ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಟ್ಸುಯುಲ್ಕೂವ್ಸ್ಕಿ, ಕಾನ್ಸ್ಟಾಂಟಿನ್ ಎಡ್ವರ್ಡೋವಿಚ್

ವಿಕಿಸೋರ್ಸ್ದಿಂದ

ಟ್ಸುಯುಲ್‍ಕೂವ್ಸ್ಕಿ, ಕಾನ್‍ಸ್ಟಾಂಟಿನ್ ಎಡ್ವರ್ಡೋವಿಚ್ 1857-1935. ರಷ್ಯದ ಭೌತವಿಜ್ಞಾನಿ. ಬಾಹ್ಯಾಕಾಶದ ದಿಗ್ವಿಜಯಕ್ಕಾಗಿ ರಾಕೆಟ್ಟಿನ ಬಳಕೆಯ ಬಗ್ಗೆ ಮೊತ್ತಮೊದಲು ಆಳವಾದ ವೈಜ್ಞಾನಿಕ ಸಂಶೋಧನೆ ನಡೆಸಿದಾತ. ವರ್ತಮಾನ ವಿಜ್ಞಾನದ ಮಟ್ಟಕ್ಕಿಂತ ಬಹಳ ಎತ್ತರದಲ್ಲಿದ್ದು ಅನೇಕ ದಶಕಗಳ ತರುವಾಯವೇ ಸಾಧ್ಯವಾದ ಬಾಹ್ಯಾಕಾಶ ಯಾನದ ಬಗ್ಗೆ ವಿಶ್ಲೇಷಣೆ ನಡೆಸಿ, ಅದರ ತತ್ವಗಳನ್ನು ನಿರೂಪಿಸಿದ ಪ್ರವಾದಿ. ಮಾಸ್ಕೋ ನಗರದ ಈಶಾನ್ಯ ದಿಕ್ಕಿನಲ್ಲಿರುವ ರಾಯಜಾನ್ ಪ್ರಾಂತ್ಯಕ್ಕೆ ಸೇರಿದ ಇಶೆವ್‍ಸ್ಕೊಯೆ ಎಂಬ ಹಳ್ಳಿಯಲ್ಲಿ 1857ರ ಸೆಪ್ಟೆಂಬರ್ 17ರಂದು ಟ್ಯುಯಲ್‍ಕೂವ್ಸ್ಕಿಯ ಜನನ. ಈತನ ತಂದೆ ಮೊದಲು ಅರಣ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ. ಬಳಿಕ ಶಾಲಾ ಅಧ್ಯಾಪಕ ಹಾಗೂ ಸರ್ಕಾರದ ಒಬ್ಬ ಕಿರಿಯ ಅಧೀಕಾರಿಯಾಗಿಯೂ ಕೆಲಸ ಮಾಡಿದ. ಅಣೂಗುಟ್ಸುಯುಲ್‍ಕೂವ್ಸ್ಕಿಗೆ ಕೆಂಜ್ವರ ತಾಗಿ ಅದರಿಂದ ಆತ ಕಿವುಡನಾದ. ವಿಜ್ಞಾನ ಮತ್ತು ಗಣಿತದಲ್ಲಿ ಇವನಿಗೆ ಅಪಾರಾಸಕ್ತಿ. 16ನೆಯ ವಯಸ್ಸಿನಲ್ಲಿ ತಂದೆ ಇವನನ್ನು ಮಾಸ್ಕೋಕೆ ಕಳುಹಿಸಿದ. ಹಣದ ಮುಗ್ಗಟ್ಟು ಹಾಗೂ ಕಿವುಡಿನಿಂದಾಗಿ ಶಿಷ್ಟವಾದ ಶಿಕ್ಷಣವನ್ನು ಪಡೆಯಲು ಈತನಿಗೆ ಸಾಧ್ಯವಾಗಲಿಲ್ಲ. ಸ್ವತಃ ತಾನೇ ರಚಿಸಿದ ಕಿವಿಹಳೆಯನ್ನು ಉಪಯೋಗಿಸಿಕೊಂಡು ಭಾಷಣಗಳನ್ನು ಆಲಿಸುತ್ತಿದ್ದುದ್ದೇ ಅಲ್ಲದೆ ಗ್ರಂಥಭಂಡಾರಗಳಲ್ಲಿ ಅಧ್ಯಯನ ನಡೆಸಿ ಸಂಪೂರ್ಣ ಸ್ವಪ್ರಯತ್ನದಿಂದ ಜ್ಞಾನವನ್ನು ಬೆಳಯಿಸಿಕೊಂಡ. ಬಾಹ್ಯಾಕಾಶ ಸಂಶೋಧನೆಯ ಬಗ್ಗೆ ಈತನ ಆಸಕ್ತಿ ಆಗಲೇ ಮೂಡಿದ್ದು. ಅದಕ್ಕೆ ಬೇಕಾಗುವ ವಾಹನಗಳ ಬಗ್ಗೆ ಕೂಡ ತೀವ್ರವಾಗಿ ಯೋಚಿಸತೊಡಗಿದ.

1876ರ ವೇಳೆಗೆ ಈತನ ಮನೆಯವರು ಉರಲ್ಸ್ ಪ್ರಾಂತ್ಯದ ವಯಾಟ್‍ಕ ಎಂಬ ಸ್ಥಳದಲ್ಲಿ ನೆಲೆಸಿದರು. ಟ್ಸುಯುಲ್‍ಕೂವ್ಸ್ಕಿ ಅಲ್ಲಿಗೆ ತೆರಳಿ ಭೌತ ಮತ್ತು ಗಣಿತ ಶಾಸ್ತ್ರಗಳ ಬಗ್ಗೆ ಒಬ್ಬ ಖಾಸಗಿ ಅಧ್ಯಾಪಕನಾಗಿ ಸಣ್ಣ ಕೋಣೆಯೊಂದರಲ್ಲಿ ಯಂತ್ರಗಳ ನಿರ್ಮಾಣ ಮಾಡಲು ತೊಡಗಿದ. ಮುಂದೆ ರಯಾಜಾನ್‍ಗೆ ಹಿಂತಿರುಗಿ (1878) ಅಂದಿನ ಶೈಕ್ಷಣಿಕ ಪದ್ಧತಿಯಲ್ಲಿ ಅತ್ಯಂತ ಕೆಳಗಿನ ಸ್ಥಾನವಾದ ಜನತಾ ಶಾಲಾ ಅಧ್ಯಾಪಕ ಎಂಬ ಅರ್ಹತಾ ಪಾತ್ರವನ್ನು ಪಡೆದು ಅಂಕಗಣಿತ, ಜ್ಯಾಮಿತಿ ಮತ್ತು ಭೌತ ಶಾಸ್ತ್ರಗಳ ಅಧ್ಯಾಪಕನಾಗಿ ಮಾಸ್ಕೋ ಬಳಿಯಲ್ಲಿನ ಬೋರೋವ್ಸ್ಕ್ ಎಂಬ ತಾಲ್ಲೂಕಿನ ಶಾಲೆಯನ್ನು ಸೇರಿದ.

ನಕ್ಷೆಗಳ ಮೂಲಕ ಇಂದ್ರಿಯಾನುಭವಗಳ ಚಿತ್ರಣ ಎಂಬ ಪ್ರಬಂಧದೊಡನೆ ವೈಜ್ಞಾನಿಕ ಸಂಶೋಧನೆಗಳ ಪ್ರಕಟಣೆಯನ್ನು ಆರಂಭಿಸಿದ. (1880) ಅನಿಲಗಳ ಸಿದ್ಧಾಂತ ಪ್ರಕಟಣೆಯ ತರುವಾಯ ಬರೆದ ಜೀವಂತ ವಸ್ತುಗಳ ಸೈದ್ಧಾಂತಿಕ ಬಲವಿಜ್ಞಾನ ಎಂಬ ಪ್ರಬಂಧಕ್ಕಾಗಿ ಈತನನ್ನು ಸೆಂಟ್ ಪೀಟರ್ಸ್ ಬರ್ಗ್‍ನ ಭೌತ ಮತ್ತು ರಸಾಯನ ಶಾಸ್ತ್ರಗಳ ಸಂಘದ ಸದಸ್ಯನನ್ನಾಗಿ ಚುನಾಯಿಸಿದರು. ಗುರುತ್ವಾಕರ್ಷಣೆ ಮತ್ತು ಜಲನವಿರೋಧಕವಾದ (ಅನಿಲ ಇತ್ಯಾದಿ). ಯಾವ ಪದಾರ್ಥವೂ ಇಲ್ಲದ ಜಾಗದಲ್ಲಿ ವಸ್ತುಗಳ ಚಲನೆಯ ಬಗ್ಗೆ ಮುಕ್ತಾಕಾಶ ಎಂಬ ಹೊತ್ತಗೆಯಲ್ಲಿ (1883) ವಿಮರ್ಶಿಸಿದ. ಈ ಪ್ರಕಟಣೆಯಲ್ಲಿ ರಾಕೆಟ್ಟಿನ ಶಕ್ತಿಯಿಂದ ಚಲಿಸುವ ಬಾಹ್ಯಾಕಾಶ ನೌಕೆಯ ಚಕ್ರವನ್ನು ತೋರಿಸಲಾಗಿತ್ತು. ವಾಯುಯಾನಶಾಸ್ತ್ರದ ಏರೋನಾಟಿಕ್ಸ್ ಬಗ್ಗೆ ಅತ್ಯಂತ ಆಸಕ್ತಿ ಹೊಂದಿದ್ದ ಟ್ಸುಯುಲ್‍ಕೂವ್ಸ್ಕಿಯನ್ನು ವಿಮಾನ ಮತ್ತು ಲೋಹದಲ್ಲಿ ತಯಾರಿಸಿದ ಆಕಾಶ ಬುಟ್ಟಿಗಳನ್ನು ಕುರಿತ ತಾತ್ತ್ವಿಕ ಸಂಶೋಧನೆ ನಡೆಸಿ, ಈ ವಿಷಯಗಳ ಬಗ್ಗೆ ಮಾಸ್ಕೋದಲ್ಲಿ ಭಾಷಣ ಮಾಡಲು ಆಹ್ವಾನಿಸಿದರು. ಲೋಹದ ಆಕಾಶನೌಕೆ ಏರುವಾಗ ಅದರ ಎತ್ತರ ಮತ್ತು ಶಾಖವನ್ನು ಅವಲಂಬಿಸಿದಂತೆ ಗಾತ್ರವನ್ನು ಬದಲಾಯಿಸಿ ಅದರ ಪ್ಲವನತೆಯನ್ನು ನಿರ್ದಿಷ್ಟ ಪ್ರಮಾಣದಲ್ಲಿರುವಂತೆ ಮಾಡಲು ಸಾಧ್ಯವೆಂದು ಲೆಕ್ಕಾಚಾರಗಳಿಂದ ಈತ ತೋರಿಸಿಕೊಟ್ಟ. ಇಂಥ ವಾಯುನೌಕೆಯನ್ನು ಮೇಲಕ್ಕೆತ್ತುವ ಹೈಡ್ರೋಜನನ್ನು ಬಿಸಿಮಾಡುವುದಕ್ಕೆ ನೌಕೆಯಲ್ಲಿರುವ ಯಂತ್ರದಿಂದ ಹೊರಬರುವ ಬಿಸಿ ಅನಿಲಗಳನ್ನು ನೌಕೆಯ ಮೇಲ್ಮೈಯ ಸುತ್ತಲೂ ಹರಿಸುವ ವ್ಯವಸ್ಥೆಯನ್ನೂ ಸೂಚಿಸಿದ್ದ. ಆದರೆ ಆ ಕಾಲದ ಯಂತ್ರಜ್ಞಾನದ ನೆರವಿನಿಂದ ಇಂಥ ನೌಕೆಯ ನಿರ್ಮಾಣ ಅಸಾಧ್ಯವಾಗಿತ್ತು.

ಟ್ಸುಯುಲ್‍ಕೂವ್ಸ್ಕಿ 1892ರಲ್ಲಿ ಕಲುಗ ಎಂಬಲ್ಲಿ ಪ್ರೌಢಶಾಲೆಯ ಶಿಕ್ಷಕನಾಗಿ ಸೇರಿದ. ಏರೋಪ್ಲೇನ್ ಅಥವಾ ಹಕ್ಕಿಯಂತೆ ಹಾರುವ ಯಂತ್ರ ಎಂಬ ಲೇಖನವನ್ನು 1894ರಲ್ಲಿ ಪ್ರಕಟಿಸಿದ. ವೈಜ್ಞಾನಿಕ ಕಥೆಯನ್ನು ಚಂದ್ರನ ಮೇಲೆ ಎಂಬ ವೈಜ್ಞಾನಿಕ ಕಥೆಯನ್ನು 1893ರಲ್ಲಿ ಬರೆದ. ಭೂಮಿ ಮತ್ತು ಅಂತರಿಕ್ಷದ ಬಗ್ಗೆ ಕನಸುಗಳು ಎಂಬ ಕಥೆಯಲ್ಲಿ (1895) ಭೂಮಿಯ ಸುತ್ತಲೂ ಇರುವ ವಾಯುಮಂಡಲದ ಹೊರಗೆ ಎಂದರೆ ಸುಮಾರು 200 ಮೈಲು ಮೇಲೆ ಹಾರುವಂಥ ಚಂದ್ರನಂತೆ ಇರುವ ಉಪಗ್ರಹದ ಬಗ್ಗೆ ಬಣ್ಣಿಸಿರುವನು. ಸುಮಾರು ಇದೇ ಸಮಯಕ್ಕೆ ಈತ ಆಕಾಶಯಾನದ ತತ್ತ್ವಗಳ ಬಗ್ಗೆ ಮಾತ್ರವೇ ಸೀಮಿತವಾಗದೆ ಪ್ರಯೋಗಗಳನ್ನು ಕೂಡ ಮಾಡಲು ಪ್ರಾರಂಭಿಸಿದ. ರಷ್ಯದ ಪ್ರಥಮ ಗಾಳಿಸುರಂಗವನ್ನು 1897ರಲ್ಲಿ ನಿರ್ಮಿಸಿ ಅದರಲ್ಲಿ ವಿಮಾನಕ್ಕೆ ಸಂಬಂಧಿಸಿದ ಅನೇಕ ಪ್ರಯೋಗಗಳನ್ನು ನಡೆಸಿದ. ಅವುಗಳ ಫಲಿತಾಂಶಗಳನ್ನು ಪ್ರಕಟಿಸಿದ. ಬಳಿಕ ಈ ಸಂಶೋಧನೆಯನ್ನು ಮುಂದುವರೆಸಲು ಸೇಂಟ್ ಪೀಟರ್ಸ್‍ಬರ್ಗ್‍ನ ವಿಜ್ಞಾನಸಂಸ್ಥೆ ಈತನಿಗೆ 470 ರೂಬಲ್‍ಗಳ ಧನಸಹಾಯವನ್ನು ನೀಡಿತು. ಇದರಿಂದ ಇನ್ನೂ ದೊಡ್ಡ ಗಾತ್ರದ ಗಾಳಿಸುರಂಗದ ನಿರ್ಮಾಣ ಸಾಧ್ಯವಾಯಿತು. ಇದೇ ಕಾಲದಲ್ಲಿ ಆಕಾಶಯಾನಕ್ಕೆ ರಾಕೆಟ್ಟನ್ನು ಉಪಯೋಗಿಸುವುದರ ಬಗ್ಗೆ ಆಳವಾಗಿ ಕೂಡ ಈತ ಯೋಚಿಸಿದ. ರಾಕೆಟ್ಟಿನ ಚಲನೆಗೆ ಮೂಲಭೂಲವಾದ, ಅದರ ವೇಗಕ್ಕೂ (v) ರಾಕೆಟ್ಟಿನ ತೂಕ (ತಿ) ಮತ್ತು ನಿಷ್ಕಾಸ ಅನಿಲಗಳ ವೇಗಕ್ಕೂ (ಛಿ) ಇರುವ ಸಂಬಂಧವನ್ನು 1897ರಲ್ಲಿ ಶೋಧಿಸಿದ. ಗಿ=ಛಿಟಟಿತಿi/ತಿಜಿ ಎಂಬ ಈ ಸಮೀಕರಣದಲ್ಲಿ v ಎಂದರೆ ರಾಕೆಟ್ ಕೊನೆಗೆ ಪಡೆಯುವ ವೇಗ, ಛಿಎಂದರೆ ನಿಷ್ಕಾಸ ಅನಿಲಗಳ ವೇಗ, ತಿi ಎಂದರೆ ಚಲಿಸುವ ಮೊದಲು ಇರುವ ತೂಕ ಮತ್ತು ತಿಜಿ ಎಂದರೆ ನಿಷ್ಕಾಸ ಅನಿಲಗಳು ಬರಿದಾದ ಮೇಲೆ ಉಳಿಯುವ ಉರಿದ ರಾಕೆಟ್ಟಿನ ತೂಕ. ಆದರೆ ಇದರಲ್ಲಿ ಗುರುತ್ವಾಕರ್ಷಣೆ ಮತ್ತು (ವಾಯು ಮುಂತಾದವುಗಳ) ಜಗ್ಗು (ಡ್ರ್ಯಾಗ್) ಇವುಗಳ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. (ಮುಂದೆ ಈ ಪರಿಣಾಮಗಳನ್ನೂ ಒಳಗೊಂಡಂತೆ ಇನ್ನೂ ಕೂಲಂಕಷವಾಗಿ ವಿಚಾರ ಮಾಡಿದ ಅನೇಕ ಲೇಖನಗಳನ್ನೂ ಬರೆದ.) ಮೇಲೆ ಹೇಳಿದ ನಿಯಮದಂತೆ ರಾಕೆಟ್ಟಿನ ವೇಗವನ್ನು ಹೆಚ್ಚಿಸಬೇಕಾದರೆ ನಿಷ್ಕಾಸ ಅನಿಲಗಳ ವೇಗವನ್ನು ಹೆಚ್ಚಿಸಬೇಕು. ರಾಕೆಟ್ ಉರಿಯುವುದಕ್ಕೆ ಮುಂಚಿನ ತೂಕಕ್ಕೂ ಮತ್ತು ಉರಿದ ಬಳಿಕ ಇರುವ ತೂಕಕ್ಕೂ ಅಂತರವನ್ನು ಹೆಚ್ಚಿಸಬೇಕು. ಇದನ್ನು ಮನಗಂಡ ಟ್ಸುಯುಲ್‍ಕೂವ್ಸ್ಕಿ ಈ ಸ್ಥಿತಿಯನ್ನು ಉಂಡು ಮಾಡಲು ಅನೇಕ ವಿಧಾನಗಳನ್ನು ಶೋಧಿಸಿದ.

ಆಕಾಶಯಾನಕ್ಕೆ ಬಹಳ ಅಮೂಲ್ಯವಾದ ಸಾಧನವಾಗಿ ಪರಿಣಮಿಸಿರುವ ಬಹುಹಂತಗಳ ರಾಕೆಟ್ಟಿನ ಉಪಾಯವೂ ಈತನಿಗೆ ಸ್ಫುರಿಸಿತ್ತು. ಒಂದು ರಾಕೆಟ್ಟಿನ ವೇಗ ಬಹಳವಾಗಿ ಹೆಚ್ಚಬೇಕಾದರೆ ಮೇಳೆ ಹೇಳಿದ ನಿಯಮದ ಪ್ರಕಾರ ಅದರ ತೂಕ ಕ್ರಮೇಣ ಕಡಿಮೆಯಾಗಬೇಕು. ಅನೇಕ ರಾಕೆಟ್ಟುಗಳನ್ನು ಒಂದರ ಹಿಂದೆ ಒಂದರಂತೆ ಅಥವಾ ಒಂದರ ಪಕ್ಕ ಒಂದರಂತೆ (ಎಂದರೆ ಸಮಾಂತರ) ಇರುವ ಜೋಡಣೆಯಲ್ಲಿಟ್ಟು ಪ್ರತಿಯೊಂದು ರಾಕೆಟ್ಟು ಅದರ ಇಂಧನ ಪೂರ್ತಿಯಾಗಿ ಉರಿದ ತರುವಾಯ ಮಿಕ್ಕ ರಾಕೆಟ್ಟಿನಿಂದ ಬೇರ್ಪಟ್ಟು ಬಿದ್ದುಹೋಗುವಂತೆ ವ್ಯವಸ್ಥೆ ಮಾಡಿದರೆ ಉಳಿದ ರಾಕೆಟ್ಟುಗಳು ಮತ್ತು ಅವುಗಳ ಜೊತೆಗೆ ಲಗತ್ತಿಸಿರುವ ಉಪಗ್ರಹವೇ ಆಗಲಿ ಇನ್ನಾವುದೇ ಪ್ರಯೋಗಾರ್ಥವಾದ ಬಾಹ್ಯಾಕಾಶ ನೌಕೆಯೇ ಆಗಲಿ, ಹೆಚ್ಚು ಹೆಚ್ಚು ವೇಗವನ್ನು ಪಡೆಯಲು ಸಾಧ್ಯವಾಗುತ್ತದೆ. (ಉದಾಹರಣೆ, ಚಂದ್ರನ ಮೇಲೆ ಮಾನವನನ್ನು ಇಳಿಸಿ ವಾಪಸ್ಸು ಕರೆದುಕೊಂಡು ಬರಲು ಉಪಯೋಗಿಸಿದ ಸ್ಯಾಟರ್ನ್ ರಾಕೆಟಿನಲ್ಲಿ ಮೂರು ಹಂತಗಳಿದ್ದುವು.)

ಟ್ಸುಯುಲ್‍ಕೂವ್ಸ್ಕಿ 1903ರಲೇ ಬರೆದ ಪ್ರತಿಕ್ರಿಯೆ ಸಾಧನೆಗಳಿಂದ ಬಾಹ್ಯಾಕಾಶದ ಪರೀಕ್ಷೆ ಎಂಬ ಪ್ರಸಿದ್ಧವಾದ ಲೇಖನ. 1911-1912ರಲ್ಲಿ ಒಂದು ಮಾಲಿಕೆಯಲ್ಲಿ ಪ್ರಕಟವಾಯಿತು. ಇದರಲ್ಲಿ ಇವನು ಗುರುತ್ವಾಕರ್ಷಣೆ ಮತ್ತು ಜಗ್ಗು ಇವುಗಳ ಪರಿಣಾಮಗಳನ್ನು ಒಳಗೊಂಡಂತೆ ಮೂಲಭೂತವಾದ ರಾಕೆಟ್ ಸಮೀಕರಣವನ್ನು ವಶಪಡಿಸಿದ. ರಾಕೆಟ್ಟನ್ನು ಉಡಾಯಿಸುವ ಕೋನ, ಅತ್ಯುತ್ತಮವಾದ ರಾಕೆಟ್ಟಿನ ಆಕಾರ ಇತ್ಯಾದಿ. ಅನೇಕ ವಿಷಯಗಳನ್ನು ಇದರಲ್ಲಿ ತರ್ಕಿಸಲಾಗಿದೆ. ಘನ ಇಂಧನಗಳು ದ್ರವ ಇಂಧನಗಳಷ್ಟು ಉಪಯುಕ್ತವಲ್ಲವೆಂದೂ ದ್ರವರೂಪದಲ್ಲಿರುವ ಹೈಡ್ರೋಜನ್ ಮತ್ತು ಆಕ್ಸಿಜನ್‍ಗಳು ಒಳ್ಳೆಯ ಇಂಧನಗಳೆಂದೂ ತೋರಿಸಿಕೊಡಲಾಗಿದೆ. ಎಂಜಿನ್ನಿನ ಶಾಖವನ್ನು ಕಡಿಮೆ ಮಾಡುವುದರಿಂದ ಉಂಟಾಗುವ ಪ್ರಯೋಜನಗಳ ಬಗ್ಗೆಯೂ ವಾದಿಸಲಾಗಿದೆ. ಪರಮಾಣು ಶಕ್ತಿಯ ಉಪಯೋಗವನ್ನು ಇಲ್ಲಿ ಹೇಳಲಾಗಿದೆ. ಕೆಲ ದಶಕಗಳ ಬಳಿಕ ಈತ ಯೋಚಿಸಿದ್ದ ವಿಧಾನಗಳನ್ನೆಲ್ಲಾ ಉಪಯೋಗಿಸಿಕೊಂಡು ದೊಡ್ಡ, ಅತಿ ಸಾಮಥ್ರ್ಯಯುತವಾದ ರಾಕೆಟ್ಟುಗಳನ್ನು ನಿರ್ಮಿಸಿ, ಸ್ಪೂತ್ನಿಕ್ ಮುಂತಾದ ಉಪಗ್ರಹಗಳನ್ನು ಹಾರಿಸಿ 1958ರಿಂದ ಈಚಿನ ಕಾಲವನ್ನು ಆಕಾಶಯುಗ ಎಂದು ಕರೆಯುವಂತಾಗಿರುವುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

ರಷ್ಯದ ಕ್ರಾಂತಿಯ ಅನಂತರ (1918) ಈತನಿಗೆ ಪುರಸ್ಕಾರ ಹಾಗೂ ಧನಸಹಾಯ ದೊರೆತವು. 1924ರಲ್ಲಿ ವಿಶ್ವರಾಕೆಟ್ ಟ್ರೇನ್ ಎಂಬ ಪುಸ್ತಕವನ್ನು ಬರೆದ. ಮುಂದೆ ರಾಕೆಟ್ಟಿನ ಶಕ್ತಿಯಿಂದ ಹಾರುವ ವಿಮಾನಗಳ (ಅಥವಾ ರಾಕೆಟ್ ಪ್ಲೇನ್) ರಚನೆಯ ಬಗ್ಗೆ ಈತನ ಯೋಚನೆ ಹರಿಯಿತು. ನೋದಕ ವಿಮಾನ (ಪ್ರೊಪೆಲ್ಲರ್ ಏರೋಪ್ಲೇನ್) ಶಕದ ಅನಂತರ ಜೆಟ್ ವಿಮಾನ ಶಕ ಬರುವುದು ಎಂದು ಆ ಕಾಲದಲ್ಲೇ ಇವನು ಭವಿಷ್ಯವನ್ನು ನುಡಿದಿದ್ದ. ಶಿಕ್ಷಕ ವೃತ್ತಿಯಿಂದ ನಿವೃತ್ತನಾದ ಮೇಲೂ ಈತ ಆಕಾಶಯಾನ ಮತ್ತು ಬಾಹ್ಯಾಕಾಶಗಳ ಬಗ್ಗೆ ಲೇಖನಗಳನ್ನು ಪ್ರಕಟಿಸುತ್ತಿದ್ದ. ಟ್ಸುಯುಲ್‍ಕೂವ್ಸ್ಕಿ ತನ್ನ ಬರವಣಿಗೆಗಳನ್ನೆಲ್ಲ 1935ರ ಸೆಪ್ಟೆಂಬರ್ 13ರಂದು ಸೋವಿಯತ್ ಸರ್ಕಾರ ಮತ್ತು ಬೋಲ್ಷೆವಿಕ್ ಪಕ್ಷಕ್ಕೆ ಕೊಡುಗೆಯನ್ನಾಗಿ ನೀಡಿದ. ಅದೇ ತಿಂಗಳ 19ರಂದು ಏಡಿಗಂತಿ ರೋಗದ ಉಲ್ಬಣತೆಯಿಂದ ಅಸುನೀಗಿದ. ಈತನ ಪುಸ್ತಕ ಹಾಗೂ ಇತರ ಲೇಖನಗಳನ್ನು ಸೋವಿಯತ್ ದೇಶದ ಅನೇಕ ವಸ್ತು ಸಂಗ್ರಹಾಲಗಳಲ್ಲಿ ಇಡಲಾಗಿದೆ. ಕಲುಗದಲ್ಲಿ ಈತ ವಾಸಿಸುತ್ತಿದ್ದ ಮನೆಯನ್ನು ಒಂದು ರಾಷ್ಟ್ರೀಯ ಸ್ಮಾರಕವನ್ನಾಗಿ ಮಾರ್ಪಡಿಸಲಾಗಿದೆ. ಎರಡನೆಯ ಮಾಹನ್ ಯುದ್ಧದಲ್ಲಿ ಜರ್ಮನ್ ಸೈನಿಕರು ಇದನ್ನು ನಾಶ ಪಡಿಸಲು ಪ್ರಯತ್ನಿಸಿದಾಗ ಅಲ್ಲಿಯ ಕೆಲಸಗಾರರು ಅಲ್ಲಿಟ್ಟಿದ್ದ ವಸ್ತುಗಳನ್ನು ಜೋಪಾನಮಾಡಿ ಕಾಪಾಡಿದರು. ಈಚೆಗೆ ರಾಕೆಟ್ ಮತ್ತು ಆಕಾಶಯುಗ ಪ್ರಾರಂಭವಾದ ಬಳಿಕ ಈ ಸ್ಮಾರಕ ಹಾಗೂ ಇದರೊಳಗೆ ಇರುವ ಸಾಮಗ್ರಿಗಳು ಬಹಳ ಜನಪ್ರಿಯವಾಗಿವೆ. ಟ್ಸುಯುಲ್‍ಕೂವ್ಸ್ಕಿ ಗೌರವಾರ್ಥವಾಗಿ ಫ್ರಾನ್ಸಿನ ಏರೋ ಕ್ಲಬ್ 1952ರಲ್ಲಿ ಒಂದು ದೊಡ್ಡ ಬಂಗಾರದ ಪದಕವನ್ನು ಅಚ್ಚು ಮಾಡಿಸಿತು. ರಷ್ಯ ಸರ್ಕಾರ ಟ್ಸುಯುಲ್‍ಕೂವ್ಸ್ಕಿ ಸ್ವರ್ಣ ಪದಕವೊಂದನ್ನು ಸ್ಥಾಪಿಸಿ (1954) ಅದನ್ನು ಮೂರು ವರ್ಷಗಳಿಗೊಮ್ಮೆ, ಆಕಾಶಯಾನದ ಬೆಳೆವಣಿಗೆಯಲ್ಲಿ ಅತ್ಯಂತ ಗಮನಾರ್ಹವಾದ ಪಾತ್ರವಹಿಸಿದ ವಿಜ್ಞಾನಿಗೆ ನೀಡುತ್ತದೆ. ಕಲುಗದಲ್ಲಿರುವ ಅವನ ಸ್ಮಾರಕದ ಪೀಠದ ಮೇಲೆ ಅವನದೇ ಆದ ಈ ಮಾತನ್ನು ಕೆತ್ತಲಾಗಿದೆ: ಮಾನವ ಜನಾಂಗ ಸದಾಕಾಲವು ಭೂಮಿಯ ಮೇಲೆಯೇ ಬಂಧಿತವಾಗಿರುವುದಿಲ್ಲ. ಬೆಳಕು ಮತ್ತು ಆಕಾಶವನ್ನು ಹುಡುಕಿಕೊಂಡು ಮೊದಲು ಸ್ವಲ್ಪಸ್ವಲ್ಪವಾಗಿ ಬಾಹ್ಯಾಕಾಶವನ್ನು ಪರೀಕ್ಷಿಸಿ ಕ್ರಮೇಣ ಸಂಪೂರ್ಣವಾಗಿ ಸೌರವ್ಯೂಹವನ್ನೇ ತನ್ನ ವಶಕ್ಕೆ ಒಳಪಡಿಸಿಕೊಳ್ಳುತ್ತದೆ. ಈಗ ಸ್ವಲ್ಪಸ್ವಲ್ಪವೇ ಆರಂಭವಾಗಿರುವ ಬಾಹ್ಯಾಕಾಶದ ಪರೀಕ್ಷೆ, ಮುಂಬರುವ ದಶಕಗಳಲ್ಲಿ ಅಲ್ಲದಿದ್ದರೆ ಶತಮಾನಗಳಲ್ಲಾದರೂ ಈ ಮಹಾವಿಜ್ಞಾನಿಯ ಮಾತನ್ನು ನಿಜವಾಗಿಸುವುದರಲ್ಲಿ ಯಾವ ಸಂದೇಹವೂ ಇಲ್ಲ. (ಎನ್.ವಿ.ಎಂ.)