ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಾರ್ಡನಾಯ್ಸೀಯನ್

ವಿಕಿಸೋರ್ಸ್ದಿಂದ

ಟಾರ್ಡನಾಯ್ಸೀಯನ್ ಸೂಕ್ಷ್ಮಶಿಲಾಯುಗ ಕಾಲದ ಒಂದು ಸಂಸ್ಕøತಿ. ಇದು ಉತ್ತರ ಫ್ರಾನ್ಸಿನ ಫೇರ್-ಆನ್-ಟಾರ್ಡನಾಯ್ಸ್ ಎಂಬಲ್ಲಿ ಮೊದಲಿಗೆ ಕಂಡುಬಂದುದರಿಂದ ಈ ಹೆಸರು ಬಂದಿದೆ. ಫ್ರಾನ್ಸಿನಲ್ಲಿ ಸಾವೆಟೆರಿಯನ್ ಸಂಸ್ಕøತಿಯ ಅನಂತರ ಅಸ್ತಿತ್ವಕ್ಕೆ ಬಂತು. ಸ್ಪೇನ್, ಜರ್ಮನಿ, ಇಟಲಿ, ನೆದರ್‍ಲೆಂಡ್ಸ್ , ಪೋಲಂಡ್, ದಕ್ಷಿಣ ರಷ್ಯ ಮತ್ತು ಬ್ರಿಟನ್‍ಗಳಲ್ಲಿ ಇದು ಬಳಕೆಯಲ್ಲಿತ್ತು. ಬ್ರಿಟನ್ನಿನಲ್ಲಿ ಈ ಸಂಸ್ಕøತಿಯ ಎರಡು ಪ್ರತ್ಯೇಕ ಪದ್ಧತಿಗಳನ್ನು ಗುರುತಿಸಲಾಗಿದೆ. ಸಮಾನಾಂತರ ಕೂರಲಗು ಫಲಕಗಳು (ಬ್ಲೇಡ್ಸ್) ಮತ್ತು ಜ್ಯಾಮಿತೀಯ ಆಕಾರದ ಆಯುಧಗಳು ಈ ಪದ್ಧತಿಗಳ ಮುಖ್ಯಲಕ್ಷಣಗಳು. ಮರದ ಅಥವಾ ಮೂಳೆಯ ಹಿಡಿಕೆಗಳುಳ್ಳ ಉಪಕರಣಗಳ ಅಂಚು ಅಥವಾ ತುದಿಗಳಿಗೆ ಈ ಸಣ್ಣ ಕಲ್ಲಿನ ಆಯುಧಗಳನ್ನು ಜೋಡಿಸಿ ಬಳಸಲಾಗುತ್ತಿತ್ತು. ಹೀಗೆ ಜೋಡಿಸಲಾದ ಒಂದು ಬಾಣದ ಮೊನೆ ನೈಋತ್ಯ ಬ್ರಿಟನಿಯ ಟೇವಿಯೆಕ್ ಎಂಬಲ್ಲಿ ದೊರಕಿದೆ. ಈ ಸಂಸ್ಕøತಿಯ ಕಡೆಗಾಲದಲ್ಲಿ ಪಶ್ಚಿಮ ಯೂರೋಪಿನಲ್ಲಿ ನವಶಿಲಾಯುಗ ಸಂಸ್ಕøತಿಗಳು ತಲೆದೋರಲಾರಂಭಿಸಿದುವು. ಟಾರ್ಡನಾಯ್ಸೀಯನ್ ಸಂಸ್ಕøತಿಯ ಕಾಲ ಕ್ರಿ.ಪೂ.ಸು. 6ನೆಯ ಸಹಸ್ರಮಾನವೆಂದು ಹೇಳಲಾಗಿದೆ. (ಬಿ.ಕೆ.ಜಿ.)