ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಭಾಷಿಕ ಪುನರ್ನಿರ್ಮಾಣ

ವಿಕಿಸೋರ್ಸ್ದಿಂದ

ಭಾಷಿಕ ಪುನರ್ನಿರ್ಮಾಣ

ಭಾಷೆಯ ಶಬ್ದರೂಪಗಳ ಸಹಾಯದಿಂದ ಪ್ರಾಚೀನ ಶಬ್ದರೂಪಗಳನ್ನು ನಿರ್ಣಯಿಸುವ ವಿಧಾನ (ಲಿಂಗ್ವಿಸ್ಟಿಕ್ ರೀಕನ್‍ಸ್ಟ್ರಕ್ಷನ್). ತೌಲನಿಕ ಪದ್ಧತಿ ಎರಡೂ ಅಥವಾ ಹೆಚ್ಚು ಭಿನ್ನ ಭಾಷೆಗಳಿಗೆ ಬಹಳ ಪರಿಣಾಮಕಾರಿಯಾಗಿ ಅನ್ವಿತವಾಗುತ್ತದೆ. ತುಲನೆಗೆ ಆಧಾರ ಆ ವಿವಿಧ ಭಾಷೆಗಳಲ್ಲಿ ಕಂಡುಬರುವ ಜ್ಞಾತಿ ಶಬ್ದಗಳು, ಎರಡು ಭಿನ್ನ ಭಾಷೆಗಳಿಗೆ ಅನ್ವಯವಾಗುವುದರಿಂದ ಇದನ್ನು ಬಾಹ್ಯ ಪುನಾರಚನೆ (ಎಕ್ಸ್‍ಟರ್ನಲ್ ರಿ ಕನ್‍ಸ್ಟ್ರಕ್ಷನ್) ಎಂದು ಕರೆಯುತ್ತಾರೆ. ಅದರೆ ಒಂದು ಭಾಷೆ ಒದಗಿಸುವ ಅಧಾರಗಳನ್ನು ಬಳಸಿಕೊಂಡು ಅ ಭಾಷೆಯ ಮೂಲರೂಪಗಳನ್ನು ರಚಿಸುವ ಅಂತರಿಕ ಪುನಾರಚನೆಯಾಗುತ್ತದೆ (ಇನ್‍ಟರ್‍ನಲ್ ರೀಕನ್‍ಸ್ಟ್ರಕ್ಷನ್).

ತುಲನಾತ್ಮಕ ಪದ್ಧತಿಯೆಂದರೆ ಮೂಲಭಾಷೆಯನ್ನು ನಿರ್ಣಯಿಸಲು ಸೋದರಭಾಷೆಗಳ ಆಕೃತಿಗಳನ್ನು ಹೊಂದಿಸುವ ಪ್ರಕ್ರಿಯೆ. ಅನುವಂಶಿಕ ವರ್ಗೀಕರಣದ ಮೂಲಕ ಭಾಷೆಗಳಲ್ಲಿಯ ಸಂಬಂಧ ತಿಳಿದ ತರುವಾಯ. ಅಲ್ಲಿ ಬರುವ ಭಾಷೆಗಳು ಸೋದರ ಭಾಷೆಗಳಾಗಿರುತ್ತವೆ. ಇವುಗಳ ಮೂಲರೂಪ ತಿಳಿಯಲು ಆ ಭಾಷೆಗಳ ಆಕೃತಿ, ಆಕೃತಿಯ ಉಪಆಕೃತಿಗಳ ತುಲನೆ ನಡೆಸಬೇಕಾಗುತ್ತದೆ.

ಭಾಷಿಕ ಆಂಶಗಳನ್ನು ತುಲನೆ ಮಾಡುವಾಗ ಧ್ವನಿ ಮತ್ತು ಅರ್ಥಗಳಲ್ಲಿ ಸಮಾನ ರೂಪಗಳು ಕಾಣಿಸಿಕೊಳ್ಳುತ್ತವೆ. ಈ ಸಾಮ್ಯಕ್ಕೆ ಮುಖ್ಯವಾಗಿ ಮೂರು ಕಾರಣಗಳಿವೆ: 1 ಆಕಸ್ಮಿಕ ಸಂಬಂಧ: ಧ್ವನಿ ಮತ್ತು ಅರ್ಥಗಳ ಸಂಬಂಧ ಆಕಸ್ಮಿಕವಾಗಿರಬಹುದು. ಉದಾಹರಣೆಗೆ ಜೂóನಿ ಭಾಷೆಯಲ್ಲಿ nas (ಆರ್ದ) ಎಂಬ ಶಬ್ದವಿದೆ. ಅಂತೆಯೇ ಜರ್ಮನ್ ಭಾಷೆಯಲ್ಲಿ nass (ಅದ್ರ್ರ) ಶಬ್ದವಿದೆ. ಪರಸ್ಪರ ಸಂಬಂಧವಿಲ್ಲದೆ ಈ ಭಾಷೆಗಳಲ್ಲಿ ಒಂದೇ ಧ್ವನಿ ಸಮುದಾಯವಿದೆ ಎಂದರೆ ಅದು ಕೇವಲ ಆಕಸ್ಮಿಕ. (2) ಸ್ವೀಕರಣ: ಇಂಗ್ಲೀಷಿನಲ್ಲಿ typhoon ಎಂಬ ಪದವಿದೆ. ಚೀನಿ ಭಾಷೆಯಲ್ಲೂ ಈ ಪದವಿದೆ ಎಂದರೆ ಅವೆರಡೂ ಭಾಷೆಗಳು ಒಂದೇ ಮೂಲದಿಂದ ಬಂದವೆಂದು ಹೇಳಲಾಗದು. ಏಕೆಂದರೆ typhoon ಪದ ಚೀನಿಯದು. ಅದನ್ನು ಇಂಗ್ಲಿಷ್ ಭಾಷೆ ಸ್ವೀಕರಿಸಿದೆ. ಇದಕ್ಕೆ ಆಧಾರ ಇಂಗ್ಲಿಷ್ ಭಾಷೆಯಲ್ಲಿ ಮೊದಲು ಆ ಪದದ ಉಲ್ಲೇಖ ಇರದೆ ಇತ್ತೀಚಿಗೆ ಬಳಕೆಯಾಗುತ್ತಿದೆ. (3) ಬಳುವಳಿಯ ಮೂಲಕ ಬಂದ ಭಾಷಾರೂಪಗಳು: ಎರಡು ಪ್ರಸ್ತುತ ಭಾಷೆಗಳ ಸಾಮಾನ್ಯ ಮೂಲದಿಂದ ನೇರ ಬಳುವಳಿಯ ಮೂಲಕ ಮತ್ತೊಂದು ಭಾಷೆಗೆ ಬಂದ ಭಾಷಾ ರೂಪಗಳು, ಸಂಬಂಧಿತ ಭಾಷೆಗಳು ಒಂದೇ ಮೂಲದಿಂದ ಉಗಮಿಸಿ ವಿಕಾಸಗೊಂಡ ಭಾಷಾರೂಪಗಳಿಗೆ "ಜ್ಞಾತಿಶಬ್ದ"ಗಳೆಂದು ಹೆಸರು. ಈ ಜ್ಞಾತಿಶಬ್ದಗಳೇ ತೌಲನಿಕ ಪದ್ಧತಿಗೆ ಆಧಾರ.

ಒಂದು ಭಾಷೆಯ ಚಾರಿತ್ರಿಕ ಅಧ್ಯಯನ ನಡೆಸುವಾಗ, ಆ ಭಾಷೆಯಲ್ಲಿ ನಡೆಯುವ ವಿವಿಧ ಪ್ರಕ್ರಿಯೆಗಳ ಆಧಾರದ ಮೇಲೆ ಅದರ ಮೂಲರೂಪವನ್ನು ಊಹಿಸಲು ಸಾಧ್ಯವಿದೆ. ಭಾಷೆಯಲ್ಲಿ ನಡೆಯುವ ಕೆಲ ಘಟನೆಗಳು ಅದರ ರಚನೆಯಲ್ಲಿಯ ಕೆಲವು ಸ್ಪಷ್ಟ ಮಾಹಿತಿಗಳನ್ನು ಒದಗಿಸುತ್ತವೆ. ಇದರ ಆಧಾರದಿಂದ ಆ ಭಾಷೆಯ ಹಿಂದಿನ ರೂಪವನ್ನು ಪುನಾರಚಿಸಲು ಸಾಧ್ಯ. ಭಾಷಿಕ ಬದಲಾವಣೆಗೆ ಕಾರಣವಾದ ಕೆಲವು ಅಂಶಗಳ ಮೂಲಕ ಹಂತಗಳಲ್ಲಿ ಆ ರಚನೆ ವ್ಯತ್ಯಾಸಗೊಂಡರೂ ಹಳೆಯ ರಚನೆಯ ಕೆಲವು ಅಂಶಗಳು ದೊರೆಯುತ್ತವೆ. ಈ ಅಂಶಗಳ ಆಧಾರದಿಂದಲೇ ಆ ಭಾಷೆಯ ಪ್ರಾಚೀನ ರಚನೆಯನ್ನು ಊಹಿಸಿ ಪುನಾರಚಿಸಲು ಸಾಧ್ಯವಾಗುತ್ತವೆ.

ಭಾಷೆಯ ಬದಲಾವಣೆಗೆ ಕಾರಣವಾಗುವ ಮುಖ್ಯ ಅಂಶವೆಂದರೆ ಧ್ವನಿ ಬದಲಾವಣೆ. ಧ್ವನಿಬದಲಾವಣೆ ಉಪಧ್ವನಿಮಾಗಳಲ್ಲಿ ಮಾತ್ರ ಬದಲಾವಣೆ ಹೊಂದುತ್ತದೆ. ಧ್ವನಿ ಬದಲಾವಣೆ ಕೆಲವು ವಿಶಿಷ್ಟ ಧ್ವನಿಮಾ ಸನ್ನಿವೇಶಗಳಲ್ಲಿ ಆಕೃತಿಯಾದ ಅನೇಕ ಆಕೃತಿಗಳಲ್ಲೂ ಕಂಡು ಬರುವ ಸಾಧ್ಯತೆಯಿದೆ. ಅಲ್ಲಲ್ಲಿ ಕಂಡುಬರುವ ಇಂಥ ಬದಲಾವಣೆಯ ಆಧಾರದಿಂದ ಪ್ರಾಚೀನ ರೂಪಗಳ ಪುನಾರಚನಾಕಾರ್ಯ ನಡೆಯುತ್ತದೆ.

ಒಂದು ಭಾಷೆಯ ಲಿಖಿತ ಉಲ್ಲೇಖಗಳು ದೊರೆತರೆ ಅವುಗಳ ಅರ್ಥ ವಿವರಣೆಯ ಮೂಲಕ ಆ ಭಾಷೆಯ ಇತಿಹಾಸ ತಿಳಿಯಬಹುದು. ಈ ಲಿಖಿತ ಉಲ್ಲೇಖಗಳು ದೊರೆಯದಿದ್ದರೂ ಭಾಷಿಕ ಪುನರ್ನಿಮಾಣ ಪದ್ದತಿಗಳ ಮೂಲಕ ಭಾಷೆಯ ಇತಿಹಾಸ ರಚಿಸಲು ಇಂದಿನ ದಿನಗಳಲ್ಲಿ ಸಾಧ್ಯವಾಗಿದೆ. ಲಿಖಿತ ದಾಖಲೆಗಳೇ ಇಲ್ಲದೆ ಪೊಟಾವಾಟೋಮಿ. ಅಲ್ಗೋಂಕಿಯನ್ ಭಾಷೆಗಳ ಪ್ರಾಚೀನ ಇತಿಹಾಸವನ್ನು ಹಾಕೆಟ್ ಮತ್ತು ಬ್ಲೂಮ್‍ಫೀಲ್ಡ್ ಪುನಾರಚಿಸಿದ್ದಾರೆ. (ಬಿ.ಕೆ.ಎಂ.)