ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಲರ್, ಜಾನ್

ವಿಕಿಸೋರ್ಸ್ದಿಂದ

ಟೇಲರ್, ಜಾನ್ 1580-1653. ಕವಿ. ಪ್ರವಾಸ ಸಾಹಿತ್ಯವನ್ನು ರಚಿಸಿದ್ದಾನೆ. ದೋಣಿಗ ಕವಿ (ದಿ ವಾಟರ್ ಪೊಯೆಟ್) ಎಂದೇ ಪ್ರಸಿದ್ಧನಾಗಿದ್ದಾನೆ. ಹುಟ್ಟಿದ್ದು ಗ್ಲೌಸ್ಟರಿನಲ್ಲಿ ಗ್ರ್ಯಾಮರ್ ಶಾಲೆಯಲ್ಲಿ ಓದಿ ದೋಣಿಗನೊಬ್ಬನಲ್ಲಿ ಕೆಲಸಕ್ಕೆ ಸೇರಿದ. ಒತ್ತಾಯ ಬಂದುದರಿಂದ ನೌಕಾಪಡೆಗೆ ಸೇರಿ ಕ್ಯಾಡಿeóï ಆಕ್ರಮಣಕಾಲದಲ್ಲಿ ನೆರವಾದ. ಅಲ್ಲಿ ಒಂದು ಕಾಲು ಜಖಂ ಆಯಿತಾಗಿ ಮತ್ತೆ ತೇಮ್ಸ್ ನದಿಯಲ್ಲಿ ದೋಣಿಗನಾಗಿ ಜೀವನ ಸಾಗಿಸಿದ. ಕೆಲಕಾಲ ಆಕ್ಸ್ ಫರ್ಡಿನಲ್ಲೂ ಅನಂತರ ಲಂಡನ್ನಿನಲ್ಲೂ ಉಪಹಾರಗೃಹಗಳನ್ನು ನಡೆಸಿದ. ಸಂಭ್ರಮದ ಹಾಡುಗಳನ್ನು ಕಟ್ಟುವುದರಲ್ಲಿ ಈತನಿಗೆ ವಿಶೇಷ ಪ್ರತಿಭೆ ಇತ್ತು. ಬೆನ್ ಜಾನ್ಸನರಂಥ ಪ್ರಸಿದ್ಧ ವ್ಯಕ್ತಿಗಳು ಇವನಿಗೆ ಪರಿಚಿತರಿದ್ದರು. 1613 ರಲ್ಲಿ ನೆರವೇರಿದ ರಾಣಿ ಎಲಿಜûಬೆತ್ತಳ ಮದುವೆಯ ಸಂದರ್ಭದಲ್ಲಿ ಏರ್ಪಾಟಾದ ನೌಕಾಮಹೋತ್ಸವವನ್ನು ಈತ ಮೇಲ್ವಿಚಾರಕನಾಗಿ ನಿಂತು ನೆರವೇರಿಸಿದ. ಲಂಡನ್ನಿನಿಂದ ಬ್ರ್ಯಾಮರ್‍ವರೆಗೆ ನಡಿಗೆಯಲ್ಲಿ ಪ್ರವಾಸ ಮಾಡಿದ. ಈತ ಅದನ್ನು ಕುರಿತಂತೆ ಪೆನಿಲೆಸ್ ಪಿಲ್ಗ್ರಿಮೇಜ್ ಆಫ್ ಜಾನ್ ಟೇಲರ್, ದಿ ಕಿಂಗ್ಸ್ ಮೆಜಸ್ಟೀಸ್ ವಾಟರ್ ಪೊಯೆಟ್ (1618) ಎಂಬ ಕೃತಿಯನ್ನು ರಚಿಸಿದ. ಪ್ರಾಗ್‍ನಲ್ಲಿ 1620 ರಲ್ಲಿ ಬೋಹೀಮೀಯದ ರಾಣಿಯನ್ನು ಭೇಟಿ ಮಾಡಿದನಲ್ಲದೆ ಇನ್ನೂ ಅನೇಕ ಪ್ರವಾಸಗಳನ್ನು ಕೈಗೊಂಡ, ಅವುಗಳ ಬಗ್ಗೆ ಬರೆದ. ಈತನ ಬಗದಾಳ (ಡಾಗರೆಟ್) ಕವನಗಳಲ್ಲಿ ಒರಟುತನವಿದ್ದರೂ ವೈವಿಧ್ಯವಿದೆ. ಅವಕ್ಕೆ ಈಗ ಚಾರಿತ್ರಿಕ ಪ್ರಾಮುಖ್ಯವಿದೆಯಷ್ಟೆ. (ಎಸ್.ವಿ.ಕೆ.)