ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂಗಟ್ಟೆ

ವಿಕಿಸೋರ್ಸ್ದಿಂದ

ಮಂಗಟ್ಟೆ ಕಾರಸೈಯಿಫಾರ್ಮೀಸ್ ಗಣದ ಬ್ಯೂಸರೋಟಿಡೀ ಕುಟುಂಬಕ್ಕೆ ಸೇರಿದ ವನ್ಯಪಕ್ಷಿ (ಹಾರ್ನ್‍ಬಿಲ್). "ಓಂಗಿಲೆ ಪರ್ಯಾಯ ನಾಮ. ಈ ಕುಟುಂಬದಲ್ಲಿ ಸುಮಾರು 45 ಪ್ರಭೇದಗಳಿವೆ. ಭಾರತದಲ್ಲಿ ಟೋಕಸ್ ಬಿರಾಸ್ಟ್ರಿಸ್ (ಕಾಮನ್ ಗ್ರೇ ಹಾರ್ನ್‍ಬಿಲ್), ಟೋಕಸ್ ಗ್ರೈಸಿಯಾಸ್ (ಮಲಬಾರ್ ಗ್ರೇ ಹಾರ್ನ್‍ಬಿಲ್), ಆಂತ್ರಕೋಸಿರಸ್ ಕಾರೊನೇಟಸ್ (ಮಲಬಾರ್ ಪೈಡ್ ಹಾರ್ನ್‍ಬಿಲ್), ಆ. ಮಲಬಾರಿಕಸ್ (ಲಾರ್ಜ್ ಪೈಡ್ ಹಾರ್ನ್‍ಬಿಲ್) ಮತ್ತು ಬ್ಯೂಸರಸ್ ಬೈಕಾರ್ನಿಸ್ (ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್) ಎಂಬ ಐದು ಪ್ರಭೇದಗಳುಂಟು. ಇವುಗಳ ಪೈಕಿ ಮೊದಲನೆಯದು ಕೇರಳ, ಅಸ್ಸಾಮ್ ಮತ್ತು ರಾಜಸ್ಥಾನಗಳನ್ನುಳಿದು ಭಾರತದ್ಯಂತವೂ ಎರಡನೆಯದು ಮಹಾರಾಷ್ಟ್ರದಲ್ಲೂ ಮೂರನೆಯದು ಭಾರತಾದ್ಯಂತವೂ ನಾಲ್ಕನೆಯದು ಕುಮಾಂವ್‍ನಿಂದ ಅಸ್ಸಾಮ್‍ವರೆಗಿನ ಪ್ರದೇಶಗಳಲ್ಲೂ ಕೊನೆಯದು ಪಶ್ಚಿಮಘಟ್ಟ ಹಾಗೂ ಪೂರ್ವ ಹಿಮಾಲಯದ ತಪ್ಪಲು ಪ್ರದೇಶಗಳಲ್ಲೂ ಕಾಣದೊರೆಯುವುವು.

ಪ್ರಸಕ್ತ ಲೇಖನದಲ್ಲಿ ಟೋಕಸ್ ಬಿರಾಸ್ಟ್ರಿಸ್ ಪ್ರಭೇದವನ್ನು ವಿವರಿಸಲಾಗಿದೆ. ಇದು ಸುಮಾರು 60 ಸೆಂಮೀ ಉದ್ದದ ಒಡ್ಡೊಡ್ಡಾದ ಹಕ್ಕಿ. ಮೈಬಣ್ಣ ಅನಾಕರ್ಷಕ; ಕಂದು ಮಿಶ್ರಿತ ಬೂದು. ಬಾಲವೇ ದೇಹದ 1\2 ಭಾಗದಷ್ಟಿದೆ. ರೆಕ್ಕೆಗಳು ಬಲಯುತವಾಗಿವೆ. ಗರಿಗಳು ಒರಟು, ಇವುಗಳ ರಚನೆ ಜಾಳುಜಾಳು, ಕೊಕ್ಕಿನ ಮೇಲ್ಭಾಗದಲ್ಲಿ ಅದಕ್ಕೆ ಅಂಟಿಕೊಂಡಿರುವ ಕೊಂಬಿನ ವಾಳ ಇರುವುದು ಈ ಹಕ್ಕಿಯ ಅತಿವಿಚಿತ್ರ ಲಕ್ಷಣ. ಇದರಿಂದ ಹಕ್ಕಿಗೆ ಯಾವುದೇ ತೆರನ ಉಪಯೋಗವಿಲ್ಲ.

ಇದು ವೃಕ್ಷವಾಸಿ ಹಕ್ಕಿ, ಹಳ್ಳಿಗಳ ಸುತ್ತಮುತ್ತ ಹಳೆಯ ಮರಗಳ ತೋಪುಗಳಲ್ಲಿ ವಾಸಿಸುತ್ತದೆ. ಆಲ, ಅರಳಿ ಮುಂತಾದವು ಹಣ್ಣುಬಿಡುವ ಶ್ರಾಯದಲ್ಲಿ ಇದನ್ನು ಹೆಚ್ಚು ಸಂಖ್ಯೆಯಲ್ಲಿ ನೋಡಬಹುದು. ಹಣ್ಣುಗಳನ್ನು ಹೆಚ್ಚು ಇಷ್ಟಪಡುತ್ತದೆ. ಮರದಿಂದ ಮರಕ್ಕೆ ಬಿಟ್ಟು ಬಿಟ್ಟು ರೆಕ್ಕೆ ಬಡಿಯುತ್ತ ಶ್ರಮಪಟ್ಟಂತೆ ಬಳುಕುಗತಿಯಲ್ಲಿ ಹಾರುತ್ತದೆ. ಹಾರುವಾಗ ಎಲ್ಲ ಮಂಗಟ್ಟೆಗಳೂ ಒಟ್ಟಿಗೆ ಹೋಗದೆ, ಒಂದಾದ ಮೇಲೆ ಒಂದರಂತೆ ಸಾಗುವುವು. ಮಂಗಟ್ಟೆ ಕೀಟಗಳನ್ನೂ ಓತಿ, ಇಲಿಗಳನ್ನೂ ತಿನ್ನುವುದಿದೆ. ಇದು ಗೂಡು ಕಟ್ಟಿ ಮರಿ ಮಾಡುವ ಶ್ರಾಯ ಮಾರ್ಚ್-ಜೂನ್. ಆ ಸಮಯದಲ್ಲಿ ಹೆಣ್ಣು ಹಕ್ಕಿ ಯಾವುದಾದರೂ ವಯಸ್ಸಾದ ಮರದ ಪೊಟರೆಯನ್ನು ಆಯ್ದುಕೊಂಡು ಅದರೊಳಗೆ ಕೂತು ಕಿರಿಯಗಲದ ಕಿಂಡಿಯೊಂದನ್ನು ಬಿಟ್ಟು ಪೊಟರೆಯ ಸುತ್ತ ಮಣ್ಣು, ಕಸಕಡ್ಡಿ, ತನ್ನ ಹಿಕ್ಕೆ ಮುಂತಾದ ಸಾಮಗ್ರಿಗಳಿಂದ ಗೋಡೆ ರಚಿಸಿ ಬಂಧಿಸಿಕೊಳ್ಳುತ್ತದೆ. ಕಿಂಡಿಯ ಮೂಲಕ ತನ್ನ ಕೊಕ್ಕನ್ನು ಮಾತ್ರ ಹೊರಚಾಚಬಲ್ಲದು. ತರುವಾಯ 2-3ಮಾಸಲು ಬಿಳಿಯ ಬಣ್ಣದ ಮೊಟ್ಟೆಗಳನ್ನಿಟ್ಟು ಕಾವಿಗೆ ಕೂತುಕೊಳ್ಳುತ್ತದೆ. ಮೊಟ್ಟೆಯೊಡೆದು ಮರಿಗಳು ಹೊರಬಂದು ಕೊಂಚ ದೊಡ್ಡವಾಗುವ ತನಕವೂ (6-8 ವಾರಕಾಲ) ಹೆಣ್ಣು ಹೀಗೆ ಸೆರೆವಾಸದಲ್ಲೇ ಇರುತ್ತದೆ. ಈ ಸಮಯದಲ್ಲಿ ಹೆಣ್ಣಿಗೆ ಆಹಾರ ಒದಗಿಸುವ ಕೆಲಸವನ್ನು ಗಂಡು ಸಮರ್ಪಕವಾಗಿ ನಿರ್ವಹಿಸುತ್ತದೆ. ಮರಿಗಳು ಅರ್ಧ ಬೆಳೆದ ಮೇಲೆ ಹೆಣ್ಣುಗೂಡಿನ ಗೋಡೆಯನ್ನು ಒಡೆದು ಹೊರ ಬಂದು ಮರಿಗಳಿಗೆ ಉಣಿಸುತರುವ ಕಾರ್ಯದಲ್ಲಿ ಗಂಡಿನೊಡನೆ ಪಾಲುಗೊಳ್ಳುತ್ತದೆ.

ಮರಿಗಳು ಪೂರ್ಣ ಬೆಳೆದು ತಮ್ಮನ್ನು ತಾವು ನೋಡಿಕೊಳ್ಳಲು ಸಮರ್ಥವಾದಾಗ ಗೂಡಿನಿಂದ ಹೊರಬೀಳುವುವು. (ವಿ.ಕೆ.ವಿ.)