ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೇಶಪಾಂಡೆ, ರಾಮಚಂದ್ರ ಹಣಮಂತರಾವ್

ವಿಕಿಸೋರ್ಸ್ದಿಂದ

ದೇಶಪಾಂಡೆ, ರಾಮಚಂದ್ರ ಹಣಮಂತರಾವ್ 1861 - 1931. ಶಿಕ್ಷಣವೇತ್ತ, ಗ್ರಂಥಕರ್ತ ಮತ್ತು ಕನ್ನಡ ಚಳುವಳಿಯ ಸಂಘಟಕ.

ಇವರು ಹುಟ್ಟಿದ್ದು (21-3-1861) ಧಾರವಾಡ ಜಲ್ಲೆಯ ನರೇಂದ್ರದಲ್ಲಿ. ತಂದೆ ವತನದಾರ ಮನೆತನದ ಹಣಮಂತರಾವ್ ದೇಶಪಾಂಡೆ. ಪ್ರತಿಭಾಶಾಲಿ ವಿದ್ಯಾಥಿಯೆನಿಸಿ, ಧಾರವಾಡ, ಪುಣೆಗಳಲ್ಲಿ ಓದಿ ಶ್ರೇಷ್ಠರೀತಿಯಿಂದ ಎಂ.ಎ. ಪಾಸಾದರು. ಅಲ್ಲಿ ರಾಬರ್ಟ್‍ಸನ್ ಸುಮರ್ಣಪದಕ ಮತ್ತು 1,000 ರೂಪಾಯಿ ಬಹುಮಾನ ಪಡೆದರು. ಮುಂಬಯಿ ಕರ್ನಾಟಕ ಭಾಗದಿಂದ ಎಂ. ಎ. ಮಾಡಿದವರಲ್ಲಿ ಮೊದಲಿಗರಾದ್ದರಿಂದ ಇವರಿಗೆ ಎಂ. ಎ. ದೇಶಪಾಂಡೆ ಎಂಬ ಅಡ್ಡ ಹೆಸರು ಬಿದ್ದಿತ್ತು. ಕಾನೂನು ಪದವಿಗಾಗಿ ಮುಂದೆ ಓದಬೇಕೆಂದಿದ್ದ ಇವರು ರಸೆಲ್ ಎಂಬ ಶಿಕ್ಷಣಾಧಿಕಾರಿಯ ಪ್ರೇರಣೆಯಿಂದ ಅದನ್ನು ಬಿಟ್ಟು, ಶಿಕ್ಷಣ ವಿಚಾರದಲ್ಲಿ ಹಿಂದೆ ಬಿದ್ದಿದ್ದ ಕನ್ನಡ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಧ್ಯೇಯಕ್ಕಾಗಿ ಮುಂಬಯಿ ಸರ್ಕಾರದ ವಿದ್ಯಾ ಇಲಾಖೆ ಸೇರಿದರಲ್ಲದೆ ಬೆಳಗಾವಿ, ಕಾರವಾರ, ಧಾರವಾಡಗಳಲ್ಲಿ ಪ್ರೌಢಶಾಲಾ ಉಪಾಧ್ಯಾಯರಾಗಿ ಅನಂತರ ಡೆಪ್ಯುೈಟಿ ಎಜ್ಯುಕೇಷನಲ್ ಇನ್‍ಸ್ಪೆಕ್ಟರ್, ಮುಖ್ಯೋಪಾಧ್ಯಾಯ, ಶಿಕ್ಷಣ ಕಾಲೇಜ್ ಅಧ್ಯಾಪಕ ಮೊದಲಾದ ಹುದ್ದೆಗಳನ್ನು ನಿರ್ವಹಿಸಿ 1914 ರಲ್ಲಿ ವಿಶ್ರಾಂತರಾದರು.

ದೇಶಪಾಂಡೆಯವರು ಕನ್ನಡ ಅಭಿಮಾನಿಗಳಾಗಿದ್ದು ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡ ಮತ್ತು ಕನ್ನಡಿಗರ ಹಕ್ಕು ಮತ್ತು ಅಭ್ಯುದಯಕ್ಕಾಗಿ ದುಡಿದ ಮೊದಲಿಗರಲ್ಲಿ ಒಬ್ಬರು. ಮರಾಠಿ ಪ್ರಭಾವ ಪ್ರಬಲವಾಗಿದ್ದು, ಕನ್ನಡ ಅಸಡ್ಡೆಗೊಳಗಾಗಿದ್ದ ಆ ಕಾಲದಲ್ಲಿ ಕನ್ನಡಿಗರಲ್ಲಿ ಸ್ವಾಭಿಮಾನವನ್ನೂ ಜಾಗೃತಿಯನ್ನೂ ಉಂಟುಮಾಡಲು ಇವರು ಜೀವಮಾನವೆಲ್ಲ ಶ್ರಮಿಸಿದರು. ವಿದ್ಯಾರ್ಥಿಗಳಲ್ಲಿ ಕನ್ನಡದ ಬಗ್ಗೆ ಆಸ್ಥೆಯುಂಟುಮಾಡಲು ಯತ್ನಿಸಿದರು. ಧಾರವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಕನ್ನಡ ವಕ್ತøತ್ವ ಸ್ಪರ್ಧೆಯನ್ನು ಪ್ರಥಮವಾಗಿ ಯೋಜಿಸಲು ಇವರು ಸ್ವತಃ ಬಹುಮಾನಗಳನ್ನು ನೀಡಿದರು. ಮುದವೀಡು ಕೃಷ್ಣರಾಯರಂಥ ವಾಗ್ಮಿಗಳು ಇವರ ನೇತೃತ್ವದಲ್ಲಿ ತರಬೇತಿ ಪಡೆದರು. ಕನ್ನಡ ಕಾದಂಬರಿಕಾರ ಗಳಗನಾಥರಿಗೆ ತಮ್ಮ ಮನೆಯಲ್ಲಿ ಇವರು ಅನುಕೂಲ ಮಾಡಿಕೊಟ್ಟು ಪುಸ್ತಕ ಬರೆಯಲು ನೆರವಾದರಲ್ಲದೆ, ಅವರ ಪ್ರಬುದ್ಧ ಪದ್ಮನಯನೆ ಕಾದಂಬರಿಯನ್ನು ವಾಗ್ಭೂಷಣ ಪತ್ರಿಕೆಯಲ್ಲಿ ಪ್ರಕಟಿಸಲು ಕಾರಣರಾದರು.

ಧಾರವಾಡದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸುವಲ್ಲಿ (1890) ಇವರ ಪಾತ್ರ ಪ್ರಮುಖವಾಗಿತ್ತು. ಕನ್ನಡ ಭಾಷೆಯ ದೀನಸ್ಥಿತಿಯನ್ನು ದೂರಮಾಡುವುದಕ್ಕಾಗಿ ಸ್ಥಾಪಿಸಲಾದ ಈ ಸಂಘದ ಗೌರವಕಾರ್ಯದರ್ಶಿಯಾಗಿ ಏಳು ವರ್ಷ (1890-95 ಮತ್ತು 1897) ಮತ್ತು ಉಪಾಧ್ಯಕ್ಷ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಮೂರು ಮೂರು ವರ್ಷ ಕೆಲಸ ಮಾಡಿ ಇವರು ಅದರ ಮುಖ್ಯಚಾಲಕ ಶಕ್ತಿಯಾಗಿದ್ದರು. ಮುಂಬಯಿ ಕರ್ನಾಟಕ ಶಾಲೆಗಳಲ್ಲಿ ಮರಾಠಿಯ ಬದಲು ಕನ್ನಡಕ್ಕೆ ಸ್ಥಾನ ದೊರಕಿಸುವುದು, ಬ್ರಿಟಿಷ್ ಮತ್ತು ಸಂಸ್ಥಾನಿಕ ಕರ್ನಾಟಕ ಭಾಗಗಳ ಸಾಂಸ್ಕøತಿಕ ಒಕ್ಕಟ್ಟು, ಲಿಖಿತ ಭಾಷೆಯ ಏಕರೂಪತೆ ಮೊದಲಾದ ಧ್ಯೇಯಗಳಿಗಾಗಿ ಸಂಘದ ಮೂಲಕ ದುಡಿದರು; ಸಂಘಕ್ಕೆ ನಾಡಿನ ಪ್ರಭಾವಶಾಲಿ ವ್ಯಕ್ತಿಗಳನ್ನು ಆಕರ್ಷಿಸಿದರು. ಕನ್ನಡಕ್ಕಾಗಿ ದುಡಿದ ಕಿಟ್ಟೆಲ್, ಬಿ.ಎಲ್.ರೈಸ್. ಜಿûೀಗ್ಲರ್, ಜಾರ್ಡಿನ್, ಮ್ಯೂರ್ ಮೊದಲಾದ ವಿದೇಶೀಯರ ಸಹಕಾರವನ್ನು ಸಂಘಕ್ಕೆ ದೊರಕಿಸುವಲ್ಲಿ ಯಶಸ್ವಿಯಾದರು.

ಸರ್ಕಾರಿ ಸೇವೆಯಲ್ಲಿರುವಾಗಲೇ ಇವರು ಕನ್ನಡದಲ್ಲಿ ಗ್ರಂಥರಚನೆ ಮಾಡತೊಡಗಿದ್ದರು. ನಿವೃತ್ತರಾದ ಮೇಲೆ, ಆಗ ಮೈಸೂರು ದಿವಾನರಾಗಿದ್ದ ವಿಶ್ವೇಶ್ವರಯ್ಯನವರಿಂದ ಅಲ್ಲಿನ ಶಿಕ್ಷಣ ಶಾಖೆ ಸೇರಲು ಕರೆ ಬಂದಿದ್ದರೂ ಅದಕ್ಕೆ ಒಪ್ಪದೆ ಕನ್ನಡ ಗ್ರಂಥರಚನೆಗೇ ತಮ್ಮ ಸಮಯವನ್ನು ಮೀಸಲಿರಿಸಿದರು.

ಇವರು ಕನ್ನಡದಲ್ಲಿ ಬರೆದ 30 ಗ್ರಂಥಗಳಲ್ಲಿ ಇತಿಹಾಸ, ಜೀವನಚರಿತ್ರೆಗಳಿಗೆ ಸಂಬಂಧಿಸಿದವೇ ಹೆಚ್ಚು. ಅವುಗಳಲ್ಲಿ ಕರ್ನಾಟಕ ಸಾಮ್ರಾಜ್ಯ ಎಂಬ ಮೂರು ಭಾಗಗಳ ಇತಿಹಾಸ ಪ್ರಮುಖವಾದದ್ದು. ಅದರ ಮೊದಲಿನೆರಡು ಭಾಗಗಳು (ಬಾದಾಮಿ ಚಾಳುಕ್ಯರ ವರೆಗಿನ ಇತಿಹಾಸವನ್ನೊಳಗೊಂಡವು) 1926 ರಲ್ಲಿ ಪ್ರಕಟವಾದವು. ವಿಜಯನಗರ ಕಾಲದ ವರೆಗಿನ ಮೂರನೆಯ ಭಾಗ ಅಪ್ರಕಟಿತವಾಗಿ ಉಳಿಯಿತು. ಛತ್ರಪತಿ ಶಿವಾಜಿ ಮಹಾರಾಜ (1923) ಅಕಬರ ಚರಿತ್ರ, ಚೈತನ್ಯ ಚರಿತ್ರ, ಟೀಪೂಸುಲ್ತಾನನ ಚರಿತ್ರ, ರಣಜಿತ್ ಸಿಂಗನ ಚರಿತ್ರ ಮೊದಲಾದ ಅನೇಕ ಜೀವನಚರಿತ್ರೆಗಳನ್ನೂ ಒಂದೆರಡು ಪಠ್ಯಗಳನ್ನು ಇವರು ಬರೆದಿದ್ದರು. ಇವರ ಗ್ರಂಥಗಳಲ್ಲಿ ಸಮಗ್ರ ಅಧ್ಯಯನ, ಶೈಲಿಯಲ್ಲಿ ಕನ್ನಡಿಗರನ್ನು ಹುರಿದುಂಬಿಸುವ ಭಾವನಾಪರತೆ ಎದ್ದು ಕಾಣುತ್ತದೆ.

ದೇಶಪಾಂಡೆಯವರು ನಿರ್ಭಯ ದೇಶಾಭಿಮಾನಿಗಳೂ ಆಗಿದ್ದರು. ಸ್ವಾತಂತ್ರ್ಯ ಚಳುವಳಿ ಬಗ್ಗೆ ಇವರಿಗಿದ್ದ ಒಲವಿನ ಮರದಿಗಳು ಸರ್ಕಾರಕ್ಕೆ ಹೋಯಿತಾಗಿ ಇವರಿಗೆ ಸಿಗಬೇಕಾದ ಬಡತಿಗಳು ತಪ್ಪಿದವೆಂದು ಹೇಳಲಾಗಿದೆ. ಇವರು ತೀರಿಕೊಂಡದ್ದು 25-6-1931 ರಂದು. (ಪಿ.ವಿ.ಎ.)