ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟೇಲರ್, ರಾಬರ್ಟ್

ವಿಕಿಸೋರ್ಸ್ದಿಂದ

ಟೇಲರ್, ರಾಬರ್ಟ್ 1911-1969. ಅಮೆರಿಕದ ಪ್ರಸಿದ್ಧ ಚಿತ್ರ ನಟ. ಸ್ಪ್ಯಾಂಗ್ಲರ್ ಎರ್ಲಿಂಗ್ಟನ್ ಬ್ರೋ ಎಂಬುದು ಇವನ ನಿಜವಾದ ಹೆಸರು. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಜಗತ್ಪ್ರಸಿದ್ಧ ಎಂಜಿಎಂ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡ. ಇವನನ್ನು ಪತ್ತೆ ಮಾಡಿದವರು ಎಂಜಿಎಂ ಸಂಸ್ಥೆಯ ಕಲಾಕುಶಲಿಗಳ ಪತ್ತೆ ವಿಭಾಗದವರು. 1934ರಲ್ಲಿ ಆ ಸಂಸ್ಥೆ ಸೇರಿದ. 1939ರಲ್ಲಿ ಈತನ ಮೊದಲ ಚಿತ್ತ ಹ್ಯಾಂಡಿ ಆ್ಯಂಡಿ ತೆರೆಗೆ ಬಂತು. ಅದೇ ವರ್ಷ ಬಾರ್‍ಬರ ಸ್ಟ್ಯಾನ್‍ವಿಕ್‍ಳೊಂದಿಗೆ ಮದುವೆ ಆಯಿತು. ಕಡ್ಡಾಯ ಸೈನಿಕ ಶಿಕ್ಷಣಕ್ಕಾಗಿ ವಾಯುಪಡೆಗೆ ಸೇರಿ, ವಿಮಾನ ಚಾಲಕ ವಿಭಾಗದಲ್ಲಿ ಶಿಕ್ಷಕನಾಗಿ ಕೆಲಸ ಮಾಡಿದ. ಅಲ್ಲಿರುವಾಗಲೇ ಹಲವು ತರಬೇತಿ ಚಿತ್ರಗಳನ್ನು ನಿರ್ದೇಶಿಸಿದ. 1952ರಲ್ಲಿ ವಿವಾಹವಿಚ್ಛೇದನ ಮಾಡಿಕೊಂಡು ನಟಿ ಅರ್‍ಸುಲ ತಿಯೆಸ್‍ಳನ್ನು ವಿವಾಹವಾದ. 1955ರ ವರೆಗೆ ಎಂಜಿಎಂ ಸಂಸ್ಥೆಯವರ ಬಹುಮಟ್ಟಿಗೆ ಎಲ್ಲ ಚಿತ್ರಗಳಲ್ಲೂ 1959-1961ರ ಕಾಲದಲ್ಲಿ ತಯಾರಾದ ಟಿ.ವಿ. ಚಿತ್ರಮಾಲೆ ದಿ ಡಿಟಿಕ್ಟಿವ್ಸ್ ನಲ್ಲೂ ಈತ ನಟಿಸಿದ್ದಾನೆ.

ಈತ ನಟಿಸಿರುವ ಸುಮಾರು 63 ಚಿತ್ರಗಳಲ್ಲಿ ಪ್ರಸಿದ್ಧ ಚಿತ್ರಗಳು ಇವು: ಮ್ಯಾಗ್ನಿಫಿಸಿಂಟ್ ಅಬ್‍ಸೆಷನ್ (1935), ಬ್ರಾಡ್ವೆ ಮೆಲೊಡಿ ಆಫ್ 1936 (1936), ಸ್ಪ್ಯಾಂಡ್ ಅಪ್ ಅಂಡ್ ಫೈಟ್ (1938), ವಾಟರ್ಲೂ ಬ್ರಿಜ್ (1940) ಫ್ಲೈಟ್ ಕಮಾಂಡ್ (1940), ಸಾಂಗ್ ಆಫ್ ರಷ್ಯ (1944), ಆಂಬುಷ್ (1950), ಕೋವಾಡಿಸ್ (1951), ಐವಾನ್ ಹೊ (1952), ಆಲ್ ದಿ ಬ್ರದರ್ಸ್ ವರ್ ವ್ಯಾಲಿಯೆಂಟ್ (1953), ಕ್ವಿನ್‍ಟಿನ್ ಡರ್‍ವರ್ಡ್ (1955), ದಿ ಲಾಸ್ಟ್ ಹಂಟ್ ; ಡಿ ಡೇ (1956), ಕಿಲ್ಲರ್ಸ್ ಆಫ್ ಕಿಲಿಮಂಜಾರೊ (1960), ದಿ ನೈಟ್ ವಾಕರ್ (1964), ಮತ್ತು ವೇರ್ ಏಂಜಲ್ಸ್ ಗೋ (1968). (ಜೆ.ಎಸ್.ಪಿ.ಎಂ.)