ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ತೊಖಾರಿ ಭಾಷೆ

ವಿಕಿಸೋರ್ಸ್ದಿಂದ

ತೊಖಾರಿ ಭಾಷೆ -

ಇಂಡೋ - ಯುರೋಪಿಯನ್ ಭಾಷಾವರ್ಗಕ್ಕೆ ಸೇರಿದ್ದ ಒಂದು ಪ್ರಮುಖ ಭಾಷೆ. ಇದನ್ನು ಕೆಲವು ವಿದ್ವಾಂಸರು `ಕ ಕಾರತಮ ಉಪಭಾಷಾ ವರ್ಗಕ್ಕೂ ಮತ್ತೆ ಕೆಲವು ವಿದ್ವಾಂಸರು `ಸ ಕಾರತಮ ಉಪಭಾಷಾವರ್ಗಕ್ಕೂ ಸೇರಿಸಿದ್ದಾರೆ. ವೇದಗಳ ಸಂಸ್ಕøತದಂತೆ ಇದು ಈಗ ಮೃತಭಾಷೆ. ಜರ್ಮನ್, ರಷ್ಯನ್, ಫ್ರೆಂಚ್, ಇಂಗ್ಲಿಷ್ ಮುಂತಾದ ಭಾಷಾತತ್ತ್ವಜ್ಞರು ಈ ಭಾಷೆಯ ಬಗ್ಗೆ ಆಳವಾದ ಸಂಶೋಧನೆ ಕೈಗೊಂಡು ಗಣನೀಯವಾದ ಕೆಲಸ ಮಾಡಿದ್ದಾರೆ. ಇವರ ಊಹೆಯ ಪ್ರಕಾರ ತೊಖಾರಿ ಕ್ರಿ.ಪೂ. ಏಳನೆಯ ಶತಮಾನದಲ್ಲಿ ತುಂಬ ಪ್ರಚಾರದಲ್ಲಿದ್ದು, ತದನಂತರ ಅದು ಲುಪ್ತಗೊಂಡಿತು. ಸುಮಾರು ಇಪ್ಪತ್ತನೆಯ ಶತಮಾನದ ಮೊದಲ ಹಂತದಲ್ಲಿ ಪೂರ್ವಭಾಗದ ಚೀನ, ತುರ್ಕಿಸ್ತಾನದ ತುರ್‍ಫಾನ್ ಪ್ರದೇಶಗಳಲ್ಲಿ ದೊರೆತಿರುವ ಕೆಲವು ಪ್ರಾಚೀನ ಗ್ರಂಥ ಹಾಗೂ ತಾಮ್ರಪತ್ರಗಳನ್ನು ಆಧರಿಸಿ ಈ ಭಾಷೆಯನ್ನು ಆಡುತ್ತಿದ್ದ ಜನ ಬ್ರಾಹ್ಮಿ ಲಿಪಿ ಮತ್ತು ಖರೋಷ್ಟಿ ಲಿಪಿಗಳನ್ನು ತಮ್ಮ ವ್ಯವಹಾರಕ್ಕಗಿ ಬಳಸುತ್ತಿದ್ದರುಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಲಿಪಿಗಳು ಏನೇ ಇರಲಿ ತೊಖಾರಿ ಭಾಷೆಯೊಂದು ಇದ್ದಿತೆಂಬುದರಲ್ಲಿ ಅನುಮಾನವೇನಿಲ್ಲ. ಪ್ರೊ. ಸೀಗ್ ಎಂಬಾತ ಈ ಭಾಷೆಯನ್ನು ಆಳವಾಗಿ ಅಭ್ಯಸಿಸಿ ಇದನ್ನು ಆಡುತ್ತಿದ್ದ ತೊಖಾರ್ ಜನ ಕ್ರಿ.ಪೂ. ಏಳನೆಯ ಶತಮಾನದಲ್ಲಿದ್ದರು ಎಂಬುದನ್ನು ಖಚಿತಪಡಿಸಿದ್ದಾನಲ್ಲದೇ ಆ ಜನರು ಆಡುತ್ತಿದ್ದ ಭಾಷೆಯ ತೊಖಾರಿ ಭಾಷೆ ಎಂದಿದ್ದಾನೆ. ತೊಖಾರಿ ಸರ್ವವಿಧದಲ್ಲಿಯೂ ಇಂಡೋ ಯೂರೋಪಿಯನ್ ಭಾಷೆಗಳನ್ನೇ ಹೋಲುತ್ತದೆ. ಈ ದೃಷ್ಟಿಯಿಂದ ಇದನ್ನು ಇಂಡೋ-ಯುರೋಪಿಯನ್ ಭಾಷಾವರ್ಗಕ್ಕೆ ಸೇರಿದ ಪ್ರಮುಖ ಭಾಷೆಗಳ ಸಾಲಿನಲ್ಲಿ ಆತ ಸೇರಿದ್ದಾನೆ. ಹಾಗೆಯೇ ಈ ಭಾಷೆಯಲ್ಲಿ ಯುರಲ್ ಆಲ್ಟೇಯಿಕ್ ಭಾಷೆಗಳ ಪ್ರಭಾವ ವಿಶೇಷವಾಗಿ ಕಂಡುಬರುವುದು ಎಂದು ಅಭಿಪ್ರಾಯವನ್ನು ಸೂಚಿಸಿದ್ದಾನೆ. ಭಾರತೀಯ ಭಾಷೆಗಳನ್ನು ಸುದೀರ್ಘವಾಗಿ ಅಭ್ಯಸಿಸಿ ಅವುಗಳ ಸರ್ವೇಕ್ಷಣಾಕಾರ್ಯವನ್ನು ಕೈಗೊಂಡ ಗ್ರೀಯರ್‍ಸನ್ ಮಹಾಭಾರತ ಮತ್ತು ಗ್ರೀಕ್ ಭಾಷೆಯ ಕೆಲವು ಪ್ರಾಚೀನ ಗ್ರಂಥಗಳಲ್ಲಿ ದೊರೆಯುವ ತುಷಾರ ಎಂಬ ಪದವನ್ನು ಆದರಿಸಿ ತುಷಾರ ಎಂಬ ಜನಾಂಗವೇ ತೊಖಾರಿ ಭಾಷೆಯನ್ನು ಆಡುತ್ತಿದ್ದ ಜನವೆಂದು ಅಭಿಪ್ರಾಯಪಟ್ಟಿದ್ದಾರೆ. ಮತ್ತೆ ಕೆಲವು ವಿದ್ವಾಂಸರು ತುಷಾರ ಮತ್ತು ತೊಖಾರೋಯಿ ಎಂಬ ಪದಗಳನ್ನು ಆಧರಿಸಿ ತೊಖಾರೋಯಿ ಜನರ ಭಾಷೆಯೇ ತೊಖಾರಿ ಎಂದು ಅನುಮಾನಿಸಿದ್ದಾರೆ. ತುಷಾರ ಮತ್ತು ತೊಖಾರೋಯಿ ಎಂಬ ಜಾತಿಯ ಜನ ಸುಮಾರು ಏಳನೆಯ ಶತಮಾನದಲ್ಲಿ ಇದ್ದಿರಬಹುದೆಂಬುದಕ್ಕೆ ಆಧಾರಗಳು ಕಡಿಮೆ. ಈ ಭಾಷೆಯಲ್ಲಿ ದೊರೆಯುವ ಆಧಾರ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಕೆಲವು ಭಾಷಾತಜ್ಞರು ಈ ಬಾಷೆಯ ವೈಶಿಷ್ಟ್ಯಗಳನ್ನು ಬಗೆಬಗೆಯಾಗಿ ವಿವೇಚಿಸಿದ್ದಾರೆ. ಈ ಭಾಷೆಯ ಸ್ವರಸಮೂಹಗಳಲ್ಲಿ ಸರಳತೆ ಹೆಚ್ಚು; ಪದ ನಿರ್ಮಾಣಗಳಲ್ಲಿ ನಡೆಯಬಹುದಾದ ಸಂಧಿ ಹಾಗೂ ಸಮಾಸ ಕಾರ್ಯಗಳು, ವಾಕ್ಯರಚನೆ ಸಂಬಂಧಿಸಿದ ಇತರ ವಿಶೇಷತೆಗಳು ಸಂಸ್ಕøತ ಭಾಷೆಯನ್ನೇ ಹೆಚ್ಚು ಹೋಲುತ್ತವೆ. ಸಂಖ್ಯಾವಾಚಕ, ಸರ್ವನಾಮ, ಗುಣವಾಚಕ, ಇತ್ಯಾದಿ ವ್ಯಾಕರಣಾಂಶಗಳು ಇಂಡೋ-ಯುರೋಪಿಯನ್ ಭಾಷಾ ಪರಿವಾರಕ್ಕೆ ಸೇರಿದ ಹೆಚ್ಚು ಭಾಷೆಗಳನ್ನು ಹೋಲುತ್ತವಲ್ಲದೇ, ನಾಮಪದ ಹಾಗೂ ಕ್ರಿಯಾಪದಗಳು ಒಂದು ಕ್ರಮವನ್ನೇ ಅನುಸರಿಸುತ್ತವೆ. ವಿಭಕ್ತಿ, ಪ್ರತ್ಯಯ, ವಚನ ಲಿಂಗ ಮುಂತಾದ ವ್ಯವಸ್ಥೆಗಳು ಸಂಸ್ಕøತಕ್ಕೆ ಹೆಚ್ಚು ಹತ್ತಿರವಾಗಿವೆ. ವಿಭಕ್ತಿ ರೂಪಗಳು ಎರಡು ಬಗೆಯಲ್ಲಿ ದೊರೆಯುತ್ತವೆಯಲ್ಲದೇ ಸಂಸ್ಕøತದ ಕ್ರಮವನ್ನೇ ಹೋಲುತ್ತವೆ ಎಂದು ಕೆಲವರ ಅಭಿಪ್ರಾಯ. ಪದಸಮೂಹ ಇತರ ಭಾಷಾ ಪ್ರಭಾವಗಳಿಂದ ತುಂಬಿ ವಿಕೃತಗೊಂಡು ಅವುಗಳ ಆಂತರಿಕ ಸಂಬಂಧವನ್ನು ತಿಳಿಯಲು ಸಾಧ್ಯವಾಗದಷ್ಟು ಮಟ್ಟಿಗೆ ಪರಿವರ್ತನೆಗೊಂಡಿವೆ. ಸಂಸ್ಕøತದ ಪಿತ್ಸ, ವೀರ, ಮಾತೃ ಪದಗಳನ್ನು ತೊಖಾರಿಯ ಪಾಚರ್, ವೀರ್ ಮತ್ತು ಮಾಚರ್ ಪದಗಳೊಡನೆ ಹೋಲಿಸಿದರೆ ಇವು ಸರ್ವವಿಧದಲ್ಲಿಯೂ ಸಂಸ್ಕøತ ಭಾಷೆಯನ್ನೇ ಹೋಲುತ್ತವೆ ಎನ್ನಬಹುದು. ಈ ದಿಕ್ಕಿನಲ್ಲಿ ದೊರೆಯುವ ಸಾಮಗ್ರಿಗಳನ್ನೂ ಐತಿಹಾಸಿಕ ಹಾಗೂ ಸಾಹಿತ್ಯಿಕ ದಾಖಲೆಗಳನ್ನೂ ಕೆಲವು ಪದ ಸಮೂಹಗಳನ್ನೂ ಆಧರಿಸಿ ಆಳವಾಗಿ ಅಭ್ಯಸಿಸಿದ ವಿದ್ವಾಂಸರು ಈ ಭಾಷೆ ಸಂಸ್ಕøತದಿಂದಲೇ ನೇರವಾಗಿ ವಿಕಾಸಗೊಂಡದ್ದು ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಈ ಎರಡು ಭಾಷೆಗಳ ಎಷ್ಟೋ ಅಂಶಗಳು ಪರಸ್ಪರ ಒಂದನ್ನೊಂದು ಹೋಲುತ್ತವೆಯಾದರೂ ಯಾವ ಕಾಲದಲ್ಲಿ ಈ ಭಾಷೆ ವಿಕಾಸಗೊಂಡು ಬೇರೆಯಾಗಿರಬಹುದು ಎಂಬುದಕ್ಕೆ ಪ್ರಮಾಣಗಳಿಲ್ಲ. ತೊಖಾರಿಯಲ್ಲಿ ಮುಖ್ಯವಾಗಿ ಎರಡು ಭಾಷಾರೂಪಗಳು ದೊರೆಯುತ್ತವೆ. ಆ ಎರಡರಲ್ಲೂ ಸಾಕಷ್ಟು ಅಂತರ ಉಂಟು. ಪೂರ್ವಿ ತೊಖಾರಿ, ಪಶ್ಚಿಮೀ ತೊಖಾರಿ ಎಂಬ ಆ ಎರಡು ರೂಪಗಳನ್ನೂ ಅಭ್ಯಸಿಸಿ ಅವುಗಳ ಅಂತರವನ್ನು ಪತ್ತೆ ಹಚ್ಚಲು ಯತ್ನಿಸಿದ್ದಾರೆ. ಕೆಲವು ವಿದ್ವಾಂಸರು ದೊರೆಯುವ ಸಾಮಗ್ರಿಯನ್ನು ಆಧರಿಸಿ ಪೂರ್ವೀ ತೊಖಾರಿಯನ್ನು ತುರ್ಫಾರಿಯನ್, ಕರಶರಿಯನ್, ಆಗನಿಯನ್ ಇತ್ಯಾದಿ ಹೆಸರುಗಳಿಂದಲೂ ಪಶ್ಚಿಮೀ ತೊಖಾರಿಯನ್ನು ಕೂಚಿಯನ್ ಎಂದೂ ಬಗೆಬಗೆಯಲ್ಲಿ ಹೆಸರಿಸಿದ್ದಾರೆ. ಈ ರೂಪಗಳ ಮುಖ್ಯ ಲಕ್ಷಣ, ಅವನ್ನು ಆಡುತ್ತಿದ್ದ ಜನ, ಆ ಭಾಷಾರೂಪಗಳು ದೊರೆಯುತ್ತಿದ್ದ ಸ್ಥಳ ಇತ್ಯಾದಿ ವಿಚಾರಗಳ ಬಗ್ಗೆ ಇನ್ನೂ ಸ್ಪಷ್ಟತೆ ಸಾಧ್ಯವಾಗಿಲ್ಲ. (ಕೆ.ಕೆ.ಜಿ.)