ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬಾಬಿಫಿಷರ್

ವಿಕಿಸೋರ್ಸ್ದಿಂದ

ಬಾಬಿಫಿಷರ್ 1943---. ಪ್ರಮುಖ ಚದುರಂಗ ಆಟಗಾರ. ಹುಟ್ಟಿದ್ದು ಅಮೆರಿಕದ ಷಿಕಾಗೋ ನಗರದಲ್ಲಿ. ತಂದೆ ತಾಯಿ ಅನುಕ್ರಮವಾಗಿ ಬರ್ಲಿನ್ ಹಾಗೂ ಸ್ವಿಟ್ಜರ್‍ಲ್ಯಾಂಡ್ ದೇಶದವರಾಗಿದ್ದು ಅಮೆರಿಕದಲ್ಲಿ ನೆಲಸಿದ್ದರು. ಅವರು ವಿಚ್ಛೇದನ ಪಡೆದಾಗ ಫಿಷರ್ ತಾಯಿಯೊಂದಿಗೆ ಉಳಿದ. ಬಾಲ್ಯದಿಂದಲೇ ಚದುರಂಗದತ್ತ ವಿಶೇಷ ಆಸಕ್ತಿ. ಚದುರಂಗದಲ್ಲಿಯೇ ಸದಾ ಧ್ಯಾನ, ಶಾಲಾಪಾಠಗಳಲ್ಲಿ ಆಸಕ್ತಿ ಕಡಿಮೆಯಾಗುತ್ತ ಬಂತು. ರಷ್ಯದಿಂದ ಬರುತ್ತಿದ್ದ ಚದುರಂಗ ಕುರಿತ ಪುಸ್ತಕಗಳನ್ನು ಓದಲೆಂದೇ ರಷ್ಯನ್ ಭಾಷೆ ಕಲಿತ. ಶಾಲೆಯನ್ನು ಸಂಪೂರ್ಣವಾಗಿ ತೊರೆದ. ಕ್ರಮೇಣ ಚದುರಂಗವೇ ಈತನ ಪ್ರಪಂಚವಾಯಿತು. ಹದಿಮೂರನೆಯ ವಯಸ್ಸಿನಲ್ಲಿ ಅಮೆರಿಕದ ಡೊನಾಲ್ಡ್ ಬರ್ನರೊಂದಿಗೆ ಈತ ಆಡಿದ ಆಟ ಈ ಶತಮಾನದ ಶ್ರೇಷ್ಠ ಆಟ ಎನಿಸಿಕೊಂಡಿದೆ. ಹದಿನೈದನೆಯ ವಯಸ್ಸಿನಲ್ಲಿಯೆ ಚದುರಂಗದ ಶ್ರೇಷ್ಠ ಆಟಗಾರರಿಗೆ ನೀಡಲಾಗುವ ಗ್ರಾಂಡ್‍ಮಾಸ್ಟರ್ ಎಂಬ ಹೆಸರು ಪಡೆದ. 1962ರಲ್ಲಿ ಪ್ರಪಂಚ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಸೋತರೂ ಧೈರ್ಯಗುಂದದೆ ಮತ್ತೆ ಎರಡು ವರ್ಷಗಳ ಕಾಲ ಕ್ಯಾಲಿಫೋರ್ನಿಯದಲ್ಲಿ ಕಠಿಣ ಅಭ್ಯಾಸ ನಡೆಸಿದ. 1972ರಲ್ಲಿ ಪ್ರಪಂಚ ಚದುರಂಗ ಚಾಂಪಿಯನ್‍ಷಿಪ್ ಸ್ಪರ್ಧೆಯಲ್ಲಿ ಬೋರಿಸ್ ಸ್ಪಾಸ್ಕಿಯನ್ನು ಸೋಲಿಸಿ ಪ್ರಪಂಚ ಚಾಂಪಿಯನ್ ಆದ. ಆ ವರೆಗೆ ಶ್ರೇಷ್ಠ ಚದುರಂಗ ಆಟಕ್ಕೆ ಹೆಸರಾದ ರಷ್ಯದ ಕೀರ್ತಿ ಅಮೆರಿಕದ ಪಾಲಾಯಿತು. ಚದುರಂಗದ ಶ್ರೇಷ್ಠ ಆಟಗಾರನಾಗಬೇಕೆಂಬ ಫಿಷರ್‍ನ ಜೀವನೋದ್ದೇಶ ಪೂರ್ಣಗೊಂಡಿತು. (ಎಚ್.ಜಿ.ಎ.)