ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಬಲ್ ಪರ್ವತ

ವಿಕಿಸೋರ್ಸ್ದಿಂದ

ಟೇಬಲ್ ಪರ್ವತ - ದಕ್ಷಿಣ ಆಫ್ರಿಕದಲ್ಲಿ ಕೇಪ್ ಟೌನಿಗೆ ದಕ್ಷಿಣದಲ್ಲಿ ಮೇಜಿನಂತಿರುವ ಚಪ್ಪಟೆ ತಲೆಯ ಪರ್ವತ. ಎತ್ತರವಾದ ಬಂಡೆಗಳಿಂದ ಕೂಡಿದ ಕೇಪ್ ಪರ್ಯಾಯ ದ್ವೀಪದ ಉತ್ತರ ತುದಿ. ಇದರ ಮರಳುಗಲ್ಲಿನ ಗಟ್ಟಿಯಾದ ಮತ್ತು ದಟ್ಟವಾದ ಬಂಡೆಯಿಂದಾಗಿ ಇದಕ್ಕೆ ಮೇಜಿನ ಆಕಾರ ಬಂದಿದೆ. ನೀರಿನ ಹಾಗೂ ಗಾಳಿಯ ತೀವ್ರ ಕೊರತೆಯಿಂದ ಇದರ 3.22ಕಿ.ಮೀ ಉದ್ದದ ಉತ್ತರಮುಖ ಗೋಡೆಯಂತೆ ಕಡಿದಾಗಿ ಪರಿಣಮಿಸಿದೆ. ಈ ಪರ್ವತ ಪ್ರಸ್ಥಭೂಮಿಯ ಎತ್ತರ ಸುಮಾರು 1,065ಮೀ. ಇದರ ಹಿಂಬದಿಯಲ್ಲಿ ಅಲ್ಲಲ್ಲಿ ಆಳವಾಗಿ ಕತ್ತರಿಸಲ್ಪಟ್ಟ ಸ್ವಲ್ಪ ತಗ್ಗಿನ ಪ್ರಸ್ಥಭೂಮಿಯ ಇದೆ. ಟೇಬಲ್ ಪರ್ವತದ ಅತ್ಯುನ್ನತ ಸ್ಥಳ ಮ್ಯಾಕ್ಲಿಯರ್ ಬೀಕನ್ 1,087 ಮೀ. ಭೂಸವೆತದಿಂದಾಗಿ ಮುಖ್ಯ ಪರ್ವತಭಾಗದಿಂದ ಪ್ರತ್ಯೇಕವಾಗಿರುವ ಎರಡು ಶಿಖರಗಳಲ್ಲಿ ಒಂದು ಡೆವಿಲ್ಸ್ ಶಿಖರ 997ಮೀ ಇದು ಈಶಾನ್ಯದಲ್ಲಿದೆ. ವಾಯುವ್ಯಕ್ಕಿರುವುದು ಲೈಯನ್ ಹೆಡ್ ಶಿಖರ 664ಮೀ.

ಟೇಬಲ್ ಪರ್ವತದ ಮೇಲೆ ಬೀಸುವ ಆಗ್ನೇಯ ಮಾರುತಗಳು ತರುವ ಹಸಿರು ಮಿಶ್ರಿತ ಬಿಳಿ ಮೋಡಗಳು ಪರ್ವತಾಗ್ರವನ್ನೂ ಪೂರ್ವದ ಬದಿಯನ್ನು ಆಗಾಗ ದಟ್ಟವಾಗಿ ಕವಿಯುವುದುಂಟು. ಇದು ಮೇಜಿನ ಮೇಲೆ ಹರವಿದ ಬಟ್ಟೆಯಂತಿರುವುದರಿಂದ ಇದನ್ನು ಟೇಬಲ್ ಕ್ಲಾತ್ ಎಂದು ಕರೆಯುತ್ತಾರೆ. ಮಳೆ ಬರುವುದು ಬಹುತೇಕ ವಾಯುವ್ಯ ಮಾರುತಗಳಿಂದ. ಚಳಿಗಾಲದಲ್ಲಿ, ಸ್ಥಳದಿಂದ ಸ್ಥಳಕ್ಕೆ ಮಳೆಯ ಪರಿಮಾಣ ಬದಲಾಗುತ್ತದೆ; ನೆತ್ತಿಯ ಮೇಲೆ 60” ಮಿಮೀ.; ಪರ್ವತದ ತಪ್ಪಲಿನಲ್ಲಿ ಕೇಪ್ ಟೌನಿನ ಕೆಲವು ಭಾಗಗಳ ಮೇಲೆ 560ಮಿಮೀ. ಪರ್ವತದ ಮೇಲಿರುವ ಐದು ಜಲಾಶಯಗಳಿಂದ ಕೇಪ್ ಟೌನಿಗೆ ನೀರು ಸರಬರಾಯಿ ಆಗುತ್ತದೆ.

ಟೇಬಲ್ ಪರ್ವತದ ಮೇಲೆ ಹೆಚ್ಚಾಗಿ ಮಳೆ ಬೀಳುವ ಪ್ರದೇಶಗಳಲ್ಲಿ ಪ್ರೋಟೀಯ, ಹೀತ್, ಡಿಸಾ ಸೀತೆ ಹೂವಿನ ಗಿಡ ಮುಂತಾದವು ವಿಶೇಷವಾಗಿ ಬೆಳೆಯುತ್ತವೆ. ಡೇಸಿ ಪರಿವಾರದ ಅನೇಕ ಸ್ಥಳೀಯ ಜಾತಿಗಳ ಸಸ್ಯಗಳೂ ಉಂಟು. ಹೆಚ್ಚು ಮಳೆ ಬೀಳದ ಪಶ್ಚಿಮ ಪಾಶ್ರ್ವದಲ್ಲಿ ಮಾಂಸಲ ಸಸ್ಯಗಳುಂಟು. ಸ್ಪಿಂಕ್‍ವುಡ್, ಯೆಲ್ಲೋವುಡ್, ಸಿಲ್ವರ್ ಮರ ಮುಂತಾದವು ಕಾಡುಗಳಲ್ಲಿ ಬೆಳೆಯುತ್ತವೆ.

ಪರ್ವತದ ಮೇಲಕ್ಕೆ ಸು.300 ಹಾದಿಗಳುಂಟು. 1929ರಲ್ಲಿ ಇಲ್ಲಿಗೆ ಹೊರಜಿ ಮಾರ್ಗ ಏರ್ಪಡಿಸಲಾಯಿತು. ಇದರ ಮೂಲಕ ಪ್ರತಿ ವರ್ಷವೂ ಸು.50,000 ಮಂದಿ ಪರ್ವತದ ಮೇಲಕ್ಕೆ ಹೋಗಿ ಬರುತ್ತಾರೆ. (ಪಿ.ಬಿ.)