ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಂಡಿಹಬ್ಬ

ವಿಕಿಸೋರ್ಸ್ದಿಂದ

ಬಂಡಿಹಬ್ಬ - ಕರ್ನಾಟಕದ ಒಂದು ಜನಪದ ಹಬ್ಬ, ಗ್ರಾಮದೇವತೆಯ ಹೆಸರಿನಲ್ಲಿ ನಡೆಸುವ ಈ ಹಬ್ಬವನ್ನು ಕೆಲವು ಕಡೆ ಹಸುರುಬಂಡಿ ಎಂದೂ ಕರೆಯುತ್ತಾರೆ. ಹಸುರೆಲೆಯ ತೋರಣ, ತೆಂಗಿನ ಗರಿ, ಅಡಕೆ, ಹೊಂಬಾಳೆ ಇವುಗಳಿಂದ ಬಂಡಿಯನ್ನು (ಎತ್ತಿನಗಾಡಿ ಅಥವಾ ರಥ) ಅಲಂಕರಿಸುವುದರಿಂದ ಇದಕ್ಕೆ ಈ ಹೆಸರು ಬಂದಿದೆ ಎನ್ನಲಾಗಿದೆ. ಹಬ್ಬದ ಆಚರಣೆಯಲ್ಲಿ ಸ್ಥಳದಿಂದ ಸ್ಥಳಕ್ಕೆ ಕೆಲವು ವೈಶಿಷ್ಟಗಳಿವೆ.

ಹಳೆಯ ಮೈಸೂರು ಪ್ರದೇಶದಲ್ಲಿ ಈ ಹಬ್ಬ ನಡೆಯುವುದು ಸಾಧಾರಣವಾಗಿ ಮಂಗಳವಾರ. ಗ್ರಾಮದೇವತೆಯ ವಿಗ್ರಹವನ್ನು ತಾತ್ಕಾಲಿಕವಾಗಿ ಮಣ್ಣಿನಲ್ಲಿ ಬಹು ಸುಂದರವಾಗಿ ನಿರ್ಮಿಸಿರುತ್ತಾರೆ. ಅಕ್ಕಿ ತೆಂಗಿನಕಾಯಿ ರಾಶಿ ರಾಶಿ ಬಿದ್ದಿರಲಾಗಿ ಗ್ರಾಮದೇವತೆ ಒಕ್ಲೂನ ಹಾಸ್ಕೊಂಡು ಒಕ್ಲೂನ ಹೊದ್ದು ಕಿವಿಯಲ್ಲಿ ಮುತ್ತಿಕ್ಕಿದ ಓಲೆ ತೊಟ್ಟು ಕಿಡಗಣ್ಣಿಯಾಗಿ ಮೆರೆಯುತ್ತಾಳೆ. ಭಕ್ತರು ಬಾಗಿಲಿಗೆ ಛತ್ರಿ ಏರಿಸುತ್ತಾರೆ. ಏಳೂರು ಸಿಡಿಗಳು ಬರುತ್ತವೆ, ಹೆಡಗೇಲಿ ಹಣ್ಣು, ಗಡಿಗೇಲಿ ತುಪ್ಪ, ಇಡಗಾಯಿ, ಕುರಿಗಳ ಸಾಲು, ಮಡಲಕ್ಕಿ ಎಲ್ಲ ಬರುತ್ತವೆ. ಕೆಲವಾರು ಊರುಗಳಲ್ಲಿ ಕೊಂಡ ಸಹ ಹಾಯುತ್ತಾರೆ. ಮೆರವಣಿಗೆಯಲ್ಲಿ ದೊಡ್ಡ ದೊಡ್ಡ ಪಂಜುಗಳು ಉರಿಯುತ್ತವೆ. ಭಕ್ತರು ಭಕ್ತಿಯಿಂದ ದೇವತೆಯ ಮಹಿಮೆಯನ್ನು ಕುರಿತು ಹಾಡುತ್ತಾರೆ. ದೇವತೆಯನ್ನು ಬಂಡಿಯ ಮೇಲೆ ಮೆರವಣಿಗೆಯಲ್ಲಿ ಕೊಂಡೊಯ್ಯುವಾಗ ಅಕ್ಕಪಕ್ಕದಲ್ಲಿ ದಾಸ ಮತ್ತು ಪುರುಷ (ಧಾರ್ಮಿಕ ಪೂಜಾರಿ) ಇರುತ್ತಾರೆ. ದಾಸ ಹೆಗಲ ಮೇಲೆ ಕಿರುಗಂಟೆ ಕಟ್ಟಿದ ಒಂದು ಒನಕೆ, ಎಡ ಕಂಕುಳಲ್ಲಿ ಕೆಡಾಸು, ಬವನಾಸಿ, ಬಲ ಕಂಕುಳಲ್ಲಿ ತುತ್ತೂರಿ, ಬಾಂಕಿ ಶಂಖ ಎದೆಯ ಮೇಲೆ ಆನೆಯ ವಿಗ್ರಹ, ಬಲಗೈಯಲ್ಲಿ ಜಾಗಟಿ ಹಿಡಿದಿರುತ್ತಾನೆ. ಪುರುಷ ಭೈರವನ ಶಿಷ್ಯ. ಈತ ಕಬ್ಬಿಣದ ದೊಡ್ಡ ತ್ರಿಶೂಲ ಮತ್ತು ಬೆಳ್ಳಿಯ ಸಣ್ಣ ತ್ರಿಶೂಲಗಳನ್ನು ಸೇರಿಸಿದ ನವಿಲುಗರಿ ಕಂತೆಯನ್ನು ಹೆಗಲಮೇಲೆ ಇಟ್ಟುಕೊಂಡು ಕಂಕುಳಲ್ಲಿ ವಿಭೂತಿ ಚೀಲ, ಕೈಯಲ್ಲಿ ಜಿಂಕೆಯ ಕೊಂಬಿನ ವಾದ್ಯ, ತೀರ್ಥದ ಬಟ್ಟಲು ಹಿಡಿದಿರುತ್ತಾನೆ. ಸುಮಂಗಲಿಯರು ಐರಣ (ಪಂಚಕಲಶ) ಹೊತ್ತು ನಡೆಯುವರು. ಒಬ್ಬ ವ್ಯಕ್ತಿ ಬಣ್ಣ ಹಾಕಿದ ಮರದ ಕುದುರೆಯ ಕತ್ತನ್ನು ಕಂಕುಳಲ್ಲಿ ಹಿಡಿದುಕೊಂಡು ಕುಣಿಯುತ್ತಾನೆ. ಗ್ರಾಮದೇವತೆಗೆ ಹರಕೆ ಹೊತ್ತವರೆಲ್ಲ ತಮ್ಮ ಶಕ್ತ್ಯಾನುಸಾರ ಹರಕೆ ತಂದೊಪ್ಪಿಸುತ್ತಾರೆ. ಕುರಿ, ಕೋಳಿ ಆಡುಗಳ ಬಲಿಯನ್ನು ಅರ್ಪಿಸುತ್ತಾರೆ. ಕೋಲಾಟ, ದೊಣ್ಣೆವರಸೆ, ರಮ ಡೋಲು, ಬಾಣಬಿರುಸಿನ ಐಭೋಗ ನಡೆಯುತ್ತದೆ. ಅನಂತರ ಬಾಡೂಟದ ಔತಣ. ಔತಣದ ಅನಂತರ ಕೊಂಬು ಕಹಳೆ, ತುತ್ತೂರಿ, ಭಾಂಕೆ ಕುಣಿಮಿಣಿ, ತಾಳ ತಮಟೆ ಮೋರಿಗಳ ಕೋಲಾಹಲದೊಂದಿಗೆ ವೀರಗುಣಿತವಿರುತ್ತದೆ. ಈ ಕುಣಿತದ ಮುಕ್ತಾಯದೊಡನೆ ಹಬ್ಬದ ಆಚರಣೆ ಕೊನೆಗೊಳ್ಳುತ್ತದೆ.

ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಸೀಮೆಯಲ್ಲಿ ಮೇ ತಿಂಗಳಲ್ಲಿ ನಡೆಯುವ ಬಂಡಿಹಬ್ಬ ವೈಶಿಷ್ಟ್ಯಪೂರ್ಣವಾದುದು. ಅದರಲ್ಲೂ ಅಂಕೋಲೆ ಸೀಮೆಯ ಬಂಡಿಹಬ್ಬ ಬಹು ಪ್ರಸಿದ್ಧ. ಇಲ್ಲಿಯ ನಾಡದೇವತೆ ಶಾಂತಾದುರ್ಗ (ಭೂಮಿತಾಯಿ) ಈಕೆಯ ಹೆಸರಿನಲ್ಲಿ ಈ ಹಬ್ಬದ ಆಚರಣೆ ಪ್ರತಿವರ್ಷ ಅಕ್ಷಯ ತೃತೀಯೆಯ ದಿನ ಸೇಸೆ ಹಾಕುವ ವಿಧಿಯಿಂದ ಪ್ರಾರಂಭವಾಗಿ ಹನ್ನೆರಡನೆಯ ದಿನ ಅಂದರೆ ವೈಶಾಖ ಶುದ್ಧ ಪೂರ್ಣಿಮೆಯಂದು ಮುಗಿಯುತ್ತದೆ. ಕೆಲವು ಸಂದರ್ಭಗಳಲ್ಲಿ ಹನ್ನೆರಡು ದಿನಗಳ ಹಬ್ಬದ ಬದಲು ಒಂಬತ್ತು ದಿನಗಳ ಹಬ್ಬ ಆಚರಿಸುವುದೂ ಉಂಟು.

ಊರಗಾಂವಕಾರರು, ಪೂಜಾರಿಗಳು, ದೇವಸ್ಥಾನದ ಮೊಕ್ತೇಸರರು ಸಭೆ ಸೇರಿ ಹಬ್ಬ ನಡೆಸುವ ದಿನ ನಿಶ್ಚಯಿಸಿ ಗ್ರಾಮದ ಜನರಿಗೆ ಸುದ್ದಿ ತಿಳಿಸುತ್ತಾರೆ. ಈ ಕ್ರಮಕ್ಕೆ `ಒಂದು ಹೊತ್ತಿಗೆ ಹೇಳುವುದು ಎನ್ನುತ್ತಾರೆ. ಆ ದಿನ ದೇವರಿಗೆ ಪೂಜೆ, ಉಪಾರ (ಉಪಾಹಾರ) ಆಗಬೇಕು. ದೇವಕಾರ್ಯಕ್ಕೆ ಸಂಬಂಧಪಟ್ಟವರಿಗೆಲ್ಲ ಆ ದಿನ ಒಂದೇ ಊಟ. ಬಂಡಿ ಹಬ್ಬ ನಡೆಯುವ ಊರುಗಳಲ್ಲಿ ಅದನ್ನು ನಡೆಸುವ ಮುನ್ನ ಪೂರ್ವಭಾವಿಯಾಗಿ ಆ ವರ್ಷದಲ್ಲಿ `ಅವಲಹಬ್ಬ ಎಂಬ ವಿಶೇಷ ಹಬ್ಬವೊಂದು ನಡೆಯಲೇಬೇಕೆಂಬ ಕಡ್ಡಾಯ ವಿಧಿ ಇದೆ. ಅವಲ ಹಬ್ಬ ಹಿಂದೆಯೇ ಮುಗಿದಿರದಿದ್ದರೆ ಒಂದು ಹೊತ್ತಿನ ಮಾರನೆಯ ದಿನ ಅಂದರೆ ಸೇಸೆ ಹಾಕುವ ಪೂರ್ವದಲ್ಲಿ ಅವಲಹಬ್ಬವನ್ನು ಆಚರಿಸಿ ಅದರ ಮಾರನೆಯ ದಿನ ಸೇಸೆ ಹಾಕುವ ವಿಧಿ ನೆರವೇರಿಸುತ್ತಾರೆ. ಸೇಸೆ ಹಾಕಿದ ದಿನದಿಂದ ಬಂಡಿಹಬ್ಬದ ಮೊದಲಿನವರೆಗೆ ಅಂದರೆ `ಜಾಗರದ ದಿನದವರೆಗೆ ಪ್ರತಿನಿತ್ಯ ಸಾಯಂಕಾಲ ಗುನಗನ (ಪೂಜಾರಿ) ತಲೆಯ ಮೇಲೆ ಕಳಶದೇವರನ್ನು ಹೊರಿಸಿಕೊಂಡು ವಾದ್ಯೋಲಗಗಳೊಂದಿಗೆ ಒಯ್ಯಲಾಗುತ್ತದೆ. ಈ ಕಲಶ ಹೊರುವ ಗುನಗರು ಸಾಮಾನ್ಯವಾಗಿ ಗುನಗ (ಗುನಗತನಕ್ಕಾಗಿಯೇ ಇರುವ ಜಾತಿ -ಮೂಲತಾ ಜೈನರು ), ಹಾಲಕ್ಕಿ ಒಕ್ಕಲು ಜಾತಿಗೆ ಸೇರಿದವರಾಗಿರುತ್ತಾರೆ, ವಾದ್ಯ ಓಲಗದವರು ಆಗೇರು ಮತ್ತು ಹಳ್ಳೇರ ಜಾತಿಯವರಾಗಿರುತ್ತಾರೆ. ಈ ಮೆರವಣಿಗೆಯಲ್ಲಿ ಕಟಗಿದಾರರು, ಮೊಕ್ತೇಸರರು, ಭಕ್ತಾದಿಗಳು ಇರುತ್ತಾರೆ. ಮೆರವಣಿಗೆ ಕಲಶ ದೇವಸ್ಥಾನದಿಂದ ಹೊರಟು ಅಮ್ಮನವರ ದೇವಸ್ಥಾನ ಮತ್ತು ಇತರ ಮುಖ್ಯ ದೇವಸ್ಥಾನಗಳಿಗೆ ಹೋಗಿ ಆಡುಕಟ್ಟೆಗೆ ಬಂದ ಮೇಲೆ ಅಲ್ಲಿ ಕಲಶದೇವರನ್ನು ಕೂಡಿಸಿ ಪೂಜಾ ವಿಧಿಗಳನ್ನು ನಡೆಸಲಾಗುತ್ತದೆ. ಕಟ್ಟಿಗೆದಾರರು ವೃತ್ತಾಕಾರದಲ್ಲಿ ದೇವರ ಎದುರಿನಲ್ಲಿ ಚಲಿಸಿ ತಮ್ಮ ಕೈಯಲ್ಲಿರುವ ಬೆಳ್ಳಿ ಕಟ್ಟಿಗೆ ಅಥವಾ ಬೆಳ್ಳಿ ಕೋಲಿನಿಂದ ದೇವರಿಗೆ ವಂದನೆ ಸಲ್ಲಿಸುತ್ತಾರೆ. ಆಮೇಲೆ ಕಟ್ಟಿಗೆಯಿಂದ ಮಾಡಿದ ಊರದೇವತೆಗಳ ಬಣ್ಣದ ಮುಖವರ್ಣಿಕೆಗಳ ಆಕರ್ಷಕ ಮುಖವಾಡಗಳನ್ನು ಒಂದೊಂದಾಗಿ ಧರಿಸಿ ಗುನಗನೊಬ್ಬ ವಾದ್ಯದ ಹಿನ್ನೆಲೆಯಲ್ಲಿ ನಿರ್ದಿಷ್ಟಕ್ರಮದಲ್ಲಿ ಹೆಜ್ಜೆಯಿಟ್ಟು ಮುಂದೆ ಹಿಂದೆ ಚಲಿಸಿ ಮುಖವಾಡ ಆಡಿಸುತ್ತಾನೆ, ಅವನ ಬಲಗೈಯಲ್ಲಿ ಇರುವ ಕಿರುಕಟ್ಟಿಗೆಯನ್ನು (ಚಿಕ್ಕಬೆಳ್ಳಿಕೋಲು) ಆ ತಾಳಕ್ಕೆ ತಕ್ಕಂತೆ ಮುಖವಾಡದ ಚಲನೆಗೆ ಹೊಂದಿಸಿ ತಿರುಗಿಸುತ್ತಿರುತ್ತಾನೆ. ಅನಂತರ ಹಗರಣ ಪ್ರಾರಂಭವಾಗುತ್ತದೆ. ಮೊತ್ತಮೊದಲಿನ ಹಗರಣ ಬೇಸಾಯಕ್ಕೆ ಸಂಬಂಧಿಸಿದಂತೆ ಇರುತ್ತದೆ. ನೇಗಿಲುಕಟ್ಟಿ ಉಳುವುದು, ಬೀಜ ಬಿತ್ತುವುದು, ಹಕ್ಕಿಕಾಯುವುದು ಇತ್ಯಾದಿಗಳನ್ನು ಅನುಕರಣೆ ಮಾಡಲಾಗುತ್ತದೆ. ಮನುಷ್ಯರೆ ಎತ್ತುಗಳಂತೆ ಹಕ್ಕಿಗಳಂತೆ ನಟಿಸುತ್ತಾರೆ. ಅನಂತರದ ಹಗರಣಗಳಲ್ಲಿ ಊರಿನ ವಿದ್ಯಮಾನಗಳನ್ನು ಅತಿರಂಜಿಸುವುದರ ಮೂಲಕ ಹಾಸ್ಯಪೂರ್ಣವಾಗಿಯೂ ವಿಡಂಬನಾತ್ಮಕವಾಗಿಯೂ ಅನುಕರಿಸಿ ತೋರಿಸುತ್ತಾರೆ. ಇಂಥ ಹಗರಣಗಳನ್ನು ಯಾವ ಜಾತಿಯವರು ಅಥವಾ ಯಾವ ಊರಿನವರು ಬೇಕಾದರೂ ಮಾಡುವುದಕ್ಕೆ ಅವಕಾಶವುಂಟು. ಗೇಲಿಗೆ ಕಾರಣವಾದ ವ್ಯಕ್ತಿಗಳು ಅಲ್ಲೇ ಇದ್ದರೂ ಅವರು ಕೋಪಗೊಂಡು ಜಗಳ ತೆಗೆಯುವಂತಿಲ್ಲ. ಮುಯ್ಯಿ ತೀರಿಸುವ ಛಲ ಇದ್ದರೆ ತಮ್ಮನ್ನು ಗೇಲಿಮಾಡಿದವರ ಇಲ್ಲವೆ ಅಂಥವರ ಹತ್ತಿರದ ಸಂಬಂಧಿಕರ ಬದುಕಿನ ಸಂದರ್ಭಗಳನ್ನು ಆಯ್ದುಕೊಂಡು ಅತಿರಂಜಿಸಿ ಅನುಕರಿಸಿ ಗೇಲಿಮಾಡಬಹುದು. ಈ ಹಗರಣದ ಕಾರ್ಯಕ್ರಮ ಹೆಚ್ಚಾಗಿ ಪರಿಚಿತ ವ್ಯಕ್ತಿಗಳಿಗೆ ಸಂಬಂಧಿಸಿದಂಥದೇ ಆಗಿರುವುದು ಸಾಮಾನ್ಯವಾದ್ದರಿಂದ ಸುತ್ತಮುತ್ತಲಿನ ಊರುಗಳ ಗಂಡಸರು ಹೆಂಗಸರು ಮಕ್ಕಳು ಎಲ್ಲರೂ ಬಹುಸಂಖ್ಯೆಯಲ್ಲಿ ಸೇರುತ್ತಾರೆ, ಪೂಜಾರಿ ಆಡಿಸುವ ಮುಖವಾಡಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತ ಹೋಗುತ್ತದೆ. ಆಯಾ ದಿನಗಳಲ್ಲಿ ಆಡಿಸಬೇಕಾದಷ್ಟು ಮುಖವಾಡಗಳನ್ನು ಆಡಿಸಿ ಮುಗಿಸಿದ ಮೇಲೆ ಹಗರಣಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಒಂದು ಮುಖವಾಡ ಆಡಿಸುವುದಕ್ಕೂ ಇನ್ನೊಂದನ್ನು ಆಡಿಸುವುದಕ್ಕೂ ನಡುವೆ ಹಗರಣಕ್ಕೆ ಅಗತ್ಯವಾದಷ್ಟು ಕಾಲಾವಕಾಶ ನೀಡಲಾಗುತ್ತದೆ. ಇನ್ನು ಅಂದಿನ ಹಗರಣಗಳೆಲ್ಲ ಮುಗಿದುವು ಎಂಬುದನ್ನು ತಿಳಿದುಕೊಂಡ ಮೇಲೆಯೇ ಆ ದಿನದ ಕೊನೆಯ ಮುಖವಾಡ ಆಡಿಸುತ್ತಾರೆ. ಈ ಹಗರಣ ಪ್ರತಿದಿನ ರಾತ್ರಿ ಅಂದರೆ ಬಂಡಿಹಬ್ಬದ ಮೊದಲನೆಯ ದಿನದ ತನಕವೂ ನಡೆಯುತ್ತದೆ, ಆ ದಿನ ಮಾತ್ರ ಇಡೀ ರಾತ್ರಿ ಜಾಗರಣೆ, ಆದ್ದರಿಂದ ಆ ದಿನವನ್ನು 'ಜಾಗರ ಎಂದೇ ಕರೆಯುತ್ತಾರೆ. ಆ ರಾತ್ರಿ ವಿಶೇಷ ಹಗರಣ ಮತ್ತು ಮಾಸ್ತಿಕೊಂಡ ಹಾಯುವ ವಿಧಿ ನಡೆಯುತ್ತದೆ. ಆ ರಾತ್ರಿ ಹುಲಿದೇವರು ದನಮುರಿಯುವುದನ್ನು ಅಭಿನಯಿಸುತ್ತಾರೆ. ಒಬ್ಬರು ದನವಾಗಿ ಅಭಿನಯಿಸುತ್ತಾರೆ. ಹುಲಿ ದನವನ್ನು ಕೊಂದು ರಕ್ತಕುಡಿದು ಹೋದ ಅಭಿನಯವಾದ ಮೇಲೆ ದನವನ್ನು ಕೊಯ್ಯುವ ಜಾತಿಯವನೊಬ್ಬ ವೇಷವನ್ನು ಹಾಕಿಕೊಂಡು ಬಂದು ಆ ದನವನ್ನು ಕೊಯ್ದು ಅದರ ಮಾಂಸವನ್ನು ಒಯ್ದಂತೆ ಅಭಿನಯಿಸುತ್ತಾರೆ. ದೇವರುಗಳನ್ನು ಗೇಲಿಮಾಡುವ ಕಾರ್ಯಕ್ರಮವೂ ಇರುತ್ತದೆ. ದೇವರ ನಕಲಿ ಕಲಶವನ್ನು ಹೊತ್ತು ಕೊಂಡವನೊಬ್ಬ ಮೈಮೇಲೆ ಭಾರ (ಆವೇಶ) ಬಂದವರ ಹಾಗೆ ನಟಿಸುವುದು, ಭಕ್ತಾದಿಗಳು ಏನೇನೋ ತಮ್ಮ ತೊಂದರೆ ತಾಪತ್ರಯಗಳನ್ನು ಆ ದೇವರೆದುರು ನಿವೇದಿಸಿಕೊಂಡು ಪ್ರಸಾದ, ಪರಿಹಾರ ಕೇಳುವುದು ಇದನ್ನು ಅತಿರಂಜಿಸಿ ಗೇಲಿ ಮಾಡಲಾಗುತ್ತದೆ. ಭಕ್ತರ ತೊಂದರೆ, ತಾಪತ್ರಯ, ಕೋರಿಕೆಗಳು ತೀರ ಕ್ಷುಲ್ಲಕವಾದವೂ ಹಾಸ್ಯಾಸ್ಪದವಾದವೂ ಆಗಿರುವುದೇ ಸಾಮಾನ್ಯ. ಅಹಾಗೆಯೇವುಗಳಿಗೆ ಪರಿಹಾರ ಸೂಚಿಸುವ ದೇವರ ಅನುಗ್ರಹ, ಅಪ್ಪಣೆ ಕೂಡ ಅಸಂಬದ್ಧವಾಗಿರುತ್ತವೆ. ಕೊನೆಯದಾಗಿ, ಮಾಸ್ತಿಕೊಂಡ ಹಾಯುವ ವಿಧಿ ಇರುತ್ತದೆ. ಸತಿಯೋರ್ವಳು ಸಹಗಮನ ಮಾಡಿದ ರೀತಿಯನ್ನು ಆಡಿ ತೋರಿಸಲಾಗುತ್ತದೆ. ಗಂಡಸೊಬ್ಬ ಸೀರೆಯನ್ನು ಸೊಂಟಕ್ಕೆ ಸುತ್ತಿಕೊಂಡು ಕಣ್ಣಿಗೆ ಕಾಡಿಗೆ ಇಟ್ಟು, ತಲೆಯಲ್ಲಿ ಹೂ ಮುಡಿದು ಬೆಂಕಿಯ ಸುತ್ತ ಆವೇಶದಿಂದ ನರ್ತಿಸುತ್ತ ಬೆಂಕಿಯಲ್ಲಿ ದುಮುಕಿದಂತೆ ತೋರಿಸಲಾಗುತ್ತದೆ. ಕೆಲವು ಕಡೆಗಳಲ್ಲಿ ಕೊಂಡದ ರಾಶಿಯ ಮೇಲೆ ಹರಕೆ ಹೊತ್ತವರು ನಡೆಯುವುದೂ ಉಂಟು.

ಜಾಗರದ ಮಾರನೆಯ ದಿನ ಬಂಡಿಹಬ್ಬ. ಆ ದಿನ ಬಗೆ ಬಗೆಯ ಹೂಮಾಲೆಗಳಿಂದ ಸಿಂಗರಿಸಿ ಕಟ್ಟಿಗೆದಾರರು, ಸಾಮಿಮಕ್ಕಳು ಛತ್ರಚಾಮರ ವಾದ್ಯ ಮೊದಲಾದವುಗಳೊಂದಿಗೆ ಕಲಶ ದೇವರನ್ನು ಮೆರವಣಿಗೆಯಲ್ಲಿ ಉಲಿಚಪ್ಪರಕ್ಕೆ (ಉಯ್ಯಾಲೆ ಚಪ್ಪರ) ತರಲಾಗುತ್ತದೆ. ಉಲಿಚಪ್ಪರಕ್ಕೆ ನಾಲ್ಕು ತೂಗುಮಣೆಗಳನ್ನು ಜೋಡಿಸಿರಲಾಗುತ್ತದೆ. ತೂಗುಮಣೆಯ ಮೇಲೆ ಗುನಗ ಕಲಶದೇವರನ್ನು ತೊಡೆಯ ಮೇಲಿಟ್ಟುಕೊಂಡು ಕುಳಿತು ಒಂದು ಕೈಯಲ್ಲಿ ಗಂಟೆ ಬಾರಿಸುತ್ತ ಮೇಲೇರುವ ದೃಶ್ಯ ಆಕರ್ಷಣೀಯವಾಗಿರುತ್ತದೆ. ಇನ್ನುಳಿದ ತೂಗು ಮಣೆಗಳ ಮೇಲೆ ಕಟ್ಟಿಗೆದಾರರು ಗಂಟೆ ಬಾರಿಸುತ್ತ ಕುಳಿತುಕೊಳ್ಳುತ್ತಾರೆ. ಸಾಮಿ ಮಕ್ಕಳೂ ಉಲಿ ಚಪ್ಪರ ಏರುತ್ತಾರೆ. ಸಾಮಿ ಮಕ್ಕಳು ಅಂದರೆ ದೇವರ ಮಕ್ಕಳು; ಇವರು ಮದುವೆಯಾಗದ ಬಾಲಕರು. ಕಟ್ಟಿಗೆದಾರರ ಇಲ್ಲವೆ ದೇವಸ್ಥಾನಗಳ ಮೊಕ್ತೇಸರರ ಮನೆಯ ಮಕ್ಕಳು ಮಾತ್ರ ಸಾಮಿ ಮಕ್ಕಳಾಗುತ್ತಾರೆ. ಕಟ್ಟಿಗೆದಾರರ ಇಲ್ಲವೆ ಮೊಕ್ತೇಸರರ ಮನೆಗಳಲ್ಲಿ ಆ ವಯಸ್ಸಿನ ಬಾಲಕರು ಇಲ್ಲದಿದ್ದಾಗ ಮಾತ್ರ ಬೇರೆ ಯಾರಾದರೂ ಬಾಲಕನಿಗೆ ಅವರು ತಮ್ಮ ಪ್ರತಿನಿಧಿಯಾಗಿ ಸಾಮಿಕಟ್ಟಿಸುತ್ತಾರೆ. ಈ ಸಾಮಿ ಮಕ್ಕಳೂ ಗುನಗನಂತೆ ನೇಮದಿಂದಿರಬೇಕು. ಅಂಕೋಲೆಯ ಸಮೀಪದ ಕೊಗ್ರೆ ಗ್ರಾಮದ ಬಂಡಿಹಬ್ಬದಲ್ಲಿ ಎಲ್ಲ ಊರುಗಳ ಹಬ್ಬಕ್ಕಿಂತ ಹೆಚ್ಚು ಅಂದರೆ ನಾಲ್ಕು ಕಲಶದೇವರುಗಳು ಒಂದೇ ಬಾರಿಗೆ ಉಲಿಚಪ್ಪರದ ನಾಲ್ಕೂ ತೂಗುಮಣೆಗಳಲ್ಲಿ ಕುಳಿತು ಸುತ್ತುವ ದೃಶ್ಯ ರಮ್ಯವಾಗಿರುತ್ತದೆ. ಉಲಿಚಪ್ಪರ ಏರುವುದರ ಹಿನ್ನೆಲೆ ಅಸ್ಪಷ್ಟ. ಇದೊಂದು ಸ್ವರ್ಗಾರೋಹಣ ಅಥವಾ ದೇವಲೋಕ ಗಮನ ಸೂಚಿಸುವ ಸಾಂಕೇತಿಕ ಕ್ರಿಯೆಯಾಗಿರಬಹುದೆಂದು ಊಹಿಸಬಹುದು. ದೇವರುಗಳು ಉಲಿಚಪ್ಪರ ಏರಿ ಸುತ್ತುತ್ತಿರುವಾಗ ಹರಕೆ ಹೇಳಿಕೊಂಡಿದ್ದ ಕೆಲವರು ಕಣ್ಣಿಗೆ ದಟ್ಟವಾಗಿ ಕಾಡಿಗೆ ಹಚ್ಚಿಕೊಂಡು, ಕೇದಗೆ ಹೂವಿನ ಕಿರೀಟತೊಟ್ಟು, ಕೈಯಲ್ಲಿ ಕತ್ತಿ ಹಿಡಿದು, `ಅಯ್ಯಯ್ಯೋ ಎಂದು ಅರುಚುತ್ತ ಬರುತ್ತಾರೆ. ಆ ವರ್ಷವೇ ಮದುವೆಯಾದವರು ಮಾತ್ರ ಇಂತ ಹರಕೆ ಹೊತ್ತುಕೊಳ್ಳುತ್ತಾರೆ. ಈ ಆಚರಣೆಯ ಹಿನ್ನೆಲೆ ತಿಳಿಯದು.

ಬಂಡಿಹಬ್ಬದ ಮಾರನೆಯ ದಿನವೂ ಹಬ್ಬ, ಜಾತ್ರೆ ಇರುತ್ತೆ. ಆ ದಿನವನ್ನು ಕೋಳ್‍ಕುರಿ (ಕೋಳಿಕುರಿ) ಎಂದು ಕರೆಯುತ್ತಾರೆ. ಕೋಳಿ ಕುರಿಗಳನ್ನು ಆ ದಿನ ಊರಿನ ದೇವರುಗಳಿಗೆ ಬಲಿ ಕೊಡುತ್ತಾರೆ. ಊರಿನ ಎಲ್ಲ ಮನೆಗಳೂ ಆ ದಿನ ಅತಿಥಿಗಳಿಂದ ತುಂಬಿರುತ್ತವೆ. ಕೋಳ್‍ಕುರಿಯ ದಿನ ಬೆಳಗ್ಗೆ, ದೇವರಿಗೆ ಹರಕೆ ಹೊತ್ತವರು ತೋಳಭಾರ (ತುಲಾಭಾರ) ಮಾಡಿಸಿ ಹರಕೆ ಸಲ್ಲಿಸುತ್ತಾರೆ. ಸಾಮಾನ್ಯವಾಗಿ ಹಲಸಿನಹಣ್ಣು, ತೆಂಗಿನಕಾಯಿ ಮುಂತಾದವನ್ನು ತುಲಾಭಾರಕ್ಕೆ ಹಾಕಲಾಗುತ್ತದೆ. ಆ ದಿನವೇ ದೇವರಿಗೆ ಕಾಣಿಕೆ ಕೊಡುವವರೂ ಕೊಡುತ್ತಾರೆ. ಕಲಶಹೊತ್ತ ಗುನಗನ ಸೊಂಟದಲ್ಲಿ ಒಂದು ಕತ್ತಿ ಇರುತ್ತದೆ. ಆ ಕತ್ತಿಯನ್ನು ಸಾಮಾನ್ಯವಾಗಿ ಗುನಗ ಬಳಸುವ ಪದ್ಧತಿಯೇನೂ ಇದ್ದಂತಿಲ್ಲ. ಆದರೂ ಆ ಕತ್ತಿಗೆ ಸಂಬಂಧಿಸಿದ ಪ್ರತೀತಿ ಸ್ವಾರಸ್ಯದ್ದಾಗಿದೆ. ಕಳಶ ದೇವರನ್ನು ಹೊತ್ತುಕೊಂಡಿದ್ದಾಗ ಗುನಗನೇನಾದರೂ ಎಡವಿಬಿದ್ದರೆ, ಗುನಗನಿಗೆ `ಭಾರ ಬಂದು ಆತನೇನಾದರೂ ಆ ಆವೇಶದ ಭರದಲ್ಲಿ ತಪ್ಪಿ ನೆಲಕ್ಕೆ ಬಿದ್ದರೆ ಅಥವಾ ಅವನು ಹೊತ್ತ ಕಲಶವೇನಾದರೂ ನೆಲಕ್ಕೆ ಬಿದ್ದರೆ ಆಗ ಆತ ಕೂಡಲೆ ತನ್ನ ಸೊಂಟದಲ್ಲಿರುವ ಕತ್ತಿ ತೆಗೆದು ಅದರಿಂದ ತನ್ನನ್ನು ಇರಿದುಕೊಂಡು ಸಾಯಬೇಕೆಂಬ ನಿಯಮ ಇದೆಯೆಂದು ಪ್ರತೀತಿ. (ವಿ.ಜೆ.ಎನ್.)