ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರೆಣ್ಣೆ

ವಿಕಿಸೋರ್ಸ್ದಿಂದ

ಟಾರೆಣ್ಣೆ ಕಾರ್ಬನಿಕ ಪದಾರ್ಥಗಳನ್ನು ಶುಷ್ಕಾಸವನಕ್ಕೆ (ಡ್ರೈ ಡಿಸ್ಟಿಲೇಷನ್) ಗುರಿಪಡಿಸಿದಾಗ ಸಾಂದ್ರೀಕರಿಸುವ ಜಲೀಯವಲ್ಲದ (ನಾನ್ ಏಕ್ವಿಯಸ್) ಕಪ್ಪುಬಣ್ಣದ ಸ್ನಿಗ್ಧದ್ರವ ವಸ್ತು. ಇದರ ಸಲುವಾಗಿ ನಾವು ಬಳಸುವ ಎರಡು ಸಾಮಾನ್ಯ ಪದಾರ್ಥಗಳೆಂದರೆ ಕಟ್ಟಿಗೆ ಮತ್ತು ಕಲ್ಲಿದ್ದಲು. ಇವನ್ನು ವಾಯು ಸಂಪರ್ಕವಿಲ್ಲದೆ ಕಾಸಿದಾಗ ಅನಿಲ, ದ್ರವ ಮತ್ತು ಘನ ರೂಪದ ಉತ್ಪನ್ನಗಳು ದೊರೆಯುವುವು. ಉದಾಹರಣೆಗೆ ಕಟ್ಟಿಗೆಯನ್ನು ಶುಷ್ಕಾಸವನಕ್ಕೆ ಒಳಪಡಿಸಿದರೆ ಕಾಷ್ಠಾನಿಲ (ವುಡ್‍ಗ್ಯಾಸ್), ಇದ್ದಲು ಮತ್ತು ಒಂದು ದ್ರವೋತ್ಪನ್ನ ದೊರೆಯುತ್ತವೆ. ದ್ರವೋತ್ಪನ್ನವನ್ನು ಹಾಗೆಯೇ ಬಿಟ್ಟರೆ ಅದು ಎರಡು ಪದರಗಳಾಗಿ ನಿಲ್ಲುತ್ತದೆ. ಮೇಲಿನ ಜಲೀಯ ಪದರಕ್ಕೆ ಕಾಷ್ಠಾಮ್ಲ (ಪೈರೊಲಿಗ್ನಿಯಸ್ ಆ್ಯಸಿಡ್) ಎಂದು ಹೆಸರು. ಇದು ಮಿಥೆನಾಲ್ ಅಸಿಟೋನ್ ಮತ್ತು ಅಸೆಟಿಕ್ ಆಮ್ಲಗಳನ್ನು ಒಳಗೊಂಡಿರುವುದರಿಂದ ಅಮೂಲ್ಯ. ಇದರಿಂದ ಈ ಅಂಗವಸ್ತುಗಳನ್ನು ಬೇರ್ಪಡಿಸಲು ಸೂಕ್ತವಿಧಾನಗಳಿವೆ. ಕಾಷ್ಠಾಮ್ಲದ ಕೆಳಗೆ ಉಳಿಯುವುದೇ ಕಟ್ಟಿಗೆಯ ಟಾರೆಣ್ಣೆ. ಇದನ್ನು ಜಲ್ಲಿ ಮತ್ತು ಮರಳುಗಳೊಂದಿಗೆ ಕಲಸಿ ರಸ್ತೆ ದುರಸ್ತಿಗೆ ಉಪಯೋಗಿಸುತ್ತಾರೆ. ಟಾರೆಣ್ಣೆ ಲೇಪಿಸಿದ ಮರಕ್ಕೆ ಗೆದ್ದಲು ಹತ್ತದು. ಕಬ್ಬಿಣಕ್ಕೆ ಬಳಿದರೆ ಲೋಹ ತುಕ್ಕುಹಿಡಿಯುವುದಿಲ್ಲ.

ಕಲ್ಲಿದ್ದಲನ್ನು ವಾಯುರಹಿತ ವಾತಾವರಣದಲ್ಲಿ ಕಾಸಿದಾಗಲೂ ಕಲ್ಲಿದ್ದಲು ಅನಿಲ, ಕೋಕ್ ಮತ್ತು ಒಂದು ದ್ರವೋತ್ಪನ್ನ ದೊರೆಯುವುವು. ಕೊನೆಯದನ್ನು ತಳವೂರಲು ಬಿಟ್ಟರೆ ಅಲ್ಲೂ ಎರಡು ಪದರಗಳು ಬೇರ್ಪಡುತ್ತದೆ. ಮೇಲಿನ ಪದರ ಅಮೊನಿಯಯುಕ್ತ ಜಲೀಯ ದ್ರಾವಣ. ಕೆಳಪದರವೇ ಕಲ್ಲಿದ್ದಲ ಟಾರೆಣ್ಣೆ. ಇದು ಅನೇಕ ಉಪಯುಕ್ತ ಆರೊಮ್ಯಾಟಿಕ್ ಕಾರ್ಬನಿಕ ಸಂಯುಕ್ತಗಳ ಆಕರ. ಇವುಗಳ ಪೈಕಿ ಬೆನ್ಸೀನ್ ಟಾಲೀನ್ ನ್ಯಾಫ್ತಲೀನ್, ಆಂತ್ರಸೀನ್ ಫಿನಾಂತ್ರೀನ್ ಫೀನಾಲ್, ಕ್ರೆಸಾಲ್‍ಗಳು, ಪಿರಿಡಿನ್ ಮೊದಲಾದವನ್ನು ಹೆಸರಿಸಬಹುದು. ಕಲ್ಲಿದ್ದಲ ಟಾರೆಣ್ಣೆಯನ್ನು ಎಚ್ಚರಿಕೆಯಿಂದ ಭಿನ್ನಾಸವಿಸಿದರೆ ಇವು ಬೇರ್ಪಡುತ್ತವೆ. ಅಂತಿಮವಾಗಿ ಉಳಿಯುವುದು ಡಾಂಬರು. ಯಥಾಪ್ರಕಾರ ಇದು ಕೂಡ ಟಾರೆಣ್ಣೆಯಂತೆಯೆ ವಿನಿಯೋಗವಾಗುವುದು.

ಕಲ್ಲಿದ್ದಲ ಟಾರೆಣ್ಣೆಯಲ್ಲಿರುವ ಆಂತ್ರಸೀನ್ ಮತ್ತು ಫಿನಾಂತ್ರೀನ್ ಹೈಡ್ರೊಕಾರ್ಬನ್ನುಗಳು ಏಡಿಗಂತಿ ರೋಗಕಾರವಾದ್ದರಿಂದ ಟಾರೆಣ್ಣೆಯ ಮನಸ್ವೀ ಉಪಯೋಗ ಸಲ್ಲದು. ಈ ಹೈಡ್ರೋಕಾರ್ಬನ್ನುಗಳ ವ್ಯುತ್ಪನ್ನಗಳಾದ 9:10 ಡೈಮೀಥೈಲ್ ಮತ್ತು 5:9:10 ಟ್ರೈಮೀಥೈಲ್ 1:2 ಬೆನ್ಸಾಂತ್ರಸೀನ್, 20-ಮೀಥೈಲ್ ಕೊಲಾಂಕ್ರೀನ್, 3:4 ಬೆನ್ಸ್ ಪೈರೀನ್ ಮತ್ತು 1:2:5:6 ಡೈಬೆನ್ಸಾಂತ್ರಸೀನ್ ಇವನ್ನು ಇಲಿಗಳ ಮೈಮೇಲೆ ಬಳಿದಾಗ ಅವು ಏಡಿಗಂತಿ ರೋಗಕ್ಕೆ ತುತ್ತಾಗುವುವು ಎಂದು ಗೊತ್ತಾಗಿದೆ. ಸಿಗರೇಟಿನ ಹೊಗೆಯಲ್ಲಿ ಟಾರಿನ ಅಂಶ ಉಂಟು. ಆದ್ದರಂದಲೇ ಸಿಗರೇಟ್ ಸೇದುವವರಿಗೆ ಫುಪ್ಫುಸದ ಏಡಿಗಂತಿ ತಗಲುವ ಸಂಭಾವ್ಯತೆ ಎಂದು ತಜ್ಞರ ಅಭಿಪ್ರಾಯ. (ಎಚ್.ಜಿ.ಎಸ್.)