ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೀಳಗಿ

ವಿಕಿಸೋರ್ಸ್ದಿಂದ

ಬೀಳಗಿ ಕರ್ನಾಟಕ ರಾಜ್ಯದ ಬಿಜಾಪುರ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಆ ತಾಲ್ಲೂಕಿನ ಆಡಳಿತ ಕೇಂದ್ರ. ಈ ತಾಲ್ಲೂಕನ್ನು ಪೂರ್ವ ಮತ್ತು ಈಶಾನ್ಯ ದಿಕ್ಕಿನಲ್ಲಿ ಬಸವನ ಬಾಗೇವಾಡಿ, ಆಗ್ನೇಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಬಾಗಲಕೋಟೆ, ನೈಋತ್ಯದಲ್ಲಿ ಮುಧೋಳ. ವಾಯವ್ಯದಲ್ಲಿ ಜಮಖಂಡಿ ಮತ್ತು ಉತ್ತರದಲ್ಲಿ ಬಿಜಾಪುರ ತಾಲ್ಲೂಕುಗಳು ಸುತ್ತುವರಿದಿವೆ. ಜಮಖಂಡಿ ಉಪವಿಭಾಗಕ್ಕೆ ಸೇರಿರುವ ಈ ತಾಲ್ಲೂಕಿನಲ್ಲಿ ಕಸಬೆ, ಅನಗವಾಡಿ ಹೋಬಳಿಗಳಿದ್ದು 66 ಗ್ರಾಮಗಳಿವೆ. ವಿಸ್ತೀರ್ಣ 782 ಚಕಿಮೀ. ಜನ ಸಂಖ್ಯೆ 1,41,843 (2001). ಈ ತಾಲ್ಲೂಕಿನ ಭಾಗ ಹಿಂದೆ ಉಪತಾಲ್ಲೂಕಾಗಿ ಜಮಖಂಡಿಗೆ ಒಳಪಟ್ಟಿತ್ತು. 1959ರಲ್ಲಿ ಇದೇ ಒಂದು ಪ್ರತ್ಯೇಕ ತಾಲ್ಲೂಕಾಯಿತು.

ಬೀಳಗಿ ಹೆಚ್ಚಿನ ಮಟ್ಟಿಗೆ ಕರಿ ಎರೆಮಣ್ಣಿನ ಮಟ್ಟಸ ಪ್ರದೇಶ. ತಾಲ್ಲೂಕಿನ ಮಧ್ಯಭಾಗದಲ್ಲಿ ಪಶ್ಚಿಮದ ಎಲ್ಲೆಯಿಂದ ಸುಮಾರು ಬೀಳಗಿ ಪಟ್ಟಣದವರೆಗೆ ಕಣಶಿಲೆಯ ಬೆಟ್ಟಪ್ರದೇಶವಿದೆ. ದಕ್ಷಿಣದ ಎಲ್ಲೆಯಲ್ಲಿ ಸಹ ಘಟಪ್ರಭಾನದಯ ದಂಡೆಗುಂಟ ಚಿಕ್ಕ ಬೆಟ್ಟಗಳ ಸಾಲಿವೆ. ಉತ್ತರ ಗಡಿರೇಖೆಯಾಗಿ ಕೃಷ್ಣಾ ನದಿ ಪಶ್ಚಿಮದಿಂದ ಪೂರ್ವಕ್ಕೆ ಹರಿಯುತ್ತದೆ. ದಕ್ಷಿಣ ಮತ್ತು ಪೂರ್ವದ ಗಡಿಯಾಗಿರುವ ಘಟ ಪ್ರಭಾ ನದಿ ತಾಲ್ಲೂಕಿನ ದಕ್ಷಿಣಭಾಗದಲ್ಲಿ ಕೃಷ್ಣಾ ನದಿಯನ್ನು ಸೇರುವುದು.

ಇಲ್ಲಿಯ ವಾರ್ಷಿಕ ಸರಾಸರಿ ಮಳೆ 784 ಮಿಮೀ. ಜೋಳ, ಹತ್ತಿ, ನೆಲಗಡಲೆ, ಗೋದಿ ಮುಖ್ಯ ಬೆಳೆಗಳು. ಸಜ್ಜೆ, ದ್ವಿದಳಧಾನ್ಯಗಳು ಮತ್ತು ಕಬ್ಬನ್ನೂ ಬೆಳೆಸುತ್ತಾರೆ. ಘಟಪ್ರಭಾ ಎಡದಂಡೆ ಯೋಜನೆಯಿಂದ ಹೆಚ್ಚು ಭೂಮಿ ವ್ಯವಸಾಯಕ್ಕೆ ಒಳಪಡಲಿದೆ. ತಾಲ್ಲೂಕಿನಲ್ಲಿ ಹತ್ತಿ ಎಕ್ಕುವ ಕಾರ್ಖಾನೆಗಳೂ ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢಶಾಲೆಗಳೂ ಇವೆ. ಅಂಚೆ, ವಿದ್ಯುತ್ ಮುಂತಾದ ಸೌಕರ್ಯಗಳ ಜೊತೆಗೆ ವೈದ್ಯಕೀಯ ಸೌಲಭ್ಯವುಂಟು. ಬಿಜಾಪುರ-ಹುಬ್ಬಳ್ಳಿ ಹೆದ್ದಾರಿ ಈ ತಾಲ್ಲೂಕಿನ ಮಧ್ಯದಲ್ಲಿ ಹಾದು ಹೋಗಿದೆ.

ಗಲಗಲಿ, ಕುಂದರಗಿ, ವಜ್ರಮಟ್ಟೆ, ಮಂಟೂರು, ತೆಗ್ಗಿ, ರೊಳ್ಳಿ, ಅನಗವಾಡಿ ಈ ತಾಲ್ಲೂಕಿನ ದೊಡ್ಡ ಗ್ರಾಮಗಳು, ವಾಯವ್ಯದಲ್ಲಿ ಕೃಷ್ಣಾ ನದಿಯ ಬಲದಂಡೆಯಲ್ಲಿರುವ ಗಲಗಲಿ ಹಿಂದೆ ಗಾಲವ ಕ್ಷೇತ್ರವೆಂದು ಪ್ರಸಿದ್ಧವಾಗಿತ್ತು. ಇಲ್ಲಿ ಗಾಲವ ಮತ್ತು ಇತರ ಋಷಿಗಳಿಗೆ ಸಂಬಂಧಿಸಿದವೆನ್ನಲಾದ ಏಳು ಗುಹೆಗಳಿವೆ. ಎಲ್ಲಮ್ಮನ ಒಂದು ದೇವಾಲಯವೂ ಇದೆ. ಘಟಪ್ರಭಾ ನದಿಯ ಎಡದಂಡೆಯಲ್ಲಿರುವ ಕುಂದರಗಿ ಗ್ರಾಮದ ಕಂಬಳಿಗಳು ಹೆಸರುವಾಸಿಯಾಗಿವೆ. ಇಲ್ಲೊಂದು ಹನುಮಂತ ದೇವಾಲಯವಿದೆ. ಅನಗವಾಡಿಯಲ್ಲಿ ಪ್ರಾಚೀನ ಶಿಲಾಯುಗದ ಅವಶೇಷಗಳು ಕಂಡು ಬಂದಿವೆ.

ಬೀಳಗಿ ಈ ತಾಲ್ಲೂಕಿನ ಆಡಳಿತ ಕೇಂದ್ರ. ಬಿಜಾಪುರದ ದಕ್ಷಿಣದಲ್ಲಿದ್ದು ಬಾಗಲಕೋಟೆಯ ವಾಯವ್ಯಕ್ಕೆ 29 ಕಿಮೀ ದೂರದಲ್ಲಿದೆ. ಜನಸಂಖ್ಯೆ 15,464 (2001). ಈ ಊರಿನಲ್ಲಿ ತಾಲ್ಲೂಕು ಕಛೇರಿ, ಪ್ರೌಢಶಾಲೆ, ವೈದ್ಯಕೀಯ ಕೇಂದ್ರ, ಅಂಚೆ ಕಛೇರಿ ಮುಂತಾದವುಗಳಿವೆ. 300-400 ವರ್ಷಗಳ ಹಿಂದಿನ ಕೊಳಗಳು ಮತ್ತು ದೇವಾಲಯಗಳೇ ಊರಿನ ಮುಖ್ಯ ಆಕರ್ಷಣೆಗಳೆನಿಸಿವೆ. ಊರಿನ ಉತ್ತರ ಬಾಗಿಲಿನಿಂದ ಸುಮಾರು 180 ಮೀಟರ್ ದೂರದಲ್ಲಿ ಆರೆತ್ತಿನ ಬಾವಿ ಇದೆ. ಇದರ ಒಳಗಡೆ ಮಹದೇವ ಮಂದಿರವಿದೆ. ಇಲ್ಲಿಯ ಕನ್ನಡ, ಮರಾಠಿ, ಪಾರಸೀ ಮತ್ತು ಸಂಸ್ಕøತ ಶಾಸನಗಳ ಪ್ರಕಾರ ಇದು 1708ರಲ್ಲಿ ನಿರ್ಮಿತವಾದದ್ದೆಂದು ತಿಳಿದು ಬರುತ್ತದೆ. ಗ್ರಾಮದ ದಕ್ಷಿಣದಲ್ಲಿ ಸಿದ್ಧೇಶ್ವರ ದೇವಾಲಯವಿದ್ದು ಅದರ ಮುಂದೆ ಏಕಶಿಲೆಯಲ್ಲಿ ಕಡೆದಿರುವ ಒಂದು ದೀಪಸ್ತಂಭವಿದೆ. ಇದನ್ನು 1589ರಲ್ಲಿ ನಿರ್ಮಿಸಿದ್ದೆಂದು ಇಲ್ಲಿಯ ಒಂದು ಶಾಸನದಲ್ಲಿ ಹೇಳಿದೆ.