪಟ್ಟಣದಲ್ಲಿರುವ ಕಮರುದ್ಧೀನ್ ಷಹನ ಗೋರಿಯೂ ಕನಿಷ್ಠ 1,000 ವರ್ಷಗಳಷ್ಟು ಪ್ರಾಚೀನವೆನ್ನಲಾದ ಜೈನ ದೇವಾಲಯವೂ ಮುಖ್ಯ ಆಕರ್ಷಣೆಗಳು. ಝಂಝುನುನ್ ಪಟ್ಟಣ ಇದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ.

ಝಂಝುನುನ್ ಜಿಲ್ಲೆ ಉ.ಅ. 27( 50'-28( 50' ಮತ್ತು ಪೂ.ರೇ. 75(-76( ನಡುವೆ ಇದೆ. ಇದರ ವಿಸ್ತೀರ್ಣ 5.929 ಚ. ಕಿಮೀ. ಜನಸಂಖ್ಯೆ 9,29,230 (1971). ಈ ಜಿಲ್ಲೆಯ ಪಶ್ಚಿಮಕ್ಕೆ ಚುರು, ದಕ್ಷಿಣಕ್ಕೆ ಸಿತಾರ್, ಪೂರ್ವಕ್ಕೆ ಜಯಪುರ ಮತ್ತು ಆಲ್‍ವಾರ್ ಜಿಲ್ಲೆಗಳೂ ಉತ್ತರಕ್ಕೆ ಹರಿಯಾಣಾ ರಾಜ್ಯವೂ ಇವೆ. ಆರಾವಲಿ ಬೆಟ್ಟಗಳ ಪಡುವಣ ಭಾಗದ ಸಾಧಾರಣ ಒಣ ಪ್ರದೇಶದ ಉತ್ತರ ತುದಿಯಲ್ಲಿರುವ ಈ ಜಿಲ್ಲೆಯ ನೆಲ ಉಸುಕಿನಿಂದ ಕೂಡಿದೆ. ನಡುನಡುವೆ ಮರಳು ದಿಬ್ಬಗಳೂ ಬಂಡೆ-ಬೆಟ್ಟಗಳೂ ಮುರುಟು ಮುರುಟಾದ ಗಿಡಗಂಟೆಗಳೂ ಇವೆ. ಇಲ್ಲಿಯ ವಾರ್ಷಿಕ ಸರಾಸರಿ ಮಳೆ 25 ಸೆಂ. ಮೀ. ಜಿಲ್ಲೆಯಲ್ಲಿ ಬೇಸಾಯಕ್ಕೆ ಒಳಪಟ್ಟಿರುವ ಪ್ರದೇಶ 12.25 ಲಕ್ಷ ಎಕರೆ. ಸೆಜ್ಜೆ ಮತ್ತು ಬೇಳೆಯ ಕಾಳುಗಳು ಮುಖ್ಯ ಬೆಳೆಗಳು. ಇತರ ಬೆಳೆಗಳು ಗೋದಿ, ಜವೆಗೋದಿ, ಜೋಳ, ಕಡಲೆ.

ಬೇಸಾಯದ ದೃಷ್ಟಿಯಿಂದ ಮುಖ್ಯವಲ್ಲವಾದರೂ ಖನಿಜಪದಾರ್ಥಗಳ ದೃಷ್ಟಿಯಿಂದ ಇದೊಂದು ಸಮೃದ್ಧ ಜಿಲ್ಲೆಯೆಂದೇ ಹೇಳಬೇಕು. ರಾಜಸ್ಥಾನ ಮತ್ತು ಹರಿಯಾಣಗಳ ಗಡಿ ಪ್ರದೇಶದಲ್ಲಿರುವ ಈ ಜಿಲ್ಲೆಯ ಖೇತಡಿ ತಹಶೀಲಿಯಲ್ಲಿ ತಾಮ್ರ ನಿಕ್ಷೇಪಗಳುಂಟು. ಇಲ್ಲಿ 2,425 ಮೀ. ಉದ್ದ, 600 ಮೀ. ಅಗಲ ಮತ್ತು 120 ಮೀ. ಆಳದ ನೆಲದಲ್ಲಿ ಸು. 290 ಲಕ್ಷ ಟನ್ನುಗಳಷ್ಟಾದರೂ ತಾಮ್ರದ ಅದುರು ಸಿಗಬಹುದೆಂದು ಅಂದಾಜು ಮಾಡಲಾಗಿದೆ. ಇದಲ್ಲದೆ ವಿಪುಲವಾದ ಕಬ್ಬಿಣದ ಅದುರೂ, ಬೆಲೆಬಾಳುವ ಶಿಲೆಗಳೂ ದೊರೆಯುತ್ತವೆ. ಕಬ್ಬಿಣದ ಉಪಕರಣಗಳ ತಯಾರಿಕೆ, ಚರ್ಮದ ಕೆಲಸ, ವಿದ್ಯುತ್ ಉಪಕರಣಗಳ ತಯಾರಿಕೆ, ಉಣ್ಣೆಯ ನೇಯ್ಗೆ, ಸಾಬೂನು ತಯಾರಿಕೆ, ಸೀರೆಗಳಿಗೆ ಬೆಳ್ಳಿ ಬಂಗಾರದ ಅಂಚು (ಗೋಟಾ) ಜೋಡಿಸುವ ಕೆಲಸ_ಇವು ಇಲ್ಲಿಯ ಮುಖ್ಯ ಕಸುಬುಗಳು ಹಾಗೂ ಕೈಗಾರಿಕೆಗಳು. ಹೆಚ್ಚಿನ ಕೈಗಾರಿಕೆಗಳು ಕೇಂದ್ರೀಕೃತವಾಗಿರುವುದು ಝಂಝುನುನ್, ಬಿಸಾವು, ನವಲಗಡ ಪಟ್ಟಣಗಳಲ್ಲಿ. ಈ ಜಿಲ್ಲೆಯ ಜನರು ಶೌರ್ಯಸಾಹಸಗಳಿಗಾಗಿಯೂ ಹೆಸರಾಗಿದ್ದಾರೆ. ಈ ಸಣ್ಣ ಜಿಲ್ಲೆಯಿಂದ ಸುಮಾರು 4,000 ಯುವಕರು ಭಾರತೀಯ ಸೇನೆ ಸೇರಿದ್ದಾರೆ. ಅವರಲ್ಲಿ 26 ಯೋಧರು ಪರಮವೀರಚಕ್ರ, ವೀರಚಕ್ರ, ವಿಜಯಚಕ್ರ ಇತ್ಯಾದಿ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದವರಾಗಿದ್ದಾರೆ.

ಈ ಜಿಲ್ಲೆಯ ತಾಲ್ಲೂಕುಗಳು ಝಂಝುನುನ್, (2,26,161), ಚಿಡಾವಾ (2,09,358), ಖೇತಡಿ (2,27,323) ಮತ್ತು ಉದಯಪುರವಾಟಿ (2,66,388) ಇಲ್ಲಿ 696 ಗ್ರಾಮಗಳಿವೆ. ಗ್ರಾಮಪಂಚಾಯಿತಿಗಳ ಸಂಖ್ಯೆ 616. ಝಂಝುನುನ್ ಅಲ್ಲದೆ ಇತರ ಪಟ್ಟಣಗಳು ನವಲಗಡ (26,565), ಪಿಲಾನಿ (20,059) [ಇದರಲ್ಲಿ ವಿದ್ಯಾವಿಹಾರವೂ (6,958) ಸೇರಿದೆ], ಚಿಡಾವಾ (15,241), ಉದಯಪುರವಾಟಿ (12,442), ಬಿಸಾವು (10,417), ಮುಕುಂದಗಡ (10,154), ಮಂಡಾವಾ (9,851), ಸೂರಜಗಡ (9,780), ಖೇತಡಿ (8,669), ಬಗಡ್ (6,834), ಪಿಲನಿಯಲ್ಲಿ ಬಿರ್ಲಾ ಶಿಕ್ಷಣ ಟ್ರಸ್ಟಿನ ಆಶ್ರಯದಲ್ಲಿ ಪೂರ್ವಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಹಂತದವರೆಗೂ ಮಾನವಿಕ ಹಾಗೂ ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ಸಂಸ್ಥೆಗಳಿವೆ. ಈ ಟ್ರಸ್ಟ್ ನಡೆಸುತ್ತಿರುವ ಬಿರ್ಲಾ ಇನ್‍ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಸೈನ್ಸ್ ಸಂಸ್ಥೆ ವಿಶ್ವವಿಖ್ಯಾತವಾದ್ದು. 1957ರಲ್ಲಿ ಜವಹರಲಾಲ್ ನೆಹರೂ ಅವರು ಉದ್ಘಾಟಿಸಿದ ಸೆಂಟ್ರಲ್ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ರಿಸರ್ಚ್ ಇನ್‍ಸ್ಟಿಟ್ಯೂಟ್ ಎಂಬುದು ಇನ್ನೊಂದು ಮುಖ್ಯ ಸಂಸ್ಥೆ. ಭಾರತದಲ್ಲಿ ಮೊತ್ತಮೊದಲು ಟೆಲಿವಿಷನ್ ಉಪಕರಣವನ್ನು ತಯಾರಿಸಿದ್ದು ಈ ಸಂಸ್ಥೆ, ಇದಕ್ಕೆ ಸೇರಿದಂತೆ, ರೇಡಾರ್ ಇರುವ 57 ಕಿಮೀ. ಎತ್ತರದ ಗೋಪುರವೊಂದುಂಟು. (ಬಿ.ಎ.ಎಸ್.)