ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೆಲ್ ಅವೀವ್ - ಜ್ಯಾಫ

ವಿಕಿಸೋರ್ಸ್ದಿಂದ

ಟೆಲ್ ಅವೀವ್ - ಜ್ಯಾಫ

ಇಸ್ರೇಲಿನ ಅತ್ಯಂತ ದೊಡ್ಡ ಪಟ್ಟಣ ಜೆರೂಸಲೆಮಿನ ವಾಯುವ್ಯಕ್ಕೆ 35 ಮೈ. ದೂರದಲ್ಲಿ ಮೆಡಿಟರೇನಿಯನ್ ಸಮುದ್ರದ ದಂಡೆಯ ಮೇಲಿದೆ. ಜನಸಂಖ್ಯೆ 3,84,000 (1970). 1909ರಲ್ಲಿ ಜ್ಯಾಫ ಪಟ್ಟಣದ ವಿಸ್ತರಣೆಯಾಗಿ ಟೆಲ್ ಅವೀವನ್ನು ಸ್ಥಾಪಿಸಲಾಯಿತು. ಬಹು ಬೇಗ ಈ ನಗರ ಬೆಳೆದು, 1921ರಲ್ಲಿ ಜ್ಯಾಫಕ್ಕೆ ಅಧೀನವಾದ ಪುರಸಭೆಯನ್ನು 1934ರಲ್ಲಿ ಸ್ವತಂತ್ರ ಪುರಸಭೆಯನ್ನೂ ಪಡೆಯಿತು. ಬಂದರಾಗಿ, ಕೈಗಾರಿಕಾ ನಗರವಾಗಿ ಬೆಳೆದ ಟೆಲ್ ಅವೀವ್ ಕ್ರಮೇಣ ಮುಖ್ಯನಗರವಾಗಿ ಬೆಳೆಯಿತು. ಇಸ್ರೇಲಿನ ಹಂಗಾಮಿ ರಾಜಧಾನಿಯಾಗಿ (1948-50) ಇದು ಆಯ್ಕೆಯಾದಾಗ ಇದರ ಮಹತ್ವ ಇನ್ನೂ ಹೆಚ್ಚಿತು. ಅನಂತರ ಇದೇ ಪ್ರಧಾನ ನಗರವಾಗಿ, ಜ್ಯಾಫವನ್ನು ಇದೆಕ್ಕೆ ಸೇರಿಸಲಾಯಿತು (1949).

ನಗರದ ಸುತ್ತಣ ಪ್ರದೇಶವನ್ನು ವ್ಯವಸಾಯಕ್ಕಾಗಿ ಉತ್ತಮಪಡಿಸಲಾಗಿದೆ. ಇಲ್ಲಿ ಗೋದಿ, ತರಕಾರಿಗಳು, ಕಿತ್ತಳೆ, ಕಲ್ಲಂಗಡಿ ಮುಂತಾದವನ್ನು ಹೇರಳವಾಗಿ ಬೆಳೆಯುತ್ತಾರೆ. ಕುರಿಸಾಕಣಿಕೆಯೂ ಹೆಚ್ಚಾಗಿದೆ. ಮೀನುಗಾರಿಕೆ ಸ್ಥಳೀಯ ಉದ್ಯಮವಾಗಿ ಬೆಳೆದಿದೆ. ಟೆಲ್ ಅವೀವ್‍ನಲ್ಲಿ ಹೊಸ ಬಂದರು ನಿರ್ಮಾಣವಾದ ಮೇಲೆ ನಗರದ ಪ್ರಾಮುಖ್ಯ ಹೆಚ್ಚಾಯಿತು. ಆದರೆ ಹೈಫದಲ್ಲಿ ಇನ್ನೂ ದೊಡ್ಡ ಬಂದರು ನಿರ್ಮಾಣವಾದಮೇಲೆ ವಾಣಿಜ್ಯದೃಷ್ಟಿಯಿಂದ ಇದರ ಬೆಲೆ ಕಡಿಮೆಯಾಯಿತು.

ಇಂದು ಟೆಲ್ ಅವೀವ್-ಜ್ಯಾಫ ಒಂದು ದೊಡ್ಡ ನಗರ. ನಗರದ ದಕ್ಷಿಣ ಭಾಗದಲ್ಲೇ ಹೆಚ್ಚಾಗಿ ಕೈಗಾರಿಕಾ ಸ್ಥಾವರಗಳು. ವಾಣಿಜ್ಯೋದ್ಯಮ ಸಂಸ್ಥೆಗಳು ಇವೆ. ಉತ್ತರಭಾಗ ಸುಂದರವಾದ ಆಧುನಿಕ ವಸತಿಗೃಹಗಳಿಂದ ಕೂಡಿದ ಪ್ರದೇಶವಾಗಿದೆ. ಇಸ್ರೇಲಿನ ಅನೇಕ ರಾಷ್ಟ್ರಿಯ ಸಂಸ್ಥೆಗಳು ಇರುವುದು ಇಲ್ಲೇ. ಇಲ್ಲಿಯ ಸುಂದರ ಕಡಲದಂಡೆ ಮತ್ತಿತರ ಆಕರ್ಷಣೆಗಳಿಂದಾಗಿ ಈಗ ಇದು ಪ್ರವಾಸಿಕೇಂದ್ರವಾನಿ ಬೆಳೆದಿದೆ.

ಟೆಲ್ ಎಲ್ ಅಮಾರ್ನ : ಕ್ರಿ.ಪೂ. 1375ರಲ್ಲಿ ಈಜಿಪ್ಟಿನ ದೊರೆ 4ನೆಯ ಆಮೆನ್ ಹೋಟೆಪ್ (ಆಖೆನಾಟನ್) ಕಟ್ಟಿಸಿದ ರಾಜಧಾನಿ ಆಖೆನಾಟನ್ ನಗರದ ಅವಶೇಷಗಳ ನಿವೇಶನ. ಕೈರೋದ ದಕ್ಷಿಣಕ್ಕೆ 190 ಮೈ. ದೂರದಲ್ಲಿ ನೈಲ್ ನದಿಯ ಪೂರ್ವತೀರದಲ್ಲಿದೆ. ಸೂರ್ಯದೇವತೆಯನ್ನು (ಅಟಾನ್) ಆರಾಧಿಸುವ ಹೊಸ ಮತಹೊಂದರ ಪ್ರವರ್ತಕನಾದ ಆಮೆನ್ ಹೋಟೆಪ್, ಅದಕ್ಕೆ ಅನುಗುಣವಾಗಿ ತನ್ನ ಹೆಸರನ್ನು ಆಖೆನಾಟನ್ ಎಂದು ಬದಲಾಯಿಸಿಕೊಂಡು, ರಾಜಧಾನಿಯನ್ನು ತೀಬ್ಸಿನಿಂದ ಅಮಾರ್ನಕ್ಕೆ ಬದಲಾಯಿಸಿದ. ಆತನ ಹೊಸ ರಾಜಧಾನಿಗೂ ಆಖೆನಾಟನ್ ಎಂದು ಹೆಸರಾಯಿತು. ಅಲ್ಲಿ ಅವನು 15 ವರ್ಷಗಳ ಕಾಲ ಆಡಳಿತ ನಡೆಸಿ ಮರಣಹೊಂದಿದ. ಜನ ಮತ್ತೆ ಹಳೆಯ ಮತದ ಅನುಯಾಯಿಗಳಾದರು. ಮತ್ತೆ ತೀಬ್ಸ್ ರಾಜಧಾನಿಯಾಯಿತು. ಹೊಸ ರಾಜಧಾನಿ ಪಾಳುಬಿತ್ತು.

ಈ ಪ್ರದೇಶದಲ್ಲಿ ಈಚೆಗೆ ನಡೆದ ಉತ್ಕನನಗಳಲ್ಲಿ ಅರಮನೆಗಳ. ದೇವಾಲಯಗಳ, ವಸತಿಗಳ ಅವಶೇಷಗಳೂ ಮೂರ್ತಿಶಿಲ್ಪಗಳೂ ದೊರಕಿವೆ. ಅನೇಕ ಭಿತ್ತಿಚಿತ್ರಗಳು ಮತ್ತು ಅಲಂಕೃತ ಹಜಾರಗಳನ್ನು ಒಳಗೊಂಡ ಇಲ್ಲಿಯ ಅರಮನೆಯ ಮತ್ತು ಗ್ರಂಥಾಗಾರದ ಅವಶೇಷಗಳು ಬಹಳ ಪ್ರಸಿದ್ದವಾದವು. ಆ ಕಾಲದ ಪಟ್ಟಣಗಳ ವಿನ್ಯಾಸ, ಕಟ್ಟಡ ರಚನೆ, ಶಿಲ್ಪ ಮತ್ತು ಚಿತ್ತಕಲೆಗಳಿಗೆ ಅಮಾರ್ನ ಒಂದು ಒಳ್ಳೆಯ ನಿದರ್ಶನ. ಕ್ಯೂನಿಫಾರಂ ಲಿಪಿಯಲ್ಲಿ ಬರೆಯಲಾದ ಸು. 300 ಜೇಡಿಮಣ್ಣಿನ ಫಲಕಗಳು ಇಲ್ಲಿಯ ಗ್ರಂಥಾಗಾರದಲ್ಲಿ ಸಿಕ್ಕಿವೆ. ಬ್ಯಾಬಿಲೋನಿಯ, ಅಸ್ಸೀರಿಯ ಮತ್ತು ಈಜಿಪ್ಟನ ಬೇರೆ ಬೇರೆ ಭಾಗಗಳ ಅಧಿಕಾರಿಗಳು ಆಖೆನಾಟನ್ ಮತ್ತು ಆತನ ತಂದೆಗೆ ಬರೆದ ಪತ್ರಗಳು ಇವು. ಆಗಿನ ಕಾಲದ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಪರಿಸ್ಥಿತಿಯ ಬಗ್ಗೆ ಇವು ಹೆಚ್ಚಿನ ಮಾಹಿತಿಯನ್ನು ಒದಗಿಸುತ್ತವೆ. ಈಜಿಯನ್ ಪ್ರದೇಶಗಳೊಡನೆ ಈಜಿಪ್ಟು ಹೊಂದಿದ್ದ ಸಂಪರ್ಕದ ಅರಿವು ಇಲ್ಲಿ ದೊರಕಿಸುವ ವರ್ಣಚಿತ್ತಗಳಿಂದ ಉಂಟಾಗುತ್ತದೆ. ಆ ಕಾಲದ ಮೂರ್ತಿಶಿಲ್ಪ ನೈಜ ಸರಳ ಸೌಂದರ್ಯದಿಂದ ಕೂಡಿದ್ದು. ಅದರಲ್ಲಿ, ಈಜಿಪ್ಟಿನ ಪರಂಪರಾಗತ ಶೈಲಿಯನ್ನು ಕಡೆಗಣಿಸಲಾಗಿದೆ. ಅಮಾರ್ನದ ಚಿತ್ರಗಳಿಗೆ ಈಜಿಪ್ಟಿನ್‍ಯ ಚಿತ್ರಕಲೆಯ ಇತಿಹಾಸದಲ್ಲಿ ವಿಶಿಷ್ಟ ಸ್ಥಾನವುಂಟು.

ಅಮಾರ್ನದ ಬಳಿ ಬಂಡೆಗಲ್ಲಿನಲ್ಲಿ ಕೊರೆದ ಸಮಾಧಿಗಳೂ ಪತ್ತೆಯಾಗಿವೆ. ಸೂರ್ಯದೇವನ ಮುಖ್ಯ ಅರ್ಚಕ ಮೆರಿ-ರಾ ಎಂಬಾತನ ಸಮಾಧಿ ಇವುಗಳಲ್ಲಿ ಒಂದು, ಕಾಪ್ಟ್ ಜನ (ಪ್ರಾಚೀನ ಈಜಿಪ್ಷಿಯನರ ವಂಶಜರು; ಮುಖ್ಯವಾಗಿ ಕಾಪ್ಟಿಕ್ ಚರ್ಚಿನವರು) ಈ ಸಮಾಧಿಗಳಲ್ಲಿ ವಾಸಮಾಡುತ್ತಿದ್ದರು. ಅವರು ಇಲ್ಲಿಯ ಒಂದು ಸಮಾಧಿಯನ್ನು ಚರ್ಚ ಆಗಿ ಪರಿವರ್ತಿಸಿಕೊಡಿದ್ದರು. ಉತ್ಖನನದಲ್ಲಿ ಗುರುತಿಸಲಾದ ಒಂದು ಮನೆ ಒಬ್ಬ ಶಿಲ್ಪಿಯದು. ಅದರಲ್ಲಿ ಅನೇಕ ಮುಖವಾಡಗಳು ದೊರಕಿವೆ. ಆಖೆನಾಟನನ ರಾಣಿ ನೆಫರ್‍ಟಿಟಿಯ ಮುಖವಾಡ ಅವುಗಳಲ್ಲಿ ಒಂದು. ಅದು ಆ ಕಾಲದ ಶಿಲ್ಪಕಲಾ ಚಾತುರ್ಯದ ಉತ್ತಮ ನಿದರ್ಶನ. (ನೋಡಿ- ಜಾಪ) (ಎಸ್.ಎನ್.; ಬಿ.ಕೆ.ಜಿ.)