ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಲೆಸ್, ಜಾನ್ ಫಾಸ್ಟರ್

ವಿಕಿಸೋರ್ಸ್ದಿಂದ

ಡಲೆಸ್, ಜಾನ್ ಫಾಸ್ಟರ್ 1889-1959. ಅಮೆರಿಕದ ಪ್ರಮುಖ ವಕೀಲ, ರಾಜತಂತ್ರಜ್ಞ, ಎಡನೆಯ ಮಹಾಯುದ್ಧಾನಂತರ ಕಾಲದಲ್ಲಿ ಅಮೆರಿಕದ ವಿದೇಶಾಂಗ ನೀತಿಯನ್ನು ರೂಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದವರು. ಜನನ ವಾಷಿಂಗ್ಟನ್ ಡಿ.ಸಿ.ಯಲ್ಲಿ. ಪ್ರಿನ್ಸ್‍ಟನ್ ವಿಶ್ವವಿದ್ಯಾಲಯ ಮತ್ತು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ ನ್ಯಾಯಶಾಸ್ತ್ರ ಶಾಲೆಯಲ್ಲಿ ಓದಿ ಉತ್ತಮ ದಜೇಯಲ್ಲಿ ಉತ್ತೀರ್ಣರಾದರು. ಪ್ಯಾರಿಸಿನ ಸಾರ್ಬಾನ್‍ನಲ್ಲೂ ವ್ಯಾಸಂಗ ಮಾಡಿದರು. 1911ರಲ್ಲಿ ನ್ಯೂ ಯಾರ್ಕ್ ನಗರದಲ್ಲಿ ಅಂತರರಾಷ್ಟ್ರೀಯ ನ್ಯಾಯ ಸಂಸ್ಥೆಯೊಂದನ್ನು ಸೇರಿ, 1920ರಲ್ಲಿ ಅದರ ಪಾಲುದಾರರಾಗಿ, 1927ರಲ್ಲಿ ಒಡೆಯರಾದರು. ಡಲೆಸರು ರಿಪಬ್ಲಿಕನ್ ಪಕ್ಷದವರಾಗಿದ್ದರು, ಒಂದನೆಯ ಮಹಾಯುದ್ಧಾನಂತರ ನಡೆದ ವರ್ಸೇಲ್ಸ್ ಶಾಂತಿ ಸಮ್ಮೇಳನದಲ್ಲಿ ಅವರು ನ್ಯಾಯ ಸಲಹೆಗಾರರಾಗಿದ್ದರು. ಅಮೆರಿಕದ ಅಧ್ಯಕ್ಷ ವಿಲ್ಸನರು ಅವರನ್ನು ಯುದ್ಧ ಪರಿಹಾರ ಆಯೋಗದ ಸದಸ್ಯರಾಗಿ ನೇಮಕ ಮಾಡಿದರು. ಎರಡನೆಯ ಮಹಾಯುದ್ಧದ ಸಮಯದಲ್ಲಿ ಅವರು ಡಂಬಾರ್ಟನ್ ಓಕ್ಸ್ ಸಮ್ಮೇಳನದಲ್ಲಿ ವಿಶ್ವಸಂಸ್ಥೆಯ ಪ್ರಣಾಳಿಕೆಯನ್ನು ರಚಿಸುವಲ್ಲಿ ನೆರವಾದರು. 1949ರಲ್ಲಿ ನ್ಯೂ ಯಾರ್ಕಿನ ಪರವಾಗಿ ಸೆನೆಟ್ ಸಭೆಯ ಸದಸ್ಯರಾದರು. (ವಿ.ಬಿಎ.)

1950ರಲ್ಲಿ ವಿದೇಶಾಂಗ ಇಲಾಖೆಯಲ್ಲಿ ಸಲಹೆಗಾರರಾಗಿ ನೇಮಕ ಹೊಂದಿದ ಡಲೆಸರ ಮೇಲೆ ಜಪಾನಿನೊಂದಿಗೆ ಶಾಂತಿ ಕೌಲಿಗಾಗಿ ಸಂಧಾನ ನಡೆಸುವ ಹೊಣೆ ಬಿತ್ತು. ಅವರು ವಿಶ್ವದ ಪ್ರಮುಖ ರಾಜಧಾನಿಗಳಿಗೆ ಭೇಟಿ ನೀಡಿ ಯಶಸ್ಸು ಗಳಿಸಿ ಚತುರ ರಾಜತಂತ್ರಜ್ಞರೆಂದು ಹೆಸರು ಪಡೆದರು.

1952ರಲ್ಲಿ ಅವರ ಹೆಸರು ಅಮೆರಿಕದ ಸೆಕ್ರೆಟರಿ ಆಫ್ ಸ್ಟೇಟ್ಸ್ ಸ್ಥಾನಕ್ಕೆ ಸೂಚಿತವಾಯಿತು. 1953ರ ಜನವರಿಯಲ್ಲಿ ಅವರು ಈ ಸ್ಥಾನವನ್ನು ಸ್ವೀಕರಿಸಿ, ಸಾರ್ವಜನಿಕಾಭಿಪ್ರಾಯವನ್ನು ತಮ್ಮ ನೀತಿಗೆ ಅನುಗುಣವಾಗಿ ಸಮರ್ಥವಾಗಿ ರೂಪಿಸಿದರು. ಕಮ್ಯೂನಿಷ್ಟ್ ಜನರ ವಿರುದ್ಧ ಕ್ವಿಮಾಯ್ ಮತ್ತು ಮಾಟ್ಸುಗಳ ರಕ್ಷಣೆ, ಯೂರೋಪಿನ ರಕ್ಷಣಾ ಸಮುದಾಯಕ್ಕೆ ಫ್ರಾನ್ಸು ಪ್ರವೇಶಿಸುವಂತೆ ಒತ್ತಾಯ, ಪೂರ್ವ-ಪಶ್ಚಿಮ ಬಣಗಳ ಬಡಿದಾಟದ ನಡುವೆ ಬರ್ಲಿನ್ ಸಮಸ್ಯೆ ಬೂಹತ್ತಾದಾಗ ಕಮ್ಯೂನಿಸ್ಟರಿಗೆ ಮಣಿಯದ ದಿಟ್ಟತನ-ಇವು ಡಲೆಸರು ಸಾಧನೆಗಳೆಂದು ಹೇಳಲಾಗಿದೆ. ಆದರೆ ಇವರು ಸೋವಿಯೆತ್ ದೇಶ ಹಾಗೂ ಚೀನದ ವಿರುದ್ಧ ನಿಂತು, ಪ್ರಪಂಚವನ್ನು ಇನ್ನೊಂದು ಯುದ್ಧದ ಅಂಚಿಗೆ ಕರೆದೊಯ್ದರೆಂಬುದೂ ಭಯ ಹುಟ್ಟಿಸಿ ಮಣಿಸುವುದು ಇವರ ನೀತಿಯಾಗಿತ್ತೆಂಬುದೂ ಇವರ ವಿರುದ್ಧ ಮಾಡಲಾದ ಟೀಕೆ. ನಗೆಗುದಿ ಯುದ್ಧದ ಅಧ್ವರ್ಯ ಇವರೆಂದು ಹೆಸರು ಗಳಿಸಿದ್ದಾರೆ.

ಕ್ಯಾನ್ಸರ್ ವ್ಯಾಧಿಯಿಂದಾಗಿ ಡಲೆಸರು 1959ರ ಏಪ್ರಿಲ್ 15ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು. ಮೇ 24ರಂದು ತೀರಿಕೊಂಡರು. ವಾರ್, ಪೀಸ್ ಅಂಡ್ ಚೇಂಜ್ (1939), ವಾರ್ ಆರ್ ಪೀಸ್ (1950)-ಇವು ಡಲೆಸರ ಕೃತಿಗಳು.