ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದುರ್ಗಸಿಂಹ

ವಿಕಿಸೋರ್ಸ್ದಿಂದ

ದುರ್ಗಸಿಂಹ : - ಸು. 1145 ರಲ್ಲಿ ವಸುಭಾಗ ಭಟ್ಟನ ಸಂಸ್ಕಂತ ಪಂಚತಂತ್ರವನ್ನು ಕನ್ನಡಿಸಿದವ. ಹುಟ್ಟಿದ ಸ್ಥಳ "ಕಿಸುಕಾಡನಾಡು". ಈತ ಹೆಸರುವಾಸಿಯಾಗಿದ್ದ ದುರ್ಗಮಯ್ಯನ ಮೊಮ್ಮಗ. ಕಮ್ಮೆ ಕುಲದ ಸ್ಮಾರ್ತ ಬ್ರಾಹ್ಮಣ. ಗೌತಮ ಗೋತ್ರದವ. ತಂದೆ ಈಶ್ವರಾಚಾರ್ಯ, ತಾಯಿ ರೇವಾಂಬಿಕೆ. ಗುರು ಮಹಾಯೋಗಿ ಶಂಕರಭಟ್ಟ. "ಜಗದೇಕಮಲ್ಲನ "ಆಸ್ಥಾನದಲ್ಲಿ ಕುಮಾರಸ್ವಾಮಿ ಎಂಬಾತ ತನಗೆ ಸಂಧಿವಿಗ್ರಹಿ ಪದವಿಯನ್ನು ಕೊಡಿಸಿದನೆಂದು ಈತನೇ ತನ್ನ ಗ್ರಂಥದಲ್ಲಿ ಹೇಳಿದ್ದಾನೆ.

ದುರ್ಗಸಿಂಹ ರಾಜತಂತ್ರ ನಿಪುಣನಾಗಿದ್ದನೆಂಬುದರಲ್ಲಿ ಸಂದೇಹವಿಲ್ಲ. ರಾಜ ಜಗದೇಕಮಲ್ಲನ ಆಣತಿಯಂತೆ ತಾನು ಸೈಯಡಿಯಲ್ಲಿ ಹರಿಹರಭವನಗಳನ್ನು ಕಟ್ಟಿಸಿರುವುದಾಗಿಯೂ ತಿಳಿಸಿದ್ದಾನೆ.

ಈತನ ಪಂಚತಂತ್ರ ಚಂಪೂರೂಪದಲ್ಲಿದೆ. ಇದರಲ್ಲಿ ಐದು ತಂತ್ರಗಳಿವೆ. ಒಂದೊಂದು ತಂತ್ರಕ್ಕೂ ಒಂದೊಂದು ಅಧ್ಯಾಯವಿದೆ. ಮೊದಲನೆಯ ತಂತ್ರದಲ್ಲಿ ಭೇದ ಪ್ರಕರಣ ಎರಡನೆಯದರಲ್ಲಿ ಪರೀಕ್ಷಾ ವ್ಯಾವರ್ಣನೆ ಮೂರನೆಯದರಲ್ಲಿ ವಿಶ್ವಾಸ ಪ್ರಕರಣ ನಾಲ್ಕನೆಯದರಲ್ಲಿ ವಂಚನಾ ಪ್ರಕರಣ ಐದನೆಯದರಲ್ಲಿ ಮಿತ್ರಕಾರ್ಯ ವರ್ಣನೆ ಇವೆ. ಒಂದನೆಯ ಪ್ರಕರಣದಲ್ಲಿ ಎತ್ತಿಗೂ ಸಿಂಹಕ್ಕೂ ಉಂಟಾದ ಗೆಳೆತನವನ್ನು ನರಿ ಮುರಿದ ಕಥೆಯನ್ನೂ ಎರಡನೆಯದರಲ್ಲಿ ಬ್ರಾಹ್ಮಣನೊಬ್ಬ ಮುಂಗುಸಿಯನ್ನು ಕೊಂದ ಕಥೆಯನ್ನೂ ಮೂರನೆಯದರಲ್ಲಿ ಕಾಗೆಗಳು ಗೂಬೆಗಳ ಗುಹೆಯನ್ನು ಸುಟ್ಟ ಕಥೆಯನ್ನೂ ನಾಲ್ಕನೆಯದರಲ್ಲಿ ಕಪಿ ಮೊಸಳೆಯನ್ನು ವಂಚಿಸಿದ ಕಥೆಯನ್ನೂ ಐದನೆಯದರಲ್ಲಿ ಕಾಗೆ, ಆಮೆ, ಸಾರಂಗ ಮತ್ತು ಇಲಿಗಳ ಸ್ನೇಹದ ಕಥೆಯನ್ನೂ ಕಾಣಬಹುದಾಗಿದೆ.

ಕಾವ್ಯದ ಆರಂಭದಲ್ಲಿ ಕವಿ ತ್ರಿಮೂರ್ತಿಗಳನ್ನೂ ಸರಸ್ವತಿ ಚಂದ್ರ ಮನ್ಮಥ ಸೂರ್ಯ ವಿನಾಯಕ ದುರ್ಗಿಯರನ್ನೂ ಸ್ತೋತ್ರ ಮಾಡಿದ್ದಾನೆ. ಅನಂತರ ವಾಲ್ಮೀಕಿ ವ್ಯಾಸ ನೀತಿಶಾಸ್ತ್ರಕಾರರು ಮತ್ತು ಚಂದ್ರಗುಪ್ತನಿಗೆ ರಾಜ್ಯವನ್ನು ಕೊಡಿಸಿದ ನೀತಿವಿದನಾದ ವಿಷ್ಣುಗುಪ್ತ-ಇವರುಗಳನ್ನು ಸ್ತುತಿಸಿದ್ದಾನೆ. ಗುಣಾಢ್ಯ ವರರುಚಿ ಕಾಳಿದಾಸ ಬಾಣ ಭಾರವಿ ಮೊದಲಾದ ಸಂಸ್ಕøತ ಕವಿಗಳನ್ನೂ ಶ್ರೀವಿಜಯ ಕನ್ನಮಯ್ಯ ಚಂದ್ರ ಪೊನ್ನ ಪಂಪ ಗಜಾಂಕುಶ ಕವಿತಾ ವಿಲಸ ಎಂಬ ಕನ್ನಡ ಕವಿಗಳನ್ನೂ ಸ್ಮರಿಸಿದ್ದಾನೆ. ಶ್ರೀ ಮಾದಿರಾಜ ಮುನಿಪುಂಗವರು ತನ್ನ ಗ್ರಂಥವನ್ನು ತಿದ್ದಿಕೊಟ್ಟರೆಂದೂ ಹೇಳಿದ್ದಾನೆ.

ಇದರಲ್ಲಿ 457 ಪದ್ಯಗಳೂ 230 ಶ್ಲೋಕಗಳೂ 48 ಉಪಕಥೆಗಳೂ ಇವೆ. ಚಂಪೂ ರೂಪದಲ್ಲಿದ್ದರೂ ಇದರಲ್ಲಿ ಗದ್ಯವೇ ಹೆಚ್ಚಾಗಿದೆ. ಇಲ್ಲಿ ಬರುವ ಕಥೆಗಳು ಮೃಗಪಕ್ಷಿಗಳಿಗೆ ಸಂಬಂಧಿಸಿದವು. ಇವು ಸ್ವಾರಸ್ಯವಾಗಿರುವುವಲ್ಲದೆ ರಾಜನೀತಿ ವ್ಯವಹಾರ ನೀತಿಗಳನ್ನೂ ಬೋಧಿಸುತ್ತವೆ. ಅಲ್ಲಲ್ಲೇ ಕವಿ ಸೊಗಸಾದ ಅಲಂಕಾರಗಳನ್ನು ಗಾದೆಗಳನ್ನೂ ಬಳಸಿದ್ದಾನೆ. ಈ ಕಥೆಗಳು ಕುತೂಹಲವನ್ನು ಕೆರೆಳಿಸುವಂತಿದ್ದು ಅಬಾಲವೃದ್ಧರಿಗೂ ಮನರಂಜಕವಾಗಿವೆ. ಬ್ರಾಹ್ಮಣ ಸಾಹಿತ್ಯದ ಪ್ರಾಚೀನ ಕವಿಗಳಲ್ಲಿ ದುರ್ಗಸಿಂಹ ಒಬ್ಬನಾಗಿರುವುದರ ಜೊತೆಗೆ ಪ್ರಸಿದ್ಧ ಕವಿಯೂ ಆಗಿದ್ದಾನೆ. ಅನಾಮಿಕ ಕವಿಯೊಬ್ಬನ ಪದ್ಯವೊಂದರಲ್ಲಿ ಈತನನ್ನು ಕನ್ನಡದ ಮಹಾಕವಿಗಳೊಡನೆ ಹೆಸರಿಸಿರುವುದು ಕಂಡುಬರುತ್ತದೆ. ಸೂಕ್ತಿ ಸುಧಾರ್ಣವವನ್ನು ರಚಿಸಿದ ಮಲ್ಲಿಕಾರ್ಜುನ ಈತನ ಗ್ರಂಥದಿಂದ ಕೆಲವು ಪದ್ಯಗಳನ್ನು ಉದ್ಧರಿಸಿ ಬರೆದಿರುವುದು ಈತನ ವಿದ್ವತ್ತಿಗೂ ಈತನಿಗಿದ್ದ ಕೀರ್ತಿಗೂ ಸಾಕ್ಷಿಯಾಗಿದೆ. ಸಾಹಿತ್ಯದ ಮೂಲಕ ಕನ್ನಡದಲ್ಲಿ ರಾಜತಂತ್ರವನ್ನೂ ವ್ಯವಹಾರ ನೀತಿಯನ್ನೂ ಬೋಧಿಸಲು ಹೊರಟ ಕವಿಗಳಲ್ಲಿ ದುರ್ಗಸಿಂಹ ಮೊತ್ತಮೊದಲಿಗ ಎನ್ನಬಹುದು. (ಎಸ್.ಕೆ.ಆರ್.ಎ.)