ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಮಂಡಲದ ಹಾವು

ವಿಕಿಸೋರ್ಸ್ದಿಂದ

ಮಂಡಲದ ಹಾವು - ವೈಪರಿಡೀ ಕುಟುಂಬದ ವೈಪರಿನೀ ಉಪಕುಟುಂಬಕ್ಕೆ ಸೇರಿದ ವಿಷಪೂರಿತ ಹಾವು (ರಸೆಲ್ಸ್ ವೈಪರ್). ದಬೋಯ ರಸೆಲಿಯೈ ಇದರ ವೈe್ಞÁನಿಕ ಹೆಸರು. ಭಾರತದ ನಾಲ್ಕು ಅತ್ಯಂತ ವಿಷಯುಕ್ತ ಹಾವುಗಳ ಪೈಕಿ ಇದು ಒಂದು ಸಾಧಾರಣವಾಗಿ 1.5 ಮೀ ಉದ್ದಕ್ಕೆ ಬೆಳೆಯುತ್ತದೆ. ದೇಹ ಸ್ಥೂಲವಾದದ್ದು. ತಲೆ ಮುಮ್ಮೂಲೆಯಾಕಾರದ್ದು. ಮೂತಿ ಚೂಪು. ಮೂಗಿನ ಹೊಳ್ಳೆಗಳು ಪ್ರಧಾನವಾಗಿದೆ. ಕಣ್ಣುಗಳ ಸುತ್ತ ಬಿಳಿ ಅಂಚು ಉಂಟು. ತಲೆಯ ಮೇಲೆ ಶಲ್ಕಗಳ ಬದಲು ಫಲಕಗಳಿವೆ. ಮೈಬಣ್ಣ ಕಂದು ಇಲ್ಲವೆ ಹಳದಿ. ಉದರಭಾಗ ಬಿಳಿ. ಆಗ್ನೇಯ ಮತ್ತು ಈಶಾನ್ಯ ಭಾಗದ ಪ್ರದೇಶಗಳಲ್ಲಿರುವ ಬಗೆಗಳಲ್ಲಿ ಉದರದ ಮೇಲೆ ಚುಕ್ಕೆಗಳುಂಟು. ತಲೆಯಿಂದ ಬಾಲದವರೆಗೆ ಬೆನ್ನು ಹಾಗೂ ಪಾಶ್ರ್ವಗಳ ಮೇಲೆ ಮೂರು ಸಾಲುಗಳಲ್ಲಿ ವೃತ್ತಾಕಾರದ ಗುರುತುಗಳಿವೆ. ಬೆನ್ನುಹುರಿ ಗುಂಟ ಇರುವ ಗುರುತುಗಳು ಕ್ರಮಬದ್ಧವಾಗಿ ಜೋಡಣೆಗೊಂಡಿವೆ.

ಇದು ಭಾರತಾದ್ಯಂತ 3000 ಮೀ ಎತ್ತರ ಮೀರದ ಎಲ್ಲ ಪ್ರದೇಶಗಳಲ್ಲೂ ವಾಸಿಸುತ್ತವೆ. ಸಾಮಾನ್ಯವಾಗಿ ಹಗಲಿನಲ್ಲಿ, ಉಷ್ಣತೆ ಹೆಚ್ಚಾಗಿರುವ ವೇಳೆಯಲ್ಲಿ ಕಲ್ಲುಪೊಟರೆ ತರಗೆಲೆಗಳ ಅಡಿ, ಮುಳ್ಳುಪೊದರು, ಕತ್ತಾಳೆ ಮೆಳೆ ಮುಂತಾದ ತಾಣಗಳಲ್ಲಿ ಅಡಗಿರುತ್ತದೆ. ಕೇದಗೆ, ಕತ್ತಾಳೆ ಪೊದೆಗಳು, ಬಿದಿರು ಮೆಳೆಗಳು ಇದರ ಮೆಚ್ಚಿನ ತಾಣಗಳು.

ನೋಟಕ್ಕೆ ಇದು ತುಂಬ ಅಲಸಿಯಾಗಿ ಕಾಣುತ್ತದೆ. ಆದರೆ ರೇಗಿದಾಗ ಇಲ್ಲವೇ ಉದ್ರೇಕಗೊಂಡಾಗ ಛಂಗನೆ ನೆಗೆಯಬಲ್ಲದು. ಆಗ ತಲೆ ಎತ್ತಿ, ನಾಲಗೆ ಹೊರಚಾಚಿ ಅಲುಗಿಸಿ, ಒಂದೇ ಸಮನೆ ಜೋರಾಗಿ ಭುಸುಗುಡುತ್ತ ಕಚ್ಚಲು ನುಗ್ಗುತ್ತದೆ. ಸ್ವಭಾವತಃ ಇದು ಅಳ್ಳೆದೆಯದು. ಅಪಾಯ ಒದಗಿದೆ ಎನಿಸಿದಾಗ ಅವಿತುಕೊಳ್ಳುವುದೇ ಸಹಜ ಪ್ರವೃತ್ತಿ. ಮನುಷ್ಯನಿಂದ ಆದಷ್ಟು ದೂರದಲ್ಲೇ ಇರುತ್ತದೆ. ಆದರೆ ಅತ್ಯಂತ ವಿಷಪೂರಿತವಾದ್ದರಿಂದ ಇದನ್ನು ಲಘುವಾಗಿ ಕಾಣಲಾಗದು. ಇದರ ವಿಷದ ಹಲ್ಲುಗಳು ಸೂಚಿಯಂತೆ ಬಲು ಉದ್ದ ಹಾಗೂ ತೀಕ್ಷ್ಣ. ಚುಚ್ಚುಮದ್ದಿನ ಸೂಚಿಯಂತೆ ಒಳಗೆ ಕೊಳವೆಯಿಂದ ಕೂಡಿವೆ. ಬಾಯಿಯ ಹಿಂಭಾಗದಲ್ಲಿ ಎರಡೂ ಪಾಶ್ರ್ವಗಳಲ್ಲಿರುವ ವಿಷಗ್ರಂಥಿಗಳಲ್ಲಿ ಉತ್ಪತ್ತಿಯಾಗುವ ವಿಷ ಈ ಕೊಳವೆಗಳ ಮೂಲಕ ಹರಿದುಬರುತ್ತದೆ. ಕೆಲವೂಮ್ಮೆ ಹಾವು ಬಾಯಿ ತೆರೆದಕ್ಷಣ ವಿಷ ಚಿಮ್ಮುವುದೂ ಉಂಟು. ಇದರ ವಿಷಕ್ಕೆ ರಕ್ತಹೆಪ್ಪುಗಟ್ಟುವ ಕ್ರಿಯೆಯನ್ನು ಶಿಥಿಲಗೊಳಿಸುವ ಶಕ್ತಿ ಇದೆ. ದಂಶನಕ್ಕೆ ಒಳಗಾದ ಅಂಗ ಬಾತುಕೊಂಡು ಅಲ್ಲಿ ವಿಪರೀತ ಉರಿಉಂಟಾಗುತ್ತದೆ.

ಮಂಡಲದ ಹಾವಿನ ಪ್ರಧಾನ ಆಹಾರ ಇಲಿ, ಓತಿ, ಹಲ್ಲಿ, ಏಡಿ, ಕೆಲವು ತೆರನ ಕೀಟಗಳು. ಬೇರೆ ಹಾವುಗಳನ್ನೂ ಹಕ್ಕಿಗಳನ್ನೂ ತಿನ್ನುವುದಿದೆ. ಹಲವು ಸಲ ಸ್ವಜಾತಿ ಹಾವುಗಳನ್ನು ತಿನ್ನುವುದುಂಟು.

ಇದರ ಸಂತಾನವೃದ್ಧಿ ಶ್ರಾಯ ಜುಲೈ-ಆಗಸ್ಟ್. ಮಂಡಲದ ಹಾವು ತನ್ನ ದೇಹದಲ್ಲಿಯೇ ಮೊಟ್ಟೆಯಿಟ್ಟು ಕಾವುಕೊಟ್ಟು ಮರಿಮಾಡಿ ಮರಿಗಳನ್ನು ಪ್ರಸವಿಸುತ್ತದೆ. ಕೆಲವು ಸರಿಸೃಪಗಳಲ್ಲಿ ಕಾಣಬಹುದಾದ ಒಂದು ವಿಶೇಷ ಬಗೆಯ ವಂಶಾಭಿವೃದ್ಧಿ ಇದು. ಇದನ್ನೆ ಜನರು ಮಂಡಲದ ಹಾವು ನೇರವಾಗಿ ಮರಿಹಾಕುತ್ತದೆ ಎಂದು ತಪ್ಪಾಗಿ ಗ್ರಹಿಸುತ್ತಾರೆ. ಒಂದು ಸಲಕ್ಕೆ 20-40 ಮರಿಗಳು ಹುಟ್ಟುವುವು. ಕೆಲವೊಮ್ಮೆ 80-90 ಮರಿಗಳು ಹುಟ್ಟುವುದೂ ಉಂಟು. ಹುಟ್ಟಿದಾಗ ಸುಮಾರು 130 ಮಿಮೀ ಉದ್ದವಿರುವ ಇವು ವಯಸ್ಕಗಳಿಗಿಂತ ಹೆಚ್ಚು ಹೊಳೆಯುತ್ತಿರುತ್ತವೆ. ಮರಿಗಳೂ ವಯಸ್ಕಗಳಷ್ಟೇ ಅಪಾಯಕಾರಿ. ಮಂಡಲದ ಹಾವಿನ ಕಡಿತದಿಂದ ಸಾವು ಸಂಭವಿಸುವುದು ವಿಷದ ಮೊತ್ತವನ್ನವಲಂಬಿಸಿದೆಯಾದರೂ ಪ್ರತಿವಿಷವನ್ನು ಧಾರಾಳ ಮೊತ್ತದಲ್ಲಿ ಕೊಡುವುದು ಉತ್ತಮ ಎನ್ನಲಾಗಿದೆ. ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯ.

(ಕೆ.ಎಂ.ವಿ.) ಪರಿಷ್ಕರಣೆ ಡಿ.ಆರ್. ಪ್ರಹ್ಲಾದ್