ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೆಕ್ಟೈಟ್

ವಿಕಿಸೋರ್ಸ್ದಿಂದ

ಟೆಕ್ಟೈಟ್ ಬೋಹೀಮಿಯ ಪ್ರಾಂತದ ತೃತೀಯ ಭೂಕಾಲಯುಗದ ಉತ್ತರಾರ್ಧ ಮತ್ತು ವರ್ತಮಾನ ಕಾಲದ ನೊರಜು ಮತ್ತು ಮೆಕ್ಕಲು ನಿಕ್ಷೇಪಗಳಲ್ಲಿ ದೊರೆಯುವ ಚಂಡು ಅಥವಾ ಗುಂಡಿಯಾಕಾರದ, ಅತ್ಯಧಿಕ ಸಿಲಿಕಾಂಶವಿರುವ ಗಾಜುಕಲ್ಲು. ಪ್ರಪಂಚದ ಕೆಲವೇ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದೆ ಮತ್ತು ಇದಕ್ಕೆ ಒಂದೊಂದು ಪ್ರದೇಶದಲ್ಲಿ ಒಂದೊಂದು ಹೆಸರು ಉಂಟು. ಬೋಹೀಮಿಯ ಪ್ರಾಂತದಲ್ಲಿ ಇದಕ್ಕೆ ಮೊಲ್ಡವೈಟ್ ಎಂದೂ ಮಲಯದಲ್ಲಿ ಬಿಲ್ಲಿಟೊನೈಟ್ ಎಂದೂ ಆಸ್ಟ್ರೇಲಿಯದಲ್ಲಿ ಆಸ್ಟ್ರೇಲೈಟುಗಳು ಅಥವಾ ಅಬಿಸಡಿನೈಟುಗಳು ಎಂದೂ ಅಮೆರಿಕ ಸಂಯುಕ್ತಸಂಸ್ಥಾನಗಳ ಟೆಕ್ಸಾಸ್ ಪ್ರಾಂತದಲ್ಲಿ ಬೆಡಿಯಸೈಟ್ ಎಂದೂ ಹೆಸರಿದೆ. ಟಾಸ್ಮೇನಿಯದ ಡಾರ್ವಿನ್ ಪರ್ವತ ಪ್ರದೇಶದಲ್ಲಿ ಅಪೂರ್ವ ಬಗೆಯ ಟೆಕ್ಟೈಟ್ ದೊರಕಿದೆ. ಇದಕ್ಕೆ ಡಾರ್ವಿನ್ ಗಾಜು ಅಥವಾ ಕ್ವೀನ್‍ಸ್ಟೊನೈಟ್ ಎಂದು ಹೆಸರು. ಸ್ವೀಡನ್ ಮತ್ತು ದಕ್ಷಿಣ ಅಮೆರಿಕದ ಕೊಲಂಬಿಯಗಳಲ್ಲಿಯೂ ಟೆಕ್ಟೈಟ್ ಇರುವುದು ವರದಿಯಾಗಿದೆ.

ಮೊಲ್ಡವೈಟುಗಳು ಚಪ್ಪಟೆಯಾಗಿಯೂ ಗೋಳ ಅಥವಾ ಅಂಡಾಕಾರವಾಗಿಯೂ ಇವೆ. ಇವುಗಳ ಬಣ್ಣ ಅಚ್ಚಹಸಿರು, ಮೇಲ್ಮೈ ಗುಳಿಗಳಿಂದ ಕೂಡಿದೆ ಇಲ್ಲವೆ ಸುಕ್ಕುಗಟ್ಟಿರುತ್ತದೆ. ಆಸ್ಟ್ರೇಲೈಟುಗಳಿಗೆ ಗೋಡಂಬಿ ಅಥವಾ ಗುಂಡಿ ಆಕಾರ ಉಂಟು. ಇವುಗಳಿಗೆ ಚಾಚು ಕಂಠಗಳಿವೆ. ಇವು ವೊಲ್ಡವೈಟುಗಳಿಗಿಂತ ಗಾಢ ಬಣ್ಣದವು ಹಾಗೂ ಅಲ್ಪ ಪಾರಕ ಗುಣವುಳ್ಳವು. ಬಿಲ್ಲಿಟೊನೈಟುಗಳು ದೊರೆಯುವ ರೀತಿ, ಬಣ್ಣ ಮುಂತಾದ ವಿಷಯಗಳಲ್ಲಿ ಮೊಲ್ಡವೈಟುಗಳಿಗಿಂತ ಆಸ್ಟ್ರೇಲೈಟುಗಳನ್ನೇ ಹೆಚ್ಚು ಹೋಲುತ್ತವೆ.

ಆಬ್ಸಿಡಿಯನುಗಳಲ್ಲಿರುವಷ್ಟೆ ಸಿಲಿಕಾಂಶ ಟಿಕ್ಟೈಟುಗಳಲ್ಲಿಯೂ ಇರುವುದು. ಆದರೆ ಕಬ್ಬಿಣ ಮತ್ತು ಮೆಗ್ನೀಸಿಯಮುಗಳು ಹೆಚ್ಚು ಪ್ರಮಾಣದಲ್ಲಿರುವುವು. ಸುಣ್ಣ ಮತ್ತು ಪೊಟ್ಯಾಸಿಯಮುಗಳ ಪ್ರಮಾಣ ಸೋಡಿಯಮಿಗಿಂತ ಅತಿ ಹೆಚ್ಚು. ಟೆಕ್ಟೈಟುಗಳಲ್ಲಿ ಸ್ಫಟಿಕೀಕರಣದ ಪ್ರಾರಂಭ ಕೂಡ ಇಲ್ಲವೆಂದು ಹೇಳಬಹುದು. ಈ ಎಲ್ಲ ಲಕ್ಷಣಗಳಿಂದ ಇವನ್ನು ಆಬ್ಸಿಯನ್, ರಯಲೈಟು, ಟ್ರ್ಯಾಕೈಟ್ ಮುಂತಾದ ಜ್ವಾಲಾಮುಖಿಜ ಶಿಲೆಗಳಿಂದ ಗುರುತಿಸಬಹುದು. ಟೆಕ್ಟೈಟುಗಳು ಸಿಡಿಲು ಮಿಂಚುಗಳ ಪರಿಣಾಮವಾಗಿ ಧೂಳುಕಣಗಳು ಕರಗಿ ಒಂದುಗೂಡುವುದರ ಮೂಲಕ ಆದಂಥವು. ಇವು ಸಿಡಿಲುಗಲ್ಲುಗಳು ಎಂದೇ ಒಂದು ಅಭಿಪ್ರಾಯವಿದೆ. ಆದರೆ ಈ ಅಭಿಪ್ರಾಯವನ್ನು ಪುಷ್ಟೀಕರಿಸುವ ಪುರಾವೆಗಳು ದೊರೆತಿಲ್ಲ. ಉಲ್ಕೆಗಳು ಚಂದ್ರನ ಮೇಲೆ ಅಪ್ಪಳಿಸಿದಾಗ ಒಡೆದ ಚೂರುಗಳಿವು ಎಂಬುದು ಮತ್ತೊಂದು ಅಭಿಪ್ರಾಯ. ಟೆಕ್ಟೈಟುಗಳ ರಾಸಾಯನಿಕ ಸಂಯೋಜನೆ ಕಬ್ಬಿಣ ಉಲ್ಕೆ ಅಥವಾ ಶಿಲಾಉಲ್ಕೆಗಳಿಗಿಂತ ಬಹಳ ವ್ಯತ್ಯಾಸವಿದೆ. ಆದರೆ ಈ ಅಭಿಪ್ರಾಯಕ್ಕೆ ಉಳಿದೆಲ್ಲ ಅಭಿಪ್ರಾಯಗಳಿಗಿಂತ ಇರುವ ಅಭ್ಯಂತರ ಕಡಿಮೆ. (ಡಿ.ಆರ್.)