ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೆಂಕಿಕಡ್ಡಿ

ವಿಕಿಸೋರ್ಸ್ದಿಂದ

ಬೆಂಕಿಕಡ್ಡಿ - ಒರಟು ಮೈಮೇಲೆ ತುಸು ಒತ್ತಡ ಹೇರಿ ಉಜ್ಜಿದಾಗ ಸುಲಭವಾಗಿ ಬೆಂಕಿಹೊತ್ತುವ ರಾಸಾಯನಿಕ ಲೇಪಿತ ತುದಿಯುಳ್ಳ ಮರದ ಕಡ್ಡಿ. ಇಂದು ತಯಾರಾಗುತ್ತಿರುವ ಬೆಂಕಿಕಡ್ಡಿಗಳಲ್ಲಿ ಮುಖ್ಯವಾಗಿ ಮೂರು ಬಗೆ: (1) ಎಲ್ಲೆಂದರಲ್ಲಿ ಹೊತ್ತಿಕೊಳ್ಳುವ ಬೆಂಕಿ ಕಡ್ದಿಗಳು, ಇವು ಅಪಾಯಕಾರಿ. (2) ಸುಕ್ಷೇಮ ಬೆಂಕಿ ಕಡ್ಡಿಗಳು. ಇವನ್ನು ವಿಶಿಷ್ಟ ರಾಸಾಯನಿಕ ಲೇಪಿತ ಮೈಮೇಲೆ ಉಜ್ಜಿದಾಗ ಮಾತ್ರ ಬೆಂಕಿ ಹೊತ್ತುತ್ತದೆ. ಇವೇ ಇಂದು ಹೆಚ್ಚಾಗಿ ಬಳಕೆಯಲ್ಲಿರುವುವು. (3) ಪುಸ್ತಕ ಕಡ್ಡಿಗಳು. ಇವು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಬಳಕೆಯಲ್ಲಿವೆ. ಇವನ್ನು ಕಾರ್ಡ್ ಬೋರ್ಡ್ ಚಕ್ಕೆಗಳಿಂದ ತಯಾರಿಸುತ್ತಾರೆ.

ಫ್ರಾನ್ಸ್ ದೇಶದಲ್ಲಿ ಬೆಂಕಿಕಡ್ಡಿಗಳು ಮೊದಲು ಬಳಕೆಗೆ ಬಂದವು. ಇವುಗಳ ತಯಾರಿಕೆ 1810ರಲ್ಲಿ ಬ್ರಿಟಿಷರ ಸೊತ್ತಾಯಿತು. ಆಗಿನ ದಿನಗಳಲ್ಲಿ ಬೆಂಕಿಕಡ್ಡಿಗಳನ್ನು ಮರದ ಚಕ್ಕೆಗಳಿಂದ ತಯಾರಿಸುತ್ತಿದ್ದರು. ಇವುಗಳ ತುದಿಗಳಿಗೆ ಪೊಟ್ಯಾಸಿಯಮ್ ಕ್ಲೋರೇಟ್, ಸಕ್ಕರೆ ಮತ್ತು ಗೋಂದಿನ ಮಿಶ್ರಣ ಲೇಪಿಸಲಾಗುತ್ತಿತ್ತು. ಇದನ್ನು ಸಾರಸಲ್ಫೂರಿಕ್ ಆಮ್ಲದೊಂದಿಗೆ ಸಂಪರ್ಕಿಸಿದಾಗ ಬೆಂಕಿ ಭಗ್ಗನೆ ಹೊತ್ತಿಕೊಳ್ಳುವುದೆಂದು ತಿಳಿಯಿತು. ಆಗ ಗ್ರಾಹಕರು ಬೆಂಕಿಕಡ್ಡಿ ಜೊತೆಗೆ ಸಲ್ಫೂರಿಕ್ ಆಮ್ಲದಲ್ಲಿ ಅದ್ದಿದ ಕಲ್ನಾರಿನ ನೂಲಿನಿಂದ ತುಂಬಿದ್ದ ಒಂದು ಸಣ್ಣ ಶೀಷೆಯನ್ನೂ ಕೊಳ್ಳಬೇಕಾಗಿತ್ತು.

1826ರಲ್ಲಿ ಜಾನ್ ವಾಕರ್ ಎಂಬಾತ ಘರ್ಷಕ ದೀಪವನ್ನು ಉಪಜ್ಞಿಸಿದ. ಈ ಹೊಸ ನಮೂನೆಯ ಬೆಂಕಿ ಕಡ್ಡಿಗಳ ತಲೆ ಪೊಟ್ಯಾಸಿಯಮ್ ಕ್ಲೋರೇಟ್, ಆಂಟಿಮನಿ ಸಲ್ಫೈಡ್ ಮತ್ತು ಗೋಂದಿನಂಥ ವಸ್ತುಗಳ ಮಿಶ್ರಣದಿಂದಾಗಿತ್ತು. ಘರ್ಷಕ ಬೆಂಕಿಕಡ್ಡಿಗಳನ್ನು ಉಪ್ಪುಕಾಗದದಿಂದ ಅಥವಾ ಒರಟು ಕಾಗದದಿಂದ ಉಜ್ಜಿದಾಗ ಅವು ಹೊತ್ತಿಕೊಳ್ಳುತ್ತಿದ್ದವು. ಲಂಡನ್ನಿನಲ್ಲಿ ಬೆಂಕಿಕಡ್ಡಿ ಕಾರ್ಖಾನೆ ನಡೆಸುತ್ತಿದ್ದ ಸ್ಯಾಮ್ಯುಯಲ್ ಜೋನ್ಸ್ ಎಂಬಾತ ಈ ಹೊಸ ನಮೂನೆಯ ಕಡ್ಡಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ.

ಆದರೆ ಇಂದು ನಾವು ಬಳಸುತ್ತಿರುವ ಸುಕ್ಷೇಮ ಬೆಂಕಿಕಡ್ಡಿ ಸಂಪೂರ್ಣವಾಗಿ ಬೇರೆಯೇ ಆಗಿದೆ. ರಂಜಕ ಮತ್ತು ಅದರ ಸಂಯುಕ್ತಗಳ ಕೂಲಂಕಷ ಅಧ್ಯಯನ ಆಧುನಿಕ ಬೆಂಕಿಕಡ್ಡಿಗಳ ತಯಾರಿಕೆಗೆ ಉಪಯುಕ್ತವಾಯಿತು. ರಂಜಕಯುಕ್ತ ಬೆಂಕಿಕಡ್ಡಿಗಳನ್ನು 1830ರಲ್ಲಿ ಮೊದಲು ತಯಾರಿಸಲಾಯಿತು. ಕಡ್ಡಿಯ ತಲೆಗೆ ಬಿಳಿರಂಜಕ, ಪೊಟ್ಯಾಸಿಯಮ್ ಕ್ಲೋರೇಟ್ ಮತ್ತು ಗೋಂದುಗಳ ಸರಿಯನ್ನು ಸವರಲಾಗುತ್ತಿತ್ತು. ಇಂಥ ಬೆಂಕಿಕಡ್ಡಿಗಳನ್ನು ಒರಟು ಅಥವಾ ಗಟ್ಟಿ ನೆಲದ ಮೇಲೆ ಉಜ್ಜಿದಾಗ ಸುಲಭವಾಗಿ ಬೆಂಕಿ ಹೊತ್ತುತ್ತಿತ್ತು. ಆದರೆ ಅನೇಕ ಸಲ ಆಸ್ಫೋಟನೆಯೂ ಸಂಭವಿಸುತ್ತಿತ್ತು. ಈ ಸ್ಫೋಟಕ ಗುಣಕ್ಕೆ ಪೊಟ್ಯಾಸಿಯಮ್ ಕ್ಲೋರೇಟಿನ ತತ್‍ಕ್ಷಣ ವಿಭಜನೆಯೇ ಕಾರಣ. ಅನಂತರ ಪೊಟ್ಯಾಸಿಯಮ್ ಕ್ಲೋರೇಟಿಗೆ ಬದಲು ಮ್ಯಾಂಗನೀಸ್ ಡೈಆಕ್ಸೈಡನ್ನು ಬಳಸುವುದರಿಂದ ಅಷ್ಟು ಅಪಾಯವಿರದು ಎಂದು ತಿಳಿದು ಬಂದಿತು.

ಕಡ್ಡಿಪೆಟ್ಟಿಗೆಯ ಬದಿಗೆ ಉಜ್ಜಿದಾಗ ಮಾತ್ರ ಹೊತ್ತಿಕೊಳ್ಳುವ ಆಧುನಿಕ ಸುಕ್ಷೇಮ ಬೆಂಕಿಕಡ್ಡಿಗಳನ್ನು 1855ರಲ್ಲಿ ಸ್ವೀಡನ್ನಿನಲ್ಲಿ ತಯಾರಿಸಿದರು. ಇವುಗಳಲ್ಲಿ ರಂಜಕ ಬಳಸಿರಲಿಲ್ಲ. ಕಡ್ಡಿಯ ತಲೆ ಕೇವಲ ಆಂಟಿಮನಿ ಸಲ್ಫೈಡ್, ಗೋಂದು ಮತ್ತು ರೆಡ್ ಲೆಡ್ಡುಗಳ ಮಿಶ್ರಣವಾಗಿತ್ತು. ರಂಜಕ ಕಡ್ಡಿಯ ತಲೆಯಲ್ಲಿರುವ ಬದಲು ಬೆಂಕಿಪೊಟ್ಟಣದ ಬದಿಯಲ್ಲಿ ಲೇಪಿತವಾಗಿತ್ತು. ಅದೂ ವಿಷಕಾರಿಯಲ್ಲದ ಕೆಂಪು ರಂಜಕ. (ಬಿಳಿರಂಜಕ ವಿಷವಸ್ತು)

ಆ್ಯಂಟಿಮನಿ ಸಲ್ಫೈಡಿಗೆ, ರಂಜಕದಷ್ಟು ಸುಲಭವಾಗಿ ಬೆಂಕಿ ಹಿಡಿಯುವುದಿಲ್ಲವಾಗಿ ಇಂಥ ಸುರಕ್ಷಿತ ಬೆಂಕಿ ಕಡ್ಡಿಗಳನ್ನು ಒರಟು ಮೇಲ್ಮೈ ಮೇಲೆ ಉಜ್ಜಿದಾಗ ಒಡನೆ ಬೆಂಕಿ ಸಿಡಿಯದು. ಆದರೆ ಕೆಂಪು ರಂಜಕ, ಆಂಟಿಮನಿ ಸಲ್ಫೈಡ್, ಗೋಂದು ಮತ್ತು ಗಾಜಿನ ಹುಡಿಗಳಿಂದ ಸಿದ್ಧಪಡಿಸಿದ ಮೇಲ್ಮೈ ಮೇಲೆ ಘರ್ಷಿಸಿದಾಗ ಸುಲಭವಾಗಿ ಉರಿಯುತ್ತದೆ. ಬೆಂಕಿಪೊಟ್ಟಣ ಅಥವಾ ಕಡ್ಡಿ ಪೆಟ್ಟಿಗೆಯ ಬದಿಗಳಲ್ಲಿ ಮೇಲೆ ಹೇಳಿರುವ ಮಿಶ್ರಣ ಲೇಪಿಸಿರುತ್ತಾರೆ. ಆಧುನಿಕ ಬೆಂಕಿಕಡ್ಡಿ ಕೈಗಾರಿಕೆಯಲ್ಲಿ ಬಿಳಿ ರಂಜಕ ನಿಸಿದ್ಧ. ಇದು ಪ್ರಬಲ ವಿಷವಾಗಿರುವುದರಿಂದ ಇದರ ಬಾಷ್ಪ ಸೇವಿಸುವ ಕೆಲಸಗಾರರು ವಿಚಿತ್ರ ಮೂಳೆರೋಗಕ್ಕೆ ತುತ್ತಾಗುವ ಸಂಭವವಿದೆ. ವಸಡಿನ ಮೂಳೆಗಳನ್ನು ಕೊರೆದು ನಾಶಗೊಳಿಸುವ ಈ ರೋಗಕ್ಕೆ ಫಾಸ್ಸಿಜಾ ಎಂದು ಹೆಸರು.

ಎರಡನೆಯದು ಮಹಾಯುದ್ಧದ ವೇಳೆ ಜಲನಿರೋಧಿ ಬೆಂಕಿಕಡ್ಡಿಗಳನ್ನು ತಯಾರಿಸಲಾಯಿತು. ಇಂಥ ಕಡ್ಡಿಗಳು 8-10 ಗಂಟೆಗಳಷ್ಟು ಕಾಲ ನೀರಿನಲ್ಲಿ ನೆನೆದರೂ ಸುಲಭವಾಗಿ ಹೊತ್ತಿಕೊಳ್ಳುತ್ತವೆ. ಬೆಂಕಿ ಜ್ವಾಲೆಯನ್ನು ಸಂದಿಸಿದ ತತ್‍ಕ್ಷಣವೇ ಬೆಂಕಿಕಿಡಿಯೂ ಮಾಯವಾಗುವುದು ಆಧುನಿಕ ಬೆಂಕಿಕಡ್ಡಿಗಳ ವಿಶೇಷ.

ಆಧುನಿಕ ಬೆಂಕಿಕಡ್ಡಿ ಕೈಗಾರಿಕೆಗಳಲ್ಲಿ ಮೂವತ್ತೆರಡು ವಿವಿಧ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾರೆ. ಸ್ವಯಂಚಲಿಯಂತ್ರಗಳು ಬೆಂಕಿಕಡ್ಡಿಗಳನ್ನು ತಯಾರಿಸುತ್ತವೆ. ಸುಮಾರು 18 ಮೀ ಉದ್ದ ಮತ್ತು 9 ಮೀ ಎತ್ತರವಿರುವ ಬೃಹದ್ಯಂತ್ರಗಳು ಮರದ ತುಂಡುಗಳನ್ನು ತೆಳುಕಡ್ಡಿಗಳಾಗಿ ಕತ್ತರಿಸಿ, ಕರಗಿದ ಪ್ಯಾರಾಫಿನ್ನಿನಲ್ಲಿ ಮುಳುಗಿಸಿ, ಬೆಂಕಿ ಉತ್ಪತ್ತಿ ಮಾಡುವ ರಾಸಾಯನಿಕ ಮಿಶ್ರಣದಲ್ಲಿ ಕಡ್ಡಿ ತಲೆಗಳನ್ನು ಅದ್ದಿ ಮತ್ತು ಒಣಗಿದ ಬೆಂಕಿ ಪೊಟ್ಟಣಗಳಲ್ಲಿ ತುಂಬಿಸಿ ಮೊಹರು ಮಾಡುವ ಅತ್ಯಗತ್ಯ ಕೆಲಸಗಳನ್ನು ಅರುವತ್ತು ಮಿನಿಟುಗಳಲ್ಲಿ ಮಾಡಿ ಮುಗಿಸುತ್ತವೆ. ಇಂಥ ಯಂತ್ರಗಳು ಒಂದು ಗಂಟೆಯಲ್ಲಿ ಸುಮಾರು ಹತ್ತು ಲಕ್ಷಕ್ಕಿಂತ ಅಧಿಕ ಕಡ್ಡಿಗಳನ್ನು ತಯಾರಿಸಬಲ್ಲವು. ಬೆಂಕಿಕಡ್ಡಿ ಕೈಗಾರಿಕೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನ ಅಗ್ರಪಂಕ್ತಿಯಲ್ಲಿದೆ. ಮುಂದಿನ ಸ್ಥಾನಗಳಲ್ಲಿ ಬರುವ ರಾಷ್ಟ್ರಗಳೆಂದರೆ ಗ್ರೇಟ್ ಬ್ರಿಟನ್ ರಷ್ಯ ಮತ್ತು ಸ್ವೀಡನ್. (ಎಸ್.ವಿ.ಎನ್.ಕೆ.)