ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ರಿಕಿನಿಯಾಸಿಸ್

ವಿಕಿಸೋರ್ಸ್ದಿಂದ

ಟ್ರಿಕಿನಿಯಾಸಿಸ್ ನೆಮಟೋಡ ವರ್ಗದ ಟ್ರೈಕಿರಾಯ್ಡಿಯ ಕುಟುಂಬಕ್ಕೆ ಸೇರಿದ ಟ್ರಿಕಿನೆಲ ಸ್ಪೈರಾಲಿಸ್ ಎಂಬ ಹುಳುವಿನಿಂದ ಉಂಟಾಗುವ ರೋಗಸ್ಥಿತಿ. ಹುಳು ಪ್ರಧಾನವಾಗಿ ಹಂದಿ, ಇಲಿಗಳ ಕರುಳಿನಲ್ಲಿನ ಪರೋಪಜೀವಿ ಜಂತು ಹುಳುವಿನ ಜಾತಿಗೆ ಸೇರಿದ್ದು. ಮರಿಹುಳುಗಳು ದುಗ್ಧ ರಸರಕ್ತಗಳ ಮೂಲಕ ಕ್ರಮೇಣ ಕ್ರಮಿಸುತ್ತ ತಂಗಿರುತ್ತವೆ. ಮಾಂಸಖಂಡಗಳನ್ನು ಸೇರುತ್ತವೆ. ಅಲ್ಲಿ ಗಂಟಾಗಿ ಮುದುರಿ ಒಂದು ಹೊರಕವಚವನ್ನು ಸೃಷ್ಟಿಸಿಕೊಂಡು ಸದವಕಾಶವನ್ನು ಕಾಯುತ್ತ ತಂಗಿರುತ್ತವೆ. ಇಂಥ ಹುಳುಗಳು ಇರುವ ಹಂದಿಮಾಂಸವನ್ನು ಸರಿಯಾಗಿ ಬೇಯಿಸದೆ ತಿಂದಲ್ಲಿ ಅವು ಮಾನವ ಕರುಳನ್ನು ಸೇರಿ ಅಲ್ಲಿ ಹೊಸ ಪರೋಪಲಂಬನವನ್ನು ಪ್ರಾರಂಭಿಸುತ್ತವೆ. ಪ್ರಾಯಾವಸ್ಥೆಗೆ ಬಂದ ಹುಳುಗಳ ಉದ್ದ 1.4ರಿಂದ 4 ಮಿಲಿಮೀಟರುಗಳು. ಹೆಣ್ಣು ಗಂಡುಗಳು ಪ್ರತ್ಯೇಕ. ಗಂಡಿನೊಡನೆ ಸಂಗಮದಿಂದ ಗರ್ಭಧರಿಸಿದ ಹೆಣ್ಣು ಹುಳು ಕರುಳಿನ ಭಿತ್ತಿಯೊಳಗೆ ಮರಿಹುಳುಗಳನ್ನು ಪ್ರಸವಿಸುತ್ತದೆ. ಮೇಲೆ ಹಂದಿಗಳಲ್ಲಿ ವಿವರಿಸಿರುವಂತೆಯೇ ಈ ಮರಿಹುಳುಗಳು ಮಾನವರಲ್ಲಿಯೂ ವಲಸೆಹೋಗಿ ಗುಂಡಿಗೆ, ಫುಷ್ಫಸ, ಐಚ್ಛಿಕ ಮಾಂಸಖಂಡಗಳು ಇತ್ಯಾದಿಗಳಲ್ಲಿ ನೆಲೆಸುತ್ತವೆ. ಕವಚಾವೃತವಾದ ಹುಳುಗಳು ಮಾನವರಲ್ಲಿ ಇಪ್ಪತ್ತೈದು ವರ್ಷಗಳ ಪರ್ಯಂತ ಜೀವಿಸಿರಬಲ್ಲವು. ಅಲ್ಪಸಂಖ್ಯೆಯಲ್ಲಿದ್ದರೆ ಈ ಹುಳುಗಳು ಯಾವ ರೋಗ ಲಕ್ಷಣಗಳನ್ನೂ ಉಂಟುಮಾಡದೆ ಇರಬಹುದು. ಹೆಚ್ಚು ಸಂಖ್ಯೆ ಹುಳುಗಳಿರುವ ಅಪಕ್ವ ಮಾಂಸವನ್ನು ಸೇವಿಸಿದಾಗ 24 ಗಂಟೆಗಳಲ್ಲೆ ವಾಂತಿಭೇದಿ ಉಂಟಾಗಬಹುದು. 5-7 ದಿವಸಗಳಾದ ತರುವಾಯ ಮರಿಹುಳುಗಳ ವಲಸೆ ಪ್ರಾರಂಭವಾಗುವುದರಿಂದ ಆ ಕಾಲದಲ್ಲಿ ಗಂಧೆ, ಮುಖ ಊದಿಕೊಳ್ಳವುದು, ಜ್ವರ ಇತ್ಯಾದಿಗಳು ಸಾಮನ್ಯ. ಇನ್ನು 6-8 ದಿವಸಗಳಾಗುವಲ್ಲಿ ಮರಿಹುಳುಗಳು ಮಾಂಸಖಂಡ ಇತ್ಯಾದಿ ಸ್ಥಳಗಳಲ್ಲಿ ನೆಲೆನಿಲ್ಲುವುದರಿಂದ ಆಯಾ ಸ್ಥಳಕ್ಕೆ ಅನುಗುಣವಾದ ಲಕ್ಷಣಗಳು ಕಂಡುಬರಬಹುದು. ಮೈಕೈನೋವು ಸ್ನಾಯುನೋವುಗಳು ಸಾಧಾರಣ. ನಾಲಿಗೆ, ಗಂಟಲು ವಪೆಗಳಲ್ಲಿ ಹುಳುಗಳು ಸೇರಿದರೆ ಉಸಿರಾಟ, ಮಾತಾಡುವಿಕೆ, ನುಂಗುವಿಕೆಗಳು ಕಷ್ಟವಾಗುತ್ತವೆ. ಫುಪ್ಫುಸಗಳ ಆಕ್ರಮಣದಿಂದ ಕೆಮ್ಮು ರಕ್ತ ಕಫಗಳುಂಟಾಗುತ್ತವೆ. ಅಪರೂಪವಾಗಿ ಎದೆನೋವು, ಇನ್ನೂ ಅಪರೂಪವಾಗಿ ಮೂರ್ಛಾವಸ್ಥೆ ಮರಣ ಸಂಭವಿಸಬಹುದು. ಮಾಂಸಖಂಡಗಳ ಜೀವುಂಡಿಗೆ ಪರೀಕ್ಷೆಯಿಂದ ಹುಳುಗಳ ಇರುವಿಕೆಯನ್ನು ಪತ್ತೆಮಾಡಬಹುದು. ರೋಗ ಬಹುಕಾಲಿಕವಾಗಿದ್ದರೆ ಮಾಂಸಖಂಡಗಳ ಎಕ್ಸ್‍ಕಿರಣ ಪರೀಕ್ಷೆಯಿಂದಲೂ ಹುಳುಗಳಿರುವುದು ಗೋಚರವಾಗುತ್ತದೆ. ಕರುಳಿನಿಂದ ಹುಳುಗಳ ನಿರ್ಮೂಲನಕ್ಕೆ ವರ್ಮಿeóÉೈಮ್ ಮುಂತಾದ ಅನೇಕ ಔಷಧಗಳನ್ನು ಉಪಯೋಗಿಸಲಾಗಿದೆ. ಅಷ್ಟು ಪ್ರಯೋಜನ ಕಂಡುಬಂದಿಲ್ಲ. ಥೈಯೋಬೆಂಡeóÉೂೀಲನ್ನು ವ್ಯಕ್ತಿಯ ತೂಕಕ್ಕೆ ಅನುಗುಣವಾಗಿ ಪ್ರತಿ ಕಿಲೋಗ್ರಾಮಿಗೆ 50 ಮಿಲಿಗ್ರಾಮಿನಷ್ಟು ಎರಡು ದಿನ ಕೊಟ್ಟರೆ ಗುಣವಾಗಬಹುದು. ರೋಗ ಹರಡುವುದು ಹುಳುಗಳಿರುವ ಮಾಂಸವನ್ನು ತಿನ್ನುವುದರಿಂದಲೇ ಎಂಬುದನ್ನು ಗಮನಿಸಬೇಕು. ಬಹುಶಃ ಹುಳುಗಳಿರುವ ಇಲಿಗಳನ್ನು ಹಂದಿ ತಿಂದು ರೋಗ ಗ್ರಸ್ತವಾಗುತ್ತದೆ. ಅಂಥ ಹಂದಿಯ ಮಾಂಸವನ್ನು ಸರಿಯಾಗಿ ಪಾಕಮಾಡದೆ ತಿಂದ ಮನುಷ್ಯ ರೋಗ ಪಡೆಯುತ್ತಾನೆ. ಆದರೆ ಇವನಿಂದ ಪುನಃ ಇನ್ನೊಬ್ಬ ಮನುಷ್ಯ ರೋಗ ಪಡೆಯುತ್ತಾನೆ. ಆದರೆ ಇವನಿಂದ ಪುನಃ ಇನ್ನೊಬ್ಬ ಮನುಷ್ಯನಿಗಾಗಲಿ, ಹಂದಿ ಇಲಿಗಳಿಗಾಗಲಿ ರೋಗ ಹರಡುವ ಸಂಭವ ಇಲ್ಲವೆಂಬ ಅಂಶವನ್ನು ಗ್ರಹಿಸಬಹುದು. (ಬಿ.ಬಿ.ಸಿ.ಆರ್.)