ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಗಸ್

ವಿಕಿಸೋರ್ಸ್ದಿಂದ

ಟೇಗಸ್ - ಸ್ಟೇನ್ ಮತ್ತು ಪೋರ್ಚುಗಲ್‍ಗಳಲ್ಲಿ ಹರಿಯುವ ನದಿ. ಐಬೀರಿಯನ್ ಪರ್ಯಾಯದ್ವೀಪದಲ್ಲಿ ಅತ್ಯಂತ ಉದ್ದವಾದ್ದು (625 ಮೈ. [1,006 ಕಿಮೀ.]). ಪೂರ್ವ ಮಧ್ಯ ಸ್ಪೇನಿನಲ್ಲಿ, ಮೆಡಿಟರೇನಿಯನ್ ಸಮುದ್ರದಿಂದ 110 ಮೈ. (177 ಕಿಮೀ.) ದೂರದಲ್ಲಿ, ಮಡ್ರಿಡ್‍ನಿಂದ 80 ಮೈ. ಪೂರ್ವಕ್ಕೆ, ಉಗಮಿಸಿ, ಮಧ್ಯ ಸ್ಪೇನಿನಲ್ಲಿ ಪಶ್ಚಿಮಾಭಿಮುಖವಾಗಿ ಪೋರ್ಚುಗೀಸ್ ಗಡಿಯ ಬಳಿಗೆ ಹರಿದು, ಸ್ಪೇನ್ ಪೋರ್ಚುಗಲ್‍ಗಳ ಗಡಿಯ ಮೇಲೇಯೇ ಸು.25 ಮೈ. ಸಾಗಿ, ಅನಂತರ ನೈಋತ್ಯದ ಕಡೆಗೆ ತಿರುಗಿ ಮುಂದುವರಿದು ಲಿಸ್ಬನ್ ಬಳಿಯಲ್ಲಿ ಅಟ್ಲಾಂಟಿಕ್ ಸಾಗರವನ್ನು ಸೇರುತ್ತದೆ. ಅದರ ಜಲಾಯನ ಪ್ರದೇಶದ ವಿಸ್ತೀರ್ಣ 31,159 ಚ.ಮೈ. (80,701) ಚ.ಕಿಮೀ.). ಇದರ ಮುಖ್ಯ ಉಪನದಿಗಳೆಲ್ಲ ಉತ್ತರದಿಂದ ಬಂದು ಸೇರುತ್ತವೆ. ಪರ್ವತಗಳಿಂದ ಇಳಿದು ಬರುವ ಇವುಗಳಿಂದ ಟೇಗಸ್ ನದಿಯಲ್ಲಿ ಪದೇಪದೇ ಅತಿಯಾದ ಪ್ರವಾಹ ಸಂಭವಿಸುತ್ತದೆ. ಟೇಗಸ್ ನದಿಯ ಮೇಲ್ದಂಡೆಯಲ್ಲಿ. ಅದನ್ನು ಸೇರುವ ಅತ್ಯಂತ ದೊಡ್ಡ ಉಪನದಿ ಹರಾಮ. ಸ್ಪೇನ್-ಪೋರ್ಚುಗಲ್ ಬಳಿ ಉತ್ತರ ದಂಡೆಯಲ್ಲಿ ಅದನ್ನು ಸೇರುವ ಉಪನದಿ ಆಲಗಾನ್ ಕಾನ್‍ಸ್ಟಾನ್ಷಿಯದ ಬಳಿ ಸಂಗಮಿಸುವ ಜೆಜರ ಇದರ ಅತ್ಯಂತ ದೊಡ್ಡ ಉಪನದಿ. ಪ್ರವಾಹಕಾಲದಲ್ಲಿ ಟೇಗಸ್ ನದಿ ಅಗಾಧ ಜಲರಾಶಿಯಿಂದ ಕೂಡಿರುತ್ತದೆ. 1876 ರ ಡಿಸೆಂಬರಿನಲ್ಲಿ ಇದರಲ್ಲಿ ಸೆಕಂಡಿಗೆ 15,850 ಘ.ಮೀ. ನೀರು ಹರಿಯುತ್ತಿತ್ತು. ಯೂರೋಪಿನ ನದಿಗಳಲ್ಲಿ ಯಾವುದರಲ್ಲೂ ಎಂದೂ ಇಷ್ಟೊಂದು ಎಂದೂ ಹರಿವು ಇಲ್ಲದ್ದು ಇದರ ವಿಕ್ರಮ.

ಸ್ಪೇನಿನಲ್ಲಿ ಟೇಗಸ್ ನದಿಗೆ ಒಂದು ಕಟ್ಟೆಯನ್ನೂ ಅದರ ಉಪನದಿಗಳಿಗೆ 19 ಕಟ್ಟೆಗಳನ್ನೂ ಕಟ್ಟಲಾಗಿದೆ. ಇವುಗಳಿಂದ ಉತ್ಪತ್ತಿಯಾಗುವ ವಿದ್ಯುಚ್ಛಕ್ತಿ 59,16,00,000 ಕಿವಾಗಂ. ಗ್ವಾಡೀಲ ನದಿಗೆ ಕಟ್ಟಲಾದ ಕಟ್ಟೆಯೊಂದರಲ್ಲೆ ಇದರಲ್ಲಿ ಅರ್ಧದಷ್ಟು ಉತ್ಪತಿಯಾಗುತ್ತದೆ. ಈ ಕಟ್ಟೆಗಳಿಂದ 7,00,000 ಎಕರೆಗಳಿಗೆ (28,000 ಹೆಕ್ಟೇರ್) ನೀರಾವರಿ ಸೌಲಭ್ಯ ಒದಗಿದೆ. ಅಂತಿಮವಾಗಿ ಈ ವ್ಯವಸ್ಥೆಗೆ ಒಳಪಡುವ ಜಮೀನು 7,00,000 ಎಕರೆ. ನದಿಯ ಮೇಲೆ ಪಶ್ಚಿಮ ಮಧ್ಯ ಪೋರ್ಚುಗಲ್ಲಿನಲ್ಲಿರುವ ಸ್ಯಾಂತರೆಮ್ ಪಟ್ಟಣದ ವರೆಗೂ ನೌಕಸಾರಿಗೆ ಸಾಧ್ಯ. ನದಿಯ ಪ್ರವಾಹ ಅನುಕೂಲವಾಗಿರುವಾಗ ವಿಲಾ ವೆಲ್ಹಾ ಡೇ ರೊಡಾವೋ ವರೆಗೊ ಸಣ್ಣ ದೋಣಿಗಳು ಹೋಗಿ ಬರಬಹುದು. ಲಿಸ್ಬನ್ ಬಳಿ ನದಿಯ ಅಳಿವೆ 3 ಮೈ. ಅಗಲವಾಗಿದೆ.