ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಸಳೆ

ವಿಕಿಸೋರ್ಸ್ದಿಂದ

ಬಸಳೆ ಬ್ಯಾಸೆಲೇಸೀ ಕುಟುಂಬಕ್ಕೆ ಸೇರಿದ ಬಹುವಾರ್ಷಿಕ ಬಳ್ಳಿ (ಇಂಡಿಯನ್ ಸ್ಪಿನಿಚ್). ಬ್ಯಾಸೆಲ ರೂಬ್ರ ಇದರ ವೈಜ್ಞಾನಿಕ ಹೆಸರು. ಭಾರತಾದ್ಯಂತ ಇದನ್ನು ತರಕಾರಿಸಸ್ಯವಾಗಿ ಬೆಳೆಸಲಾಗುತ್ತದೆ. ಇದರಲ್ಲಿ ಎರಡು ಬಗೆಗಳುಂಟು: ಒಂದರ ಎಲೆ ಮತ್ತು ಕಾಂಡಗಳು ಕೆಂಪುಬಣ್ಣದವು. ಇನ್ನೊಂದರವು ಹಸುರು. ಮೊದಲನೆಯದನ್ನು ಬ್ಯಾ. ಕಾರ್ಡಿಫೋಲಿಯ ಎಂದೂ ಎರಡನೆಯದನ್ನು ಬ್ಯಾ. ಆಲ್ಬ ಎಂದೂ ಕರೆಯುವುದಿದೆಯಾದರೂ ಇವೆರಡೂ ರೂಬ್ರ ಪ್ರಭೇದದ ಎರಡು ಬಗೆಗಳು ಎಂಬುದೇ ಬಹುಜನರ ಅಭಿಪ್ರಾಯ.

ಬಸಳೆಸೊಪ್ಪಿನಗಿಡದ ಎಲೆಗಳು ಮತ್ತು ಎಳೆಯಕಾಂಡಗಳು ಮೃದು ಹಾಗು ರಸವತ್ತಾಗಿವೆ. ಎಲೆಗಳ ಮೇಲಾಗಲೀ ಕಾಂಡದ ಮೇಲಾಗಲೀ ಯಾವುದೇ ತೆರನ ರೋಮಗಳಿಲ್ಲವಾದ್ದರಿಂದ ಅವು ನುಣುಪಾಗಿರುವುವು. ಎಲೆ ಅಂಡಾಕಾರದವು. 15 ಸೆಂ ಮೀ ಉದ್ದ 9 ಸೆಂ ಮೀ ಅಗಲ.

ಇದರ ಎಳೆಯ ಕಾಂಡ ಮತ್ತು ಎಲೆಗಳನ್ನು ಸೊಪ್ಪು ತರಕಾರಿಯಂತೆ ಹಸಿಯಾಗಿಯೊ ಬೇಯಿಸಿಯೊ ಉಪಯೋಗಿಸುವುದಿದೆ. ಇದರಲ್ಲಿ ಪ್ರತಿಯೊಂದು 100 ಗ್ರಾಮಿಗೆ 1.2% ಪ್ರೋಟೀನ್, 0.15% ಕ್ಯಾಲ್ಸಿಯಮ್, 1.4 ಮಿಲಿ ಗ್ರಾಮ್ ಕಬ್ಬಿಣ, 3250 IU ವಿಟಮಿನ್ A ಇವೆ. ಕೆಂಪು ಎಲೆಯ ಬಗೆಯಿಂದ ಕೆಂಪು ಬಣ್ಣವನ್ನು ಹೊರತೆಗೆದು ಆಹಾರಪದಾರ್ಥಗಳಿಗೆ ಬಣ್ಣಕಟ್ಟಲು ಉಪಯೋಗಿಸುವುದುಂಟು. ಎಲೆಗಳನ್ನು ಕುಟ್ಟಿ ಬೆಚ್ಚಾರವಾಗಿ (ಪೋಲ್ಟೀಸ್) ಬಳಸುತ್ತಾರೆ. ಎಲೆಗಳ ರಸ ಮಲಬದ್ಧತೆ ಮತ್ತು ಪಿತ್ತಗಂದೆಗಳಿಗೆ ಒಳ್ಳೆಯ ಪರಿಹಾರಕೊಡುತ್ತದೆ ಎನ್ನಲಾಗಿದೆ. (ಎಚ್.ಎನ್.ಸಿ.)