ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಪ್ರವಾಸ ಸಾಹಿತ್ಯ

ವಿಕಿಸೋರ್ಸ್ದಿಂದ

ಪ್ರವಾಸ ಸಾಹಿತ್ಯ

ಯಾವುದೇ ಖಚಿತ ಉದ್ದೇಶದಿಂದ ಇಲ್ಲವೆ ವಿಲಾಸಕ್ಕಾಗಿ ಪ್ರವಾಸ ಕೈಕೊಂಡವರು ತಮ್ಮ ಅನುಭವಗಳನ್ನು ಬರೆದಿಟ್ಟಾಗ ಅಂಥ ಗ್ರಂಥಗಳನ್ನು ಈ ಹೆಸರಿನಿಂದ ಕರೆಯಲಾಗುತ್ತದೆ.

ಪ್ರವಾಸ ಸಾಹಿತ್ಯದಲ್ಲಿ ಮೂರು ಬಗೆ : ಒಂದು, ಪ್ರವಾಸಿಗಳು ತಮ್ಮ ಅನುಭವಗಳನ್ನು ಹಾಗೂ ತಾವು ಕಂಡುದನ್ನು ಸರಳವಾಗಿ. ನೇರವಾಗಿ ಹೇಳಿರುವುದು. ಇದು ಕುತೂಹಲಕಾರಿ. ಉಪಯುಕ್ತ. ಎರಡನೆಯದು ವಿದ್ಯಾವಂತ ಪ್ರವಾಸಿಗಳು ತಾವು ಕಂಡದ್ದನ್ನು ತಮ್ಮದೇ ರೀತಿಯಲ್ಲಿ ಬಿತ್ತರಿಸಿರುವುದು. ಇಂಥಲ್ಲಿ ಕಲ್ಪನೆಗೆ ಅವಕಾಶವಿದೆ. ಕಾವ್ಯಗುಣವಿದ್ದರೂ ವಾಸ್ತವಿಕ ವಿಷಯಗಳು ಕಡಿಮೆಯಾಗುವ ಸಂಭವ ಹೆಚ್ಚು. ಅನ್ವೇಷಣಾರ್ಥವಾಗಿ ಪ್ರವಾಸ ಮಾಡಿದ ವಿದ್ವಾಂಸರು ತಮಗೆ ಕಂಡದ್ದನ್ನು ವಿವರಿಸಿರುವುದು. ಇದು ಎಲ್ಲರಿಗೂ ಪ್ರಿಯವೆನಿಸಬೇಕಾದ್ದಿಲ್ಲ.

ಪ್ರವಾಸ ಕಥನಗಳು ದೇಶದ ಇತಿಹಾಸ ರಚನೆಗೆ, ಆಯಾಕಾಲದ ಆಚಾರ ವ್ಯವಹಾರಗಳನ್ನು ತಿಳಿಯುವುದಕ್ಕೆ ಬಹಳ ಸಹಾಯಕವಾಗಿವೆ. ಪ್ರವಾಸ ಪ್ರೇಮ ಎಲ್ಲ ದೇಶಗಳ ಜನರಲ್ಲೂ ಇದೆ. ಪ್ರಪಂಚದ ಎಲ್ಲ ಭಾಷೆಗಳಲ್ಲೂ ಪ್ರವಾಸ ಗ್ರಂಥಗಳು ಸಾಮಾನ್ಯ.

ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಪ್ರವಾಸಸಾಹಿತ್ಯವೂ ಒಂದು ಅದರಲ್ಲಿ (1) ವಾಸ್ತವವೆಂದೇ ತೋರುವ ಭ್ರಾಮಕ ಪ್ರವಾಸ ಸಾಹಿತ್ಯ (2) ವಾಸ್ತವಿಕ ಪ್ರವಾಸಗಳ ವರದಿ ಹಾಗೂ (3) ಲೇಖನಕಲೆಗೆ ವಸ್ತುವೆನಿಸುವ ಪ್ರವಾಸಾನುಭವಗಳು ಎಂದು ಮೂರು ಬಗೆ.

1. ವಾಸ್ತವವೆಂದು ತೋರುವ ಭ್ರಾಮಕ ಪ್ರವಾಸಗಳು : ಪ್ರಾಚೀನ ಕಾಲದಲ್ಲಿ ಪ್ರಪಂಚದ ಬಗ್ಗೆ ಕಲ್ಪನೆಗಳಿದ್ದುವು ಭೂಮಿ ಚಪ್ಪಟೆಯಾಗಿದೆ, ಯಾವ ದಿಕ್ಕಿಗೆ ಪ್ರಯಾಣ ಮಾಡಿದರೂ ಭೂಮಿಯ ತುದಿಯ ಪ್ರಪಾತಕ್ಕೆ ಬಿದ್ದು ಅನಂತ ಶೂನ್ಯವನ್ನು ಸೇರಬೇಕಾಗುವುದು ಎಂಬ ಕಲ್ಪನೆಗೆ ಗ್ರೀಕರಿಗೆ ಇತ್ತು. ಹೀರಡಟಸ್ (ಕ್ರಿ. ಪೂ. 450) ಮತ್ತು ಎರಟಾಸ್ತನೀಸ್ (ಕ್ರಿ. ಪೂ. 250) ಹಾಗೂ ಟೊಲೆಮೀ (ಕ್ರಿ. ಪೂ. 150) ಭೂಮಿಯ ರೂಪ, ಭೂ ಹಾಗೂ ಜಲಭಾಗಗಳ ವ್ಯಾಪ್ತಿಯನ್ನು ತಿಳಿಯಲು ಪ್ರಯತ್ನಿಸಿದರು. 16ನೆಯ ಶತಮಾನದಲ್ಲಿ ಮರ್ಕಾಟರ್ ಹೊಂಡಿಯಸ್ ಹಾಗೂ ಚ್ಲೌ-ಇವರು ಪ್ರವಾಸಿಗರಿಂದ ಸಂಗ್ರಹಿಸಿದ ವಿವರಗಳ ಆಧಾರದ ಮೇಲೆ ಭೂ ನಕ್ಷೆಗಳನ್ನು ರಚಿಸಿದರು. ಹೀಗೆ ಪ್ರಾರಂಭದಲ್ಲಿ ಭೂಮಿಯ ರೂಪವನ್ನು ನಿರ್ಧರಿಸಲು ಪ್ರವಾಸಿಗರು ಮತ್ತು ಭೂ ಪರಿಶೋಧಕರು ಸಂಗ್ರಹಿಸಿದ ವಿಷಯಗಳು ಸಹಾಯಕವಾದುವು. ದೂರ ಪ್ರಯಾಣದ ಅರಿವಿಲ್ಲದಿದ್ದ ಆ ಕಾಲದಲ್ಲಿ ಲೇಖಕರಿಗೆ ಕಾಲ್ಪನಿಕ ಹಾಗೂ ವಿಚಿತ್ರ ಪ್ರವಾಸಗಳನ್ನು ನಿಜವೆನ್ನುವಷ್ಟರಮಟ್ಟಿಗೆ ವರ್ಣಿಸಲು ಮಾತ್ರ ಸಾಧ್ಯವಿತ್ತು. 13ನೆಯ ಶತಮಾನದಲ್ಲಿ ಮಾರ್ಕೊ ಪೋಲೋ (1254-1324) ಮೊಟ್ಟಮೊದಲಿಗೆ ವೆನಿಸ್ ನಗರದಿಂದ ಚೀನಕ್ಕೆ ಭೂ ಸಂಚಾರ ತಾನು ಕಂಡ ದೇಶಗಳ ಜನಜೀವನವನ್ನು ಪಾದ್ರಿಯೊಬ್ಬನಿಂದ ಬರೆಸಿದ. ಅವನ ಪ್ರವಾಸದ ಅನುಭವಗಳನ್ನು ಯೂರೋಪಿನ ಜನ ನಂಬಲಾರದೆ ಹೋದರು. ಅವನ ಪ್ರವಾಸನುಭವಗಳು ಅವರಿಗೆ ಕಾಲ್ಪನಿಕವೆಂದೇ ತೋರಿದುವು. ಆದರೆ ಪೋಲೋನ ಪ್ರವಾಸ ಕೊಲಂಬಸ್ ಮೊದಲಾದ ಪ್ರವಾಸಿಗರಿಗೆ ಭೂ ಪರಿಶೋಧಕರಿಗೆ ದಾರಿಮಾಡಿತು.

ಕಾಲ್ಪನಿಕ ಪ್ರವಾಸಗಳನ್ನು ಅಸಹಜವೆಂದು ಅಲ್ಲಗಳೆಯುವಷ್ಟು ಭೌಗೋಳಿಕ ಜ್ಞಾನ ಆಗ ಜನರಿಗಿರಲಿಲ್ಲ. 14ನೆಯ ಶತಮಾನದಲ್ಲಿ ಫ್ರೆಂಚ್ ಲೇಖಕನೊಬ್ಬ ಟ್ರಾವೆಲ್ಸ್ ಆಫ್ ಜಾನ್ ಮ್ಯಾಂಡ್‍ವಿಲ್ ಎಂಬ ಗ್ರಂಥವನ್ನು ಬರೆದ. ಅದು ಆ ಯಾತ್ರಿಕನ ನೈಜ ಪ್ರಯಾಣಗಳ ಸಂಗ್ರಹವೆಂದು ಕಂಡುಬಂದರೂ ಶುದ್ಧಕಾಲ್ಪನಿಕ. ಆ ಗ್ರಂಥ 1377ರಲ್ಲಿ ಇಂಗ್ಲಿಷಿಗೆ ಭಾಷಾಂತರವಾಗಿ ಬಹುಕಾಲ ಲೇಖಕನ ನೈಜ ಸಂಚಾರಾನುಭವಗಳೇ ಅದರಲ್ಲಿವೆಯೆಂದು ಜನ ನಂಬಿದ್ದರು. ಕೊನೆಗೆ ಗ್ರಂಥದಲ್ಲಿನ ಅನೈಜ ವಿವರಗಳು ಬಯಲಿಗೆ ಬಿದ್ದು ಸರ್ ಜಾನ್ ಮ್ಯಾಂಡ್‍ವಿಲ್ ಕೇವಲ ಕಾಲ್ಪನಿಕ ವ್ಯಕ್ತಿಯೆಂಬುದು ಗೊತ್ತಾಯಿತು.

2. ವಾಸ್ತವಿಕ ಪ್ರವಾಸಗಳ ವರದಿ: 16ನೆಯ ಶತಮಾನದ ಉತ್ತರಾರ್ಧದ ಹೊತ್ತಿಗೆ ಪೋರ್ಚುಗಲ್, ಸ್ಪೇನ್ ಹಾಗೂ ಇಟಲಿ ದೇಶಗಳ ನಾವಿಕರು ಉತ್ತರ ಹಾಗೂ ದಕ್ಷಿಣ ಅಮೆರಿಕ ಖಂಡಗಳನ್ನು ಕಂಡುಹಿಡಿದು. ಏಷ್ಯ ಹಾಗೂ ಪೌರಸ್ತ್ಯ ದೇಶಗಳನ್ನು ಯೂರೋಪಿನ ಜನರಿಗೆ ಪರಿಚಯ ಮಾಡಿಸಿದರು. ಅವರು ತಿಳಿಸಿದ ಪ್ರವಾಸವಿಷಯಗಳು ಭ್ರಾಮಕವಾಗಿ ಕಂಡರೂ ಸಹಜವಾಗಿದ್ದುವು. ಅಂಥ ವಾಸ್ತವಿಕ ಸಂಚಾರಾನುಭಿಮಾನದಿಂದ ರಿಚರ್ಡ್ ಹಕ್ಲಿಟ್ ಎಂಬಾತ ಇಂಗ್ಲೆಂಡ್ ರಾಷ್ಟ್ರದ ಪ್ರಧಾನ ನೌಕಾಯಾನ, ಪ್ರವಾಸ ಹಾಗೂ ಭೂ ಪರಿಶೋಧನೆಗಳು (ಪ್ರಿನ್ಸಿಪಲ್ ನ್ಯಾವಿಗೇಷನ್ಸ್ ವಾಯೇಜಸ್ ಅಂಡ್ ಡಿಸ್ಕವರೀಸ್ ಆಫ್ ದಿ ಇಂಗ್ಲಿಷ್ ನೇಷನ್) ಎಂಬ ಗ್ರಂಥಸಂಪುಟಗಳನ್ನು ಪ್ರಕಟಿಸಿದ. ಅವುಗಳಲ್ಲಿ ಇಂಗ್ಲೆಂಡಿನ ನಾವಿಕರು ನೀಡಿದ ಪ್ರವಾಸ ವಿವರಗಳಿವೆ: ಸರ್ ವಾಲ್ಟರ್ ರ್ಯಾಲೆಯಂಥ ನುರಿತ ಲೇಖಕರು ಹಾಗೂ ಬರವಣಿಗೆಯಲ್ಲಿ ಸಾಮಾನ್ಯ ಅನುಭವವುಳ್ಳ ಪ್ರವಾಸಿಗರು ಬರೆದಿಟ್ಟ ವಿವರಗಳು ಅಲ್ಲಿ ಸಂಗ್ರಹವಾಗಿವೆ. ಸುಳ್ಳು ವಿಷಯಗಳನ್ನು ಬರೆದು ವಾಚಕರನ್ನು ಮೋಸಗೊಳಿಸುವ ಉದ್ದೇಶವಿಲ್ಲದೆ, ಕಂಡ ವಿಷಯಗಳನ್ನು ಅಲ್ಲಿ ವಾಸ್ತವಿಕವಾಗಿ ವರ್ಣಿಸಲಾಗಿದೆ. ಈ ರೀತಿ ವರ್ಣನಾತ್ಮಕ ಪ್ರವಾಸ ಸಾಹಿತ್ಯವನ್ನು ಯಶಸ್ವಿಯಾಗಿ ನೀಡಿದ ಪ್ರಾರಂಭಿಕರಲ್ಲಿ ಕ್ಯಾಪ್ಟನ್ ಜಾನ್ ಸ್ಮಿತ್ ಒಬ್ಬ. ಆತ ಅಮೆರಿಕದ ವರ್ಜೀನಿಯ ವಸಾಹತು ಸ್ಥಾಪನೆಯ ಇತಿಹಾಸದ ಬಗ್ಗೆ ಪ್ರವಾಸಗ್ರಂಥವನ್ನು ರಚಿಸಿದ (1624). ತಾಮಸ್ ಕೊರ್ಯೆಟ್ (1577-1617) ಇಟಿನೆರರಿ ಎಂಬ ಪ್ರವಾಸಕಥನದಲ್ಲಿ ತನ್ನ ಯೂರೋಪ್ ಪ್ರವಾಸಗಳನ್ನು ವರ್ಣಿಸಿದ್ದಾನೆ.

ಕಡಲಾಚೆಯ ದೇಶಗಳೊಂದಿಗೆ ಇಂಗ್ಲೆಂಡಿನ ವ್ಯಾಪಾರ ಕ್ರಮಕ್ರಮವಾಗಿ ವೃದ್ಧಿಗೊಂಡ 17 ಹಾಗೂ 18ನೆಯ ಶತಮಾನಗಳಲ್ಲಿ ಪ್ರವಾಸವಿಷಯಗಳನ್ನು ತಿಳಿಯುವ ಆಸಕ್ತಿ ಜನರಲ್ಲಿ ಹೆಚ್ಚಿತು. 17ನೆಯ ಶತಮಾನದ ಕೊನೆಯ ಭಾಗದಲ್ಲಿ ಕ್ಯಾಪ್ಟನ್ ವಿಲಿಯಂ ಡಾಂಪೀರ್ ಎಂಬಾತ ನ್ಯೂ ವಾಯೇಜಸ್ ರೌಂಡ್ ದಿ ವಲ್ರ್ಡ್ (1697), ವಾಯೇಜಸ್ ಅಂಡ್ ಡಿಸ್ಕ್ರಿಪ್‍ಷನ್ಸ್ (1699) ಹಾಗೂ ವಾಯೇಜಸ್ ಟು ನ್ಯೂ ಹಾಲೆಂಡ್ (1703) ಎಂಬ ಮೂರು ಪ್ರವಾಸ ಗ್ರಂಥಗಳನ್ನು ರಚಿಸಿದ. ಈ ಗ್ರಂಥಗಳು ಇಂಗ್ಲಿಷ್ ಸಾಹಿತಿಗಳಾದ ಡೇನಿಯಲ್ ಡಪೂ ಹಾಗೂ ಜೊನ್ಯಾತನ್ ಸ್ವಿಷ್ಟ್-ಇವರಿಬ್ಬರ ಬರೆವಣಿಗೆಗಳ ಮೇಲೆ ಪ್ರಭಾವ ಬೀರಿದುವು. ಡಪೂ ಅದರ ಪರಿಣಾಮ ಪ್ರವಾಸಗಳು ಎಂಬ ವಿಡಂಬನಾತ್ಮಕ ಪ್ರವಾಸಕಥೆಯನ್ನೂ ಬರೆದರು. ಡಾಂಪೀರನ ಸುಲಭಶೈಲಿಯ ನಿರೂಪಣೆ ಜನಪ್ರಿಯವಾಯಿತು. ಲಾರ್ಡ್ ಜಾರ್ಜ್ ಅನ್‍ಸನ್ ಬರೆದಿಟ್ಟ ಪ್ರವಾಸ ದಿನಚರಿಯನ್ನು (1740-44) ಬಳಸಿಕೊಂಡು ಅವನ ಪುರೋಹಿತ ಆರ್, ವಾಟರ್ಸ್ ಎಂಬಾತ ವಾಯೇಜ್ ರೌಂಡ್ ದಿ ವಲ್ರ್ಡ್ ಎಂಬ ಗ್ರಂಥವನ್ನು ಬರೆದ. ಅದರಲ್ಲಿಯ ನಾಟಕೀಯ ಘಟನೆಗಳು ವಾಚಕರಲ್ಲಿ ಆಸಕ್ತಿಯನ್ನು ಮೂಡಿಸುತ್ತವೆ. 18ನೆಯ ಶತಮಾನದಲ್ಲಿ ಬರೆದ ಪ್ರವಾಸಗ್ರಂಥಗಳಲ್ಲಿ ಕ್ಯಾಪ್ಟನ್ ಕುಕ್ ನಾವಿಕನ ಎ ವಾಯೇಜ್ ರೌಂಡ್ ಕೇಪ್ ಹಾರ್ನ್ ಅಂಡ್ ದಿ ಕೇಪ್ ಆಫ್ ಗುಡ್ ಹೋಪ್ (1733) ಎ ವಾಯೇಜ್ ಟು ವಡ್ರ್ಸ್ ದಿ ಸೌತ್ ಪೋಲ್ ಅಂಡ್ ರೌಂಡ್ ದಿ ವಲ್ರ್ಡ್ (1977), ಎ ವಾಯೇಜ್ ಟು ದಿ ಫೆಸಿಪಿಕ್ ಓಷನ್ (1784) ಎಂಬ ಮೂರು ಗ್ರಂಥಗಳು ಪ್ರಸಿದ್ಧವಾಗಿವೆ. ಕ್ಯಾಪ್ಟನ್ ಕುಕ್ಕನ ಅದ್ಭುತಶೈಲಿಯ ಈ ಪ್ರವಾಸಗ್ರಂಥಗಳು ಇಂಗ್ಲಿಷ್ ಅಭಿಜಾತ ಸಾಹಿತ್ಯವರ್ಗಕ್ಕೆ ಸೇರಿವೆ. ಅವನು ಆಸ್ಟ್ರೇಲಿಯ ಮತ್ತು ನ್ಯೂಜಿûಲೆಂಡುಗಳನ್ನು ಕಂಡುಹಿಡಿದ ಮೇಲೆ ಭೂಗೋಳದ ರೂಪರೇಖೆಗಳು ಸ್ಪಷ್ಟವಾಗಿ ತಿಳಿದುಬಂದು, ಪರಿಶೋಧಕರ ಹಾಗೂ ಪ್ರವಾಸ ಸಾಹಿತ್ಯದ ವಾಚಕರ ಆಸಕ್ತಿ ಆಗಿನವರೆಗೂ ಕಂಡರಿಯದಿದ್ದ ಭೂಖಂಡಗಳ ಅಂತರ ರಹಸ್ಯಗಳತ್ತ ಸಾಗಿತು. ವಿಷಯ ಬದಲಾವಣೆಯೊಂದಿಗೆ ಪ್ರವಾಸ ಸಾಹಿತ್ಯದ ಶೈಲಿಯಲ್ಲಿ ಸಹ ಬದಲಾವಣೆಗಳಾದುವು.

3. ಲೇಖನ ಕಲೆಯ ವಸ್ತುವೆನಿಸುವ ಪ್ರವಾಸ ಸಾಹಿತ್ಯ: ಮಂಗೊ ಪಾರ್ಕ್ (1771-1806) ಆಫ್ರಿಕದ ನೈಜರ್ ನದಿಯ ಮೂಲವನ್ನು ಕಂಡುಹಿಡಿದ. ಅವನ ಟ್ರ್ಯಾವೆಲ್ಸ್ ಇನ್ ದಿ ಇಂಟೀರಿಯರ್ ಆಫ್ ಆಫ್ರಿಕ (1799) 18ನೆಯ ಶತಮಾನಗಳಲ್ಲಿ ಹೆಚ್ಚಾಗಿ ಲೇಖಕರ ವೈಯಕ್ತಿಕ ನಿದರ್ಶನ, ಅವನ ತರುವಾಯ ಬಂದ ಪ್ರವಾಸ ಗ್ರಂಥ ಕಾಣುತ್ತವೆ. ರಿಚರ್ಡ್ ಬರ್ಟನ್ನನ (1821-90) ಭಾರತಕ್ಕೆ ಸಂಬಂಧಿಸಿದ ಸಿಂಧ್ ಆರ್ ದಿ ಅನ್‍ಹ್ಯಾಪಿ ವ್ಯಾಲಿ (1851), ಅವನ ಆಫ್ರಿಕ ಯಾತ್ರೆಗೆ ಸಂಬಂಧಿಸಿದ ಫಸ್ಟ್ ಸ್ಟೆಪ್ಸ್ ಇನ್ ಈಸ್ಟ್ ಆಫ್ರಿಕ (1856) ಹಾಗೂ ದಿ ಲೇಕ್ ರೀಜನ್ ಆಫ್ ಸೆಂಟ್ರಲ್ ಆಫ್ರಿಕ (1860) - ಈ ಪ್ರವಾಸ ಗ್ರಂಥಗಳಲ್ಲಿ ಈ ಲಕ್ಷಣಗಳನ್ನು ಕಾಣಬಹುದು. ಆಗ ಸಾಹಿತ್ಯ ಕ್ಷೇತ್ರದಲ್ಲಿ ಪ್ರಧಾನವಾಗಿದ್ದ ರೊಮ್ಯಾಂಟಿಕ್ ಪಂಥದಿಂದ ಲೇಖಕರ ಭಾವನಾತ್ಮಕ ಕೃತಿಗಳು ಜನಪ್ರಿಯವಾಗಿದ್ದುವು. ಅಷ್ಟೇ ಅಲ್ಲದೆ ಹಿಂದಿನ ಸಮುದ್ರ ಸಂಚಾರಕ್ಕಿಂತ ಭಿನ್ನವಾಗಿ ಭೂ ಸಂಚಾರದಲ್ಲಿ ವಿವಿಧ ಭೂಪರಿಸರ ಹಾಗೂ ಅಲ್ಲಿಯ ಅನಾಗರಿಕ ಜನ ಇವು ಪ್ರವಾಸ ಲೇಖಕರಿಗೆ ತಮ್ಮ ವ್ಯಕ್ತಿತ್ವ ಹಾಗೂ ಭಾವನೆಗಳನ್ನು ಪ್ರಕಟಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದುವು. ಒಟ್ಟಿನಲ್ಲಿ ಪ್ರವಾಸಸಾಹಿತ್ಯ 18ನೆಯ ಶತಮಾನದ ಹೊತ್ತಿಗೆ ಆತ್ಮಕಥೆಯ ಲಕ್ಷಣಗಳನ್ನು ತಾಳಿತು. ಕತ್ತಲೆಯ ಖಂಡವಾದ ಆಫ್ರಿಕ ಹಾಗೂ ಅರೇಬಿಯ ಪರ್ಯಾಯದ್ವೀಪ ಲೇಖಕರ ಗಮನ ಸೆಳೆದವು. ಮೊದಮೊದಲು ಮೆಕ್ಕಾನಗರಕ್ಕೆ ಹೋದ ಆಂಗ್ಲರಲ್ಲಿ ರಿಚರ್ಡ್ ಬರ್ಟನ್ ಒಬ್ಬ, ಅಲ್ಲಿಯ ವೈಶಿಷ್ಟ್ಯಗಳನ್ನು ಕಂಡು ಅವನು ಪಿಲಿಗ್ರಿಮೇಚ್ ಟು ಅಲ್-ಮದೀನ ಅಂಡ್ ಮೆಕ್ಕಾ (1888) ಎಂಬ ಪ್ರವಾಸಗ್ರಂಥವನ್ನು ಬರೆದ. ಬರ್ಟನ್ನನ ತರುವಾಯು ಚಾರಾಲ್ಸ್ ಡೌಟೀ (1843-1926) ಅರೇಬಿಯಾ ಡೆಸರ್ಟಾ (1888) ಎಂಬ ತನ್ನ ಪ್ರವಾಸಗ್ರಂಥದಲ್ಲಿ 19ನೆಯ ಶತಮಾನದ ಗದ್ಯಕ್ಕೆ 16ನೆಯ ಶತಮಾನದ ಭಾಷಾ ಸ್ಫುಟತೆಯನ್ನು ತರಲು ಪ್ರಯತ್ನಿಸಿದ. ಮೊದಲ ಮಹಾಯುದ್ಧಕಾಲದಲ್ಲಿ ತುರ್ಕಿಯ ಮೇಲೆ ಅರಬ್ಬಿ ಜನ ನಡೆಸಿದ ಹೋರಾಟವನ್ನು ಕುರಿತು ಟೆ.ಇ. ಲಾರೆನ್ಸ್ (1888-1935) ಬರೆದ ಸೆವೆನ್ ಫಿಲ್ಲರ್ಸ್ ಆಫ್ ವಿಸ್ಟಂ (1926) ಗ್ರಂಥದಲ್ಲಿ ಅರೇಬಿಯದಲ್ಲಿನ ಸಂಚಾರದಲ್ಲಿ ಅವನು ಪಡೆದ ಅನುಭವಗಳು ಇದೇ ರೀತಿ ಸರಳ ಸುಂದರವಾಗಿ ವರ್ಣಿತವಾಗಿವೆ. ಆದರೆ ಜಾರ್ಜ್‍ಬೊರೋನ (1803-81) ಪ್ರವಾಸ ಗ್ರಂಥಗಳ ಲಕ್ಷಣವೇ ಬೇರೆ. ಅವನು ವಿಷಯ ಸಂಗ್ರಹಣೆಗೆ ದೂರ ಪ್ರಯಾಣ ಮಾಡದೆ ಪ್ರವಾಸಿವಿಷಯವನ್ನು ತನ್ನ ಕಲಾತ್ಮಕ ಕಲ್ಪನೆಗಳೊಡನೆ ಬೆರೆಸಿ ಕೃತಿಗಳನ್ನು ರಚಿಸಿದ. ಸಾಮಾನ್ಯ ಜನರನ್ನು ಸಂಧಿಸಿದಾಗ ಆದ ಅನುಭವಗಳೇ ಅವನ ಗ್ರಂಥದ ವಸ್ತು. ಜಿಪ್ಸಿ ಜನರ ಜೀವನದ ಬಗ್ಗೆ ಅವನಿಗೆ ಆಸಕ್ತಿ ಹೆಚ್ಚು. ಅವನ ಗ್ರಂಥಗಳನ್ನು ಪ್ರವಾಸ ಸಾಹಿತ್ಯಕ್ಕೆ ಸೇರಿಸಬೇಕೆ ಅಥವಾ ಕಾದಂಬರಿ ಪ್ರಕಾರಕ್ಕೆ ಸೇರಿಸಬೇಕೇ ಎಂಬುದು ಸಮಸ್ಯೆ. ಜನಜೀವನವನ್ನು ವರ್ಣಿಸುವುದರಲ್ಲಿ ಅವನ ಸಾಮಥ್ರ್ಯ ಗಮನಾರ್ಹ, ದಿ ಜಿಪ್ಸೀಸ್ ಇನ್ ಸ್ಟೇನ್ (1843) ವೈಲ್ಡ್ ವೇಲ್ಸ್ (1862)-ಇವು ಅವನ ಪ್ರವಾಸ ಲಕ್ಷಣದ ಗ್ರಂಥಗಳು. ಈ ಲೇಖಕರ ಗ್ರಂಥಗಳಂತೆ ಅಭಿಜಾತ ವರ್ಗಕ್ಕೆ ಸೇರಿದ ಪ್ರವಾಸಗ್ರಂಥಗಳಲ್ಲಿ ಮತ್ತೆ ಕೆಲವು ಇವು; ಜೇಮ್ಸ್ ಕಿಂಗ್‍ಲೇಕ್ ಎಂಬುವನ ಪೂರ್ಣ ಮೆಡಿಟರೇನಿಯನ್ ನಾಡುಗಳಲ್ಲಿನ ಪ್ರವಾಸವನ್ನು ಕುರಿತ ಈಯೋಥೆನ್ (1844). ಅಮೆರಿಕದ ಲಫ್‍ಕಡೀಯೋ ಹುರ್ನ್ ಎಂಬಾತನ ಗ್ಲಿಂಪ್ಸಸ್ ಆಫ್ ಅನ್‍ಫೆಮಿಲಿಯರ್ ಜಪಾನ್ (1894). ಕಾದಂಬರಿಕಾರರಿಗೆ ಪ್ರವಾಸ ಸಾಹಿತ್ಯಕ್ಕೆ ಕಾದಂಬರಿಯ ಲಕ್ಷಣವನ್ನು ಕೊಟ್ಟವರಲ್ಲಿ ಆರ್. ಎಲ್. ಸ್ಟೀವನ್ ಸನ್, ಡಿ. ಎಚ್. ಲಾರೆನ್ಸ್ ಮತ್ತು ಜೋಸಫ್ ಕಾನ್ರಾಡ್, ಎರಡನೆಯ ಮಹಾಯುದ್ಧ ಕಾಲದಲ್ಲಿ ಸೈನಿಕರಿಗೆ ಹಾಗೂ ಇನ್ನಿತರರಿಗೆ ಪ್ರಪಂಚದ ನಾನಾಕಡೆಗಳಲ್ಲಿ ಸಂಚರಿಸಲು ಅವಕಾಶ ಸಿಕ್ಕಿ ಯುದ್ಧಾನುಭವಗಳು ಹಾಗೂ ನಾನಾದೇಶಗಳ ಜನ ಜೀವನ-ಇವುಗಳ ಬಗ್ಗೆ ಪ್ರವಾಸರೂಪದ ಗ್ರಂಥಗಳು ವಿಪುಲವಾಗಿ ಪ್ರಕಟವಾದುವು.

ಕನ್ನಡದಲ್ಲಿ ಪ್ರವಾಸಗ್ರಂಥಗಳು : 18ನೆಯ ಶತಮಾನದ ಕೊನೆಯಲ್ಲಿ ಟಿಪ್ಪುಸುಲ್ತಾನ ತನ್ನ ರಾಯಭಾರಿಗಳನ್ನು ಫ್ರಾನ್ಸ್ ಸಮ್ರಾಟ ನೆಪೋಲಿಯನ್ನನ ಆಸ್ಥಾನಕ್ಕೆ ಕಳುಹಿಸಿದ ಪರಿಣಾಮವಾಗಿ ಅದರ ಪ್ರವಾಸಾನುಭವಗಳು ಅವನಿಗೆ ತಿಳಿಯಿತು. ಹಿಂದೂ ಸಮಾಜದಲ್ಲಿ ಸಮುದ್ರಯಾನಕ್ಕಿದ್ದ ನಿಷೇಧಗಳು ಬ್ರಿಟಿಷರ ಕಾಲದಲ್ಲಿ ದೂರವಾಗಿ ಭಾರತೀಯರು ವಿದೇಶಗಳಿಗೆ ಹೋಗಿಬರುವಂತಾಗಿ ಪ್ರವಾಸಗಳನ್ನು ಕುರಿತ ಗ್ರಂಥಗಳು ಹೊರಬರಲಾರಂಭಿಸಿದುವು. ಕನ್ನಡದಲ್ಲಿ ಪ್ರವಾಸ ಸಾಹಿತ್ಯದ ಸೃಷ್ಟಿ ಪ್ರಾರಂಭವಾದ್ದು 18ನೆಯ ಶತಮಾನದಲ್ಲೆ, 1890ರಲ್ಲಿ ಕರ್ಕಿ ವೆಂಕಟರಮಣಶಾಸ್ತ್ರಿಗಳ ದಕ್ಷಿಣಭಾರತ ಯಾತ್ರೆ ಪ್ರಕಟವಾಯಿತು. ವಿ. ಸೀತಾರಾಮಯ್ಯನವರ ಪಂಪಾಯತ್ರೆ (1926). ವಿ.ಕೃ. ಗೋಕಾಕರ ಸಮುದ್ರದಾಚೆಯಿಂದ, ಕೆ. ಶಿವರಾಮ ಕಾರಂತರ ಆಬುವಿನಿಂದ ಬರಾಮಾಕ್ಕೆ, ಅಪೂರ್ವ ಪಶ್ಚಿಮ, ದಿನಕರ ದೇಸಾಯಿಯವರ ನಾ ಕಂಡ ಪಡುವಣ-ಈ ಗ್ರಂಥಗಳು ಕನ್ನಡ ಪ್ರವಾಸಸಾಹಿತ್ಯಕ್ಕೆ ಪ್ರಾರಂಭದ ಕೊಡುಗೆಗಳು. ನಾಲ್ವಡಿ ಕೃಷ್ಣರಾಜ ಒಡೆಯರ ಮಾನಸಸರೋವರ ಯಾತ್ರೆ ಸಚಿತ್ರವಾಗಿ ಪ್ರಕಟವಾಯಿತು. ಶ್ರೀರಂಗರ ವಿದೇಶ ಯಾತ್ರೆ ಶ್ರೀರಂಗಯಾತ್ರೆ ಎಂಬ ಶೀರ್ಷಿಕೆಯಲ್ಲಿ ಹೊರಬಂತು. ನವರತ್ನ ರಾಂ ಅವರ ಪ್ಯಾರಿಸ್ಸಿನಿಂದ ಪ್ರೇಯಸಿಗೆ ಉತ್ತಮ ಪ್ರವಾಸಗ್ರಂಥ. ನಾಡಿಗ ಕೃಷ್ಣಮೂರ್ತಿಯವರು ಸಾಗರದಾಚೆ ಹಾಗೂ ನಮ್ಮ ಕಾಗದಗಳು ಎಂಬ ಕೃತಿಗಳಲ್ಲಿ ತಮ್ಮ ಪ್ರವಾಸಾನುಭವಗಳನ್ನು ಚಿತ್ರಿಸಿದ್ದಾರೆ. ದೇ. ಜವರೇಗೌಡರ ವಿದೇಶದಲ್ಲಿ ನಾಲ್ಕು ವಾರ, ಆಫ್ರಿಕಾ ಯಾತ್ರೆ ಇವು ಪ್ರವಾಸ ಸಾಹಿತ್ಯವರ್ಗದಲ್ಲಿ ಶೈಲಿಗೂ ವಿಷಯ ನಿರೂಪಣೆಗೂ ಉತ್ಕøಷ್ಟ ನಿದರ್ಶನ. ವಿದೇಶಿ ಪ್ರವಾಸಗಳ ಬಗ್ಗೆ ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗಿರುವುದಲ್ಲದೆ ಭಾರತದ ವಿವಿಧ ಕ್ಷೇತ್ರಗಳಿಗೆ ಹೋಗಿ ಬಂದು ತಮ್ಮ ಪ್ರವಾಸಾನುಭವಗಳನ್ನು ಅನೇಕರು ಬರೆದಿದ್ದಾರೆ. (ನೋಡಿ- ಕನ್ನಡದಲ್ಲಿ-ಪ್ರವಾಸ-ಸಾಹಿತ್ಯ)

ಪ್ರವಾಸದ ಸ್ವಂತಾನುಭವಗಳಲ್ಲದೆ ಇತರ ಭಾಷೆಗಳಲ್ಲಿನ ಅನೇಕ ಪ್ರವಾಸಗ್ರಂಥಗಳು ಕನ್ನಡಕ್ಕೆ ತುರ್ಜುಮೆಯಾಗಿವೆ. ಅವುಗಳಲ್ಲಿ ಪ್ರಧಾನವಾದವು ಜಿ.ಪಿ. ರಾಜರತ್ನಂ ಅವರ ಚೀನಾದೇಶದ ಬೌದ್ಧ ಯಾತ್ರಿಕರು, ಎಚ್. ಎಲ್. ನಾಗೇಗೌಡರ ಪ್ರವಾಸಿ ಕಂಡ ಇಂಡಿಯಾ ಸಂಪುಟಗಳು, ಕರ್ನಲ್ ಯೂಲ್ ಸಂಪಾದಿಸಿ ಪ್ರಕಟಿಸಿದ ಮಾರ್ಕೊಪೋಲೊ ಗ್ರಂಥದ ವಿ.ಜಿ. ಕೃಷ್ಣಮೂರ್ತಿಯವರ ಅನುವಾದ, ಬಂಗಾಳಿ ಲೇಖಕ ಪ್ರಬೋಧ ಕುಮಾರ್ ಸನ್ಯಾಲರ ಪ್ರವಾಸಗ್ರಂಥದ ಎಂ.ಕೆ. ಭಾರತೀರಮಣಾಚಾರ್ಯರ ಅನುವಾದ-ಮಹಾಪ್ರಸ್ಥಾನ ಪಥದಲ್ಲಿ ಎಚ್.ವಿ. ನಾರಾಯಣ ರಾಯರು ಭಾಷಾಂತರಿಸಿರುವ ಸಾಮ್ಯುಯೆಲ್ ಎಲಿಯಟ್ ಮಾರಿಸನ್ನನ ಕ್ರಿಸ್ಟೋಫರ್ ಕೊಲಂಬಸ್ ಇತ್ಯಾದಿ.

ಕನ್ನಡದಲ್ಲಿ ಪ್ರವಾಸಗ್ರಂಥಗಳನ್ನು ಸ್ವಂತ ಪ್ರವಾಸಾನುಭವಗಳಿಂದ ಬರೆದಿರುವವರಲ್ಲಿ ಸಾಹಿತಿಗಳೇ ಹೆಚ್ಚು. ಇದರಿಂದಾಗಿ ಅವು ಶೈಲಿ ಹಾಗೂ ನಿರೂಪಣೆಯ ದೃಷ್ಟಿಯಿಂದ ಉತ್ತಮ. ಪ್ರವಾಸಗ್ರಂಥಗಳನ್ನು ಭಾಷಾಂತರಿಸಿರುವವರು ಸಹ. ಓದುಗರಲ್ಲಿ ಆಸಕ್ತಿಯನ್ನು ಮೂಡಿಸುವಂತೆ ಕನ್ನಡಿಸಿದ್ದಾರೆ. (ವಿ.ಜಿ.ಕೆ;ಎಚ್.ಎಲ್.ಎನ್.)