ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಿಕಿನ್ಸನ್, ಎಮಿಲಿ ಎಲಿಜ಼ಬೆತ್

ವಿಕಿಸೋರ್ಸ್ದಿಂದ

ಡಿಕಿನ್‍ಸನ್, ಎಮಿಲಿ ಎಲಿಜಬೆತ್ 1830-1886. ಅಮೆರಿಕದ ಪ್ರಸಿದ್ಧ ಕವಯಿತ್ರಿಗಳಲ್ಲಿ ಒಬ್ಬಳು. ವಕೀಲನೊಬ್ಬನ ಮಗಳಾದ ಈಕೆ ಹುಟ್ಟಿದ್ದು ಮ್ಯಾಸಚೂಸಿಟ್ಸ್‍ನ ಅಮಸ್ಟ್‍ನಲ್ಲಿ. ಇಲ್ಲಿಯೇ ಈಕೆ ತನ್ನ ಜೀವಿತದ ಬಹುಭಾಗವನ್ನು ಕಳೆದಳು. ಮೌಂಟ್ ಹೋಲ್‍ಯೋಕ್ ಫೀಮೇಲ್ ಸೆಮಿನರಿಯಲ್ಲಿ ಓದಿದ ಈಕೆ ಪ್ರೀತಿ ಮತ್ತು ಹಾಸ್ಯಮನೋಭಾವಗಳಿಗೆ ಪ್ರಸಿದ್ಧಳಾದಳು. ಚಿಕ್ಕವಳಾಗಿದ್ದಾಗಲೇ ಹಳ್ಳಿಯ ಸಮಾಜಕಾರ್ಯಗಳಲ್ಲಿ ಪ್ರಮುಖಪಾತ್ರ ವಹಿಸಿದಳು. 1854ರಲ್ಲಿ ಈಕೆಯ ತಂದೆಯ ಜೊತೆಯಲ್ಲಿ ವಾಷಿಂಗ್‍ಟನ್‍ಗೆ ಪ್ರಯಾಣ ಬೆಳೆಸುವಾಗ ಯುವಕ ಪಾದ್ರಿಯೊಬ್ಬನನ್ನು ಪ್ರೇಮಿಸಿ ಆತ ಮದುವೆಯಾದವನೆಂದು ತಿಳಿದಾಗ ಭಗ್ನಹೃದಯಿಯಾದಳು. ಅಲ್ಲಿಂದಾಚೆಗೆ ಏಕಾಂತಜೀವನವನ್ನು ನಡೆಸಿದಳು. ಮನೆಯ ಹೊಸ್ತಿಲನ್ನು ದಾಟದೆ ಅನೇಕ ವರ್ಷಗಳನ್ನು ಕಳೆದಳು. ಒಂದು ಸಾವಿರಕ್ಕಿಂತಲೂ ಹೆಚ್ಚು ಭಾವಗೀತೆಗಳನ್ನು ತುಂಡು ಕಾಗದದ ಮೇಲೆ ಅಥವಾ ಬಳಸಿದ ಲಕ್ಕೋಟೆಗಳ ಹಿಂದೆ ಬರೆದಿಟ್ಟಳು. ಈಕೆ ಬದುಕಿರುವಾಗ ಕೇವಲ ಎರಡು ಪದ್ಯಗಳು ಪ್ರಕಟವಾಗಿದ್ದವು. ಈಕೆಯ ಕಾಲಾನಂತರ ಈಕೆಯ ಸಹೋದರಿ ಲಾವಿನಿಯಾ ಈಕೆಯ ಕವನಗಳನ್ನು ಹುಡುಕಿ ಕಲೆಹಾಕಿ ಮೂರು ಸಂಪುಟಗಳಲ್ಲಿ ಪ್ರಕಟಿಸಿದಳು (1890, 1891, 1896). ಮುಂದಿನ ಸಂಪುಟಗಳನ್ನು ದಿ ಸಿಂಗಲ್ ಹೌಂಡ್ (1914), ಫರ್ದರ್ ಪೊಯೆಮ್ಸ್ (1929) ಎಂಬ ಹೆಸರಿನಲ್ಲಿ ಪ್ರಕಟವಾದವು. 1894ರಲ್ಲಿ ಈಕೆಯ ಪತ್ರಗಳನ್ನು ಪ್ರಕಟಿಸಲಾಯಿತು. 1955ರಲ್ಲಿ ಟಿ.ಎಚ್.ಜಾನ್‍ಸನ್ ಈಕೆಯ ಕವನಗಳನ್ನು ಸಂಪಾದಿಸಿ ಪ್ರಕಟಿಸಿದ. ಈಕೆಯ ಕವನಗಳ ಮುಖ್ಯ ವಿಷಯ: ದೇವರು, ಸಾವು, ಪ್ರೇಮ ಮತ್ತು ನಿಸರ್ಗ. ಈ ಬಗೆಗೆ ಇವಳ ಮನೋಧರ್ಮ ಹೊಸತೆನಿಸುವಷ್ಟು ಭಿನ್ನವಾದರೂ ದೇವರನ್ನು ಚೋರ, ಬ್ಯಾಂಕರ್, ತಂದೆ ಎಂದು ಸಂಬೋಧಿಸುತ್ತಾಳೆ. ಮೃದುವಾದ ಅಥವಾ ಚುಚ್ಚುವ ಕಟಕಿಯನ್ನು ಈಕೆಯ ಕವನಗಳಲ್ಲಿ ಧಾರಾಳವಾಗಿ ಕಾಣಬಹುದು. (ಕೆ.ಬಿ.ಪಿ.; ಎಂ.ಕೆ.ಎನ್.)