ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ದೊಂಬರು

ವಿಕಿಸೋರ್ಸ್ದಿಂದ

ದೊಂಬರು ಸಾಮಾನ್ಯವಾಗಿ ಕರ್ನಾಟಕದ ಎಲ್ಲ ಕಡೆಗಳಲ್ಲಿಯೂ ಕಾಣಬರುವ ಅಲೆಮಾರಿ ಜನಾಂಗ. ಇವರು ಊರಿಂದ ಊರಿಗೆ ತಲೆಯಮೇಲೆ ಸಾಮಾನುಗಳನ್ನು ಹೊತ್ತೋ ಇಲ್ಲವೆ ಕತ್ತೆಯ ಮೇಲೆ ಹೇರಿಕೊಂಡೋ ಇಲ್ಲವೆ ಅಡ್ಡೆಗಳಲ್ಲಿ ಇಟ್ಟುಕೊಂಡೋ ವರ್ಷವೆಲ್ಲ ತಿರುಗಿ ಆಟ ಆಡಿ ಅನಂತರ ತಮ್ಮ ಮೂಲ ಊರುಗಳಿಗೆ ಬಂದು ಅಲ್ಲಿ ಮನೆದೇವರ ಹಬ್ಬ ಆಚರಿಸುತ್ತಾರೆ. ಶಕ್ತಿ ದೇವತೆಗಳು ಹನುಮಂತ ಇವರ ಮನೆದೇವರುಗಳು.

ಶಕ್ತಿಯುತ ವ್ಯಾಯಾಮ ಪ್ರದರ್ಶನಗಳನ್ನು ಮಾಡುವುದು ಇವರ ಒಂದು ವೈಶಿಷ್ಟ್ಯ. ಇದಕ್ಕೆ ದೊಂಬರಾಟ ಎನ್ನುತ್ತಾರೆ. ಇವರು ತಮ್ಮ ಚಾತುರ್ಯ ಹಾಗೂ ಕೈಚಳಕವನ್ನು ಪ್ರದರ್ಶಿಸಿ ತಮ್ಮ ವೃತ್ತಿಗೆ ಮಹತ್ತ್ವವನ್ನು ತಂದು ಕೊಂಡಿದ್ದಾರೆ. ಇವರು ತಮ್ಮ ಆಟಗಳನ್ನು ಮಧ್ಯಾಹ್ನದ ವೇಳೆಯಲ್ಲಿ ನಗರದ ಪ್ರಮುಖ ಬೀದಿಗಳ ಮಧ್ಯದಲ್ಲಿ ಪ್ರಮುಖರ ಅಪ್ಪಣೆ ಪಡೆದು ನಡೆಸುತ್ತಾರೆ. ಆಟವನ್ನು ಪ್ರದರ್ಶಿಸುವಾಗ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರನ್ನು ಆಕರ್ಷಣೆ ಮಾಡುವ ಉದ್ದೇಶದಿಂದ ಇವರ ತಂಡದಲ್ಲಿನ ಹೆಂಗಸೊಬ್ಬಳು ಡೋಲು ಬಡಿಯುತ್ತಿರುತ್ತಾಳೆ; ಗಂಡಸು ಶಿಳ್ಳೆ, ಕೇಕೆಗಳನ್ನು ಹಾಕುತ್ತ ಊರಿನ ಪ್ರಮುಖರನ್ನು ಹೊಗಳುತ್ತಿರುತ್ತಾನೆ. ಕೆಲವೊಮ್ಮೆ ಚಾಟಿಯನ್ನು ನೆಲಕ್ಕೆ ಬಡಿದು ಶಬ್ದಮಾಡುವುದೂ ಉಂಟು. ಆಟಗಾರ ಆಟದ ಸಮಯದಲ್ಲಿ ಬೇರೆ ಯಾವ ಬಟ್ಟೆಯನ್ನೂ ಧರಿಸದೆ ಹನುಮಂತನ ಚಡ್ಡಿಯೊಂದನ್ನು ಹಾಕಿಕೊಂಡಿರುತ್ತಾನೆ. ಈತ ಕೂದಲಿನಿಂದ ಅಥವಾ ಕಪ್ಪು ಉಣ್ಣೆಯಿಂದ ಮಾಡಿದ ಮಧ್ಯಮ ಗಾತ್ರದ ದಾರವನ್ನು ಬಲತೋಳಿಗೆ ಇಲ್ಲವೆ ಕತ್ತಿಗೆ ಕಟ್ಟಿಕೊಂಡಿರುತ್ತಾನೆ. ಇದು ಸದಾ ಈತನ ಮೈಮೇಲೆ ಇರತಕ್ಕದ್ದೇ.

ಆಟದ ಪ್ರಾರಂಭದಲ್ಲಿ ದೊಂಬ ಸಗಣಿಯಿಂದ ಮಾಡಿದ ಬೆನಕನನ್ನು ಪೂಜಿಸಿ ಅನಂತರ ಗಣಿಯನ್ನು ನೆಡುತ್ತಾನೆ. ಅನಂತರ ಲಾಗ ಹಾಕುವುದು, ಹಿಂಗಣ್ಣು ಮುಂಗಣ್ಣು ಎಸೆಯುವುದು, ಅಂತರ್ ಲಾಗ ಹಾಕುವುದು, ನಿಂತ ನಿಲವಿನಲ್ಲಿಯೇ ಪಲ್ಟಿಗಳನ್ನು ಹಾಕುವುದು, ಭಾರವಾದ ಕಬ್ಬಿಣದ ಗುಂಡುಗಳನ್ನು ಎಸೆಯುವುದು, ಮರಗಾಲು ಕಟ್ಟಿಕೊಂಡು ನಡೆಯುವುದು, ಚಕ್ರ ಬಾಣ ನಿರ್ಮಿಸುವುದು, ಮರದ ತೊಲೆಗೆ ಮಧ್ಯದಲ್ಲಿ ಹಗ್ಗ ಕಟ್ಟಿ ಅದನ್ನು ಹಲ್ಲಿನಲ್ಲಿ ಕಚ್ಚಿಕೊಂಡು ತೊಲೆಯನ್ನು ಮೇಲೆ ಎತ್ತುವುದು, ಇಲ್ಲವೆ ಅದನ್ನು ತನ್ನ ಜುಟ್ಟಿಗೆ ಕಟ್ಟಿ ಮೇಲೆಕ್ಕೆತ್ತುವುದು ಮುಂತಾದ ಶಕ್ತಿಪ್ರದರ್ಶಕ ಕೆಲಸಗಳನ್ನು ಮಾಡುತ್ತಾನೆ. ಈ ಮಧ್ಯೆ ಸಣ್ಣ ಪುಟ್ಟ ಹುಡುಗರು ತಂತಿಯ ಮೇಲೆ ನಡೆಯುವುದು, ಕಬ್ಬಿಣದ ಬಳೆಯೊಳಗಡೆ ನುಗ್ಗುವುದು ಮುಂತಾದ ಚಮತ್ಕಾರಗಳನ್ನು ನಡೆಸುತ್ತಾರೆ. ಅನಂತರ ಆಟಗಾರ ನುರ್ಜು ಕಲ್ಲಿನ ಮೇಲೆ ಮಲಗಿ ಹೊಟ್ಟೆಯ ಮೇಲೆ ಚಪ್ಪಡಿ ಕಲ್ಲೊಂದನ್ನು ಮಡಗಿಸಿಕೊಂಡು ದೊಡ್ಡಸುತ್ತಿಗೆಯಿಂದ ಬಡಿಸಿಕೊಳ್ಳುತ್ತಾನೆ. ಜನಗಳಿಂದ ತುಂಬಿದ ಗಾಡಿಯನ್ನು ಒಬ್ಬನೇ ಸಾಕಷ್ಟು ದೂರ ಎಳೆಯುತ್ತಾನೆ. ಜನಗಳಿಂದ ತುಂಬಿದ ಗಾಡಿಯನ್ನು ಒಬ್ಬನೇ ಸಾಕಷ್ಟು ದೂರ ಎಳೆಯುತ್ತಾನೆ. ಗಣೇಶನ ಮೇಲೆ ಹತ್ತಿ ಸಮಾನಾಂತರವಾಗಿ ಹತ್ತಿ ಮಲಗಿ ಅಲ್ಲಿಯೇ ಅನೇಕ ಸೂಕ್ಷ್ಮತರವಾದ ಚಮತ್ಕಾರದ ಪ್ರದರ್ಶನಗಳನ್ನು ಮಾಡುತ್ತಾನೆ. ಈತ ನಡೆಸುವ ಎಲ್ಲ ಆಟಗಳೂ ಕಷ್ಟಸಾಧ್ಯವಾಗಿದ್ದು ಪ್ರೇಕ್ಷಕರನ್ನು ಆಕರ್ಷಿಸುವಂಥವಾಗಿರುತ್ತವೆ.

ಸಾಮಾನ್ಯವಾಗಿ ದೊಂಬರು ಅವಿಭಕ್ತ ಕುಟುಂಬದವರಾಗಿದ್ದು ಎಲ್ಲರೂ ಆಟದಲ್ಲಿ ನಿಷ್ಣಾತರಾಗಿರುತ್ತಾರೆ. ಪ್ರಾಯದವರು ಹಾಗೂ ಮಕ್ಕಳು ಆಟದಲ್ಲಿ ಹೆಚ್ಚಾಗಿ ಭಾಗವಹಿಸುತ್ತಾರೆ. ಕೆಲವರು ಸಣ್ಣಪುಟ್ಟ ಮಾಟಮಂತ್ರದ ಕೆಲಸ, ಕೈಚಳಕಿನ ಕೆಲಸ ಮಾಡುವುದೂ ಉಂಟು. ಆಟ ಮುಗಿದ ಅನಂತರ ಆ ತಂಡದಲ್ಲಿನ ಸುಂದರವಾದ ಹೆಣ್ಣೊಬ್ಬಳು ತಟ್ಟೆ ಹಿಡಿದು ಪ್ರೇಕ್ಷಕರಿಂದ ಹಣ ಸಂಗ್ರಹಿಸುತ್ತಾಳೆ. ಆದಾಯ ಆಟಕ್ಕೆ ತಕ್ಕಂತಿರುತ್ತದೆ. ಕೆಲವೊಮ್ಮೆ ಆಟದ ಸಮಯದಲ್ಲಿ ಸರ್ಕಸ್ಸಿನಲ್ಲಿ ಮಾಡುವಂತೆ ನಕಲಿ ಮತ್ತು ಕೋಡಂಗಿ ಚೇಷ್ಟೆಗಳನ್ನು ಮಾಡಿ ಪ್ರೇಕ್ಷಕರನ್ನು ಸಂತೋಷಪಡಿಸಿ ಅವರಿಂದ ಹೆಚ್ಚು ಹಣವನ್ನು ಪಡೆಯುವುದೂ ಉಂಟು. ಆಟದ ಸಮಯದಲ್ಲಿ ಇವರು ಒಂದು ಕಡೆ ಬಟ್ಟೆ ಹಾಸಿ ಅದರ ಮೇಲೆ ತಮ್ಮ ಪೂರ್ವಿಕರ ಕಠಾರಿ, ಖಡ್ಗ ಮುಂತಾದ ಕೆಲವು ಹಳೆಯಕಾಲದ ಆಯುಧಗಳನ್ನು ಪ್ರದರ್ಶಿಸುತ್ತಾರೆ.

ದೊಂಬರ ಹೆಂಗಸರು ಬಿಡುವಿನ ವೇಳೆಯಲ್ಲಿ ಮರದ ಬಾಚಣಿಗೆಗಳನ್ನು ಮಾಡಿ ಮಾರುತ್ತಾರೆ. ಮನೆ ಮನೆಗೂ ಹೋಗಿ ಕೈನಲ್ಲಿ (ಸೂತ್ರದ ಗೊಂಬೆಯಂಥದು) ಗೊಂಬೆ ಹಿಡಿದು ಹಾಡು ಹೇಳಿಕೊಂಡು ಅದನ್ನು ಅವರ ಮುಂದೆ ಕುಣಿಸಿ ದವಸಧಾನ್ಯಗಳನ್ನು ಸಂಗ್ರಹಿಸುವುದೂ ಉಂಟು. (ಟಿ.ಎಸ್.ಆರ್.ಎ.)