ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಡ ಮಾಯ್ವರ್, ಏಬ್ರಹಾಮ್

ವಿಕಿಸೋರ್ಸ್ದಿಂದ

ಡ ಮಾಯ್‍ವರ್, ಏಬ್ರಹಾಮ್ 1667-1754. ಫ್ರಾನ್ಸ್ ಸಂಜಾತ ಇಂಗ್ಲಿಷ್ ಗಣಿತಜ್ಞ; 1667 ಮೇ 26ರಂದು ಫ್ರಾನ್ಸಿನ ವಿಟ್ರಿ ಎಂಬಲ್ಲಿ ಜನನ. ಈತನ ಹದಿನೆಂಟನೆಯ ವಯಸ್ಸಿನಲ್ಲಿ ತಂದೆ ತಾಯಿ ಫ್ರಾನ್ಸನ್ನು ತ್ಯಜಿಸಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ನೆಲಸಿದರು. ಆದ್ದರಿಂದ ಡ ಮಾಯ್‍ವರನ ಪ್ರೌಢ ವಿದ್ಯಾಭ್ಯಾಸ ನಡೆದದ್ದು ಇಂಗ್ಲೆಂಡಿನಲ್ಲೆ. ನ್ಯೂಟನ್‍ಕೃತ ಪ್ರಿನ್ಸಿಪಿಯ ಎನ್ನುವ ಉದ್ಗ್ರಂಥ ಈ ತರುಣನಲ್ಲಿ ಗಣಿತದ ವಿಚಾರವಾಗಿ ಅಪಾರಾಸಕ್ತಿಯನ್ನು ಮೂಡಿಸಿತು. ಅದರ ಕೆಲವು ಪುಟಗಳನ್ನು ಹರಿದು ನಿತ್ಯವೂ ಕೆಲಸಕ್ಕೆ ಹೋಗಿರುವಾಗ ತೆಗೆದುಕೊಂಡು ಹೋಗಿ ಬಿಡುವು ವೇಳೆಯಲ್ಲಿ ಅದರಲ್ಲಿಯ ವಿಷಯಗಳನ್ನು ಓದಿ ಮನನ ಮಾಡಿಕೊಳ್ಳುತ್ತಿದ್ದ. ರಾಯಲ್ ಸೊಸೈಟಿಗೆ ಈತ ಚುನಾಯಿತನಾದ ಬಳಿಕ ನ್ಯೂಟನ್, ಹ್ಯಾಲಿ ಮತ್ತು ಇತರ ಇಂಗ್ಲಿಷ್ ಗಣಿತ ಪಂಡಿತರ ನಿಕಟ ಸಂಪರ್ಕ ಇವನಿಗೆ ಲಭಿಸಿತು. ಇವನ ಗಣಿತಪಾಂಡಿತ್ಯದ ಬಗ್ಗೆ ನ್ಯೂಟನ್ ನುಡಿದಿರುವ ಮಾತು ಹೀಗಿದೆ: 'ಡ ಮಾಯ್‍ವರನ ಬಳಿಗೆ ಹೋಗಿ; ಆತ ನನಗಿಂತಲೂ ಈ ವಿಷಯಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದಾನೆ'. ಡ ಮಾಯ್‍ವರ್ ಬರ್ಲಿನ್ ಮತ್ತು ಪ್ಯಾರಿಸ್ ಅಕಾಡೆಮಿಗಳ ಸದಸ್ಯನೂ ಆಗಿದ್ದ. ಈತನ ಮರಣದ ರೀತಿ ಮನಃಶ್ಶಾಸ್ತ್ರಜ್ಞರಿಗೆ ಕುತೂಹಲ ಕೆರಳಿಸುವಂತಿದೆ. ಸಾಯುವುದಕ್ಕೆ ಕೆಲದಿವಸಗಳ ಮೊದಲು ನಿತ್ಯ 30 ಮಿನಿಟುಗಳಷ್ಟು ನಿದ್ರೆ ಜಾಸ್ತಿ ಬಯಸಿದ. ಆ ಪ್ರಕಾರ ಸುಮಾರು 23 ತಾಸುಗಳು ಹೆಚ್ಚು ನಿದ್ರೆಮಾಡಿದ ಮೇಲೆ 24 ತಾಸುಗಳ ಮಿತಿ ಮುಟ್ಟುವರೆಗೆ ಒಂದೇ ಸಮನೆ ನಿದ್ರೆಮಾಡಿ ನಿದ್ರೆಯಲ್ಲಿಯೇ ಕೊನೆಯುಸಿರೆಳೆದ (27-5-1754).

ತ್ರಿಕೋನಮಿತಿಯಲ್ಲಿ ಬರುವ ಕಾಲ್ಪನಿಕ ಸಂಖ್ಯೆಗಳ ಬಗ್ಗೆ ಡ ಮಾಯ್‍ವರನು ಲ್ಯಾಂಬರ್ಟನೊಡನೆ ಮಾಡಿದ ಸಂಶೋಧನೆ ಗಣಿತಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯವಾದದ್ದು. ಈ ಸಂಬಂಧದಲ್ಲಿ ಎರಡು ಪ್ರಮೇಯಗಳು ಈಗಲೂ ಈತನ ಹೆಸರಿನಿಂದಲೇ ಕರೆಯಲ್ಪಟ್ಟಿವೆ. ಎಂಬುದು ನ ಎಲ್ಲ ನೈಜ ಬೆಲೆಗಳಿಗೂ ನ ಒಂದು ಬೆಲೆ ಎಂಬುದು ಒಂದು ಪ್ರಮೇಯ ಮತ್ತು ರ ವರ್ಗಾತ್ಮಕ ಅಪವರ್ತನಗಳನ್ನು ಶೋಧಿಸುವ ಬಗೆಗಿನದು ಇನ್ನೊಂದು ಪ್ರಮೇಯ. ಸಂಭಾವ್ಯತಾ ಸಿದ್ಧಾಂತದ ಬಗ್ಗೆ ಲ್ಯಾಪ್‍ಲಾಸನ ವಿನಾ ಬೇರೆ ಯಾರೂ ಡ ಮಾಯ್‍ವರನಷ್ಟು ಸಂಶೋಧನೆ ಮಾಡಿಲ್ಲ. ಸಿ ಹೈಗನ್ಸ್ ನಿರೂಪಿಸಿದ ಹಲವು ಚುಕ್ಕೆಗಳಿರುವ ಮುಖಗಳುಳ್ಳ ದಾಳಗಳನ್ನು ಎಸೆದು ಅನುಕೂಲ ಚುಕ್ಕೆಗಳನ್ನು ಪಡೆಯುವ ಸಂಭಾವ್ಯತೆಯ ಸಮಸ್ಯೆಗೆ 'ಡ ಮಾಯ್‍ವರನ ಸಮಸ್ಯೆ' ಎಂದೇ ಹೆಸರಿದೆ. ಈ ಸಮಸ್ಯೆಯನ್ನು ಡ ಮಾಯ್‍ವರ್ ಮತ್ತು ಇತರರು ಬಿಡಿಸಿದ್ದಾರೆ. ಫಿಲಸಾಫಿಕಲ್ ಟ್ರಾನ್‍ಸ್ಯಾಕ್ಷನ್ ಎಂಬ ಸಂಶೋಧನೆ ಪತ್ರಿಕೆಯಲ್ಲಿ ಈತ ಗಣಿತಶಾಸ್ತ್ರದ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದಾನೆ. ದಿ ಡಾಕ್ಟ್ರಿನ್ ಆಫ್ ಚಾನ್ಸಸ್ (1718) ಮತ್ತು ಮಿಸೆಲೇನಿಯಾ ಅನಲಿಟಿಕಾ (1730)-ಎಂಬುವು ಈತನ ಪ್ರಮುಖ ಗ್ರಂಥಗಳು. ಮೊದಲ ಪುಸ್ತಕದಲ್ಲಿ ಪುನರಾವರ್ತಿತ ಶ್ರೇಣಿಗಳ ಸಿದ್ಧಾಂತದ ಬಗ್ಗೆ, ಕೋಟ್ಸ್‍ನ ಅಕಾಲಿಕ ಸಾವಿನಿಂದ ಅಪೂರ್ಣವಾಗಿ ಉಳಿದಿದ್ದ ಆಂಶಿಕ ಭಿನ್ನರಾಶಿ ಸಿದ್ಧಾಂತದ ಬಗ್ಗೆ ಮತ್ತು ಸಂಯುಕ್ತ ಘಟನೆಯ ಸಂಭಾವ್ಯತೆ ಕಂಡುಹಿಡಿಯುವ ಬಗ್ಗೆ ಉಲ್ಲೇಖವಿದೆ. ತ್ರಿಕೋನಮಿತಿಯ ಬಗ್ಗೆ ಅನೇಕ ವಿಚಾರಗಳೂ ಖಗೋಳಶಾಸ್ತ್ರದ ಬಗ್ಗೆ ಅನೇಕ ಪ್ರಮೇಯಗಳೂ ಎರಡನೆಯ ಪುಸ್ತಕದಲ್ಲಿ ವಿವರಿಸಲ್ಪಟ್ಟಿವೆ. (ಎನ್.ಆರ್.ಆರ್.ಎ.)