ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಬೇವು

ವಿಕಿಸೋರ್ಸ್ದಿಂದ

ಬೇವು ಮೀಲಿಯೇಸೀ ಕುಟುಂಬಕ್ಕೆ ಸೇರಿದ ಉಪಯುಕ್ತ ಮರ (ನೀಮ್, ಮಾರ್ಗೋಸ). ಭಾರತದ ಮೂಲವಾಸಿಯಾದ ಇದು ಇಂಡೋ-ಮಲಯ ಪ್ರದೇಶ ಹಾಗೂ ಆಫ್ರಿಕದ ಉಷ್ಣವಲಯಗಳಲ್ಲೆಲ್ಲ ಕಾಣದೊರೆಯುತ್ತದೆ. ಅಝಾಡಿರಾಕ್ಟ ಇಂಡಿಕ ಇದರ ಸಸ್ಯವೈಜ್ಞಾನಿಕ ಹೆಸರು.

ಇದು 10-15 ಮೀ ಎತ್ತರ ಬೆಳೆಯುವ ಸಾಧಾರಣ ಗಾತ್ರದ ನಿತ್ಯಹರಿದ್ವರ್ಣದ ಮರ. ಒಣಸೀಮೆಗಳಲ್ಲಿ ಬೆಳೆಯುವಂಥ ಬೇವಿನ ಮರದ ಎಲೆಗಳು ವರ್ಷಕ್ಕೊಮ್ಮೆ ಉದುರುವುವಾದ್ದರಿಂದ ಇದನ್ನು ಪರ್ಣಪಾತಿ ಮರಗಳ ಗುಂಪಿಗೆ ಸಹ ಸೇರಿಸುವುದಿದೆ. ಕಾಂಡದ ಮೇಲಿನ ತೊಗಟೆ ಬೂದಿ ಬಣ್ಣದ್ದು; ಉದ್ದುದ್ದನೆಯ ಬಿರುಕುಗಳಿಂದ ಕೂಡಿದ್ದು ಒರಟಾಗಿದೆ. ತೊಗಟೆಯ ಒಳಭಾಗದ ಬಣ್ಣ ಕೆಂಪು. ಎಲೆಗಳು ಸಂಯುಕ್ತ, ಏಕಪಿಚ್ಚಕ ಮಾದರಿಯವು. ಪರ್ಯಾಯರೀತಿಯಲ್ಲಿ ಜೋಡಣೆಗೊಂಡಿರುವುವು. ಎಲೆಗಳ ಅಂಚು ಗರಗಸದಂತೆ, ಹೂಗಳು ಸಣ್ಣ ಗಾತ್ರದವು, ಬಿಳಿ ಬಣ್ಣದವು. ಎಲೆಗಳ ಕಕ್ಷಗಳಲ್ಲಿ ಸ್ಥಿತವಾಗಿರುವ ಹೂಗೊಂಚಲುಗಳಲ್ಲಿ ಸಮಾವೇಶಗೊಂಡಿವೆ. ಹೂ ಅರಳುವ ಸಮಯ ಫೆಬ್ರುವರಿ-ಏಪ್ರಿಲ್. ಫಲ ಒಂಟಿ ಬೀಜವುಳ್ಳ ಬೆರಿ ಮಾದರಿಯದು. ಮಾಗಿದಾಗ ಹಸಿರು ಮಿಶ್ರಿತ ಹಳದಿ ಬಣ್ಣಕ್ಕಿರುತ್ತದೆ.

ಬೇವಿ ಭಾರತಾದ್ಯಂತ ಕಾಡುಮರವಾಗಿ ಶುಷ್ಕ ಅರಣ್ಯಗಳಲ್ಲಿ, ಕುರುಚಲು ಕಾಡುಗಳಲ್ಲಿ ಬೆಳೆಯುತ್ತದೆ. ಇದನ್ನು ಸಾಲುಮರವಾಗಿ ಬೆಳೆಸುವುದೂ ಉಂಟು. ಎಲ್ಲ ತೆರನ ಮಣ್ಣುಗಳಲ್ಲಿ ಇದು ಬೆಳೆಯುತ್ತದಾದರೂ ಕಪ್ಪು ಎರೆಭೂಮಿಯಲ್ಲಿ ಉತ್ತಮ ಬೆಳೆವಣಿಗೆ ತೋರುತ್ತದೆ. ಮರದ ವೃದ್ಧಿ ಬೀಜಗಳ ಮೂಲಕ.

ಬೇವು ಕಹಿರುಚಿಗೆ ಇನ್ನೊಂದು ಹೆಸರು ಎನಿಸಿದೆ. ಇದರ ಎಲ್ಲ ಭಾಗಗಳು ಕಹಿಯೇ. ಇದಕ್ಕೆ ಕಾರಣ ನಿಂಬಿಡನ್ ಎಂಬ ಕಹಿಸಾರ. ಕಹಿಯಾಗಿದ್ದರೂ ಬೇವಿಗೆ ನಾಟಿ ವೈದ್ಯಪದ್ಧತಿಯಲ್ಲಿ ಮಹತ್ತ್ವದ ಸ್ಥಾನ ಉಂಟು. ಬೇವಿನ ಎಣ್ಣೆಯನ್ನು ಗಜಕರ್ಣ, ವೃಣ ಮುಂತಾದ ಚರ್ಮರೋಗಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಸಂಧೀವಾತಕ್ಕೂ ಇದು ಪರಿಣಾಮಕಾರಿ. ಜಂತುನಿವಾರಕ, ಕೀಟ ನಿರೋಧಿ ಗುಣಗಳೂ ಇದಕ್ಕುಂಟು. ಬೇವಿನ ಎಣ್ಣೆಯನ್ನು ಹಲ್ಲುಸರಿ, ಸಾಬೂನುಗಳೊಂದಿಗೆ ಸೇರಿಸುವುದುಂಟು.

ಎಲೆಗಳು ಪಚನಕಾರಿ, ಕಫಹಾರಿ, ಜಂತುನಿವಾರಕ, ಮೂತ್ರೋತ್ತೇಜಕ, ವಿಷಾಪಹಾರಿ, ಕ್ರಿಮಿನಾಶಕ ಎಂದು ಹೆಸರಾಂತಿವೆ. ಜೇನುತುಪ್ಪದೊಡನೆ ಸೇವಿಸಿದರೆ ಕಾಮಾಲೆ ಹಾಗೂ ಚರ್ಮ ರೋಗಗಳೂ ವಾಸಿಯಾಗುವುವು ಎನ್ನಲಾಗಿದೆ. ಎಲೆಗಳನ್ನು ಬೆಚ್ಚಾರ, ಕಷಾಯ ಮತ್ತು ಕರ್ಪೂರ ತೈಲಗಳಲ್ಲಿ ಅದ್ದಿದ ಬಟ್ಟೆಯನ್ನು ಮೂಳೆ ಮುರಿತಗಳಿಗೆ ಪಟ್ಟಿಯಾಗಿ ಕಟ್ಟುವುದಿದೆ.

ತೊಗಟೆ ಬಂಧಕ, ಜಂತು ನಿವಾರಕ, ಜ್ವರಹರ, ಉತ್ತೇಜಕ ಎನ್ನಲಾಗಿದೆ. ಇದು ಚರ್ಮರೋಗಗಳಿಗೆ ಮದ್ದೂ ಹೌದು. ಬೇವಿನ ಎಳೆಯ ಕಡ್ಡಿಗಳಿಂದ ಹಲ್ಲುಜ್ಜಿದರೆ ವಸಡು ಹಾಗೂ ಹಲ್ಲುಗಳ ರೋಗಗಳು ವಾಸಿಯಾಗುವುವು. ತಲೆನೋವಿನ ಚಿಕಿತ್ಸೆಗೆ ಹೂ ಮತ್ತು ಎಲೆಗಳ ಬೆಚ್ಚಾರ ಪರಿಣಾಮಕಾರಿ ಎನಿಸಿದೆ. ಬೇವಿನ ಹಣ್ಣನ್ನು ಮೂತ್ರಪಿಂಡದ ಕಾಯಿಲೆ, ಮೂಲವ್ಯಾಧಿ, ಹೊಟ್ಟೆಯಲ್ಲಿಯ ಹುಳು, ಕುಷ್ಠ ಮುಂತಾದವುಗಳ ಚಿಕಿತ್ಸೆಗೆ ಬಳಸಲಾಗುತ್ತದೆ. ಬೇವಿನ ಗೋಂದು ಒಳ್ಳೆಯ ಉತ್ತೇಜಕ, ತಂಪುಕಾರಕ, ಶಕ್ತಿ ವರ್ಧಕ ಎನಿಸಿದೆ. ಒಣಬೀಜಗಳ ಲೇಪವನ್ನು ಹೇನುಗಳ ನಿವಾರಣೆಗೆ ಬಳಸುವುದಿದೆ.

ಬೇವಿನ ಮರದ ಚೌಬೀನೆ ಮನೆಕಟ್ಟಡ, ಕೆತ್ತನೆ, ಹಲಗೆ, ಆಟಿಕೆ, ನೇಗಿಲು ಮುಂತಾದ ಕೃಷಿ ಉಪಕರಣಗಳು-ಇವಕ್ಕೆ ಉಪಯುಕ್ತವೆನಿಸಿದೆ. ಕೆಲವೊಮ್ಮೆ ಚಳಿಗಾಲದಲ್ಲಿ ಬೇವಿನ ಮರದ ಬುಡದಿಂದ ಒಂದು ಬಗೆಯ ಬಿಳಿಯ ರಸ ಒಸರುತ್ತದೆ. ಸಿಹಿಮಿಶ್ರಿತ ಹುಳಿ ರುಚಿಯುಳ್ಳ ಇದಕ್ಕೆ ಬೇವಿನ ಹೆಂಡ ಎಂದು ಹೆಸರು. ಮರದಿಂದ ಹೊರಬಂದ ಕೂಡಲೆ ಬ್ಯಾಕ್ಟೀರಿಂiÀi ಕ್ರಿಯೆಗೆ ಪಕ್ಕಾಗಿ ಇದು ನೊರೆ ನೊರೆಯಾಗುತ್ತದೆ. ಅಂತೆಯೇ ಇದಕ್ಕೆ ಅಸಹ್ಯವಾಸನೆ ಉಂಟಾಗುತ್ತದೆ. ಆದರೂ ಇದನ್ನು ಕುಷ್ಠ, ಇನ್ನಿತರ ಬಗೆಯ ಚರ್ಮರೋಗಗಳು, ನಿಶ್ಯಕ್ತಿ ಮುಂತಾದುಗಳ ನಿವಾರಣೆಗೆ ಉಪಯೋಗಿಸಲಾಗುತ್ತದೆ. (ಎಸ್‍ಐ.ಎಚ್.; ಎಂ.ಎಚ್.ಎಂ.)