ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡ ಬ್ರಾಗ್ಲೀ, ಮಾರಿಸ್

ವಿಕಿಸೋರ್ಸ್ದಿಂದ

ಡ ಬ್ರಾಗ್ಲೀ, ಮಾರಿಸ್ 1875-1960. ಫ್ರಾನ್ಸಿನ ಭೌತವಿಜ್ಞಾನಿ; ಆರನೆಯ ಡ್ಯೂಕ್ ಕೂಡ. ಫ್ರಾನ್ಸಿನ ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿ ವಿಜ್ಞಾನದ ಮೇಲಿನ ಒಲವಿನಿಂದ ಸ್ವಂತ ಮನೆಯಲ್ಲಿಯೇ ಸುಸಜ್ಜಿತ ಪ್ರಯೋಗಾಲಯವನ್ನು ಸ್ಥಾಪಿಸಿ, ತಾನೇ ಪ್ರಮುಖವಾದ ಸಂಶೋಧನೆಗಳನ್ನು ನಡೆಸಿದ್ದೇ ಅಲ್ಲದೆ, ಫ್ರೆಂಚ್ ವಿಜ್ಞಾನದ ಬೆಳೆವಣಿಗೆಗೆ ಪ್ರೋತ್ಸಾಹ ಕೂಡ ನೀಡಿದ. ಜನನ ಪ್ಯಾರಿಸಿನಲ್ಲಿ (27-4-1875). ಮನೆತನದ ಪದ್ಧತಿಗೆ ಅನುಸಾರವಾಗಿ ಇವನು ರಕ್ಷಣಾ ದಳವನ್ನು ಸೇರಬೇಕಾಯಿತು. ಕಡಲ ಮೇಲಿನ ಒಲವಿನಿಂದ ನೌಕಾಪಡೆಯನ್ನು ಸೇರಿ ಫ್ರಾನ್ಸಿನ ಎಕೋಲೆ ಸವಾಲೆ ಎಂಬ ತರಬೇತಿ ಶಾಲೆಯನ್ನು ಸೇರಿದ (1893-95). ತರುವಾಯ ಈತನನ್ನು ಮೆಡಿಟರೇನಿಯನ್ ಸ್ಕ್ವಾಡ್ರನ್ನಿಗೆ ಕಳುಹಿಸಲಾಯಿತು. ಫ್ರಾನ್ಸಿನ ಯುದ್ಧನೌಕೆಗಳಲ್ಲಿ ಮೊತ್ತಮೊದಲ ಬಾರಿಗೆ ನಿಸ್ತಂತು ವ್ಯವಸ್ಥೆಯನ್ನು ಈತ ಏರ್ಪಡಿಸಿದ. ಇದೇ ವೇಳೆ ಟೂಲಾನ್ ಮತ್ತು ಮಾರ್ಸೇಲ್ಸ್ ವಿಶ್ವವಿದ್ಯಾಲಯದಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿ 1900ರಲ್ಲಿ ವಿಜ್ಞಾನದ ಲೈಸೆನ್ಸ್ ಪದವಿಯನ್ನು ಪಡೆದ ವಿಜ್ಞಾನಿಯಾಗಲು ಇವನಿಗೆ ಬಲವಾದ ಅಪೇಕ್ಷೆ ಇದ್ದರೂ ಮನೆಯಲ್ಲಿನ ಹಿರಿಯರ ಒತ್ತಾಯದಿಂದ ನೌಕಾಪಡೆಯಲ್ಲೇ ಮುಂದುವರಿಯಬೇಕಾಯಿತು. ಅಲ್ಲಿನ ನಿಸ್ತಂತು ವಾರ್ತಾಪ್ರಸಾರ ವ್ಯವಸ್ಥೆಯನ್ನು ಅನೇಕ ವಿಧವಾಗಿ ಉತ್ತಮಗೊಳಿಸಿದ. ತನ್ನ ನಿವಾಸದ ಒಂದು ಕೊಠಡಿಯನ್ನೇ ಪ್ರಯೋಗಶಾಲೆಯಾಗಿ ಮಾರ್ಪಡಿಸಿಕೊಂಡಿದ್ದ. 1908ರಲ್ಲಿ ಇವನು ನೌಕಾಪಡೆಯಿಂದ ನಿವೃತ್ತಿ ಪಡೆದು ಮೆಂಡಾನ್ ಎಂಬಲ್ಲಿ ಡೇ ಲಾಂಡೆರ್ಸ್ ಎಂಬಾತನ ಬಳಿ ರೋಹಿತವಿಜ್ಞಾನವನ್ನು ಅಧ್ಯಯಿಸಿದ. ಮುಂದೆ ಕಾಲೇಜ್ ಡಿ ಫ್ರಾನ್ಸಿನಲ್ಲಿ ಪ್ರಸಿದ್ಧ ಭೌತಶಾಸ್ತ್ರಜ್ಞ ಪಾಲ್ ಲಾಂಜೆವಿನ್ ಎಂಬಾತನ ನಿರ್ದೇಶನದಲ್ಲಿ ಅಯಾನುಗಳ ಚಲನಶೀಲತೆಯ ಬಗ್ಗೆ ಪ್ರಬಂಧವನ್ನು ರಚಿಸಿ 1908ರಲ್ಲಿ ಡಾಕ್ಟರೇಟ್ ಪದವಿಯನ್ನು ಪಡೆದ.

ಮುಂದಿನ ವರ್ಷಗಳಲ್ಲಿ ಡ ಬ್ರಾಗ್ಲೀ ತನ್ನ ಮನೆಯಲ್ಲೇ ಸುಸಜ್ಜಿತವಾದ ಪ್ರಯೋಗಾಲಯವನ್ನು ಸ್ಥಾಪಿಸಿ, ಎಕ್ಸ್‍ಕಿರಣ ಯಂತ್ರ, ಮುಂತಾದ ವಿದ್ಯುದ್ವಾಹಕ ಕಣಗಳನ್ನು ಹೆಚ್ಚು ಹೆಚ್ಚು ಸಮರ್ಪಕವಾಗಿ ಸೃಷ್ಟಿಸುವ ವಿಧಾನಗಳ ಬಗ್ಗೆ ಸಂಶೋಧನೆ ನಡೆಸಿದ. 1912ರಲ್ಲಿ ಲಾವೆ ಮತ್ತು ಬ್ರಾಗ್‍ರವರು ಎಕ್ಸ್‍ಕಿರಣಗಳ ನಮನವನ್ನು (ಡಿಫ್ರ್ಯಾಕ್ಷನ್) ಉಂಟುಮಾಡಲು ಸಾಧ್ಯವೆಂದು ಶೋಧಿಸಿದರು. ಮತ್ತೆ ಈತ ಎಕ್ಸ್ ಕಿರಣಗಳ ರೋಹಿತದ ಬಗ್ಗೆ ಸಂಶೋಧನೆಯನ್ನು ಪ್ರಾರಂಭಿಸಿ ಅನೇಕ ಮುಖ್ಯವಾದ ಪ್ರಯೋಗಗಳನ್ನು ನಡೆಸಿದ. ಆವರ್ತಿಸುವ ಹರಳಿನ ವಿಧಾನ ಎಂಬುದು ಇವನು ಶೋಧಿಸಿದ ಒಂದು ಮುಖ್ಯವಾದ ಪ್ರಯೋಗವಿಧಾನ. ಇದನ್ನು ಉಪಯೋಗಿಸಿ ಎಕ್ಸ್‍ಕಿರಣಗಳ ಉತ್ಸರ್ಜನೆಯ ರೋಹಿತಗಳನ್ನು (ಎಮಿಷನ್ ಸ್ಪೆಕ್ಟ್ರ) ಪರೀಕ್ಷಿಸಿದ.

ಒಂದನೆಯ ಮಹಾಯುದ್ಧದ ವೇಳೆ ಡ ಬ್ರಾಗ್ಲೀ ನೌಕಾಪಡೆಗೆ ಹಿಂತಿರುಗ ಬೇಕಾಯಿತು. ಯುದ್ಧ ಮುಗಿದ ಬಳಿಕ ಈತ ಎಕ್ಸ್‍ಕಿರಣಗಳ ಹೀರುವಿಕೆಯ ರೋಹಿತಗಳ ಬಗ್ಗೆ ಸಂಶೋಧನೆ ನಡೆಸಿ ಹೀರುವಿಕೆಯ ಏಣುಗಳ (ಅಬ್‍ಸಾಪ್ರ್ಷನ್ ಎಡ್ಜಸ್) ಬಗ್ಗೆ ಕೂಲಂಕಷವಾದ ಪರೀಕ್ಷೆ ನಡೆಸಿ ಅವುಗಳ ಅನೇಕ ಮುಖ್ಯ ವಿವರಗಳನ್ನು ಶೋಧಿಸಿದ. ಕಣರೂಪದ ರೋಹಿತದ ಅಂದರೆ ಒಂದು ಗೊತ್ತಾದ ಆವರ್ತಾಕವಿರುವ ಎಕ್ಸ್‍ಕಿರಣಗಳು ಯಾವುದಾದರೊಂದು ವಸ್ತುವಿನ ಮೇಲ ಬಿದ್ದಾಗ ಆ ವಸ್ತುವಿನಿಂದ ಹೊರಸೂಸಲ್ಪಡುವ ದ್ಯುತಿ ಎಲೆಕ್ಟ್ರಾನುಗಳ ವೇಗಗಳ ವಿತರಣೆಯ ಬಗ್ಗೆಯೂ ಪ್ರಯೋಗಗಳನ್ನು ನಡೆಸಿದ. ಇಂಥ ಪ್ರಯೋಗಗಳಿಂದಲೂ ವಸ್ತುವಿನ ಹೀರುವಿಕೆಯ ಏಣುಗಳನ್ನು ಶೋಧಿಸಲು ಸಾಧ್ಯವಾಯಿತು. ಈ ಸಂಶೋಧನೆಗಳಲ್ಲಿ ಇವನ ತಮ್ಮ ಲೂಯಿಯೂ ಇವನೊಂದಿಗೆ ಕೆಲಸ ಮಾಡಿದ. ಡೇನಿಷ್ ಭೌತವಿಜ್ಞಾನಿ ನೀಲ್ಸ್ ಬೋರ್ (1885-1962) ನಿರೂಪಿಸಿದ್ದ ಪರಮಾಣುಗಳಲ್ಲಿರುವ ಎಲೆಕ್ಟ್ರಾನುಗಳ ಚಿಪ್ಪುಗಳ ವಿವರಗಳನ್ನು ಹೆಚ್ಚು ನಿಖರಗೊಳಿಸಿದ. 1924ರಲ್ಲಿ ಡ ಬ್ರಾಗ್ಲೀ ಸಹೋದರರು ಎಕ್ಸ್‍ಕಿರಣಗಳ ಮೇಲಿನ ಇನ್ನೊಂದು ಪ್ರಯೋಗಕ್ಕೆ ಕಾಂಪ್ಟನ್ ಪರಿಣಾಮದ ತಂತ್ರವನ್ನು ಅನ್ವಯಿಸಿದರು. ಡ ಬ್ರಾಗ್ಲೀಯ ಸ್ವಂತ ಸಂಶೋಧನಾಲಯಕ್ಕೆ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಬರಲಾರಂಭಿಸಿ, ನ್ಯೂಕ್ಲಿಯರ್ ಭೌತಶಾಸ್ತ್ರದ ಬಗ್ಗೆಯೂ ವಿಶ್ವಕಿರಣಗಳ ಬಗ್ಗೆಯೂ ಅನೇಕ ಸಂಶೋಧನೆಗಳನ್ನು ನಡೆಸಿದರು. ಮರಣ ಸೀನೆಯ ನ್ಯೂ ಎಲ್ಲಿ (ಫ್ರಾನ್ಸ್) ಎಂಬಲ್ಲಿ (15-7-1960). (ಎನ್.ವಿ.ಎಂ.)