ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದತ್ತಾತ್ರೇಯ

ವಿಕಿಸೋರ್ಸ್ದಿಂದ

ದತ್ತಾತ್ರೇಯ ಸ್ವಾರೋಚಿಷ ಮನ್ವಂತರದ ಸಪ್ತರ್ಷಿಗಳಲ್ಲಿ ಒಬ್ಬ. ದೂರ್ವಾಸ ಮುನಿ ಈತನ ಸಹೋದರ. ನಿಮ್ಮಿ ಋಷಿ ಈತನ ಮಗ. ಏಳನೆಯ ದಿವಸದಲ್ಲಿಯೇ ಈತ ತಾಯಿಯ ಗರ್ಭದಲ್ಲಿ ಪ್ರಕಟವಾಗಿ ತಂದೆಗೆ ಸಹಾಯ ಮಾಡಿದನೆಂದು ಕಥೆಯಿದೆ. ದತ್ತಾತ್ರೇಯನ ಜನನವೃತ್ತಾಂತ ಹೀಗಿದೆ. ಅತ್ರಿಮುನಿ ಸಂತಾನಾರ್ಥವಾಗಿ ಉಗ್ರ ತಪಸ್ಸು ಮಾಡಿದ. ಈತನ ತಪಸ್ಸಿಗೆ ಮೆಚ್ಚಿ ತ್ರಿಮೂರ್ತಿಗಳು ದರ್ಶನ ನೀಡಿದರು. ತಮ್ಮ ಒಬ್ಬೊಬ್ಬರ ಅಂಶದಿಂದಲೂ ಒಬ್ಬೊಬ್ಬ ಮಗ ಹುಟ್ಟುವನೆಂದು ವರ ನೀಡಿದರು. ಅದರಂತೆ ಬ್ರಹ್ಮನ ಅಂಶದಿಂದ ಚಂದ್ರನೂ ವಿಷ್ಣುವಿನ ಅಂಶದಿಂದ ದತ್ತಾತ್ರೇಯನೂ ಶಿವನ ಅಂಶದಿಂದ ದುರ್ವಾಸನೂ ಜನಿಸಿದರು. ಕಾರ್ತವೀರ್ಯ, ಪ್ರಹ್ಲಾದ ಮೊದಲಾದವರಿಗೆ ದತ್ತಾತ್ರೇಯ ಜ್ಞಾನೋಪದೇಶ ಮಾಡಿದ. ಈತ ಬ್ರಹ್ಮಚಾರಿಯೆಂದು ಹೇಳಲಾಗಿದೆ.

ದೇವತೆಗಳು ರಾಕ್ಷಸರ ಹಿಂಸೆಯನ್ನು ತಡೆಯಲಾರದೆ ದತ್ತಾತ್ರೇಯನಲ್ಲಿ ಮೊರೆಯಿಟ್ಟಾಗ ಅವರಿಗೆ ತನ್ನ ಆಶ್ರಯದಲ್ಲಿ ಈತ ಆಶ್ರಯ ಕೊಟ್ಟ. ರಾಕ್ಷಸರು ಹೊಂಚು ಹಾಕಿ ಈತನ ಆಶ್ರಮದಲ್ಲಿದ್ದ ಲಕ್ಷ್ಮಿಯನ್ನು ಅಪಹರಿಸಿದರು. ಆಗ ಈತ ತನ್ನ ತಪೋಮಹಿಮೆಯಿಂದ ರಾಕ್ಷಸರನೆಲ್ಲ ನಾಶ ಮಾಡಿದ. ಈ ವಿಚಾರ ಭಾಗವತ ಹಾಗೂ ಮಾರ್ಕಂಡೇಯ ಪುರಾಣಗಳಲ್ಲಿ ಉಲ್ಲೇಖಿತವಾಗಿದೆ.

  ಮುಂಬಯಿ-ಮದ್ರಾಸು ರೈಲ್ವೆಮಾರ್ಗದಲ್ಲಿರುವ ಗಾಣಗಾಪುರ (ನೋಡಿ- ಗಾಣಗಾಪುರ) ಪ್ರಸಿದ್ಧ ದತ್ತಕ್ಷೇತ್ರವೆನಿಸಿದೆ. ಈ ಕ್ಷೇತ್ರದ ಪಕ್ಕದಲ್ಲಿ ಭೀಮಾನದಿ ಹರಿಯುತ್ತಿದೆ. ಇಲ್ಲಿ ದತ್ತಾತ್ರೇಯನ ಸಗುಣ ಪಾದುಕೆಗಳಿವೆ ಎನ್ನಲಾಗಿದೆ. ಪ್ರತಿ ಹುಣ್ಣಿಮೆಯಲ್ಲಿಯೂ ಇಲ್ಲಿ ಉತ್ಸವವಿರುತ್ತದೆ. 

(ಡಿ.ಕೆ.ಇ.)