ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡಿವಿಡಿವಿ ಮರ

ವಿಕಿಸೋರ್ಸ್ದಿಂದ

ಡಿವಿಡಿವಿ ಮರ ಲೆಗ್ಯೂಮಿನೋಸೀ ಕುಟುಂಬದ ಸೀಸಾಲ್‍ಪಿನೇಸೀ ಉಪಕುಟುಂಬಕ್ಕೆ ಸೇರಿದ ಒಂದು ವೃಕ್ಷ. ಸೀಮೆ ಅಲ್ಡೆಕಾಯಿ ಪರ್ಯಾಯನಾಮ. ಸೀಸಾಲ್‍ಪಿನಿಯ ಕೋರಿಯೇರಿಯ ಇದರ ವೈe್ಞÁನಿಕ ಹೆಸರು. ಇದು ಅಮೆರಿಕ ಮತ್ತು ಆಸ್ಟ್ರೇಲಿಯಗಳ ಮೂಲನಿವಾಸಿ. ಮೆಕ್ಸಿಕೊ, ವೆನಿಜ್ವೇಲ, ಉತ್ತರ ಬ್ರಜಿಲ್, ಜಮೇಕ ಮತ್ತು ಭಾರತಗಳಲ್ಲೂ ಬೆಳೆಯುತ್ತದೆ. ಇದು ಚಿಕ್ಕ ಗಾತ್ರದ ಮರ: ಇದರ ಎತ್ತರ ಸುಮಾರು 8 ಮೀ. ಅನೇಕ ರಂಬೆಗಳಿಂದ ಕೂಡಿದ್ದು ಛತ್ರಿಯಾಕಾರದಲ್ಲಿ ಹರಡಿಕೊಂಡು ಬೆಳೆಯುತ್ತದೆ. ಎಲೆಗಳು ಸಂಯುಕ್ತ ಮಾದರಿಯವು ; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಇದು ವರ್ಷದಲ್ಲಿ ಎರಡು ಸಲ ಅಂದರೆ ಜನವರಿ-ಫೆಬ್ರುವರಿ ಮತ್ತು ಜೂನ್-ಜುಲೈನಲ್ಲಿ ಹೂ ಬಿಡುತ್ತದೆ. ಹೂಗಳು ಹಸಿರು ಮಿಶ್ರಿತ ಹಳದಿ ಬಣ್ಣಕ್ಕಿದ್ದು ಸುವಾಸನಾಯುಕ್ತವಾಗಿವೆ. ಕಾಯಿಗಳು 5-7 ಸೆಂ.ಮೀ. ಉದ್ದ ಹಾಗೂ 2 ಸೆಂ.ಮೀ. ಅಗಲ ಇವೆ. ಚಪ್ಪಟೆಯಾಗಿ ಒಳಬಾಗಿ ಕೊಂಡಿರುವುದು ಇವುಗಳ ವಿಶೇಷ ಲಕ್ಷಣ. ಕಾಯಿಗಳಲ್ಲಿ ಗ್ಯಾಲೊಟ್ಯಾನಿನ್ ಮತ್ತು ಎಲ್ಯಾಜಿಟ್ಯಾನಿನ್ ಎಂಬ ವಸ್ತುಗಳಿವೆ.

ಡಿವಿಡಿವಿ ಮರ ಎರೆ ಮತ್ತು ಮರಳು ಭೂಮಿಯಲ್ಲಿ ಚೆನ್ನಾಗಿ ಬೆಳೆಯುತ್ತದೆ. ಇದನ್ನು ಬೀಜಗಳ ಮೂಲಕ ವೃದ್ಧಿಸಬಹುದು. ಬೀಜ ನೆಟ್ಟ 5-6 ವರ್ಷಗಳಲ್ಲಿ ಇದು ಫಲ ಬಿಡಲು ಪ್ರಾರಂಭಿಸಿದರೂ ತನ್ನ ಪೂರ್ಣ ಮತ್ತು ಒಳ್ಳೆಯ ಫಸಲನ್ನು ತನ್ನ 20ನೆಯ ವರ್ಷದಿಂದ ಕೊಡುವುದು. ಸರಿಯಾಗಿ ಬಲಿತ ಮರದಿಂದ 150 ಕೆ.ಜಿ. ಯಷ್ಟು ಕಾಯಿ ಸಿಕ್ಕುತ್ತದೆ. ಡಿವಿಡಿವಿ ಮರದ ಟ್ಯಾನಿನ್ನನ್ನು ಚರ್ಮಹದಗಾರಿಕೆಯಲ್ಲಿ ಬಳಸಲಾಗುತ್ತದೆ. ಅಲ್ಲದೆ ಬಟ್ಟೆ ಕೈಗಾರಿಕೆಯಲ್ಲಿ ಬಣ್ಣಗಚ್ಚಾಗಿ ಇದನ್ನು ಉಪಯೋಗಿಸುವುದಿದೆ. ಕಾಯಿಗಳ ಕಷಾಯವನ್ನು ಮೊಳೆರೋಗದ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಕಾಯಿಗಳಿಂದ ವಿಶಿಷ್ಟ ರೀತಿಯ ಕಪ್ಪುಶಾಯಿಯನ್ನೂ ತಯಾರಿಸುವುದುಂಟು. (ಎಂ.ಎಚ್.ಎಂ.; ವಿ.ಬಿ.)