ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪೋರ್ಟ್ ಬ್ಲೇರ್

ವಿಕಿಸೋರ್ಸ್ದಿಂದ

ಪೋರ್ಟ್ ಬ್ಲೇರ್ - ಭಾರತ ಗಣರಾಜ್ಯದ ಒಕ್ಕೂಟ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಆಡಳಿತ ಕೇಂದ್ರ ಮತ್ತು ರೇವು ಪಟ್ಟಣ. ದಕ್ಷಿಣ ಅಂಡಮಾನ್ ದ್ವೀಪದ ಆಗ್ನೇಯ ತೀರದಲ್ಲಿ ಉ.ಅ. 11039' ಮತ್ತು ಪೂ.ರೇ. 92045' ಮೇಲೆ ಇದೆ.

ಪೋರ್ಟ್ ಬ್ಲೇರ್ ಏಷ್ಯದ ಅತ್ಯುತ್ತಮ ರೇವುಗಳಲ್ಲೊಂದು. ಇದು ಕಲ್ಕತ್ತದ ಆಗ್ನೇಯಕ್ಕೆ 1,296. ಕಿ.ಮೀ. ಮತ್ತು ಮದರಾಸಿನ ನೈಋತ್ಯಕ್ಕೆ 1,344 ಕಿ.ಮೀ. ದೂರದಲ್ಲಿದೆ.

2004ರಲ್ಲಿ ಇದು ಸುನಾಮಿ ಸಮುದ್ರದಲೆಗಳ ಹೊಡೆತಕ್ಕೆ ಸಿಕ್ಕಿ ಅಪಾರ ನಷ್ಟಕ್ಕೆ ಗುರಿಯಾಗಿದ್ದು ಸರ್ಕಾರ ಇದನ್ನು ಮರುನಿರ್ಮಾಣ ಮಾಡಿದೆ.

ಬ್ರಿಟಿಷ್ ಸೈನ್ಯದ ಅರ್ಚಿಬಾಲ್ಡ್ ಬ್ಲೇರ್ ಇದನ್ನು 1789 ರಲ್ಲಿ ವಶಪಡಿಸಿಕೊಂಡ. ಆಗ ಇದಕ್ಕೆ ಪೋರ್ಟ್ ಕಾರ್ನ್‍ವಾಲೀಸ್ ಎಂದು ಹೆಸರಿಡಲಾಗಿತ್ತು. 1796-1856 ರಲ್ಲಿ ಇದನ್ನು ತೊರೆಯಲಾಗಿತ್ತು. ಭಾರತದಲ್ಲಿ ಗಡಿಪಾರು ಶಿಕ್ಷೆಗೆ ಒಳಗಾದವರನ್ನು ಇಡಲು ಇದನ್ನು 1858 ರಲ್ಲಿ ಬ್ರಿಟಿಷ್ ಸರ್ಕಾರ ಬಳಸಿಕೊಳ್ಳತೊಡಗಿತು. ಆಗ ಇದಕ್ಕೆ ಪೋರ್ಟ್ ಬ್ಲೇರ್ ಎಂದು ನಾಮಕರಣ ಮಾಡಲಾಯಿತು. ಇದು ಕೈದಿಗಳ ನೆಲೆಯಾಗಿದ್ದುದನ್ನು 1940 ರಲ್ಲಿ ಕೊನೆಗೊಳಿಸಲಾಯಿತು. ಎರಡನೆಯ ಮಹಾಯುದ್ಧದ ಕಾಲದಲ್ಲಿ ಕೆಲವು ವರ್ಷಗಳ ಕಾಲ (1842-45) ಇದು ಜಪಾನೀಯರ ವಶದಲ್ಲಿತ್ತು. 1947 ರಲ್ಲಿ ಭಾರತ ಗಣರಾಜ್ಯಕ್ಕೆ ಸೇರಿದ ಮೇಲೆ ಇದು ಶೀಘ್ರವಾಗಿ ಬೆಳೆಯತೊಡಗಿತು. ಮೀನುಗಾರಿಕೆ, ಸಣ್ಣ ಉದ್ಯಮಗಳು, ವ್ಯಾಪಾರ ಇವು ಇಲ್ಲಿಯ ಮುಖ್ಯ ಆರ್ಥಿಕ ಚಟುವಟಿಕೆಗಳು. ಇಲ್ಲಿ ಪ್ರೌಢಶಾಲೆ, ಆಸ್ಪತ್ರೆ ಮುಂತಾದುವು ಇವೆ. (ಡಿ.ಎಸ್.ಜೆ.)