ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟಿಬೆಟನ್ ಬೌದ್ಧಮತ

ವಿಕಿಸೋರ್ಸ್ದಿಂದ

ಟಿಬೆಟನ್ ಬೌದ್ಧಮತ

ಟಿಬೆಟ್ಟಿನ ಸಾಂಸ್ಕøತಿಕ ಹಿನ್ನೆಲೆಯಲ್ಲಿ ಬೆಳೆಯಿತಾದುದರಿಂದ ಅಲ್ಲಿನ ಬೌದ್ಧಮತ ಆ ಸಂಸ್ಕøತಿಯ ಛಾಯೆ ಪಡೆದು, ಬೇರೆ ದೇಶಗಳಲ್ಲಿ ಬೆಳೆದ ಬೌದ್ಧಮತಗಳಿಂದ ಕೆಲವು ಅಂಶಗಳಲ್ಲಿ ಭಿನ್ನವಾಗಿದೆ. ಬೌದ್ಧಮತ ಪ್ರಚಾರಕರು ತಾವು ಪ್ರವೇಶಿಸಿದ ದೇಶದ ಸಂಸ್ಕøತಿಯೊಡನೆ ಸುಲಭವಾಗಿ ಹೊಂದಿಕೊಳ್ಳುವ ಗುಣಗಳನ್ನು ಪಡೆದಿದ್ದರು. ಭಾರತದ ವೈದಿಕ ಮತದವರಂತಲ್ಲದೆ ಬೌದ್ಧರು ಜಾತಿಭೇದಗಳನ್ನೂ ಆಹಾರಭೇದಗಳನ್ನೂ ಗಣಿಸಲಿಲ್ಲವಾದುದರಿಂದ ಆ ಮತದವರು ತಾವು ಹೋದ ಸ್ಥಳಗಳ ಜನರೊಡನೆ ಬರೆಯಲು ಅನುಕೂಲವಾಯಿತು. ಬೌದ್ಧಭಿಕ್ಷುಗಳು ಸಾಮಾನ್ಯವಾಗಿ ವಿನಯಶೀಲರು. ಪಾಪಿಗಳಲ್ಲೂ ಅಶಕ್ತರಲ್ಲೂ ಹಿಂದುಳಿದವರಲ್ಲೂ ಅಪಾರ ಅನುಕಂಪವಿದ್ದವರು, ಅಂಥವರ ಸೇವೆಯೇ ತಮ್ಮ ಮತದ ಒಂದು ಮುಖ್ಯ ನಿಯಮವಾಗಿ ಭಾವಿಸಿದವರು. ಆದುದರಿಂದ ಅವರು ಹೋದ ಕಡೆಗಳಲ್ಲಿ ಅವರಿಗೆ ಆದರದ ಸ್ವಾಗತ ದೊರೆಯುತ್ತಿತ್ತು. ಈ ಕಾರಣದಿಂದ ಬೌದ್ಧಮತ ಅಶೋಕನ ಕಾಲದಿಂದ ಆಚೆ ಸಿಂಹಳ ದ್ವೀಪ, ಮಧ್ಯ ಏಷ್ಯ, ಚೀನ, ಮಲಯ, ಕೊರಿಯ, ಟಿಬೆಟ್, ಜಪಾನ್ ಮುಂತಾದ ಪೂರ್ವದೇಶಗಳಲ್ಲಿ ವ್ಯಾಪಿಸಿತು. ಚೀನದಲ್ಲಿ ಅದು ಕೂಂಗ್‍ಫೂಟ್ಸೆ ಮತ್ತು ಲಾವೊಟ್ಸೆ ತತ್ತ್ವದ ಸಾರಾಂಶಗಳನ್ನು ಹೀರಿಕೊಂಡುದರಿಂದ ಚೀನೀಯರು ಅದನ್ನು ಪರದೇಶದ ಮತವೆಂದು ಗಣಿಸದೆ ತಮ್ಮ ದೇಶದ ಮತವೆಂದೇ ಭಾವಿಸಿದರು. ಮೌಟ್ಸು ಎಂಬ ಚೀನೀ ತಾತ್ತ್ವಿಕ ಕೂಂಗ್‍ಫೂಟ್ಸೆ ಮತ್ತು ತಾವೊ ತತ್ತ್ವಗಳನ್ನು ಬೌದ್ಧಮತದೊಡನೆ ಹೋಲಿಸಿ ಬೌದ್ಧಮತ ಎಲ್ಲ ವಿಧದಲ್ಲೂ ಕೂಂಗ್‍ಫೂಟ್ಸೆ ಮತ್ತು ತಾವೊ ತತ್ತ್ವಗಳಿಗಿಂತ ಉತ್ತಮವೆಂದು ಸಾರಿದ. eóÉನ್ ಬೌದ್ಧಮತ ಜಪಾನಿನ ರಾಷ್ಟ್ರಮತವಾಯಿತು. ಅಂತೆಯೇ ಟಿಬೆಟ್ಟಿನಲ್ಲೂ ಬೌದ್ಧಮತ ಆ ರಾಷ್ಟ್ರದ ಮತವಾಯಿತು. ಬೌದ್ಧಮತ ಯಾವಾಗ ಟಿಬೆಟ್ಟನ್ನು ಪ್ರವೇಶಿಸಿತು, ಅದು ಅಲ್ಲಿ ಹೇಗೆ ಬೆಳೆಯಿತು ಎಂಬುದನ್ನು ಸಂಗ್ರಹವಾಗಿ ಇಲ್ಲಿ ನಿರೂಪಿಸಿದೆ.

ಬೌದ್ಧಮತ ಪ್ರಚಾರ ಟಿಬೆಟ್ಟಿನಲ್ಲಿ ಕ್ರಿ.ಶ. ಏಳನೆಯ ಶತಮಾನಕ್ಕಿಂತ ಹಿಂದೆ ನಡೆದಿದ್ದರೂ ಅದಕ್ಕೆ ಲಿಖಿತ ದಾಖಲೆಗಳಿಲ್ಲ. ಏಕೆಂದರೆ ಅದಕ್ಕಿಂತ ಮುಂಚೆ ಟಿಬೆಟ್ಟಿನ ಭಾಷೆ ಲಿಪಿರೂಪ ಪಡೆದಿರಲಿಲ್ಲ. ಕ್ರಿ.ಶ. ಏಳನೆಯ ಶತಮಾನಕ್ಕೆ ಹಿಂದೆ ಥೊ-ಥೊ-ರಿ ರಾಜನ ಆಳಿಕೆಯ ಕಾಲದಲ್ಲಿ ಬೌದ್ಧಭಿಕ್ಷುಗಳು ಆ ರಾಜನಿಗೆ ಬೌದ್ಧಮತದ ಗ್ರಂಥಗಳನ್ನು ಕೊಟ್ಟರೆಂದೂ ಅಂದಿನ ಟಿಬೆಟನ್ನರು ಬರೆವಣಿಗೆಯನ್ನು ಅರಿಯದವರಾದ್ದರಿಂದ ಆ ಗ್ರಂಥಗಳಿಂದ ಅವರಿಗೆ ಯಾವ ಪ್ರಯೋಜನವೂ ಆಗಲಿಲ್ಲವೆಂದೂ ಟಿಬೆಟ್ಟಿನಲ್ಲಿ ಕಥೆಗಳಿವೆ. ಟಿಬೆಟ್ಟಿನ ಭಾಷೆ ಲಿಪಿರೂಪವನ್ನು ಕಂಡದ್ದು ಸ್ರೋನ್-ಬ್ಟಸನ್ ರಾಜನ ಕಾಲದಲ್ಲಿ (ಕ್ರಿ.ಶ. 617). ಅವನ ಇಬ್ಬರು ಹೆಂಡತಿಯರಲ್ಲಿ ಭ್ರುಕುಟಿ ಎಂಬುವಳು ನೇಪಾಳದ ರಾಜನ ಮಗಳು, ವೆನ್-ಚೆಂಗ್ ಎಂಬಾಕೆ ಚೀನೀ ಚಕ್ರವರ್ತಿಯ ಮಗಳು. ಅವರಿಬ್ಬರೂ ಹುಟ್ಟು ಬೌದ್ಧರು. ಅವರು ಟಿಬೆಟ್ಟಿಗೆ ಬಂದಾಗ, ಅಕ್ಷೋಭ. ಮೈತ್ರೇಯ ಮತ್ತು ಸಾಕ್ಯಮುನಿಗಳ ವಿಗ್ರಹವನ್ನು ತಮ್ಮ ಜೊತೆಯಲ್ಲಿ ತಂದು ಪೂಜಿಸುತ್ತಿದ್ದರು. ಸ್ರೋನ್-ಬ್ಟಸನ್ ಭಾರತಕ್ಕೆ ಕಳುಹಿಸಿದ ಹದಿನಾರು ಟಿಬೆಟನ್ನರು ಭಾರತದ ವಿದ್ವಾಂಸರ ಸಹಾಯ ಪಡೆದು ಟಿಬೆಟನ್ ಲಿಪಿಯನ್ನೂ ವ್ಯಾಕರಣವನ್ನೂ ರೂಪಿಸಿದರು ಮತ್ತು ಆ ವಿದ್ವಾಂಸರ ನೆರವು ಪಡೆದು ಭಾರತದ ಕೆಲವು ಬೌದ್ಧಗ್ರಂಥಗಳನ್ನು ಮೊಟ್ಟಮೊದಲಿಗೆ ಟಿಬೆಟನ್ ಭಾಷೆಗೆ ತರ್ಜುಮೆ ಮಾಡಿದರು. ಬೌದ್ಧಮತದ ಹತ್ತು ನಿಯಮಗಳಿಗೆ ಅನುಸಾರವಾಗಿ ಸ್ರೋನ್-ಬ್ಟಸನ್ ಕಾನೂನುಗಳನ್ನು ಏರ್ಪಡಿಸಿದ. ಲಾಸದಲ್ಲಿ ಪ್ರಖ್ಯಾತವಾದ ರೋಮಾಚ ಮತ್ತು ಜೋಕ್ ಹಾಂಗ್ ಬೌದ್ಧದೇವಾಲಯಗಳನ್ನು ಕಟ್ಟಿಸಿದ.

ಆದರೂ ಅವನ ಕಾಲದ ಅನಂತರ ಬೌದ್ಧಮತದ ಪ್ರಾಮುಖ್ಯ ಕುಂದಿತು. ಟಿಬೆಟ್ಟಿನ ಪ್ರಾಚೀನ ಬೊನ್ ಮತದವರು ಬೌದ್ಧಮತವನ್ನು ಅಲ್ಲಿಂದ ಮೂರು ಶತಮಾನಗಳ ಕಾಲ ಒಂದೇ ಸಮನಾಗಿ ತೀವ್ರವಾಗಿ ಪ್ರತಿಭಟಿಸಿದರು. ಎಂಟನೆಯ ಶತಮಾನದ ಉತ್ರರಾರ್ಧದಲ್ಲಿ ಆಳಿದ ಖ್ರಿ-ಸ್ರೋನ್-ಲ್ಡೆ-ಬ್ಟಸನ್ ರಾಜ (ಕ್ರಿ.ಶ. 255-97) ನಲಂದ ಬೌದ್ಧ ವಿಶ್ವವಿದ್ಯಾನಿಲಯದಿಂದ ಶಾಂತರಕ್ಷಿತ ಭಿಕ್ಷುವನ್ನು ಟಿಬೆಟ್ಟಿಗೆ ಕರೆಸಿಕೊಂಡ. ಆತ ಟಿಬೆಟ್ಟಿನಲ್ಲಿ ಸಂಚರಿಸಿ ಬೌದ್ಧರ ಹತ್ತು ಸುದ್ಗುಣಗಳು ಮತ್ತು ಕಾರ್ಯಕಾರಣಚಕ್ರವನ್ನು ಟಿಬೆಟ್ಟಿನವರಿಗೆ ಬೋಧಿಸಿ ಅವರನ್ನು ಬೌದ್ಧ ಮತಕ್ಕೆ ಪರಿವರ್ತಿಸಲು ಪ್ರಯತ್ನಿಸಿದ. ಆಗ ದೇಶದಲ್ಲಿ ಹಟಾತ್ತನೆ ಬಿರುಗಾಳಿಯೂ ಸಾಂಕ್ರಾಮಿಕ ರೋಗಗಳೂ ಕಾಣಿಸಿಕೊಂಡದ್ದಕ್ಕೆ ಟಿಬೆಟ್ಟಿನ ಜನ ತಮ್ಮ ಬೋನ್ ಸಂಪ್ರದಾಯಕ್ಕೆ ವಿರುದ್ಧವಾದ ಬೌದ್ಧಮತ ಪ್ರಚಾರ ಕಾರಣವೆಂದು ಭಾವಿಸಿ ರೊಚ್ಚೆದ್ದರು. ಶಾಂತರಕ್ಷಿತ ತಾನು ಬೋಧಿಸಿದ ಬೌದ್ಧಶಾಖೆಯ ಧರ್ಮ ಟಿಬೆಟ್ಟಿನ ಜನರಿಗೆ ಒಗ್ಗದ ಧರ್ಮವೆಂದು ತಿಳಿದು ಟಿಬೆಟ್ಟಿನಿಂದ ಭಾರತಕ್ಕೆ ಹಿಂತಿರುಗಿದ. ಟಿಬೆಟ್ಟಿನವರಿಗೆ ತಾಂತ್ರಿಕ ಬೌದ್ಧಮತ ಹಿಡಿಸಬಹುದೆಂದು ನಂಬಿ ಆ ಶಾಖೆಯ ಪ್ರಸಿದ್ಧ ಭಿಕ್ಷುವಾದ ಪದ್ಮಸಂಭವನನ್ನು ಕರೆಸಿಕೊಳ್ಳಬೇಕೆಂದು ರಾಜನಿಗೆ ಸಲಹೆ ಕೊಟ್ಟ. ಅವನ ಸಲಹೆಯಂತೆ ರಾಜ ಪದ್ಮಸಂಭವನನ್ನು ಕರೆಸಿಕೊಂಡು ಅವನಿಂದ ಜನರಿಗೆ ಉಪದೇಶ ಕೊಡಿಸಿದ. ತಾಂತ್ರಿಕ ಬೌದ್ಧಮತ ಟಿಬೆಟ್ಟಿನ ಜನರಿಗೆ ತುಂಬ ಮೆಚ್ಚಿಗೆಯಾಯಿತು. ಕ್ರಮೇಣ ಅದು ಆ ನೆಲದಲ್ಲಿ ಬೇರೂರಿಕೊಂಡು ಅಂದಿನ ಟಿಬೆಟ್ಟಿನ ರಾಷ್ಟ್ರಮತವಾಯಿತು. ರಾಜ ಬಿಹಾರದ ಓದಂತಿಪುರದ ಭಿಕ್ಷುಗಳ ವಿಹಾರದ ಮಾದರಿಯಲ್ಲಿ ಬ್ಸಸಮ್-ಯಾಸ್ ವಿಹಾರವನ್ನು ಸ್ಥಾಪಿಸಿದ. ಅನಂತರದಲ್ಲಿ ಶಾಂತರಕ್ಷಿತನನ್ನು ಪುನಃ ಟಿಬೆಟ್ಟಿಗೆ ಕರೆಸಿಕೊಂಡು ಬೌದ್ಧಗ್ರಂಥಗಳ ಭಾಷಾಂತರ ಕೆಲಸವನ್ನು ಮುಂದುವರಿಸಿದುದಲ್ಲದೆ ಅವನ ಸಹಾಯದಿಂದ ಬೌದ್ಧಗ್ರಂಥಗಳ ಸೂಚಿಯನ್ನು ಬರೆಸಿದ.

ಶಾಂತರಕ್ಷಿತ ಗತಿಸಿದ ಅನಂತರ ಶೂನ್ಯವಾದಿ ಚೀನೀ ಬೌದ್ಧರ ಪ್ರಚಾರದಿಂದ ಟಿಬೆಟ್ಟಿನಲ್ಲಿ ಶೂನ್ಯವಾದ ತಲೆ ಎತ್ತಿತು. ಅದನ್ನು ತಡೆಗಟ್ಟಲು ಖ್ರಿ-ಸ್ರೊನ್ ರಾಜ ಶಾಂತರಕ್ಷಿತನ ಪ್ರಸಿದ್ಧ ಶಿಷ್ಯನಾದ ಕಮಲಶೀಲನನ್ನು ನಲಂದದಿಂದ ಟಿಬೆಟ್ಟಿಗೆ ಕರೆಸಿಕೊಂಡ. ಶೂನ್ಯವಾದಿಗಳಿಗೂ ಕಮಲಶೀಲನಿಗೂ ದೀರ್ಘವಾಗ್ವಾದ ನಡೆದು ಶೂನ್ಯವಾದಿಗಳು ಪರಾಭವಗೊಂಡರು. ವಾದದಲ್ಲಿ ಸೋತ ಶೂನ್ಯವಾದಿಗಳು ಕಮಲಶೀಲನನ್ನು ಕೊಲ್ಲಿಸಿದರು. ಇದನ್ನು ನೋಡಿ ಖ್ರಿ-ಸ್ರೋನ್ ಹತಾಶನಾಗಿ ಪ್ರಾಣಬಿಟ್ಟ.

ಅವನ ಮಗ ಮು-ನೆ-ಬ್ಟಸನ್-ಪೊ ಬೌದ್ಧಮತದ ಕಾರುಣ್ಯ ಮತ್ತು ಸರ್ವಸಮತಾಭಾವಗಳಿಂದ ಪ್ರೇರಿತನಾಗಿ ರಾಜ್ಯದ ಸಂಪತ್ತನ್ನು ಜನರಲ್ಲಿ ಸಮನಾಗಿ ಹಂಚಲು ಪ್ರಯತ್ನಿಸಿದ. ಕಾಯಕದಿಂದ ಬಾಳುವುದೇ ಗೌರವಯುತ ಬಾಳೆಂದು ಘೋಷಿಸಿದ. ಶ್ರೀಮಂತರ ಕೋಪಗೊಂಡು ಅವನಿಗೆ ವಿಷಹಾಕಿಸಿ ಕೊಲ್ಲಿಸಿ ಅವನ ಸೋದರ ಖ್ರಿ-ಲ್ಡೆ-ಸ್ರೋನ್-ಬ್ಟಸನ್ನನನ್ನು ರಾಜನನ್ನಾಗಿ ಮಾಡಿಕೊಂಡರು. ಆ ರಾಜ ಮಹಾವ್ಯುತ್ಪತ್ತಿ ಎಂಬ ಸಂಸ್ಕøತ ಮತ್ತು ಟಿಬೆಟನ್ ಭಾಷೆಗಳ ನಿಘಂಟನ್ನು ಕ್ರಿ.ಶ. 814ರಲ್ಲಿ ಬರೆಸಿದ. ಖ್ರಿ-ಲ್ಡೆ-ಸ್ರೋನ್-ಬ್ಟಸನ್ ತನ್ನ ಹಿರಿಯ ಮಗ ಗ್ಲಣ್-ಡರ್-ಮನನ್ನು ಬಿಟ್ಟು ತನ್ನ ಕಿರಿಯ ಮಗ ರಾಲ್-ಪ ಚೆನ್ನನನ್ನು (816-838) ರಾಜನನ್ನಾಗಿ ಮಾಡಿದ. ಆತನ ಆಳಿಕೆಯಲ್ಲಿ ಬೌದ್ಧಮತ ತುಂಬ ಬೆಳೆಯಿತು. ಆತ ಬೌದ್ಧಭಿಕ್ಷುಗಳಿಗೆ ತಾವು ಏರ್ಪಡಿಸಿದ ವಿಹಾರಗಳ ಸುತ್ತಮುತ್ತ ಇದ್ದ ಪ್ರದೇಶದ ಆಳಿಕೆಯ ಅಧಿಕಾರವನ್ನು ಕೊಟ್ಟ. ಶ್ರೀಮಂತರಿಗೆ ಅದು ಹಿಡಿಸದಿದ್ದುದರಿಂದ ಅವರು ಅವನನ್ನು ಕೊಲ್ಲಿಸಿ ಗ್ಲಣ್-ಡರ್-ಮನನ್ನು ರಾಜನನ್ನಾಗಿ ಮಾಡಿಕೊಂಡರು. ಆತನ ಆಳಿಕೆಯಲ್ಲಿ ಬೌದ್ಧಮತಕ್ಕೆ ಬಲವಾದ ಪೆಟ್ಟು ಬಿತ್ತು. ಆತ ಭಿಕ್ಷುಗಳನ್ನು ಮಠಗಳಿಂದ ಓಡಿಸಿ ಅವನ್ನು ಮುಚ್ಚಿಸಿದ; ಬುದ್ಧನ ವಿಗ್ರಹಗಳನ್ನು ಕಿತ್ತು ನೆಲದಲ್ಲಿ ಹೂಳಿಸಿದ. ರಾಜರಿದ್ದರೆ ಬೌದ್ಧಮತಕ್ಕೆ ಉಳಿಗಾಲವಿಲ್ಲವೆಂದು ತಿಳಿದ ಜನ ಗ್ಲಣ್-ಡರ್-ಮನನ್ನು ಕೊಂದು ರಾಜಪ್ರಭುತ್ವವನ್ನು ಕೊನೆಗಾಣಿಸಿದರು. ಲಾಸದ ಕೊನೆಯ ರಾಜನ ಮಗ ಡ್ಪ್‍ಲ್ ಹ್ಕೊರ್-ಬ್ಟಸನ್ (ಕ್ರಿ.ಶ. 906-73) ಲಾಸವನ್ನು ಬಿಟ್ಟು ಟಿಬೆಟ್ಟಿನ ಪಶ್ಚಿಮ ಭಾಗಕ್ಕೆ ಓಡಿಹೋಗಿ ಅಲ್ಲಿ ತನ್ನ ರಾಜ್ಯವನ್ನು ಸ್ಥಾಪಿಸಿದ. ಅವನ ಮಕ್ಕಳು ಮತ್ತು ಮರಿಮಕ್ಕಳು ಲಡಾಕ್, ಸ್ಫರಾಂಗ್ ಮತ್ತು ಗುಗೆ ಭಾಗಗಳಲ್ಲಿ ಬೌದ್ಧಮತ ಹರಡಲು ಉತ್ತೇಜನ ಕೊಟ್ಟರು. ಪಶ್ಚಿಮ ಟಿಬೆಟ್ಟಿನ ರಾಜರಲ್ಲಿ ತುಂಬ ಪ್ರಸಿದ್ಧನಾದ ಹ್ಕೆ ಹೋರ್-ಲ್ಡೆ ಬೌದ್ಧಮತದಲ್ಲಿ ವಿಶೇಷ ಆಸಕ್ತಿ ತೋರಿಸಿದ. ಪರಿಣಾಮವಾಗಿ ಅವನನ್ನು ಜನ ಜ್ಞಾನಪ್ರಭನೆಂದು ಕರೆದರು. ಅವನು ವಿಕ್ರಮಶೀಲ ವಿಹಾರದಿಂದ ಆಚಾರ್ಯ ಅತೀಶನನ್ನು (ದೀಪಂಕರ ಶ್ರೀಜ್ಞಾನ) ತನ್ನ ದೇಶಕ್ಕೆ ಕರೆಸಿಕೊಂಡು ಅವನು ಮೂಲಕ ಬೌದ್ಧಮತ ಪ್ರಚಾರ ಮಾಡಿಸಿದ. ಕಾಲಾಂತರದಲ್ಲಿ ಅವನೂ ಅವನ ಇಬ್ಬರು ಮಕ್ಕಳು ಬೌದ್ಧಭಿಕ್ಷುಗಳಾದರು.

ಅತೀಶ ಟಿಬೆಟ್ಟಿಗೆ ಬಂದಮೇಲೆ ಟಿಬೆಟ್ಟಿನಲ್ಲಿ ಅನೇಕ ಬೌದ್ಧಶಾಖೆಗಳು ಬೆಳೆದವು. ಟಿಬೆಟ್ಟಿನ ಹಳೆಯ ಕಾಲದ ರಿನ್ನಿಣ್-ಮ್-ಪ ಎಂಬ ಬೌದ್ಧಸಂಘದವರು ದೇವತೆಗಳನ್ನೂ ದುಷ್ಟಶಕ್ತಿಗಳನ್ನೂ ಪೂಜಿಸುತ್ತಿದ್ದರು. ಅತೀಶ ಆ ಸಂಘದ ಧರ್ಮವನ್ನು ಯೋಗಾಚಾರ ತತ್ತ್ವಕ್ಕನುಗುಣವಾಗಿ ಮಾರ್ಪಡಿಸಿದ. ಅದಕ್ಕೆ ಅವನ ಶಿಷ್ಯ ಹಬ್ರೋಮ್-ಸ್ಟನ್ ಬ್ಕಾಆಹ್-ಗ್ಡಮ್ಸ್-ಪ ಎಂಬ ಹೆಸರನ್ನು ಕೊಟ್ಟ. ಅಲ್ಲಿಂದ ಮುಂದೆ ಟಿಬೆಟ್ಟಿನ ಬೌದ್ಧರಲ್ಲಿ ಮಂತ್ರಮಾಟಗಳ ಆಚರಣೆ ಕುಗ್ಗಿತು. ಬ್ಕಆಹ್-ಗ್ಡಮ್ಸ್-ಪ ಸಂಪ್ರದಾಯದವರು ಅನುಸರಿಸುತ್ತಿದ್ದ ಅನೇಕ ಆಡಂಬರದ ಸಂಸಾರಗಳನ್ನು ಟ್ಸೋನ್-ಖ-ಪ (14ನೆಯ ಶತಮಾನ) ಎಂಬ ಸುಧಾರಕ ಸರಳಗೊಳಿಸಿದ. ಇವನು ಸ್ಥಾಪಿಸಿದ ಸಂಪ್ರದಾಯವೇ ಟಿಬೆಟ್ಟಿನ ಪ್ರಧಾನ ಸಂಪ್ರದಾಯವಾಯಿತು. ಅದನ್ನು ಟಿಬೆಟ್ಟಿನ ಧಾರ್ಮಿಕ ಹಾಗೂ ರಾಜಕೀಯ ಮುಖಂಡರಾದ ದಲೈ ಲಾಮಾಗಳು ಎತ್ತಿಹಿಡಿದರು. ಮಿ-ಲ-ರಸ್-ಪ ಎಂಬ ಟಿಬೆಟ್ಟಿನ ಪ್ರಸಿದ್ಧ ಕವಿ ಚೀನೀಯರ ಧಾನ್ಯಬೌದ್ಧ ತತ್ತ್ವದಿಂದ ಸ್ಫೂರ್ತಿಪಡೆದು ಬ್ಕಆಹ್-ರಗ್ಯುಡ್ಡ್-ಪ ಎಂಬ ಬೌದ್ಧಶಾಖೆಯನ್ನು ಬಲಪಡಿಸಿದ. ಕಾಲಾಂತರದಲ್ಲಿ ಈ ಶಾಖೆ ಒಡೆದು ಕರ್ಮಪ್ರಧಾನವಾದ ಕರ್ಮ-ಪ ಮತ್ತು ಧಾನ್ಯಪ್ರಧಾನವಾದ ಹಬ್ರುಗ್-ಪ ಎಂಬ ಎರಡು ಶಾಖೆಗಳಾದವು. ಬಸ್ಟನ್ (1290-1364) ಎಂಬ ಪ್ರಖ್ಯಾತ ವಿದ್ವಾಂಸ ಮುಖ್ಯವಾದ ಬೌದ್ಧಧರ್ಮಗ್ರಂಥಗಳ ಮೇಲೆ ಭಾಷ್ಯಗಳನ್ನು ಬರೆದುದಲ್ಲದೆ ಅದುವರೆಗೆ ಭಾಷಾಂತರವಾಗಿದ್ದ ಬುದ್ಧನ ವಚನಗಳಗೆ ಸಂಬಂಧಪಟ್ಟ ನೂರು ಸಂಪುಟಗಳನ್ನು ಬ್ಕ ಆಹ್-ಹ್ಗಯೂರ್ ಎಂದೂ ಉಳಿದ ಇನ್ನೂರ ಇಪ್ಪತ್ತೈದು ಸಂಪುಟಗಳನ್ನು ಬ್ಸಟನ್-ಹಯೂರ್ ಎಂದೂ ಕರೆದ. ಇವು ಇಂದಿಗೂ ಬೌದ್ಧಧರ್ಮ ಪ್ರಮಾಣಸಾಹಿತ್ಯವಾಗಿ ಉಳಿದಿವೆ.

ಟ್ಸೋನ್-ಬ-ಪ (1358) ಎಂಬ ಸುಧಾರಕ ಟಿಬೆಟ್ಟಿನ ಆಧುನಿಕ ಬೌದ್ಧ ಶಾಖೆಯ ಜನಕ. ಅವನು ಸ್ಥಾಪಿಸಿದ ಶಾಖೆಗೆ ಡ್ಗೆ-ಲಗ್ಸ್-ಪ (ಸತ್ ಚಾರಿತ್ರ್ಯ ಶಾಖೆ) ಎಂದು ಹೆಸರು. ಈ ಶಾಖೆಯವರು ಸತ್ ಚಾರಿತ್ರ್ಯವೇ ಬೌದ್ಧ ಧರ್ಮದ ಪ್ರಾಣವೆಂದು ಭಾವಿಸಿದರು. ಟ್ಸೋನ್-ಖ-ಪ 1408ರಲ್ಲಿ ಲಾಸ ಸಮಿಪದಲ್ಲಿ ಸುಪ್ರಸಿದ್ಧ ಗನ್‍ಡೆನ್ ಸಂನ್ಯಾಸಿಮಠವನ್ನು ಸ್ಥಾಪಿಸಿದ. ಅನಂತರದಲ್ಲಿ ಲಾಸದ ಬಳಿ ಅಷ್ಟೇ ಪ್ರಸಿದ್ಧವಾದ ಡೇಪಂಗ್ ಮತ್ತು ಸೆರ ಮಠವೂ ಟ್ಸಾಂಗ್ ಪ್ರಾಂತ್ಯದಲ್ಲಿ ಟಷಿ-ಲ್ಹುಂಪೊ ಎಂಬ ಮಠವೂ ಅವನ ಶಿಷ್ಯರಿಂದ ಸ್ಥಾಪಿತವಾದವು. ಈ ಮಠಗಳು ಮಂಗೋಲಿಯ ಮತ್ತು ಸೈಬಿರಿಯ ಪ್ರಾಂತಗಳಲ್ಲಿ ಬೌದ್ಧಮತವನ್ನು ಪ್ರಚಾರ ಮಾಡಿದುವು. ಮೊದಲಲ್ಲಿ ಕೆಲವು ಪ್ರಾಂತಗಳಿಗೆ ಮಾತ್ರ ದಲೈ-ಲಾಮಾ ಮಠಾಧ್ಯಕ್ಷನಲ್ಲದೆ ರಾಜಕೀಯ ಅಧ್ಯಕ್ಷನೂ ಆಗಿದ್ದ. ಮಂಗೋಲಿಯದ ರಾಜ ಗುಸ್ರಿ ಖಾನ್ ಐದನೆಯ ದಲೈ-ಲಾಮಾನನ್ನು(1615-1680) ಇಡೀ ಟಿಬೆಟ್ಟಿನ ರಾಷ್ಟ್ರಾಧ್ಯಕ್ಷನೆಂದು ಘೋಷಿಸಿದ. ಅಲ್ಲಿಂದ ಮೊನ್ನೆಮೊನ್ನೆಯವರೆಗೂ ದಲೈ-ಲಾಮಾಗಳು ಟಿಬೆಟ್ಟಿನ ರಾಷ್ಟ್ರಾಧ್ಯಕ್ಷರಾಗಿದ್ದರು. (ಜಿ.ಎಚ್.)